Recent Movies

ಸಿನೆಮಾ

Share This Article To your Friends

Showing posts with label ಹಾಸ್ಯ ವಿಷಯಗಳು. Show all posts
Showing posts with label ಹಾಸ್ಯ ವಿಷಯಗಳು. Show all posts

ಡಾ. ಯಡವಟ್ಟು - ಹಾಸ್ಯ ನಾಟಕಸೋಮ – ನನ್ ಹೆಂಡ್ತಿ ಸೀತೆ.. ಸಾವಿತ್ರಿ.. ಅಹಲ್ಯೆ... ಎಕ್ಸೆಟ್ರಾ ಎಕ್ಸೆಟ್ರಾ... ಥರ ಇರಬೇಕು ಅಂತ ಆಸೆ ಪಟ್ಟಿದ್ದೆ.. ಆದ್ರೆ ನಂಗ್ ಸಿಕ್ದೋಳು ಬರಿ ಎಕ್ಸ್ ಟ್ರಾ.. ಎಕ್ಸ್ ಟ್ರಾ ಇರೋ ಹೆಂಡ್ತಿ.. ೫೦ ಕೆ ಜಿ ಹೆಂಡ್ತಿ ಸಿಗೋ ಬದಲು ಎಕ್ಸ್ಟ ಟ್ರಾ ೫೦ ಕೆ ಜಿ ಇರೋ ಹೆಂಡ್ತೀನ್ ಕೊಟ್ಟ ಆ ದೇವ್ರು..


ದೇವರು – ಮಗನೇ.. ನೀನು ಕೇಳಿದ್ದು ಎಕ್ಸ್ ಟ್ರಾ  ಇರೋ ಹೆಂಡ್ತಿ ಕೊಡು ಅಂತ ಕೇಳ್ದಲ್ಲ.. ಅದಿಕ್ಕೆ ಈ ಎಕ್ಸ್ ಟ್ರಾ ಟಾಕ್ ಟೈಮ್ ಕೊಟ್ಟಿದೀನಿ..


ಸೋಮ – ಶಭಾಷ್.. ಅಪ್ಪಾ.. ದೇವ್ರು.,. ನಿಂಗ್ ಇಂಗ್ಲೀಷು ಬರೋದಿಲ್ಲ ಅಂತ ನಂಗ್ ಗೊತ್ತಾಗ್ಲಿಲ್ಲಪ್ಪ.. ನಾನ್ ಹೇಳಿದ್ದು ಎಕ್ಸೆಟ್ರಾ ಎಕ್ಸೆಟ್ರಾ ಅಂತ.. ಈ ಥರ ಎಕ್ಸ್ ಟ್ರಾ ಅಂತಲ್ಲ..

ದೇವ್ರು – ಹಾಗಾದ್ರೆ, ನಿನ್ಗೆ ಕೊಟ್ಟಿರೋ ಈ ಎಕ್ಸ್ ಟ್ರಾ ಟಾಕ್ ಟೈಮ್ ಆಫರ್ ನ ಕ್ಯಾನ್ಸಲ್ ಮಾಡ್ಲಾ?

ಸೋಮ – ಸುಮ್ನಿರು ದೇವ್ರೆ.. ಮೊದ್ಲೇ ಈ ದೇಶದಲ್ಲಿ ಹುಡುಗೀರ್ ಸಂಖ್ಯೆ ಕಡಿಮೆ.. ಹೆಂಗೋ ಜಂಪಿಂಗ್ ಜಪಾಂಗ್ ಜಂಪಿಂಗ್ ಜಪಾಂಗ್ ಅಂತ ೨೦ ೨೦ ಆಡ್ಕೊಂಡು ಲೈಫ್ ಕಳೀತೀವಿ..

ಸೋಮ – ರಂಗೂ.. ಬಿಸ್ ಬಿಸಿ ಮುದ್ದೆ ...ಕೋಳಿ ಸಾರು ತಗೊಂಡ್ ಹೊಲಕ್ ಬಾರಮ್ಮಿ.. ನಾನು ಹೊಲದ್ ತಾಗ್ ಹೋಗಿರ್ತೀನಿ..

ರಂಗೀಲ – ಆಯ್ತು ರೀ,,.. ಮಾಡ್ಕೊಂಡ್ ಬರ್ತೀನಿ.. <ಸ್ವಲ್ಪ ಸಮಯದ ನಂತರ> ರೀ ರೀ ರೀ ಒಂದ್ ನಿಮಿಷ..

ಸೋಮ – ಏನೇ ಅದು?

ರಂಗೀಲ – ಕೋಳಿ ಸಾರ್ ಮಾಡ್ಕೊಂಡ್ ಬರೋಕ್ ಹೇಳಿದ್ರಿ.. ನಮ್ ಮನೇಲಿ ಮೂರ್ ಕೋಳಿ ಇದೆ.. ಯಾವುದು ಮಾಡ್ಬೇಕು..

ಸೋಮ – ನಮ್ಮನೇಲ್ ಮೂರ್ ಇದ್ಯಾ?... ಒಂದ್ ಕೆಲಸ ಮಾಡು.. ಎದುರು ಮನೇವ್ರುದು ನಾಕ್ ಕೋಳಿ ಇದೆ.. ಅದನ್ನೇ ಒಂದ್ ಎತ್ತಾಕೊಂಡ್ ಬಂದ್ ಸಾರ್ ಮಾಡು -\

ರಂಗೀಲ- ರೀ ಅದು ತಪ್ಪಲ್ವಾ?

ಸೋಮ – ಲೇ.. ಯಾವುದೇ ತಪ್ಪು..?? ತಪ್ಪು ಸರಿ ಯಾವುದು ಅಂತ ನಂಗೂ ಗೊತ್ತೈತೆ.. ಸಂವಿಧಾನದ ಪ್ರಕಾರ ಎದುರು ಮನೆಯವರ ಕೋಳೀನ ನಾವು ತಿನ್ನಬಹುದು ಕಣೆ.. ನೈಟಾಗೆ ಇಸ್ಕೂಲ್ ಹೋಬಗ್ಬುಟ್ಟು ತಿಳ್ಕೊಂಡಿದೀನಿ ನಾನು..

ರಂಗೀಲ – ಅಯ್ಯೋ ಅಯ್ಯೋ ಅಯ್ಯೋ ನನ್ ಜಾಣ.. ಏಟ್ ಬುದ್ವಂತ ಆಗ್ಬುಟ್ಟೆ ನೀನು..

ಸೋಮ – ಹೂ ಕಣೆ.. ನಾನು ಬುದ್ವಂತ ಆಗಿವ್ನಿ.. ನೆನ್ನೆ ಇಸ್ಕೂಲ್ ನಾಗೆ ಸಂವಿಧಾನ ಪಾಟ ಮಾಡ್ತಿದ್ರು.. ಅದ್ಯಾವುದೋ ಸಮಾನತೆ ಹಕ್ಕು ಅಂತ ಒಂದ್ ಐತಂತೆ.. ಎಲ್ಲಾ ಸಮಾನ ಇರಬೇಕಂತೆ ಕಣೆ ಈ ಭೂಮಿ ಮ್ಯಾಗೆ.. ಅದ್ಕೆ ನಮ್ ಮನೇಲಿ ಮೂರ್ ಕೋಳಿ ಐತೆ.. ಅವರ ಮನೇಲಿ ನಾಕ್ ಕೋಳಿ ಐತೆ.,. ಒಂದ್ ಎತ್ತಾಕೊಂಡ್ ಬಂದು ಸಾರ್ ಮಾಡು.. ಆಗ ಅವರ್ ಮನೇಲೂ ಮೂರ್ ಕೋಳಿ ಆಗುತ್ತೆ.. ನಮ್ ಮನೇಲೂ ಮೂರ್ ಕೋಳಿ ಆಗುತ್ತೆ.. ಯಾರಾದ್ರು ಬಂದ್ ಕೇಳಿದ್ರೆ ಏಳು... ಸಂವಿಧಾನದಲ್ ಹೇಳೈತೆ ಸಮಾನತೆ ಇರಬೇಕು ಅಂತ ಅದಿಕ್ಕೆ ಹಿಂಗ್ ಮಾಡಿದ್ದು ಅಂತ...... ರೂಲೀಸು ಮಾತಾಡ್ಬುಟ್ರೆ ಎಲ್ರೂ ಗಡ ಗಡ ಅಂದೋಯ್ತಾರೆ.. ಹೊಲದಲ್ಲಿ ಸೋಮ ಬಿತ್ತನೇ ಮಾಡ್ತಿರ್ತಾನೆ.. <ನೇಗಿಲ ಯೋಗಿ ಹಾಡು>

ಚಕ್ರಪಾಣಿ – ಏನಣ್ಣಾ ಇದು..?? ನಮ್ಮೂರಲ್ಲಿ ನೀರೇ ಇಲ್ವಲ್ಲಣ್ಣ.. ಹಿಂಗಾದ್ರೆ ಹೆಂಗಣ್ಣ ಬೆಳೆ ಬೆಳಿಯೋದು?

ಸೋಮ – ನೀರಿಲ್ಲ ಅಂದ್ರೇನಾಯ್ತ್ ಲಾ..?? ಟೀವೀಲ್ ಬರೋ ಸೀರಿಲ್ ಗಳನ್ನ ನೋಡ್ಲಾ..

ಚಕ್ರಪಾಣಿ – ಅಣ್ಣ.. ಹಳ್ಳೀನಾಗ್ ಕುಡಿಯೋಕ್ ನೀರಿಲ್ಲ ಅಂದ್ರೆ ಟಿವೀಲ್ ಬರೋ ಸೀರೀಯಲ್ ನೋಡು ಅಂತೀಯಲ್ಲಣ್ಣ.. ಹೊಟ್ಟೆಗ್ ಉಣ್ಣಕ್ ಸಿಗ್ತಾದಾ ಸೀರಿಯಲ್ ನೋಡಿದ್ರೆ?

ಸೋಮ – ಬಾರ್ಲಾ ಇಲ್ಲಿ... ನೋಡು..... ಉದಯ ಟೀವೀಲಿ ಬಂಗಾರ.. ಈ ಟೀವೀಲಿ ....................... ಜೀ ಟೀವೀಲಿ........  ಇಷ್ಟೆಲ್ಲಾ ಬೊಂಬಾಟ್ ಸೀರಿಯಲ್ ಗಳು ಬರ್ತಾವೆ.. ಫ್ಯಾಮಿಲಿ ಪೂರ್ತಿ ಅದನ್ ನೋಡ್ಕೊಂಡ್  ಕೂತ್ಕೊಂಡ್ರೆ ಸಾಕು.. ಮೂರ್ ಫಲ ಭತ್ತ ಬೆಳೀಬಹುದು.. ಅಷ್ಟು ನೀರು ಕಣ್ಣಲ್ಲೇ ಸಿಗ್ತದೆ ಕಣ್ಲಾ..

ಚಕ್ರಪಾಣಿ- ನಿಜಾನೇನಣ್ಣ?

ಸೋಮ - ಹೂ ನಲೇ.... ನೆಲದಿಂದ್ ನೀರ್ ತಗಿಯೋಕೆ ಬೋರ್ವೆಲ್ ಬೇಕು.. ಕಣ್ಣಿಂದ್ ನೀರು ತೆಗೀಬೇಕು ಅಂದ್ರೆ ಬರಗೆಟ್ಟ ಊರುಗಳಿಗೆ ಇಂಥಾ ಸೀರಿಯಲ್ ಗಳು ಬೇಕು ಕಣ್ಲಾ.. ಬೇಕು.... ಅಷ್ಟು ಪವರ್ ಐತೆ ಈ ನಮ್ ಸೀರಿಯಲ್ಸ್ ನಲ್ಲಿ..

ಚಕ್ರಪಾಣಿ – ಅಣ್ಣ.. ಈಗ್ ನಂಗ್ ಗೊತ್ತಾಯ್ತಣ್ಣ.... ಈಗ್ ನಂಗ್ ಎಲ್ಲಾ ಗೊತ್ತಾಯ್ತು..

ಸೋಮ – ಏನ್ಲಾ ಅದು ಬುದ್ಧನಿಗೆ ಜ್ಞಾನೋದಯ ಆದಂಗೆ ನಿಂಗೂ ಜ್ಞಾನೋದಯ ಆಯ್ತೇನ್ಲಾ? ಏನೋ ಗೊತ್ತಾಗಿದ್ದು?

ಚಕ್ರಪಾಣಿ – ಉತ್ತರ ಖಂಡದಲ್ಲಿ ಯಾಕ್ ಅಷ್ಟೋಂದ್ ಪ್ರವಾಹ ಬಂತು ಅಂತ..

ಸೋಮ – ಲೇ ಉತ್ತರ ಖಂಡದಲ್ ಪ್ರವಾಹ ಆಗಿದ್ದಕ್ಕೂ ನಾನ್ ಹೇಳಿದ ಸೀರಿಯಲ್ ಕಥೆಗೂ ಏನ್ಲಾ ಸಂಬಂಧ..

ಚಕ್ರ – ಟೂರ್ ಗೆ ಅಂತ ಬಂದೋರೆಲ್ಲಾ ರಾತ್ರಿ ಬಸ್ಸಲ್ಲಿ ಕೂತ್ಕೊಂಡು ಬಂಗಾರ ಧಾರಾವಾಹಿ ನೋಡ್ಬುಟ್ಟವ್ರೆ.. ಅದನ್ ನೋಡಿ ಎಲ್ರೂ ಗೊಳೋ ಅಂತ ಅಳೋಕ್ ಶುರು ಮಾಡ್ಬಿಟ್ಟವ್ರೆ.. ಕಣ್ಣೀರು ಉಕ್ಕಿ ಪ್ರವಾಹ ಆಗಿ ಎಲ್ರನ್ನೂ ಕೊಚ್ಕೊಂಡು ಹೋಗೈತಣ್ಣ..

<ಚಕ್ರಪಾಣಿ ತಾಯಿ> ರಾಧಾ –ಈಗ್ ಗೊತ್ತಾಯ್ತಾ ಮೂದೇವಿ.. ಹೆಣ್ಮಕ್ಳು ಕಣ್ಣೀರ್ ಹಾಕಿದ್ರೆ ಉತ್ತರಾ ನೂ ಕೊಚ್ಕೊಂಡೋಯ್ತದೆ.. ದಕ್ಷಿಣಾನೂ ಕೊಚ್ಕೊಂಡ್ ಹೋಯ್ತದೆ..

ಚಲ್ಲಣ್ಣ – ಸೋಮಣ್ಣಾ.. ಕಾಲೇಜ್ ನಾಗ್ ಇಂಥಾ ಹುಡ್ಗೀರ್ ಒಸಿ ನಕ್ಬುಟ್ರೆ.. ಹುಡ್ಗರ್ ಲೈಫೂ ಕೊಚ್ಕೊಂಡ್ ಹೋಯ್ತದೆ..
ರಾಧಾ – ಸುಮ್ಕಿರು ಜೊಲ್ಲಣ್ಣ..

ಚಲ್ಲಣ್ಣ – ಥೂ.. ಥೂ .. ಥೂ.. ನಾನು ಜೊಲ್ಲಣ್ಣ ಅಲ್ಲಮ್ಮ.. ಚಲ್ಲಣ್ಣ...

ಚಕ್ರಪಾಣಿ – ಅಣ್ಣ.. ನಮ್ಮವ್ವನಿಗೆ ನಾಲ್ಗೆ ಒಸಿ ಬೇಗ್ ತಿರ್ಗಲ್ಲ.. ವಯಸ್ಸಾಯ್ತು ನೋಡಿ.. ಅದ್ಕೆ..  ಮೊನ್ನೆ ಅಂಗಡೀಗ್ ಹೋಗಿ ದನಿಯಾ ತಗೊಂಡ್ ಬಾರಮ್ಮಾ ಅಂದ್ರೆ ಕನ್ನಡ ಸಿನೆಮಾ ದುನಿಯಾ ತಗೊಂಡ್ ಬಂದಿದ್ಲಣ್ಣ..ಚಲ್ಲಣ್ಣ – ಅರವತ್ ಆದ್ರೆ ಅರುಳೋ ಮರುಳೋ ಖಾಯಿಲೆ ಬರುತ್ತಂತೆ.. ನಿಮ್ಮವ್ವನಿಗೇನ್ಲಾ ನಾಲ್ಗೆ ತಿರಗದೇ ಇರೋ ಖಾಯಿಲೇ ಅಟ್ಕಾಯಿಸ್ಕೊಂಡೈತೆ..

ರಾಧಾ – ಅಯ್ಯೋ ಚಲ್ಲಣ್ಣ... ಮೊನ್ನೇವರೆಗೂ ನೆಟ್ಟಗೇ ಇದ್ದೆ.. ಆ ಯಡವಟ್‌ ಡಾಕ್ಟ್ರು ಇಂಜೆಕ್ಷನ್ ಕೊಟ್ಟ.. ಆವತ್ತಿಂದ ಹಿಂಗಾಯ್ತು.. ಚಲ್ಲಣ್ಣ – ಯಾರ್ ರೀ ಅಂಥಾ ಕಿತ್ತೋದ್ ಡಾಕ್ಟ್ರು?

ರಾಧಾ – ಅವನಾ..?? ದೊಡ್ಡ ಯಡವಟ್ಟು..

ಚಲ್ಲಣ್ಣ – ಅದೇ ರೀ ಅವನ ಹೆಸರೇನು?

ಸೋಮ – ಅಯ್ಯೋ ಚಲ್ಲಣ್ಣ.. ಆ ಡಾಕ್ಟ್ರು ಹೆಸರೇ ಡಾ. ಯಡವಟ್ಟು

ಚಲ್ಲಣ್ಣ- ಹಾ..?? ಅಂಥಾ ಹೆಸರು ಯಾರಾದ್ರೂ ಇಟ್ಕೋತಾರಾ?

ಚಕ್ರಪಾಣಿ- ಅಯ್ಯೋ.. ಅದು ಅವನು ಇಟ್ಕೊಂಡಿರೋ ಹೆಸರಲ್ಲ.. ಜನ ಇಟ್ಟಿರೋ ಹೆಸರು.. ಅವನು ಯಾರಿಗ್ ಟ್ರೀಟ್ಮೆಂಟು ಕೊಟ್ರೂ.. ಕೊನೇಗೆ ಒಂದಲ್ಲಾ ಒಂದ್ ಯಡ್ವಟ್ಟು ಆಗೇ ಆಗುತ್ತೆ.. ಯಡ್ವಟ್ಟಾದ್ಮೇಲೆ ಎಲ್ರೂ ಅವನನ್ನ ಯಡವಟ್ಟು ಯಡವಟ್ಟು ಅಂತ ಬೈದು ಬೈದು.. ಕೊನೇಗೆ ಅವನ ಹೆಸ್ರು ಡಾ. ಯಡವಟ್ಟು ಅಂತಾನೇ ಆಗೋಯ್ತು..

ಚಲ್ಲಣ್ಣ- ಯಾವನ್ರೀ ಅವನಿಗೆ ಡಾಕ್ಟರ್ ಕೆಲಸ ಕೊಟ್ಟಿದ್ದು?

ಸೋಮ- ಅಯ್ಯೋ.. ಅವನಿಗೆ ಯಾರ್ ಕೊಡ್ತಾರೆ ಡಾಕ್ಟರ್ ಕೆಲಸ.. ಐದ್ನೇ ಕ್ಲಾಸೇ ಐದ್ ಸಲ ಫೇಲಾಗವ್ನೆ..

ಚಲ್ಲಣ್ಣ- ಹಾ..?? ಐದ್ನೇಕ್ಲಾಸೇ ಫೇಲಾ..?? ಮತ್ತೆ ಅವನು ಡಾಕ್ರ್ ಹೆಂಗಾದ? ಟ್ರೀಟ್ಮೆಂಟ್ ಹೆಂಗ್ ಕೊಡ್ತಾವ್ನೆ?

ರಾಧಾ - <ಕೋಪದಿಂದ ಏನೇನೋ ಬಡ ಬಡಾಯಿಸುತ್ತಾಳೆ.. ಅರ್ಥವಾಗದಂತೆ>

ಸೋಮ- ಹೇ ಮುದುಕಿ.. ಸುಮ್ಮನಿರು.. ಹಿಂಗಾ ಬಿಪಿ ರೇಜ್ ಮಾಡ್ಕೊಂಡ್ರ.. ಈಗ ನಾಲಿಗಿ ಸೆಟ್ಗೊಂಡಾದ... ಆಮ್ಯಾಗ ಹಾರ್ಟ ಅಟ್ಯಾಕ್ ಆಗಿ ನೀನೇ ಸೆಟ್ಗೊಂಡ್ ಹೋಗ್ತಿ..

ರಾಧಾ - <ದಂಗಾಗಿ ಸೈಲೆಂಟಾಗಿ ನಿಂತುಬಿಟುವಳು>

ಚಕ್ರಪಣಿ- ಚಲ್ಲಣ್ಣ.. ಡಾ. ಯಡವಟ್ಟು ಗೌರ್ಮೆಂಟ್ ಆಸ್ಪತ್ರೇಲಿ ಕಸ ಗುಡ್ಸೋನು.. ನಮ್ಮೂರು ಗೌರ್ಮೆಂಟ್ ಡಾಕ್ಟರು ಬೆಳಿಗ್ಗೆ ಬರ್ತಾರೆ.. ಸೈನ್ ಹಾಕ್ಬುಟ್ಟು  ಮನೇಗ್ ಹೋಗಿ ಪಾಚ್ಕೊಂಬಿಡ್ತಾರೆ.. ಆಗ ಆಸ್ಪತ್ರೇಗ್ ಯಾರ‍್ ಬಂದ್ರೂ ಅಲ್ಲಿ ಯಾರೂ ಸಿಗಕ್ಕಿಲ್ಲ.. ಆ ಕಸ ಗುಡ್ಸೋನ್ ಒಬ್ಬನ್ನ ಬಿಟ್ಟು.. ಅಲ್ಲೇ ಕಸ ಗುಡಿಸ್ತಾ ಗುಡಿಸ್ತಾ ಅನಾಸಿನ್ನು ವಿಕ್ಸಾಕ್ಷನ್ನು ಅಂತ ಎರಡ್ ಮಾತ್ರೆ ಎಸ್ರು ತಿಳ್ಕೊಂಬಿಟ್ಟವ್ನೆ.. ಯಾರಾದ್ರೂ ಹೆರಿಗೆ ಅಂತ ಬಂದ್ರೂ ಅದನ್ನೇ ಕೊಡ್ತಾನೆ.. ಇಸಾ ಕುಡಿದ್ ಸಾಯ್ತಿದ್ರೂ ಅದನ್ನೇ ಕೊಡ್ತಾನೆ.. ಒಂಥರ ಆ ಕಸ ಗುಡ್ಸೋನೇ ಈಗ ನಮ್ಮೂರಿಗೆ ಡಾಕ್ಟರ‍್ ಆಗ್ಬುಟ್ಟವ್ನೆ..

ಕಿಶೋರ – ಏನ್ರಪ್ಪಾ...?? ಎಲ್ರೂ ಒಂದೇ ಕಡೆ ನಿಂತ್ಕೊಂಡು ಏನೋ ಮೀಟಿಂಗ್ ಮಾಡ್ದತಿದೀರಾ?

ಸೋಮ – ವಿಧಾನ್ ಸೌದ್ ದಾಗೆ ದೇಶದ ಬಗ್ಗೆ ಚಿಂತೆ ಮಾಡೋರು.. ದೇಶದ ಬಗ್ಗೆ ಮಾತಾಡೋರು ಇಲ್ವಂತೆ.. ಅದಕ್ಕೆ ಅವರು ಮಾತಾಡೋದನ್ನ ನಾವಿಲ್ಲಿ ಮಾತಾಡ್ತಿದೀವಿ..

ಚಲ್ಲಣ್ಣ – ಹೂನ್ರಪ್ಪಾ... ಇಲ್ಲಿ ಹಿಂಗ್ ಮೀಟಿಂಗ್ ಮಾಡೋರು.. ವಿಧಾನ್ ಸೌಧದ ಮೆಟ್ಲು ಹತ್ತುತಿದ್ದಂಗೆ ಕಚ್ಚೆ ಪಂಚೆ ಹರ‍್ಕೊಂಡು ಫೈಟಿಂಗ್ ಮಾಡೋಕ್ ಶುರು ಮಾಡ್ತಾರೆ..

ಕಿಶೋರ – ಹೇ.. ಈ ಸಾರಿ ಹಂಗೆಲ್ಲಾ ಆಗಲ್ರಪ್ಪಾ... ಕಚ್ಚೆ ಉಟ್ಟಿರೋ ಮೈಸೂರ‍್ ಗಂಡು ನಮ್ ಸಿದ್ರಾಮಯ್ನೋರ‍್ ಈಸಲ ಸಿಎಂ ಆಗೋರೆ.. ಅಕ್ಕಿನೆಲ್ಲಾ ಒಂದ್ರೂಪಾಯಿಗೆ ಕೊಡ್ತಾವ್ರೆ..

ಮಾಲಾ – ಅಯ್ಯೋ ಅಯ್ಯೋ ಮುಂಡೇವಾ...  ಈ ಪುಟ್ಗೋಸಿ ರಾಜಕೀಯ ಮಾತಾಡ್ಕೊಂಡು ಬಿತ್ತನೇ ಮಾಡೋದ್ ನಿಲ್ಸಿ ಓಸಿ ಓತ್ಲಾ ಒಡೀತೀದೀರೇನ್ಲಾ..??.. ಈ ರಾಜ್ಕೀಯದೋರ‍್ ಏನ್ ಮಾಡಿದ್ರೂ ನಮ್ ಬಾಳೇ ಉದ್ದಾರ ಆಗಕ್ಕಿಲ್ಲ ಕಣ್ಲಾ.. ಉದ್ದಾರ ಆಗಾಕಿಲ್ಲ..

ಬಿಕನಾಸಿ ಭೀಮ – ಅಹಾ..
ಎಂಡದ ಮತ್ತು ಏರಕ್ಕೇ ಇಲ್ಲ....
ಕ್ವಾಟರ‍್ ದು ಕಿಕ್ಕು.. ಇಳಿಯಾಕೆ ಇಲ್ಲ....
ದುಡಿಯೋದು ಯಾವನಿಗೆ ಬೇಕಾಗೇ ಇಲ್ಲ...
ಹೊಟ್ತುಂಬ ಎಣ್ಣೆ... ಸಿಗ್ತೈತಲ್ಲಣ್ಣ...
ಅಬ್ಬಾ ಬ್ಬ.. ಬಾ.. ನಮ್ ಸಿದ್ರಾಮಣ್ಣ ಬಂದ್ಬುಟ್ಟು ನಂಗಂತೂ ಒಳ್ಳೇ ಕೆಲಸ ಮಾಡಿದ್ನಪ್ಪ.. ಹಿಂಗೆ ಇನ್ನೊಂದಿಷ್ಟು ಒಳ್ಳೆ ಕೆಲಸ ಮಾಡ್ಲಪ್ಪ.. ನನ್ ಓಟು.. ನನ್ನೆಂಡ್ರು ಓಟು.. ನನ್ ಹೆಂಡ್ತಿ ಹೊಟ್ಟೇಲಿ ಹುಟ್ತಿರೋ ನನ್ ಮಗೂ ಓಟು ಎಲ್ಲಾ ನಿಂಗೇ ಹಾಕಿಸ್ತೀನಿ..

ಮಾಲಾ- ಹೂ.. ಬಂದಾ ನೋಡು ಬಿಕ್ನಾಸಿ ಭೀಮ.. ಈ ರಾಜಕೀಯದಿಂದ ಹಾಳಾಗ್ ಹೋಗಿರೋದಕ್ಕೆ ಅವನೊಬ್ಬನೇ ದಂತ ಕಥೆ..

ರಾಧಾ –ನಡಿಯವ್ವಾ... ನಡಿ.. ಮನೀಗ್ ಹೋಗೋಣು.. ಎತ್ತುಗಳಿಗೆ ಒಂದೀಟು ಹುಲ್ಲಾದ್ರೂ ಹಾಕೋಣ.. ಈ ಬಡ್ಡೇತಾವ್ಗಳ ಜೊತೆ ಏನ್ ಮಾತು.. ನಡಿ ನಡಿ..

ಸೋಮ – ಓಹೋ...ಹೋ.. ಬರಬೇಕು ಬರಬೇಕು.. ಬಿಕನಾಸಿ ಭೀಮಣ್ಣೋರು.. ಹೆಂಗೈತೆ ಜೀವ್ನ

ಬಿಕನಾಸಿ ಭೀಮ – ಕುಡಿಯೋಕೆ ಬೀರ‍್ ಇರಲು.. ಕೂರೋಕೆ ರಾಜಕೀಯದ ಚೇರ‍್ ಇರಲು.. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆ ಬೀರಣ್ಣ.. ಆ ಹಾ.. ನಮ್ಮಣ್ಣ.. ಸಿಯಮ್ಮಣ್ಣನಿಗೆ ಜೈ..

ಕಿಶೋರ – ಅಲೇ ಇವನಾ.. ಸಿಯಮಣ್ಣ ಒಳ್ಳೆ  ಕೆಲಸ ಮಾಡ್ತಾವ್ರೆ ಅಂತ ಗೊತ್ತು.. ಆದ್ರೆ ಈ ಕುಡುಕ್ ನನ್ ಮಕ್ಕಳಿಗೆ ಏನ್ ಒಳ್ಳೇದಾಗೈತೆ..? ಮತ್ತೆ ಕಳ್ ಭಟ್ಟಿ ಏನಾದ್ರೂ ಓಪನ್ ಆಯ್ತಾ?

ಬಿಕನಾಸಿ ಭೀಮ – ಹಲೋ... ಲೋಕಲ್ ಕುಡಿಯೋಕೆ ನಾವೇನು ಲೋಫರ‍್ ಗಳಾ..? ಬ್ರಾಂಡೆಡ್ ಅಮ್ಮಾ.. ಇದು ಪ್ಯೂರ‍್ ವಿಜಯ್ ಮಲ್ಯನ ಮಾಲು..

ಕಿಶೋರ – ಅಲ್ರೀ ಬಿಕನಾಸಿ ಭೀಮಣ್ಣ.. ಹಿಂಗ್ ಕುಡೀತಿದ್ರ ಜೀವ್ನ ಹೆಂಗ್ ನಡೀತೈತ್ರಿ?

ಬಿಕನಾಸಿ ಭೀಮ – ಈ ಬಾರಲ್ಲಿ ಒಂದ್ ಹೊಸ ಸಿಸ್ಟಮ್ ಮಾಡ್ಬಿಟ್ಟವ್ರೆ.. ನೂರ‍್ ರೂಪಾಯಿಗೆ ನಾವು ಕುಡಿದು ಬಿಟ್ರೆ ಒಂದ್ ರೂಪಾಯಿ ಅವರು ನಮಗೆ ಟಿಪ್ಸ್ ಕೊಡ್ತಾರೆ..

ಸೋಮ – ಅಲ್ಲ.. ಈ ಟಿಪ್ಸು ಗಿಪ್ಸು ಅದೆಲ್ಲಾ ನಾವೇ ಕೊಡ್ಬೇಕಲ್ಲೇನೋ... ಅವರು ಯಾಕ್ ನಮಗ್ ಕೊಡ್ತಾರ?

ಬಿಕನಾಸಿ ಭೀಮ – ಹೊಸ ಗೌರ್ಮೆಂಟು ಹೊಸ ರೂಲೀಸ್ ಮಾಡೈತೆ.. ಯಾರ‍್ ಯಾರು ನೂರು ರೂಪಾಯಿಗೆ ಫುಲ್ ಕುಡೀತಾರೋ ಅವರಿಗೆ ಒಂದ್ ರೂಪಾಯಿ ಟಿಪ್ಸ್ ಕೊಡ್ಬೇಕಂತ.. ಅದಕಾ.. ನಾನು ನೂರ‍್ ರೂಪಾಯಿಗೆ ದುಡೀತೀನಿ.. ನೂರ‍್ ರೂಪಾಯಿ ಪೂರ‍್ತಿ ಕುಡಿದು ಮನೀಗ್ ಬರುವಾಗ ಒಂದ್ ರೂಪಾಯಿ ಟಿಪ್ಸ್ ತಗೊಂಡು ಬರ‍್ತೀನಿ..

ಚಕ್ರಪಾಣಿ – ಅಲ್ಲ ಪಾ ಬಿಕನಾಸಿ ಅಣ್ಣ.. ನೀನು ಹಿಂಗ ದುಡಿದಿದ್ದೆಲ್ಲಾ ಕುಡಿದ್ರಾ ಹೆಂಡ್ರು ಮಕ್ಳು ಹಣೇಬರ ಹೆಂಗ?

ಭೀಮ – ಹೇ.. ಅದ್ರಲ್ಲೆಲ್ಲಾ ನಾನ್ ಪಕ್ಕಾ ಲೇ ತಮ್ಮ.. ಆ ಬಾರ‍್ ಮಾಲೀಕ ಒಂದ್ ರೂಪಾಯಿ ಟಿಪ್ಸ್ ಕೊಡ್ತಾನಲ್ಲ.. ಅದನ್ನ ಸೀದಾ ತಂದು ನನ್ ಹೆಂಡ್ತೀಗ್ ಕೊಡ್ತೀನಿ..

ಚಲ್ಲಣ್ಣ – ನಿನ್ ಹೆಂಡ್ತೀಗ್ ಯಾಕ?

ಭೀಮ – ಏನ್ ಹುಚ್ಚಿದೀಯೋ ನೀನು? ಗೌರ್ಮೆಂಟ್ ರೂಲೀಸ್ ಗೊತ್ತಿಲ್ಲೇನ? ನಮ್ಮ ಈ ಹೊಸ ಸೀಯಮ್ಮಣ್ಣ ಬಂದ್ಮೇಲೆ ನಮ್ಮಂಥ ಸಾರಾಯಿ ಸರದಾರರಿಗೆ ಸಖತ್ ಒಳ್ಳೇದಾಗೈತೆ.. ಒಂದ್ರೂಪಾಯಿಗೆ ಒಂದ್ ಕಿಲೋ ಅಕ್ಕಿ ಮಾಡ್ಯಾರ.. ಮೊದ್ಲು ನೂರ‍್ ರೂಪಾಯಿ ದುಡ್ಕೊಂಡು ಬಂದು ಎಪ್ಪತ್ ರೂಪಾಯಿಗೆ ಕುಡೀತಿದ್ದೆ.. ಮೂವತ್ ರೂಪಾಯಿಗೆ ಅಕ್ಕಿ ತರೋಕೆ ಹೇಳ್ತಿದೆ.. ಆದ್ರೆ ಈಗ್ ನೋಡಿದ್ರೆ 99 ರೂಪಾಯಿಗೆ ಕಂಠ ಪೂರ‍್ತಿ ಕುಡೀಬಹುದು.. ಆಹಾ.. ಹೊಸ ಸಿಯಮ್ಮಣ್ಣಂಗೆ ಜೈ.. ದಾರಿ ಬಿಡ್ರಪ್ಪಾ.. ನಾನ್ ಮನೇಗ್ ಹೋಗ್ಬೇಕು.. ನನ್ನೆಂಡ್ರು ಕಾಯ್ತಿರ‍್ತಾಳೆ..

ಚಕ್ರಪಾಣಿ – ಒಟ್ನಲ್ಲಿ ನಮ್ ಜನರನ್ನ ಉದ್ದಾರ ಮಾಡೋದಕ್ಕೆ ಯಾರಿಂದಾನೂ ಆಗಲ್ಲ ಬಿಡಿ.. ಯಥಾ ರಾಜ.. ತಥಾ ಪ್ರಜಾ.. ಬಡವರಿಗೆ ಒಳ್ಳೇದಾಗ್ಲಿ ಅಂತ ಕೆಜಿ ಗೆ ಒಂದ್ರೂಪಾಯಿ ಅಕ್ಕಿ ಕೊಡ್ತಾವ್ರೆ,.. ಇವರು ನೋಡಿದ್ರೆ ದುಡಿದಿದ್ದೆಲ್ಲಾ ಎಣ್ಣೇ ಅಂಗಡೀಗ್ ಸುರೀತಾವ್ನೆ.. ಛೆ..

MLA ಪಾಂಡು – ತಗೊಳ್ಳಿ ಐನೂರ‍್ ರೂಪಾಯಿ ನೋಟು.. ಹಾಕಿ ನಿಮ್ಮದು ನಿಮ್ಮ ಮನೆಯವರದ್ದು ಓಟು..
ಓಟ್ ಹಾಕಿದ್ರೆ ಹೆಣ್ಮಕ್ಕಳಿಗೆ ಸೀರೇ ಫಿಕ್ಸು..  ಗಂಡ್ ಮಕ್ಕಳಿಗೆ ಬೀರು ನೀರು ಮಿಕ್ಸು.. ಓಟಾಕಿ.. ಗೆಲ್ಲಿಸಿ..

ಚಲ್ಲಣ್ಣ – ರೈತಾನೇ ದೇಶದ ಬೆನ್ನೆಲುಬು ಸ್ವಾಮಿ.. ಅವನಿಗೆ ಹಿಂಗೆ ಕುಡಿತ ನೋಟು ಅಂತ ಆಸೆ ತೋರಿಸಿ ಓಟ್ ಗಿಟ್ಟಿಸ್ಕೋಬೇಡಿ.. ಎಲ್ರೂ ಕುಡುಕ್ರಾಗಿ ಬಿದ್ದೋದ್ರೆ ಬೆನ್ನೆಲುಬು ಹೆಂಗ್ ಸ್ವಾಮಿ ಇರ‍್ತದೆ..

ಸೋಮ – ಏನ್ ಸ್ವಾಮಿ... ಗೆಲ್ಲೋವರೆಗೂ ರೈತಾನೇ ಬೆನ್ನೆಲುಬು.. ಅಂತ ಉಬ್ಬಿಸ್ತೀರ.. ಗೆದ್ದ ಮೇಲೆ ಆ ಬೆನ್ನೆಲುಬನ್ನ ಮುರೀತೀರ.. ಗೊಬ್ರ ಕೇಳಿದ್ರೆ ಗೋಲಿಬಾರ‍್ ಮಾಡಿಸ್ತೀರ.. ಕಾವೇರಿ ನೀರ‍್ ನ ಬೇರೇಯವರಿಗ್ ಕೊಡ್ತೀರ..ಗೆದ್ರೇ ರೈತನ ಸಾಲ ಮನ್ನ ಮಾಡ್ತೀವಿ ಅಂತೀರ.. ಗೆದ್ಮೇಲೆ ನೈಂಟಿ ಕುಡಿ ಪಲ್ಟಿ ಹೊಡಿ ಅಂತ ಇಧಾನ್ ಸೌದ್ ದಾಗೇನೇ ನಾಯಿ ನರಿಗಳ್ ಥರ ಕಿತ್ತಾಡ್ತಿರ‍್ತೀರ.. ನಮ್ಮಂಥ ಬಡವರಿಗೆ ಏನ್ ಸ್ವಾಮಿ ಆಗ್ತೈತೆ ನಿಮ್ಮಂಥವರಿಂದ?

MLA (PA) – ಬೆನ್ನೆಲುಬು ಮುರಿದ್ರೆ ಡಾಕ್ಟರ‍್ ಹತ್ರ ಹೋಗ್ರಯ್ಯಾ.. ನಮ್ ಸಾಯೇಬ್ರು ಎನ್ ಮಾಡಾಗ್ತೈತೆ..?? ನಮ್ ಸಾಯೇಬ್ರೇನು ಡಾಕ್ಟರಾ ಓದವ್ರೆ? ಐದ್ನೇ ಕ್ಲಾಸಲ್ಲಿ ಲಾಸಾಆ ಕಂಡು ಹಿಡಿಯಿರಿ ಅಂತ ಅವರ ಲೆಕ್ಕದ ಮೇಷ್ಟ್ರು ಹೇಳಿದ್ದಕ್ಕೆ ಆವತ್ತು ಸ್ಕೂಲಿಂದ ಓಡಿ ಹೊರಗೆ ಬಂದೋರು ಈವತ್ತಿನ ವರೆಗೂ ಸ್ಕೂಲ್ ಕಡೆ ತಿರುಗಿ ನೋಡಿಲ್ಲ.. ಆವತ್ತಿಂದ ಲಸಾಆ ಕಂಡು ಹಿಡೀತಾವ್ರೆ,.. ಅದು ಇನ್ನು ಸಿಗ್ತಿಲ್ಲ.. ಹಿಂಗಿರುವಾಗ ನಿಮ್ಮ ಬೆನ್ನೆಲುಬಿಗೆ ಅದೇನ್ ತ್ಯಾಪೆ ಹಾಕೋಕಾಗುತ್ತೆ...?

ಪಾಂಡು – ಬೇವರಸಿ.. ಹಳೇ ಬೇವರ‍್ಸಿ.. ನೀನೇನ್ಲಾ... ನನ್ ಮಾನಾ ಮರ‍್ವಾದೆನಾ ಇರೋಧ ಪಕ್ಷದೋರ‍್ಗಿಂತ ಚೀಪಾಗ್ ಕಳೀತಿದ್ಯ? ಕಳಿಯೋದ್ ಕಳೀತೀಯ.. ಒಸಿ ಸ್ಟಾಂಡರ್ಡ್ ಆಗಿ  ಕಳಿಯೋದಲ್ವೇನ್ಲಾ ಲೇ.. ತಿರುಬೋಕಿ..

ಪಾಂಡು – ನೋಡಿ ಅಣ್ಣ ತಮ್ಮಂದ್ರ.... ಹೋದ್ಸಲ ನಿಮಗೆ ಏನೇನೋ ಮಾಡ್ತೀನಿ ಅಂತ ಆಸ್ವಾಸನೆ ಕೊಟ್ಟಿದ್ದೆ.. ಆದ್ರೆ ಅದ್ಯಾವುದೂ ಈಡೇರಿಲ್ಲ ಅಂತ ನಂಗೊತ್ತು..  ಏನ್ ಮಾಡೋದು ಪರಿಸ್ಥಿತಿ..

ಚಕ್ರಪಾಣಿ – ಏನ್ ಸಾಯೇಬ್ರೇ.. ದಿಲ್ಲಿನಾಗೂ ನಿಮ್ದೇ ಸರ್ಕಾರ.. ಇಲ್ಲೂ ನಿಮ್ದೇ ಸರ್ಕಾರ.. ಇನ್ನೇನ್ ಪರಿಸ್ಥಿತಿ.. ಕೊಟ್ಟ ಮಾತನ್ನ ಉಳಿಸ್ಕೋಬೇಕಿತ್ತು ತಾನೆ?

MLA (PA) – ಇದೇನಣ್ಣ... ಜನ್ಗಳು ನಿಮ್ಗಿಂತ ಬುದ್ವಂತ್ರಾಗೋರೆ..?? ದಿಲ್ಲೀವರೆಗೂ ತಿಳ್ಕೊಂಡ್ ಬಿಟ್ಟವ್ರೇ..?? ಏನ್ ಹೇಳ್ತೀರ ಸಮಾಧಾನ ಹೇಳಿ...

ಪಾಂಡು -  ಹಾ.. ಇರಲಿ ಇರಲಿ... ಮಾಡ್ತೀನಿ..

ಪಾಂಡು – ನೋಡಿ ಅಣ್ಣ ತಮ್ಮಂದ್ರ.. ದಿಲ್ಲೀನಾಗೂ ನಮ್ದೇ ಸರ್ಕಾರ ಇತ್ತು..  ಇಲ್ಲೂ ನಮ್ದೇ ಸರ್ಕಾರ ಇತ್ತು.. ಆದ್ರೂ ಹೆಳಿದ್ ಕೆಲಸ ಮಾಡಿ ಕೊಡೋಕೆ ಆಗಿಲ್ಲ.. ಯಾಕಂದ್ರೆ.. ಈ ಆಪೋಸಿಷನ್ ಪಾರ್ಟಿನಲ್ ಕೂತ್ಕೋತಾರಲ್ಲ.. ಅವ್ರು ಕೊಳ್ಳೇಗಾಲಕ್ ಹೋಗ್ಬುಟ್ಟು  ಮರ‍್ತೋಗೋ  ಥರ ಮಾಟ ಮಾಡಿಸ್ಬಿಟ್ಟಿದ್ರು.. ನಾನು ಏನೇ ಒಳ್ಳೇ ಕೆಲಸ ಮಾಡ್ಬೇಕು ಅಂತ ಅನ್ಕೊಂಡ್ರೂ ಅದು ಮರ‍್ತೋಗ್ತಿತ್ತು.. ಅದಿಕ್ಕೆ ನಿಮ್ಮೂರಿಗೆ ಮಾಡ್ಬೇಕಾಗಿದ್ದ ಒಳ್ಳೇ ಕೆಲಸ ಯಾವುದು ಮಾಡೋಕ್ ಅಗಿಲ್ಲ.. ಇದ್ರಲ್ಲಿ ನಂದೇನೂ ತಪ್ಪಿಲ್ಲ.. ನಂಗೂ ನಿಮ್ಗೂ ಜಗಳ ತಂದಿಡ್ಬೇಕು ಅಂತ ಆಪೋಸಿಷನ್ ಪಾರ್ಟಿನೋರು ಹಿಂಗ್ ಮಾಡವ್ರೆ..

MLA (PA)ನೀವೇನೂ ಚಿಂತೆ ಮಾಡ್ಬೇಡಿ.. ನಮ್ ಸಾಯೇಬ್ರು ಈಗ್ ತಾನೆ ಕೊಳ್ಳೇಗಾಲಕ್ ಹೋಗಿ ಕುಂಬಳ ಕಾಯಿ ಮಂತ್ರಿಸಿಕೊಂಡು ಕಾಡ್ ಪಾಪಾ ನ ಬಲಿ ಕೊಟ್ಟು ಬಂದವ್ರೆ.. ಅವರ ಮರ‍್ತೋಗೋ ಖಾಯಿಲೆ ಈವತ್ತಿಂದ ದೂರ ಆಗೈತೆ.. ಈಸಲ ನೀವ್ ಓಟಿ ಹಾಕಿ.. ನಿಮ್ ಕೆಲಸ ಮಾಡಿ ಕೊಡ್ತಾರೆ.. ಎಲ್ಲಾ ಒಳ್ಳೆದಾಗುತ್ತೆ ಈ ಸಲ ಓಟ್ ಹಾಕಿ..

ಪಾಂಡು – ಹೂನ್ರಪ್ಪೋ.. ನಾನಿನ್ನು ಭಾಳ ಒಳ್ಳೇ ಕೆಲಸ ಮಾಡೋದೈತೆ.. ದಯವಿಟ್ಟು ಓಟ್ ಹಾಕ್ಬಿಡಿ..

MLA (PA) - ಕಿತ್ತೋದ್ ನನ್ ಮಗ.. ಬೇವರೆಸಿ ನನ್ ಮಗ.. ಅಂತ ಬೈಕೊಂಡ್ರು ನಮ್ ಸಾಯೇಬ್ರಿಗೆ ಬೇಜಾರಿಲ್ಲ.. ಬೈಕೊಂಡಾದ್ರೂ ಓಟ್ ಹಾಕಿ.. ಒಟ್ನಲ್ಲಿ ನಮ್ ಸಾಯೇಬ್ರಿಗೆ ನಿಮ್ ಓಟ್ ಬೇಕು ಅಷ್ಟೆ..
(ಪಾಂಡಪ್ಪನಿಗೆ ಜೈ.. ಪಾಂಡಪ್ಪನಿಗೆ ಜೈ ಎಂದು ಕೂಗುತ್ತ ಪಾಂಡು ಮತ್ತು ಅವನ PA ಅಲ್ಲಿಂದ ಹೋಗುವರು)
 ರಂಗೀಲ – ರೀ... ಏನ್ರೀ.. ಎಲ್ಲಿದೀರ ರೀ..?

ಸೋಮ – ಇಲ್ಲೇ ಇದೀನ ರಂಗು.. ಬಂದೆ.... ಬಾ ಚಲ್ಲಣ್ಣ... ಬಾ ಚಕ್ರಪಾಣಿ.. ನಿಮ್ಮಕ್ಕ ಕೋಳಿ ಸಾರು ಮುದ್ದೆ ಮಾಡ್ಕೊಂಡ್ ಬಂದೈತೆ.. ಹೋಗಿ ಊಟ ಮಾಡುವ..<ಎಂದು ಎಲ್ಲರೂ ಊಟಕ್ಕೆ ಕೂರ‍್ತಾರೆ..>

ಚಕ್ರಪಾಣಿ – ವಾ.. ಅಕ್ಕಯ್ಯಾ.. ಊಟ ಸಕ್ಕತ್ತಾಗೈತೆ.. ನೀನ್ ಮಾಡೋ ಕೋಳಿ ಸಾರು.... ರಾಗಿ ಮುದ್ದೆ.. ಅಬ್ಬಾ..  ನಿಜ್ವಾಗ್ಲೂ ರಸ ಗವಳ ಅಕ್ಕ..

ಸೋಮ- ಚಕ್ರ.. ಈ ಮುದ್ದೆ ಐತಲ್ಲಾ.. ಈ ಮುದ್ದೆ... ಇದು ನಮ್ ಹೊಲ್ದಾಗೆ ಬೆಳ್ದಿರೋ ರಾಗಿಯಿಂದ ಮಾಡಿದ್ದು ಕಣ್ಲಾ.. ಹೆಂಗೈತೆ..<ಎಂದೊಡನೇ ಎಲ್ಲರೂ ರಕ್ತ ವಾಂತಿ ಮಾಡಿಕೊಳ್ಳುತ್ತಾರೆ>ಅವರ ಕಿರುಚಾಟವನ್ನು ನೋಡಿ ಜನರು ಬಂದು ಅವರನ್ನು ಆಸ್ಪತ್ರೆಗೆ ಸೇರಿಸ್ತಾರೆ.. ಸೋಮನಿಗೆ ಹೆಚ್ಚಿನ ಅಪಾಯ ಆಗಿರೋದಿಲ್ಲ..

ಡಾ. ಯಡವಟ್ಟು – ಸೋಮಣ್ಣ.. ಸೋಮಣ್ಣ.. ಹೆಂಗೋ ದೇವ್ರುದೊಡ್ಡೋನು.. ನಿಮಗಾ ಏನೂ ಆಗಿಲ್ಲ.. ಜೀವ ಉಳುದೈತೆ.. ಅದಕ್ ಖುಷಿ ಪಡ್ರಿ..

ಸೋಮ– ಏನ್ ಪಾ ಡಾಕ್ಟರು.. ನಮಗ ಯಾಕ್ ಹಿಂಗಾತು..??

ಡಾ. ಯಡವಟ್ಟು – ನೀವು ಊಟ ಮಾಡಿದ್ರಲ್ಲ.. ಅದು ವಿಷ ಸೋಮಣ್ಣ..

ಸೋಮ – ನಾವು ತಿಂದುದ್ದು ರಾಗಿ ಮುದ್ದೆ.. ಕೋಳಿ ಸಾರು.. ಅದ್ರಾಗ್ ಹೆಂಗ್ ವಿಷ ಇತ್ತು?

ಡಾ. ಯಡವಟ್ಟು – ನೋಡ್ ಸೋಮಣ್ಣ.. ನೀವ್ ತಿಂದಿದ್ದ ರಾಗಿ ಒಳಗ ವಿಷ ಐತಿ.. ನೀವು ಬಿತ್ತನೆ ಮಾಡಿದ ರಾಗಿ ಬೀಜದಾಗ ವಿಷ ಇತ್ತಂದ್ರ ಅದು ಹಂಗಾ ಬೆಳಿಯೊಳಗ ಸೇರಿ ಎಲ್ಲಾ ಬೀಜದಾಗ ಬಂದು ಬಿಡ್ತೈತೆ.. ಅದ್ರಿಂದಾ ನಿಮಗ್ ಹಿಂಗಾಗೈತಿ.. ನೀವು ಮೂವರು ಬದುಕಿದ್ರಿ.. ಆದ್ರ ನಿಮ್ ಹೆಂಡ್ತಿ ರಂಗೀಲಾಗ ಭಾಳ ಸೀರಿಯಸ್ ಆಗೈತಿ.. ಆಕಿಗಿ ಆಪರೇಷನ್ ಮಾಡ್ಬೇಕು.. ನೀವು ರೆಸ್ಟ್ ಮಾಡ್ರಿ.. ನಾನು ಆಪರೇಷನ್ ಮಾಡಿ ಬರ‍್ತೀನಿ.

ಸೋಮ – ದೇವ್ರೇ.. ಸರ್ಕಾರ ನಮಗೆ ನೇರವಾಗಿ ಸಾಯಿಸೋಕೆ ಆಗದೇ ವಿಷದ ಬೀಜ ಕೊಟ್ಟು ನಮ್ ಬದುಕಿಗೆ ವಿಷ ಹಾಕಿತು.. ನನ್ ಹೆಂಡ್ತಿ ಸೀರಿಯಸ್ ಆಗಿದಾಳೆ.. ನನಗೇನೂ ಬ ಏಡ ಈ ಜಗತ್ತಿನಲ್ಲಿ.. ಆಕಿನಾದ್ರೂ  ಉಳಿಸಿ ಕೊಡು ದೇವ್ರೆ,.. ನನಗೆ ಅದೇ ಸಾಕು..

ದೇವ್ರು – ಮಗನೇ.. ನೀನು ಆವತ್ತು ಏನಂದೆ..?? ನನಗೆ ಈ ಎಕ್ಸ್ ಟ್ರಾ ಟಾಕ್ ಟೈಮ್ ಬೇಡ ದೇವ್ರೆ... 50 ಕೆಜಿ ಸಾಕು.. ಈ ಎಕ್ಸ್ ಟ್ರಾ 50 ಕೆಜಿ ಯಾಕ್ ಕೊಟ್ಟೆ.. ಅಂದಲ್ಲ.. ಅದಕ್ಕೆ ಆ ಎಕ್ಸ್ ಟ್ರಾ ಕೆಜಿ ನಾ ನಾನು ಈವತ್ತು ವಾಪಸ್ ತಗೊಳ್ತಿದೀನಿ.. ಹೋಗು.. ನಿನ್ನ ಪಾಡಿಗೆ ನೀನು ಜೀವನ ನಡೆಸು..

ಸೋಮ – ದೇವ್ರೆ.. ಜೊತೇಲಿ ಇರೋ ತನಕ ಅವರ ಬೆಲೆ ಗೊತ್ತಾಗಕ್ಕಿಲ್ಲ ಅಂತೆ.. ನನಗೂ ಹಂಗೆ ಆಗಿದ್ದು.. ನನ್ ಹೆಂಡ್ತಿ ಹೆಂಗಾದ್ರೂ ಇರಲಿ.. ಆದ್ರೆ ಅವಳಷ್ಟು ಪ್ರೀತಿನ ನಂಗೆ ಯಾರೂ ತೋರಿಸಿಲ್ಲ ದೇವ್ರು.. ಆ ಪ್ರೀತೀನ ನನ್ನಿಂದ ದೂರ ಮಾಡ್ಬೇಡ.. ಅಂದ.. ಚೆಂದ.. ಇದೆಲ್ಲದಕ್ಕಿಂತ ಪ್ರೀತಿ ಮುಖ್ಯ..  ಅನ್ನೋದು ನಂಗ್ ಗೊತ್ತಾಗಿದೆ.. ಎಕ್ಸ್ ಟ್ರಾ ಟಾಕ್ ಟೈಮ್ ಜೊತೆಗೆ ಅವಳ ಎಕ್ಸ್ ಟ್ರಾ ಪ್ರೀತಿ ಕೂಡ ನಂಗ್ ಬೇಕು.. ಅವಳನ್ನ ಉಳಿಸಿಕೊಡು ದೇವ್ರು.. ಉಳಿಸಿಕೊಡು..

ದೇವ್ರು – ತಥಾಸ್ತು

ಡಾ. ಯಡವಟ್ಟು – ಸಕ್ಸಸ್... ಸಕ್ಸಸ್.. ನನ್ನ ಮೊದಲನೇ ಆಪರೇಷನ್ ಸಕ್ಸಸ್ ಆಗ್ಬಿಟ್ತು.. ಸೋಮಣ್ಣ.. ನಿನ್ನೆಂಡ್ರು ಬದುಕಿಬಿಟ್ಳು..

ಸೋಮ – (ರಂಗೀಲಳನ್ನು ನೋಡಿ ಡಾಕ್ಟರ‍್ ಗೆ ಹೇಳ್ತಾನೆ) ಇದೇನ್ ಡಾಕ್ಟ್ರೇ.. ನನ್ನೆಂಡ್ರು 50 + 50 ಡಬಲ್ ಟಾಕ್ ಟೈಮ್ ಥರ ಇದ್ದೋಳು ಈಗ್ ನೋಡಿದ್ರೆ ಇಟೋಂದ್ ಸಣ್ಣಗೆ ಆಗೋಗಿದಾಳೆ..??

ಡಾ, ಯಡವಟ್ಟು – ಏನಿಲ್ಲ ಸೋಮಣ್ಣ.. ನಿನ್ನೆಂಡ್ರು ಹೊಟ್ಟೇಲಿ ವಿಷ ಇತಲ್ವಾ..?? ಅದಿಕ್ಕೆ ಅವರಿಗೆ ಹೊಟ್ಟೆ ಕ್ಲೀನ್ ಆಗ್ಲಿ ಅಂತ ಬೆಳಿಗ್ಗೆಯಿಂದ ವಾಂತಿ ಮಾಡ್ಸಿದೆ.. ವಾಂತಿ ಮಾಡೋ ಫೋರ್ಸ ನಲ್ಲಿ ಹೊಟ್ಟೆಲಿರೋ ಕರುಳೆಲ್ಲಾ ಹೊರಗೆ ಬಂದುಬಿಟ್ಟಿತ್ತು... ಕೊನೇಗೆ ಸಿಕ್ಕಿದಷ್ಟು ಕರುಳುಗಳನ್ನು ಮತ್ತೆ ಅವರ ಹೊಟ್ಟೆ ಒಳಗೆ ಇಟ್ಟು ಆಪರೇಷನ್ ಮಾಡಿದೆ.. ಅದಕ್ಕೆ ಅವರು ಡಬಲ್ ಟಾಕ್ ಟೈಮ್ ಥರ ಇದ್ದೋರು ಈಗ ಹಿಂಗೆ ಸಿಂಗಲ್ ಟಾಕ್ ಟೈಮ್ ತರ ಆಗೋಗ್ಬಿಟ್ಟವ್ರೆ..
ಮಿರ್ಚಿ ಬಜ್ಜಿ : ಕರ್ನಾಟಕ ಸರ್ಕಾರಕ್ಕೆ ಸರ್ಪಗಾವಲು

ಸಿದ್ರಾಮಯ್ಯನವರ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚಿನ ಪ್ರಮಾಣದಲ್ಲಿವೆ.. ಇದರ ಅರ್ಥ ನನಗೆ ಸಿದ್ರಾಮಯನವರ ಮೇಲೆ ನಂಬಿಕೆ ಇದೆ ಅಂತಲ್ಲ.. ಸಿದ್ರಾಮಯ್ಯನವರಿಗಿಂತ ಹೆಚ್ಚಿನ ನಂಬಿಕೆ ಇರೋದು ವಿ.ಪಕ್ಷದಲ್ಲಿ ಕುಳಿತಿರೋ ಹೆಚ್.ಡಿ.ದೇವೇಗೌಡ ಮತ್ತು ಕುಮಾರ ಸ್ವಾಮಿಗಳ ಮೇಲೆ..

ದೇವೇಗೌಡರ ಪಾಳಯದಲ್ಲಿ ಬೆಳೆದ ಸಿದ್ರಾಮಯ್ಯ ಇಂದು ಮುಖ್ಯಮಂತ್ರಿಯಾಗಿರೋದು ಗೌಡರಿಗೆ ನುಂಗಲಾರದ ತುತ್ತಾಗಿದೆ.. ಹೀಗಾಗಿ ಸಣ್ಣ ಪುಟ್ಟ ಹಗರಣಗಳು ಕಂಡುಬಂದರೂ ಅದನ್ನು ತಂತ್ರ ಕುತಂತ್ರಗಳಿಂದ ಹೊರಗೆಳೆದು ಸಿದ್ರಾಮಯ್ಯನವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಅಂತ ಬಕ ಪಕ್ಷಿಗಳಂತೆ ಕಾಯ್ತಿದ್ದಾರೆ..
 ಇಲ್ಲಿ ಇನ್ನೊಂದು ಪ್ರೆಶ್ನೆ ಏಳಬಹುದು.. ವಿ,ಪಕ್ಷದ ದೇವೇಗೌಡ್ರು ಮತ್ತು ಸೋನಿಯಾಗಾಂಧಿ ಕೇಂದ್ರದಲ್ಲಿ ಆಪ್ತತೆಯಿಂದ ಇದ್ದಾರೆ.. ಕಾಂಗ್ರೆಸ್ ಹಗರಣ ಎಷ್ಟೇ ಇದ್ದರು ಒಳಗೊಳಗೇ ಮುಚ್ಚಿ ಹೋಗುತ್ತೆ ಅನ್ನೋದು..ಅಕಸ್ಮಾತ್ ದೇವೇಗೌಡರು ಕೂಡ ಕಾಂಗರೆಸ್ ಜೊತೆ ಹಗರಣಗಳಲ್ಲಿ ಕೈ ಜೋಡಿಸಿದ್ರೆ ಮುಖ್ಯಮಂತ್ರಿಯಾಗಿ ಅರೆ ಬರೆ ಅಧಿಕಾರವನ್ನು ಅನುಭವಿಸಿದ ಅಧಿಕಾರದ ದಾಹ ಹೊತ್ತ ಯಡ್ಯೂರಪ್ಪನವರು ಇದನ್ನು ಸಹಿಸೋದೇ ಇಲ್ಲ.. ಹೇಗಾದ್ರೂ ಅವರ ಕಾಲೆಳೆದು ಸರ್ಕಾರ ಪತನ ಮಾಡೋದಕ್ಕೆ ಹೊಂಚು ಹಾಕಿ ಕಾಯ್ತಾ ಇದಾರೆ..

ಇಷ್ಟೆಲ್ಲಾ ಬಿಗಿ ಬಂಧನದಲ್ಲಿರುವ ಸಿದ್ರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಉತ್ತಮ ಕೆಲಸಗಳನ್ನು ಮಾಡಲೇಬೇಕಾದ ಪರಿಸ್ಥಿತಿ ಇದೆ..

ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚಿನ ಭರವಸೆ ಕಾಲೆಳೆಯಲು ಕಾದಿರುವ ವಿ.ಪಕ್ಷಗಳ ಹದ್ದಿನ ಕಣ್ಣಿನ ಮೇಲಿದೆ. ಸಿದ್ದಣ್ಣ ಮೋಸ ಮಾಡಿದ್ರೆ ಗೌಡ್ರು ಸಿ.,ಡಿ ರಿಲೀಸ್ ಮಾಡ್ತಾರೆ.. ಗೌಡ್ರು ಹಗರಣ ಮಾಡಿದ್ರೆ ಯಡ್ಡಿ, ರೆಡ್ಡಿ ಸಿ,.ಡಿ ರೆಕಾರ್ಡ ಮಾಡ್ತಾರೆ..

ಯಾರು ಯಾವ ಸಿ.ಡಿ ರೆಕಾರ್ಡ ಮಾಡಿದ್ರೂ ರಿಲೀಸ್ ಆದಾಗ ನೋಡೋರು ನಾವೇನೇ..!!!
ಒಳ್ಳೆ ಸಿನೆಮಾ ಬರುತ್ತೋ.. ಕೆಟ್ಟ ಸಿನೆಮಾ ಬರುತ್ತೋ ನೋಡೋಣ.. ಕಣ್ಣು ಕಾಯ್ತಾ ಇದಾವೆ.. ಖುಷೀನ ತುಂಬ್ಕೊಳ್ಳೋದಕ್ಕೆ…!!

ಕೊರಿಯರ‍್ ಬಾಯ್ ಕಲಿಸಿದ ಪಾಠ

ಹರುಕಲು ಬಟ್ಟೆ... ಒಣಗಿದ  ರಟ್ಟೆ ( ಕೈ ತೋಳುಗಳು).. ಕೃಷನಾದ ಆ ವ್ಯಕ್ತಿಯ ಕಣ್ಣುಗಳಲ್ಲಿ ಅದೇನೋ ಒಂದು ಚೇತನವಿತ್ತು.. ಕಷ್ಟ ನೂರೆಂಟಿದ್ದರೂ... ಖುಷಿಯೊಂದು ಆ ಕೃಷನ ಮನದ ಚೈತನ್ಯ ಇಮ್ಮಡಿಗೊಳಿಸಿತ್ತು... ಅದೇ ಅವನ ಮಗನ ಓದಿನ ವಿಷಯ.. ಬಿಸಿಲಲ್ಲಿ ತಾ ದುಡಿದು ಎಸೀಲೀ ಮಗನನ್ನಿಡಲು ಹಾತೊರಿಯುತ್ತಲಿತ್ತು ಆ ತಂದೆಯ ಮಡಿಲು... ಆದ್ರೆ, ದಿನ ಪೂರ್ತಿ ಬೆವರು ಸುರಿಸಿದರೂ ಸಿಗೋದು ಎಂಭತ್ತು ರೂಪಾಯಿ ಮಾತ್ರ.. ಅದ್ರಲ್ಲಿ ಮಗನನ್ನು ಎಷ್ಟು ತಾನೆ ಓದಿಸೋಕೆ ಸಾಧ್ಯ..?? ಆದರೂ ಆ ಬಡ ಆಶಾವಾದಿಯ ಮನದಲ್ಲಿ,  ಮಗನ ಬಗ್ಗೆ ಅಪಾರ ಭರವಸೆ ಇತ್ತು.. ಆ ತಂದೆಯ ಕಣ್ಣುಗಳಲ್ಲಿ ಮಹತ್ವಾಕಾಂಕ್ಷೆ ಇತ್ತು..

ಅದು ಸಂಜೆ ಐದರ ಸಮಯ... ಕೆಲಸ ಮುಗಿಸಿ ಮನೆಗೆ ಹೋಗುವ ಹೊತ್ತು ಹತ್ತಿರಕ್ಕೆ ಬಂದಿತ್ತು.. ಅದು ಕೊನೆಯ ಪುಟ್ಟಿ... ಕಲೆಸಿದ ಸಿಮೆಂಟನ್ನು ಆರನೆಯ ಮಹಡಿಯ ಮೇಲೆ ಹೋಗಿ ಕೊಡಬೇಕಿತ್ತು.. ದಿನ ಪೂರ್ತಿ ದಣಿದವನಿಗೆ ಅದೇನೋ ಸಂಜೆಯಾಗುತ್ತಲೇ ಸುಸ್ತು ಛಂಗನೆ ಕಾಣಿಸಿಕೊಂಡಿತ್ತು.. ಇದ್ದಕ್ಕಿದ್ದಂತೆ ಕಣ್ಣುಗಳಿಗೆ ಕತ್ತಲು ಕವಿದುಬಿಟ್ಟಿತ್ತು.. ಸ್ವಾಧೀನ ಕಳೆದುಕೊಂಡು ಧಿಡೀರನೇ ಬಿದ್ದು ಬಿಟ್ಟ.. ಅದೇ ಸಮಯಕ್ಕೆ ಸರಿಯಾಗಿ ಆ ಕಟ್ಟಡದ ಮಾಲೀಕರು ಎದುರಿಗೆ ಬಂದರು..!! 

                   ಮುಂಜಾನೆಯಿಂದ ಸಂಜೆಯವರೆಗೆ ಖುಷಿಯಗಿದ್ದವನು ಇದ್ದಕ್ಕಿದ್ದಂತೆ ಬಿದ್ದಿದ್ದು ಯಾಕೆ..?? ಅನ್ನೋದು ಅಲ್ಲಿದ್ದವರಿಗೆ ಅಚ್ಚರಿಯಾಯಿತು.. ಸುಸ್ತಾಗಿ ಬಿದ್ದವನನ್ನ ಮೇಸ್ತ್ರಿಯೊಬ್ಬರು ಧಿಡೀರನೆ ಆಸ್ಪತ್ರೆಗೆ ಕರೆದೊಯ್ದರು.. ಅವನ ಆರೋಗ್ಯಕ್ಕೆ ಯಾವುದೇ ರೀತಿಯ ಆಪತ್ತು ಇರಲಿಲ್ಲ. ಭಗವಂತ ಅವನ ಬದುಕಿನ ಆಯುಶ್ಯದ ಗೆರೆಯನ್ನು ಇನ್ನು ಉದ್ದಕ್ಕೆ ಎಳೆದಿದ್ದ.. ವೈದ್ಯರು ಆ ಕೂಲಿಕಾರನಿಗೆ ಗ್ಲೂಕೋಸ್ ಹಾಕಿಸಿ ಹೊರ ಬಂದರು.. ಮಾಲೀಕ ಕೂಡ ಅಲ್ಲೇ ಕೂತಿದ್ದ..

ಗಾಬರಿಯಾಗೋದು ಏನೂ ಇಲ್ಲ.. ಸರಿಯಾಗಿ ಊಟ ಮಾಡಿಲ್ಲ.. ಅದಕ್ಕೆ ಹೀಗೆ ಆಗಿದೆ ಅಷ್ಟೇ.. ಟ್ರೀಟ್ಮೆಂಟ್ ಕೊಟ್ಟಿದ್ದೀವಿ.. ಸರಿ ಹೋಗುತ್ತೆ.. ಹಾಂ.. ಕೆಳಗಡೆ ಕೌಂಟರ್ ನಲ್ಲಿ ಫೀಸ್ ಕಟ್ಟಿಬಿಡಿ ಅಂತ ಕಾಗದವೊಂದನ್ನು ಕೈಯಲ್ಲಿಟ್ಟು ಮುಂದೆ ನಡೆದಳು ಬಿಳಿ ಕೋಟಿನ ನಾರಿ.. ಒಂದು ರೂಪಾಯಿಗೂ ಲೆಕ್ಕ ಇರಬೇಕು ಅನ್ನೋ ವ್ಯಕ್ತಿ ಈ ಮಾಲೀಕ.. ಜಿಪುಣ ಎನ್ನುವುದಕ್ಕಿಂತ ಬೇಕಾ ಬಿಟ್ಟಿ ಖರ್ಚಿಗೆ ಕಡಿವಾಣ ಹಾಕುವಂಥ ಕುಶಲಮತಿಯವ.. ಬಹುಶಃ ಇಂಥ ಕುಶಲಮತಿಯಿಂದಲೇ ಆತನೀಗ ಮೂರು ಕಂಪೆನಿಗಳ ಮಾಲೀಕನಾಗಿದ್ದ.. ಕೈಯಲ್ಲಿದ್ದ ಬಿಲ್ಲನ್ನು ನೋಡಿದ ಮಾಲೀಕನಿಗೆ ಪಿತ್ತ ನೆತ್ತಿಗೇರಿತ್ತು.. ಬ್ರಾಹ್ಮಣನನ್ನು ಮಠನ್ ಸ್ಟಾಲ್ ಗೆ ಕರೆದುಕೊಂಡು ಹೋದಾಗ ಎಷ್ಟು ಕೋಪ ಬರುತ್ತೋ ಅಷ್ಟು ಕೋಪ ಅವನ ಮೊಗದಲ್ಲಿ, ಮನದಲ್ಲಿ ಕಾಣಿಸಿಕೊಂಡಿತ್ತು..

ಒಂದು ಹೊತ್ತಿನ ಊಟಕ್ಕೆ 20 ರೂಪಾಯಿ ಆಗುತ್ತೆ.. ಇಪ್ಪತ್ತು ರೂಪಾಯಿಯ ಊಟ ಮಾಡದೇ ಇಲ್ಲಿ ಬಂದು ಸಾವಿರ ರೂಪಾಯಿ ಆಸ್ಪತ್ರೆ ಬಿಲ್ಲು ಕೊಡುವಂತೆ ಮಾಡಿದನಲ್ಲ ಈ ಕೂಲಿಕಾರ ಎಂದು ಸಿಟ್ಟು ಅಬ್ಬರಿಸಿ ಬಂತು. ಅನಾವಶ್ಯಕ ಖರ್ಚಿಗೆ ಬೇಕೆಂತಲೇ ದಾರಿ ಮಾಡಿ ಕೊಟ್ಟ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ಮೇಸ್ತ್ರಿಗೆ ಸೂಚನೆಯನ್ನು ನೀಡುತ್ತಾನೆ.. ಮರು ಮಾತಾಡದೇ ಸಮ್ಮತಿ ಸೂಚಿಸಿ ಎರಡು ಹೆಜ್ಜೆ ಹಿಂದಕ್ಕೆ ಸರಿಯುತ್ತಾನೆ ಮೇಸ್ತ್ರೀ ಮಹಾಶಯ.. ಯಾಕೆ ಅಂದ್ರೆ ಆ ಬಡವನ ಪರ ಧ್ವನಿ ಏರಿಸಿದರೆ, ತನ್ನ ಕೆಲಸಕ್ಕೂ ಎಲ್ಲಿ ಕತ್ತರಿ ಬೀಳುವುದೋ ಎಂಬ ಆತಂಕ, ಭಯ ಆ ಮೇಸ್ತ್ರಿಗೆ..

ಆಸ್ಪತ್ರೆಯ ಬೆಡ್ಡಿನ ಮೇಲೆ ನಿತ್ರಾಣವಿಲ್ಲದೇ ಮಲಗಿದ್ದ ಆ ವ್ಯಕ್ತಿಯ ಬಳಿ ಬಂದ ಮಾಲೀಕ ನಿನ್ನ ಒಂದು ತಿಂಗಳ ಸಂಬಳ ಎಷ್ಟು??” ಅಂತ ಕೇಳ್ತಾನೆ..
ಉಸಿರು ಬಿಡಲೂ ಅಶಕ್ತನಾದ ಅವನಿಗೆ, ಅನ್ನದಾತನ ಆ ಪ್ರೆಶ್ನೆಗೆ ಉತ್ತರಿಸಬೇಕಾದ ಅನಿವಾರ್ಯತೆ ಇತ್ತು.. ಮೆಲು ಧ್ವನಿಯಲ್ಲೇ ಎರಡು ಸಾವಿರಅಂತ ಹೇಳಿದ.

ಬಾಗಿಲ ಬಳಿಯಲ್ಲಿದ್ದ ತನ್ನ ಮ್ಯಾನೇಜರ್ ನನ್ನು ಕರೆದು, ಸೂಟ್ ಕೇಸ್ ನಲ್ಲಿದ್ದ ಹಣದ ಬಂಡಲ್ ಅನ್ನು ತೆರೆದ.. ಅದರಿಂದ ಆರು ಸಾವಿರ ರೂಪಾಯಿಗಳನ್ನು ಆ ವಯೋವೃದ್ಧನ ಕೈಗಿಟ್ಟು, ತಗೋ ಈ ಮೂರು ತಿಂಗಳ ಸಂಬಳ.. ನಿನ್ನಂಥ ಬೇಜವಾಬ್ದಾರಿಯುತ ವ್ಯಕ್ತಿಗೆ  ಇನ್ನು ನನ್ನ ಸಂಸ್ಥೆಯಲ್ಲಿ ಕೆಲಸವಿಲ್ಲ.. ಕೇವಲ ಇಪ್ಪತ್ತು ರೂಪಾಯಿಯ ಬದಲಿಗೆ ಸಾವಿರ ರೂಪಾಯಿಯ ಆಸ್ಪತ್ರೆ ಬಿಲ್ಲು ಕಟ್ಟುವಂತೆ ಮಾಡಿದ್ದೀಯ.. ಸಾವಿರ ರೂಪಾಯಿ ನನಗೆ ಹೆಚ್ಚಲ್ಲ.. ಆದರೆ ಇಪ್ಪತ್ತು ರೂಪಾಯಿ ಬದಲಿಗೆ ಸಾವಿರ ರೂಪಾಯಿಯನ್ನು ಖರ್ಚು ಮಾಡಿಸುವಂಥ ಬೇಜವಾಬ್ದಾರಿಯ ವ್ಯಕ್ತಿಗೆ ನನ್ನ ಸಂಸ್ಥೆಯಲ್ಲಿ ಕೆಲಸವಿಲ್ಲಎಂದು ಹೇಳಿ ಅಲ್ಲಿಂದ ಹೊರಟು ಹೋದ ಮಾಲೀಕ..

ಶ್ವಾಸದಲ್ಲಿ ಉಸಿರಿಲ್ಲ... ದೇಹದಲ್ಲಿ ಶಕ್ತಿಯಿಲ್ಲ.. ಆದರೂ ಈಗೇನಾದರೂ ಮೌನವಾಗಿದ್ದರೆ ತನ್ನ ಕೆಲಸ ಹೋಗುತ್ತೆ.. ಕೆಲಸ ಹೋದರೆ ತನ್ನ ಮಗನ ಶಾಲೆಗೆ ಕುತ್ತಾಗುತ್ತೆ.. ತನ್ನ ಇಷ್ಟು ವರ್ಷದ ಆಸೆ ನೀರಲ್ಲಿ ಕೊಚ್ಚಿ ಹೋಗುತ್ತೆ ಎಂದು ತಿಳಿದು, ಜೋರಾಗಿ ಕೂಗಿ ತನ್ನ ಮಾಲೀಕನನ್ನ ಕರೆದು, “ಸ್ವಾಮಿ.... ನನ್ನನ್ನು ಕ್ಷಮಿಸಿ.. ಇನ್ನು ಮುಂದೆ ಹೀಗೆ ಮಾಡೋದಿಲ್ಲ... ನನ್ನಿಂದ ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕೆಲಸ ಮಾಡ್ತೀನಿ.. ದಯವಿಟ್ಟು ನನಗೆ ಕೆಲಸ ಮಾಡೋಕೆ ಅವಕಾಶ ಕೊಡಿ.. ನಾನು ಊಟ ಮಾಡಿದರೆ, ನನ್ನ ಮಗನ ಓದಿಗೆ ಹಣ ಇರುತ್ತಿರಲಿಲ್ಲ.. ನಾನು ಉಪವಾಸವಿದ್ದರೂ ಪರವಾಗಿಲ್ಲ.. ನನ್ನ ಮಗನ ಓದಿಗೆ ಯಾವತ್ತೂ ಕಡಿಮೆ ಆಗಬಾರದು ಅಂತ ಭಾವಿಸಿ ಹೀಗೆ ಮಾಡಿಬಿಟ್ಟೆ.. ದಯವಿಟ್ಟು ಕ್ಷಮಿಸಿ,. ನನ್ನ ಮಗನ ಓದಿಗಾಗಿ ನಾನು ಉಪವಾಸ ಮಾಡಿದೆ.. ಕೆಲಸದಿಂದ ತೆಗೆದು ಹಾಕಬೇಡಿ.. ಎಂದು ಗೋಳಾಡಿದ”.

ಆದರೆ, ಬೇಜಾವಾಬ್ದಾರಿ ಜನರನ್ನು ತೋರುವ ಜನರ ಕಣ್ಣೀರಿನ ಮಾತನ್ನು ಕೇಳಲು ಮಾಲೀಕ ತಯಾರಿರಲಿಲ್ಲ.. ಆದರೆ ಅವನ ಮ್ಯಾನೇಜರ್ ಗೆ ಇವನ ಮಾತನ್ನು ಕೇಳಿಸಿಕೊಂಡ. ಆದ್ರೆ ಮ್ಯಾನೇಜರ್ ಏನುತಾನೆ ಮಾಡಿಯಾನು..?? ಮಾಲೀಕ ಹೇಳಿದ್ದನ್ನು ಕಣ್ಮುಚ್ಚಿ ಕೇಳಬೇಕಾದ ಒನ್ ವೇ ಕೆಲಸ ಅವನದ್ದಾಗಿತ್ತು.. ಸ್ವಾಮಿಯನ್ನು ಆಂಜನೇಯ ಹಿಂಬಾಲಿಸಿದಂತೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೊರಟ ಮ್ಯಾನೇಜರ್..

ತನ್ನ ಕೆಲಸ ಹೋಗೇ ಬಿಟ್ಟಿತಲ್ಲ ಎಂಬ ದುಗುಡ... ಮಗನ ಓದಿನ ಕನಸು ಇಲ್ಲಿಗೇ ನಿಂತು ಬಿಟ್ಟಿತಲ್ಲಾ ಎಂಬ ಚಿಂತೆಯಿಂದ ಮನವು ಕರಗಿ ನೀರಾಗಿ ಕಣ್ಣೀರಿನ ಮೂಲಕ ಹೊರಗೆ ಬರುತ್ತಲಿತ್ತು.. ಆದರೆ ಒರೆಸುವ ಕೈಗಳು ಮಾತ್ರ ಅಲ್ಲಿ ಇರಲೇ ಇಲ್ಲ.

ಮಾರನೆಯ ದಿನ ಮಾಲೀಕ ನೇರವಾಗಿ ತನ್ನ ಮತ್ತೊಂದು ಆಫೀಸಿಗೆ ಅಚಾನಕ್ ಆಗಿ ಭೇಟಿ ಕೊಡ್ತಾನೆ.. ತನ್ನ ಕೆಲಸಗಾರರು ಹೇಗೆ ಕೆಲಸ ಮಾಡ್ತಿದ್ದಾರೆ ಪರೀಕ್ಷಿಸಬೇಕು ಅನ್ನೋ ಆಲೋಚನೆಯಿಂದ ಇಂಥ ಒಂದು ನಿರ್ಧಾರಕ್ಕೆ ಬರ್ತಾನೆ.  ಹತ್ತು ಗಂಟೆಗೆ ಆಫೀಸು ಶುರುವಾಗುತ್ತೆ. ಸುಮಾರು ಹನ್ನೊಂದು ಗಂಟೆಸ ಸಮಯಕ್ಕೆ ಸರಿಯಾಗಿ ಮ್ಯಾನೇಜರ್ ಮತ್ತು ಮಾಲೀಕ ಇಬ್ಬರೂ ಆಫೀಸಿಗೆ ಬರ್ತಾರೆ.. ಅಲ್ಲಿದ್ದ ನೂರೂ ಜನ ನೌಕರರು ಕೆಲಸ ಮಾಡುತ್ತಿರುತ್ತಾರೆ.. ಒಬ್ಬ ಮಾತ್ರ ರಿಸಪ್ಷನ್ ನಲ್ಲಿ ಕೂತ್ಕೊಂಡು ಸುಮ್ಮನೇ ನೋಡುತ್ತಾ ನಿಂತಿರುತ್ತಾನೆ.. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವಾಗ, ಇವನೊಬ್ಬ ಮಾತ್ರ ಕೆಲಸದ ವೇಳೆಯಲ್ಲಿ ಹರಟೆ ಒಡೆಯುತ್ತಿರುವುದನ್ನು ಕಂಡು, ಮಾಲೀಕನಿಗೆ ಕೋಪ ಒತ್ತರಿಸಿ ಬರುತ್ತದೆ.. ಇಂಥಾ ಬೇಜವಾಬ್ದಾರಿಯುತ ವ್ಯಕ್ತಿ ನನ್ನ ಆಫೀಸಿನಲ್ಲಿ ಕೆಲಸ ಮಾಡೋದು ಸರಿಯಲ್ಲ ಎಂದು ನಿರ್ಧರಿಸುತ್ತಾನೆ. ಆ ವ್ಯಕ್ತಿಯ ಬಳಿಗೆ ಬಂದ ಮಾಲೀಕ ನಿನಗೆ ತಿಂಗಳಿಗೆ ಎಷ್ಟು ಸಂಬಳ..??” ಎಂದು ಕೇಳಿದ..


ಬಂದವರು ಯಾರು..?? ಯಾಕೆ ಹೀಗೆ ಕೇಳುತ್ತಿದ್ದರೆ ಎಂದು ತಿಳಿಯದೆ ಅಚ್ಚರಿಯಿಂದ ಮಾಲೀಕನ ಪ್ರೆಶ್ನೆಗೆ ಉತ್ತರಿಸಿದ ಐದು ಸಾವಿರ”. ಹೀಗೆಂದ ಕೂಡಲೇ ತನ್ನ ಮ್ಯಾನೇಜರ್ ನನ್ನು ಕರೆದು ಸೂಟ್ ಕೇಸ್ ನಲ್ಲಿದ್ದ ಹಣದ ಗೊಂಚಲಿನಲ್ಲಿ ಹದಿನೈದು ಸಾವಿರ ರೂಪಾಯಿಯನ್ನು ತೆಗೆದು ಆ ವ್ಯಕ್ತಿಯ ಕೈಗಿಟ್ಟ.. ನಿನ್ನ ಮೂರು ತಿಂಗಳ ಸಂಬಳವನ್ನು ನಿನಗೆ ನೀಡುತ್ತಿದ್ದೇನೆ.. ತಗೊಂಡು ಇಲ್ಲಿಂದ ಹೊರಟು ಹೋಗು.. ಎಲ್ಲರೂ ಕೆಲಸ ಮಾಡುತ್ತಿರುವಾಗ ನೀನೊಬ್ಬ ಮಾತ್ರ ಹೀಗೆ ಬೇಜಾವಾಬ್ದಾರಿಯಿಂದ ನಿಂತಿದ್ದೀಯ.. ನಿನ್ನಂಥ ಬೇಜಾವಾಬ್ದಾರಿಯ ಹರಟೆ ಮಲ್ಲರಿಗೆ ಈ ನನ್ನ ಆಫೀಸಿನಲ್ಲಿ ಕೆಲಸವಿಲ್ಲ.. ಎಂದು ಗಡಸು ಧ್ವನಿಯಲ್ಲಿ ಜರಿದು ಆತನನ್ನು ಹೊರಗಟ್ಟುತ್ತಾನೆ

ಆಫೀಸಿನ ಮಾಲೀಕನೇ ಹೀಗೆ ಹೇಳಿದ ಮೇಲೆ ಇಲ್ಲಿ ಇರಲು ಸಾಧ್ಯವೇ,..??? ಕೊಟ್ಟ ಹಣವನ್ನು ಜೇಬಿಗಿಳಿಸಿಕೊಂಡು ಅಲ್ಲಿಂದ ಹೊರಟು ಬಿಟ್ಟ ಆ ವ್ಯಕ್ತಿ.. ಅವನು ಹೋದ ನಂತರ ತನ್ನ ಮ್ಯಾನೇಜರ್ ಅನ್ನು ಕರೆದು ಕೇಳಿದ
ಆ ವ್ಯಕ್ತಿಯ ಹೆಸರೇನು..??
ಮಂಜುನಾಥಮೌನವಾಗಿ ಉತ್ತರಿಸಿದ ಮ್ಯಾನೇಜರ್
ಅವನು ನಮ್ಮ ಸಂಸ್ಥೆಯಲ್ಲಿ ಏನು ಕೆಲಸ ಮಾಡುತ್ತಿದ್ದ..?? ಮರು ಪ್ರೆಶ್ನೆ ಹಾಕಿದ ಮಾಲೀಕ
ಕ್ಷಮಿಸಿ ಸರ್.. ಅವನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವನಲ್ಲ.. ಅವನು ಕೊರಿಯರ್ ವ್ಯಕ್ತಿ.. ಅವನು ಕೊರಿಯರ್ ತೆಗೆದುಕೊಂಡು ಹೋಗೋಕೆ ಬಂದಿದ್ದ.. ಆದರೆ ನೀವು ಅನಿಗೆ ಹದಿನೈದು ಸಾವಿರ ಕೊಟ್ಟು ಕಳಿಸಿಬಿಟ್ಟಿದ್ದೀರಿಎಂದು ಹೇಳಿದ ಮ್ಯಾನೇಜರ್..

ಮಾಲೀಕ ದಂಗಾಗಿ ಹೋದ.. ತನ್ನ ಅತಿ ಬುದ್ದಿವಂತಿಕೆಯಿಂದ ಹದಿನೈದು ಸಾವಿರ ಕಳೆದುಕೊಂಡಿದ್ದಕ್ಕೆ ಬೇಸರವಾಗಿತ್ತು.. ನಾಚಿಕೆಯಾಯಿತು..

ನನ್ನ ಆಲೋಚನೆ ತಪ್ಪೇ ಮ್ಯಾನೇಜರ್?? ನನ್ನ ಅತಿಯಾದ ವಿವೇಕವೇ ಅವಿವೇಕವಾಯಿತೇ ಎಂದು ಪ್ರೆಶ್ನೆಸಿದ..

ಮ್ಯಾನೇಜರ್ ವಿನಮ್ರತೆಯಿಂದ ಉತ್ತರಿಸಿದ ಇಲ್ಲ ಸರ್.. ನಿಮ್ಮ ಆಲೋಚನೆ ತಪ್ಪಲ್ಲ.. ಸಂಸ್ಥೆ ಬೆಳೆಸಲು ನಿಮ್ಮ ಆಲೋಚನೆ ಬಹಳ ಮುಖ್ಯ. ಆದರೆ ನೀವು ಒಂದೇ ಒಂದು ತಪ್ಪು ಮಾಡಿದ್ದೀರಿ

ಏನು..?? ನಾನು ತಪ್ಪು ಮಾಡಿದೆನೇಅಚ್ಚರಿಯಿಂದ ಕೇಳಿದ ಮಾಲೀಕ

ಹೌದು ಸರ್.. ನೆನ್ನೆ ನೀವು ಆ ವಯೋ ವೃದ್ಧನ ಬಗ್ಗೆ ಸಂಪೂರ್ಣವಾಗಿ ವಿಚಾರಿಸದೇ ನೀವು ಅವನನ್ನು ಕೆಲಸದಿಂದ ತೆಗೆದಿದ್ದು ಎಲ್ಲೋ ತಪ್ಪಾಗಿದೆ ಅನ್ನೋದು ನನ್ನ ಅಭಿಪ್ರಾಯಎಂದ ಮ್ಯಾನೇಜರ್.

ಅವನು ಊಟ ಮಾಡಿದ್ದರೆ ಕೇವಲ ಇಪ್ಪತ್ತು ರೂಪಾಯಿ ಖರ್ಚಾಗುತ್ತಿತ್ತು.. ಆದರೆ ಅವನು ಊಟ ಮಾಡದೇ ಕೇವಲ ಇಪ್ಪತ್ತು ರೂಪಾಯಿಯನ್ನು ಉಳಿಸಲು ಹೋಗಿ ಸಾವಿರ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟುವಂತೆ ಮಾಡಿದ್ದು ತಪ್ಪಲ್ಲವೇ..?? ಅದು ಹಣದ ಅಪವ್ಯಯವಲ್ಲವೇ..??” ಎಂದು ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳತೊಡಗಿದ ಮಾಲೀಕ

ಸರ್... ಆ ವಿಚಾರದಲ್ಲಿ ಅವನು ಮಾಡಿದ್ದು ತಪ್ಪು.. ಆದರೆ ತಾವು ಆ ಬಡವನಿಗೆ ನೀಡುತ್ತಿರುವ ವೇತನದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..?? ಮಗದೊಂದು ಪ್ರೆಶ್ನೆಯ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ ಮ್ಯಾನೇಜರ್..

ಇಲ್ಲ.. ಅದು ನನಗೆ ಬೇಡದ ವಿಷಯವಲ್ಲವೇ..ಮಾಲೀಕ ಕೇಳಿದ

ಸರ್.. ನೀವು ಕೊಡುತ್ತಿರುವ ಹಣ ಅವರಿಗೆ ಸಾಲುತ್ತಿಲ್ಲ.. ಅವನು ಮಧ್ಯಾಹ್ನದ ಊಟ ಮಾಡಿದ್ದರೆ, ತನ್ನ ಮಗನ ಓದಿಗೆ ಹಣ ಸಾಲದೇ ಬರುತ್ತಿತ್ತು.. ಅದಿಕ್ಕೆ ಅವನು ಊಟ ಮಾಡಿಲ್ಲ.. ಮಗನ ಓದಿಗಾಗಿ ಊಟ ತ್ಯಾಗ ಮಾಡಿದ  ತಂದೆಯ ಮನಸಿಗೆ, ನೀವು ಕೆಲಸದಿಂದ ತೆಗೆಯುವುದರ ಮೂಲಕ ಘಾಸಿಗೊಳಿಸಿದ್ರಿ ಅನಿಸ್ತಾ ಇದೆ.. ನೀವು ನೀಡುವ ಸಂಬಳ ಅವನ ಮಗನ ಓದಿಗೆ ಸಾಕಾಗುತ್ತಿದ್ದರೆ ಅವನೇಕೆ ಉಪವಾಸ ಇರುತ್ತಿದ್ದ..?? ಅವನ ಈ ಪರಿಸ್ಥಿತಿಗೆ ಪರೋಕ್ಷವಾಗಿ ನೇವೇ ಕಾರಣವಲ್ಲವೇ..?? ಯೋಚಿಸಿ.. ನೀವು ಆ ಬಡವನಿಂದ ಕೆಲಸ ಕಿತ್ತುಕೊಂಡಿರಿ.. ಆ ಕೊರಿಯರ್ ಹುಡುಗ ನಿಮ್ಮ ಬಳಿಯಿಂದ ಹದಿನೈದು ಸಾವಿರ ಕಿತ್ತುಕೊಂಡು ಹೋದ.. ಬದುಕು ಹೀಗೆ.. ನಿಜವಾಗಲೂ ವ್ಯರ್ಥವಗಿರೋದು ಈ ಕೊರಿಯರ್ ಹುಡುಗ ತೆಗೆದುಕೊಂಡ ಹೋದ ಹಣ ಮಾತ್ರ.. ಆ ಬಡ ಕೂಲಿಕಾರನಿಗೆ ಕೊಟ್ಟ ಹಣವಲ್ಲ.. ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಿಮ್ಮ ನಿರ್ಧಾರಗಳು ಪೂರಕವಾಗಿವೆ.. ನೀವು ತೆಗೆದುಕೊಳ್ಳುವ ನಿಯಮಗಳು ತಪ್ಪಲ್ಲ.. ಆದರೆ ಸಂಸ್ಥೆಯಲ್ಲಿ ಕೆಲಸ ಮಾಡುವವರ ಬದುಕು ಕೂಡ ನಿಮ್ಮ ಸಂಸ್ಥೆಯ ಪ್ರತಿಷ್ಟೆಗೆ ಸಂಬಂಧಿಸಿರುತ್ತೆ.. ತನ್ನ ಕೆಲಸಗಾರರ ಬದುಕಿಗೆ ಆಧಾರವಾಗಬೇಕಾಗಿರುವುದು ಸಂಸ್ಥೆಯೇ ಅಲ್ಲವೇ..??”

ಎಂದು ಮ್ಯಾನೇಜರ್ ಹೇಳಿದ... ಅವನ ಮಾತು ನಿಜಕ್ಕೂ ಅರ್ಥಗರ್ಭಿತವಾಗಿತ್ತು... ಆ ಬಡ ವ್ಯಕ್ತಿಯ ಉಪವಾಸಕ್ಕೆ ತಾನೇ ಕಾರಣ ಎಂಬುದನ್ನು ಮಾಲೀಕ ಅರ್ಥ ಮಾಡಿಕೊಂಡಿದ್ದ.. ಕನಿಷ್ಟ ಕೂಲಿಯನ್ನು ನೀಡಬೇಕಾಗಿರುವುದು ತನ್ನ ಕರ್ತವ್ಯವೂ ಹೌದು ಎಂಬುದು ಮ್ಯಾನೇಜರ್ ನ ಮಾನವೀಯತೆಯ ಮಾತಿನಿಂದ ಅರಿವಾಯಿತು.. ಕೂಡಲೇ ಆ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮ್ಯಾನೇಜರ್ ಗೆ ಸೂಸಚಿಸಿದ.. ಅಷ್ಟೆ ಅಲ್ಲ.. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಬದುಕಿನ ಕನಿಷ್ಟ ಅವಶ್ಯಕತೆಗಳನ್ನುಪಡೆಯುವಲ್ಲಿ ಸಮರ್ಥರಾಗಿದ್ದಾರೆಯೇ..?? ಅಥವ ಇಲ್ಲವೇ ಎಂಬುದನ್ನು ಗಮನಿಸುವಂತೆ ಮ್ಯಾನೇಜರ್ ಗೆ ಸೂಚಿಸಿದ.

ಮಾಲೀಕನ ನಿರ್ಧಾರದಿಂದ ಮ್ಯಾನೇಜರ್ ಗೆ ಖುಷಿ ಆಯ್ತು.. ತಕ್ಷಣವೇ ಕಾರ್ಯೋನ್ಮುಖನಾದ ಮ್ಯಾನೇಜರ್.. ನಿಮ್ಮ ನಿರ್ಧಾರ ಎಲ್ಲಾ ಸಂಸ್ಥೆಯವರು ಕೈಗೊಂಡರೆ... ಕನಿಷ್ಟ ಕೂಲಿಯನ್ನು ನೀಡಿದರೆ ಎಲ್ಲರ ಬದುಕು ಹಸನಾಗುತ್ತದೆ ಸರ್.. ಯಾರೂ ಉಪವಾಸ ಇರಬೇಕಾದ ಅನಿವಾರ್ಯತೆ ಇರುವುದಿಲ್ಲ.. ನೀವೇನೂ ಚಿಂತಿಸಬೇಡಿ ಸರ್.. ನಿಮ್ಮಿಂದ ಹದಿನೈದು ಸಾವಿರ ತೆಗೆದುಕೊಂಡು ಹೋದ ಆ ಕೊರಿಯರ್ ಹುಡುಗನನ್ನು ಕರೆಯಲು ಕಳಿಸುತ್ತೇನೆ.. ಕಳೆದ ಆ ಹಣವೆಲ್ಲವೂ ಮರಳಿ ಬರುತ್ತೆಎಂದ ಮ್ಯಾನೇಜರ್
ತಪ್ಪಿನ ಅರಿವಾಗಿದ್ದ ಮಾಲೀಕ ಅಪರಾಧಿ ಮನೋಭಾವನೆಯೊಂದಿಗೆ ತಲೆ ಎತ್ತಿ ಹೇಳಿದ ಬೇಡ ಮ್ಯಾನೇಜರ್ ರವರೆ... ಆ ಹುಡುಗನೇ ನನ್ನ ಕಣ್ ತೆರೆಸಿದ.. ಪಾಠ ಕಲಿಯೋದಕ್ಕೆ ನಾವು ಲಕ್ಷ ಲಕ್ಷ ಹಣ ಕೊಟ್ಟು ಯೂನಿವರ್ಸಿಟಿ,, ಕಾಲೇಜುಗಳಿಗೆ ಹೋಗ್ತೀವಿ.. ಆದರೆ ಬದುಕಿನ ಪಾಠ... ಅನಿವಾರ್ಯತೆ ಮತ್ತು ಬದುಕಿನ ಅವಶ್ಯಕತೆಗಳು ಎಷ್ಟಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಆ ಕೊರಿಯರ್ ಹುಡುಗನಿಗೆ ನಾನು ಏನು ಕೊಡಲು ಸಾಧ್ಯ..?? ಆ ಹಣ ಅವನಿಗೆ ನಾನು ಕೊಡುವ ಗುರು ದಕ್ಷಿಣೆಯಾಗಲಿ ಅದು.. ಎಂದು ಹೇಳಿ ತನ್ನ ಛೇಂಬರ್ ಗೆ ಹೋಗಿ ಕುಳಿತು ಬಿಟ್ಟ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು