Recent Movies

ಸಿನೆಮಾ

Share This Article To your Friends

Showing posts with label ನೀತಿ ಕಥೆಗಳು. Show all posts
Showing posts with label ನೀತಿ ಕಥೆಗಳು. Show all posts

ಇಡೀ ದೇಶವೇ ಖುಷಿಯಲ್ಲಿ ಇರುವಾಗ ಅವನೊಬ್ಬ ಮಾತ್ರ ಕಣ್ಣೀರು ಹಾಕುತ್ತಿದ್ದ..!


ಅದು 1947 ರ ವರ್ಷ... ರಾಜಕೀಯ ಅತಂತ್ರದೊಂದಿಗೆ ಭಿನ್ನಮತದ ತೀವ್ರ ನರ್ತನಕ್ಕೆ ನಲುಗಿಹೋಗಿತ್ತು.. ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಳ್ಳದೇ ಬೇರೇ ವಿಧಿಯೇ ಇಲ್ಲ ಎಂಬಂಥ ಸನ್ನಿವೇಷಗಳು ಅದಾಗಲೇ ನಿರ್ಮಾಣಗೊಂಡಿದ್ದವು.. ಶಾಂತಿಯ ತೋಟದಲ್ಲಿ ರಕ್ತಕ್ರಾಂತಿ ಬೀಜಗಳು ಚಿಗುರೊಡೆದಿದ್ದವು.. ಉಗ್ರರ ಅಟ್ಟಹಾಸಕ್ಕೆ ಅದೆಷ್ಟೋ ಕುಟುಂಬಗಳು ನಲುಗಿ ಜೀವಬಿಟ್ಟಿದ್ದವು.  ಕುಟುಂಬವೊಂದರಲ್ಲಿ ತಂದೆ, ತಾಯಿ, ಅಣ್ಣ ಮತ್ತು ಸಹೋದರಿಯರ ರಕ್ತವನ್ನು ಕಣ್ಣಗಳು ಬರ್ಬರವಾಗಿ ನೆಲಕ್ಕೆ ಹರಿಸಿಬಿಟ್ಟಿದ್ದರು.. ಆ ಕುಟುಂಬದಲ್ಲಿ ಉಳಿದವನು ಒಬ್ಬನೇ ಒಬ್ಬ ಮಾತ್ರ.. ಸಾವಿನ ದವಡೆಯಯಿಂದ ತನ್ನ ಮಗನನ್ನು ಬದುಕಿಸಬೇಕು ಎನ್ನುವ ಹಂಬಲ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ತಂದೆಗೆ ಇತ್ತು.. ರಕ್ತ ಸಮುದ್ರದಲ್ಲಿ ಮಲಗಿದ್ದ ಆ ತಂದೆ ತನ್ನ ಪುಟ್ಟ ಮಗನನ್ನು ಕಂಡು ಸಾವಿಗೂ ಮುನ್ನ ಕೂಗಿದ ಕಟ್ಟ ಕಡೆಯ ಪದಗಳೆಂದರೆ 'ಭಾಗ್ ಮಿಲ್ಖಾ ಭಾಗ್,'
ಹೌದು.. ಇದು ಮಿಂಚಿನ ಓಟಗಾರ ಎಂದು ಭಾರತಕ್ಕೆ ಖ್ಯಾತಿ ಗಳಿಸಿಕೊಟ್ಟ, ಚಿನ್ನದ ಪದಕಗಳ ಒಡೆಯ ಮಿಲ್ಖಾಸಿಂಗ್ ಬದುಕಿನಲ್ಲಿ ನಡೆದ ಕರಾಳ ಘಟನೆಗಳು.. ಮೌನ ಸ್ಮಶಾನದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಶವಗಳನ್ನು ಕಣ್ಣಾರೆ ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಪುಟ್ಟ ಬಾಲಕನದ್ದಾಗಿತ್ತು.. ತನ್ನ ಕಣ್ಮುಂದೆಯೇ ಕುಟುಂಬದವರೆಲ್ಲರೂ ವಿಲ ವಿಲನೆ ಒದ್ದಾಡಿ ಜೀವ ಬಿಟ್ಟರು. ಮಳೆ ಬಾರದೇ ಒಣಗಿದ್ದ ಬಿರುಕು ಭೂಮಿ ಆ ಜೀವಗಳ ಕೆಂಪು ರಕ್ತವನ್ನು ಹೀರಿ ತೃಪ್ತಿಪಡುತ್ತಿತ್ತು.. ತನಬ್ನ ದಾಹ ತೀರಿಸಿಕೊಳ್ಳುತ್ತಿತ್ತು. ಸಾವಿಗೂ ಮುನ್ನ ತಂದೆ ಹೇಳಿದ ಮಾತಿನಂತೆ ತನ್ನ ಜೀವ ಉಳಿಸಿಕೊಳ್ಳಲು ಆ ಹೆಣಗಳ ರಾಶಿಯನ್ನು ದಾಟಿ, ಅಂದು ಪಾಕಿಸ್ಥಾನದಿಂದ ಓಡಲು ಶುರು ಮಾಡಿದ..

ಸಾವಿನ ರುದ್ರಾಭಿಷೇಕದಿಂದ ಪಾರಾಗಲು ಓಡಿದ ಆ ಓಟ ಮುಂದೊಂದು ದಿನ ಭಾರತಕ್ಕೆ ಚಿನ್ನದ ಪದಕಗಳ ಸುರಿಮಳೆ ನೀಡುತ್ತೆ ಅಂತ ಆತ ಅಂದುಕೊಂಡಿರಲಿಲ್ಲ.. ಲಾಹೋರ್‌ನಿಂದ ತಪ್ಪಿಸಿಕೊಂಡು ದಿಲ್ಲಿಗೆ ಬಂದಾಗ ಆತನ ಹೊಟ್ಟೆ ಅನ್ನಕ್ಕಾಗಿ ಹಪಹಪಿಸುತ್ತಿತ್ತು.. ಆದರೆ ಊಟ ಕೊಡುವಷ್ಟು ವ್ಯವಧಾನವಗಲೀ, ಆ ಬಾಲಕನ ಕಷ್ಟಗಳಿಗೆ ಸ್ಪಂದಿಸುವ ಮನೋಸ್ಥೈರ್ಯವಾಗಲಿ ಅಲ್ಲಿ ಯಾರಿಗೂ ಇರಲಿಲ್ಲ.. ಕೊನೆಗೆ ಆತನ ಹೊಟ್ಟೆ ತುಂಬಿಕೊಂಡದ್ದು ಕೇವಲ ನೀರು ಮಾತ್ರ.. ಅದೂ ಶುದ್ಧತೆಗೆ ವ್ಯತಿರಿಕ್ತವಾದ ನೀರು.

ಮಿಲ್ಖಾಸಿಂಗ್ ಅಂದು ಕ್ರೂರಿಗಳ ಕೈಯಿಂದ ತಪ್ಪಿಸಿಕೊಂಡು ಬದುಕಿನ ಹೊಸ ಬೆಳಕಿಗಾಗಿ ಓಡಲು ಶುರು ಮಾಡಿದ. ಆ ಓಟವೇ ನಂತರದ ದಿನಗಳಲ್ಲಿ ಭಾರತಕ್ಕೆ ಚಿನ್ನದ ಪದಕಗಳನ್ನು, ಬೆಳ್ಳಿ ಪದಕಗಳನ್ನು ಗೆದ್ದು ಗೌರವ ತಂದುಕೊಟ್ಟಿತು. ಭಾರತಕ್ಕೇ ಭಾರತವೇ ಹೆಮ್ಮೆ ಪಡುವ ಸಮಯದಲ್ಲಿ ಮಿಲ್ಖಾಸಿಂಗ್ ಮಾತ್ರ ಮನದೊಳಗೇ ಮರುಗಿ ದುಃಖಿಸುತ್ತಾನೆ.. ಪದಕ ಗೆದ್ದಾಗಲೆಲ್ಲಾ ಮಿಂಚಿನ ಓಟದ ಸರದಾರನಿಗೆ ತಂದೆ ಅಂದು ಹೇಳಿದ ಕೊನೆಯ ಮಾತು ನೆನಪಾಗುತ್ತಲೇ ಇರುತ್ತದೆ. ಆ ಮಾತುಗಳು, ಅಂದು ಕಣ್ಣೆದುರೇ ಹತರಾದ ಕುಟುಂಬದವರ ಸಾವಿನ ದೃಶ್ಯಗಳನ್ನು ನೆನೆದರೆ ಈಗಲೂ ಮಿಲ್ಖಾಸಿಂಗ್ ಮನದ ಮೂಲೆಯಲ್ಲಿ ಭಯದ ನಡುಕ ಮನೆ ಮಾಡುತ್ತದೆ.. ಕಣ್ಣೀರು ನೆಲ ಮುಟ್ಟಿ ತಂಪನ್ನೀಯುತ್ತದೆ. ದೇಶವೇ ಹೆಮ್ಮೆಯಿಂದ ಅಭಿನಂದಿಸುತ್ತಿರುವಾಗ ಅವರು ಮಾತ್ರ ಅಳುವಿನ ಕಡಲಲ್ಲಿ ಈಜುತ್ತಿರುತ್ತಾರೆ. ಅಂದು ಬದುಕಲು ಓಡಲು ಶುರುಮಾಡಿದವನಿಗೆ, ನಂತರದಲ್ಲಿ ಓಡುವುದೇ ಬದುಕಾಗಿಹೋಗಿತ್ತು.

  'ಏಷ್ಯಾದಲ್ಲೇ ಅತ್ಯಂತ ವೇಗದ ಓಟಗಾರ' ಎಂದು ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಶ್ರೇಷ್ಠ ಅಥ್ಲೀಟ್ ಅಬ್ದುಲ್ ಖಾಲಿಕ್ ರನ್ನು ಬೆನ್ನಟ್ಟಿ ಓಟದಲ್ಲಿ ಬಗ್ಗು ಬಡಿದ ಆ ನೆನಪುಗಳನ್ನು ಮಿಲ್ಖಾಸಿಂಗ್ ಈಗಲು ರೋಷಾಗ್ನಿಯಿಂದ ನೆನೆಯುತ್ತಾರೆ. ಅಂದು ಮಿಂಚಿನ ವೇಗದ ಪ್ರದರ್ಶನ ನೀಡಿದ ಮಿಲ್ಖಾಸಿಂಗ್ ಗೆ, ಕುಟುಂಬದವರನ್ನು ಬಲಿ ತೆಗೆದುಕೊಂಡ ಪಾಪಿಗಳಿಗೆ ಸೋಲಬಾರದು ಎಂಬ ಛಲವಿತ್ತು.. ಮನದಲ್ಲಿ ಆ ಓಟದ ಮೀಟರ್ ವೇಗವಾಗಿ ಚಲಿಸತೊಡಗಿತ್ತು.. ಅಂದು ಮಿಲ್ಖಾಸಿಂಗ್ ತೋರಿದ ವೇಗದ ಓಟಕ್ಕೆ ಮೆಚ್ಚಿದ ಅಂದಿನ ಪಾಕ್ ಪ್ರಧಾನಿ 'ಫ್ಲೈಯಿಂಗ್ ಸಿಖ್' ಎಂದು ಕರೆದು ಗೌರವಿಸಿದರು.

ಹೆತ್ತವರನ್ನು ಕಳೆದುಕೊಂಡ ದೇಶದಲ್ಲೇ ಸಾಧನೆ ಮಾಡಿ ತೋರಿಸಿ ತೃಪ್ತಿಪಟ್ಟ ಮಹಾನ್ ಛಲಗಾರ ಮಿಲ್ಖಾಸಿಂಗ್ ಗೆ ಪಾಕಿಸ್ತಾನದ ಬಗ್ಗೆ ಬೇಸರವಿಲ್ಲ.. ಈಗಲೂ ಪಾಕಿಸ್ತಾನ ಹಾಗೂ ಭಾರತದ ನಡುವೆ ಸದಾ ಭ್ರಾತೃತ್ವ ಇರಲಿ ಎಂದು ಮನಃಪೂರಕವಾಗಿ ಆಶಿಸುತ್ತಾರೆ. ಇತ್ತೀಚೆಗಷ್ಟೇ ಮಿಲ್ಖಾಸಿಂಗ್ ಜೀವನ ಆಧಾರಿತ ಚಿತ್ರ “ಭಾಗ್ ಮಿಲ್ಖಾ ಭಾಗ್” ನಿಂದಾಗಿ ಮತ್ತೊಮ್ಮೆ ಬದುಕಿನ ಚಿತ್ರಗಳನ್ನು ಕಣ್ಮುಂದೆ ತಂದಿದ್ದಾರೆ ನಿರ್ದೇಶಕರು. ಇದನ್ನು ನೋಡಿದ “ಫ್ಲೈಯಿಂಗ್ ಸಿಖ್” ಗೆ ಮತ್ತೆ ನೋವಿನ ಕಣ್ಣೀರು ಮನತುಂಬಿ ಬಂದಿತ್ತು.

ಸಿನೆಮಾ ನೋಡಿ “ವಾಹ್ ಸೂಪರ್.. ಎಂಥಾ ಸೀನ್ ಗುರು” ಎಂದು ಹುಬ್ಬೇರಿಸುವ ಜನರು ಮಿಲ್ಖಾ ಬದುಕಿನ ಇಂಚಿಂಚು ನೋವನ್ನು ಅರ್ಥ ಮಾಡಿಕೊಂಡು ಅವರ ಸಾದನೆಯನ್ನು ಗೌರವಿಸಿದಾಗ ಮಾತ್ರ ಚಿತ್ರಕ್ಕೆ ಸಾರ್ಥಕತೆ ಸಿಗುತ್ತದೆ..

ಸಿನೆಮಾ ನೋಡಿ ಹೊರ ಬರುವಾಗ ಅದೆಷ್ಟೋ ಜನರು ಭಾವೋದ್ರೇಕಗೊಂಡು, ಅಚ್ಚರಿಗೊಂಡು ಹೊರಬರುತ್ತಿದ್ದಾರೆ.. “ಅಬ್ಬಾ ಅದೆಂಥಾ ಭಯಾನಕ ಬದುಕಿನ ಅನಾವರಣ ಮಾಡಿದ್ದಾರೆ ನಿರ್ದೇಶಕರು?” ಎಂದು ಅಚ್ಚರಿಯ ಜೊತೆಗೆ ಭಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.. ನೋಡುಗರಿಗೆ ಅಷ್ಟೋಂದು ಕರುಳು ಹಿಂಡಿದೆ ಈ ಸಿನೆಮಾ ಎಂದರೆ ನಿಜ ಬದುಕಿನಲ್ಲಿ ಅನುಭವಿಸಿದವರ ಪಾಡೇನು? ಯೋಚಿಸಿ ನೋಡಿ..!ಇದು ಕಲ್ಪನೆಗೂ ಮೀರಿದ ಪ್ರೆಶ್ನೆ..!

ನೋವನುಂಡು ದೇಶಕ್ಕೆ ಕೀರ್ತಿ ಮಾಲೆಯನ್ನು ಹಾಕಿದ ವೀರ ಓಟಗಾರನಿಗೆ ನಾವೆಲ್ಲರೂ ನಿಜಕ್ಕೂ ಸಲಾಂ ಹೇಳಲೇಬೇಕು.. “ ಹ್ಯಾಟ್ಸ್ ಅಪ್ ಮಿಲ್ಖಾಸಿಂಗ್.. ಹ್ಯಾಟ್ಸ್ ಅಪ್..!

ಅವಳು ನನ್ನನ್ನು ಯಾಕೋ ಕಾಡುತ್ತಿದ್ದಾಳೆ


ಇಂದು ಅವಳೇಕೋ ನನ್ನನ್ನು ಕಾಡುತ್ತಿದ್ದಾಳೆ.. ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ.. ಎಂದೂ ಇಲ್ಲದ ಅವಳ ನೆನಪು ಇಂದೇಕೆ ಇಷ್ಟೋಂದು ಕಾಡುತ್ತಿದೆ..? ಅವಳು ಯಾರು ಅಂತ ನನಗೆ ಗೊತ್ತಿಲ್ಲ.. ಅವಳ ಹೆಸರೂ ನನಗೆ ಗೊತ್ತಿಲ್ಲ.. ಅವಳು ರೂಪವಂತೆಯೂ ಅಲ್ಲ.. ಅವಳು ಓದಿಲ್ಲ.. ಆದರೂ ಅವಳು ನೆನಪಾಗುತ್ತಿದ್ದಾಳೆ.. ಯಾಕೆ..? ಯಾಕೆ..? ನಾನು ಅವಳನ್ನು ನೋಡಿದ್ದು ನೆನ್ನೆ ಮಾತ್ರ.. ಅದೂ ಓಟ್ ಹಾಕಲು ಹೋದಾಗ..! ಒಮ್ಮೆ ನೋಡಿದ ಆಕೆ ಬೇಡ ಬೇಡ ಎಂದರೂ ಪದೇ ಪದೇ ಈವತ್ತು ನೆನಪಾಗುತ್ತಿದ್ದಾಳೆ... ಬಲವಂತವಾಗಿ ಅವಳನ್ನು ಮರೆಯಲು ಮಾಡುತ್ತಿರುವ ನನ್ನ ಪ್ರಯತ್ನ ವಿಫಲವಾಗುತ್ತಿದೆ.,. ಬಲವಂತವಾಗಿ ಮರೆಯೋದು ಆತ್ಮದ್ರೋಹ. ಇಲ್ಲ.. ಇಲ್ಲ.. ಇಂಥ ಆತ್ಮದ್ರೋಹಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ.. ಅವಳನ್ನು ಬಲವಂತವಾಗಿ ಮರೆಯೋದು ನನಗೆ ನಾನೇ ಮಾಡಿಕೊಳ್ಳುವ ದ್ರೋಹ..

ಒಂದೇ ನೋಟದಲ್ಲಿ ಕಂಡ ಅವಳು ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ.. ಬೇಡವೆಂದರೂ ಕದ ತಟ್ಟಿ ಅಂಧಕಾರದ ಹೃದಯದೊಳಗೆ ಪದಗಳನು ಹಾಡುತ್ತಾ ಕುಳಿತಿದ್ದಾಳೆ.. ಇಲ್ಲ.. ನಾನು ಅವಳನ್ನು ಹೆಚ್ಚು ಮಾತಾಡಿಸಿಲ್ಲ. ಕೇವಲ ಒಂದೆರಡು ಮಾತು ಮಾತ್ರ.. ಆದರೆ ಆಡಿದ ಆ ಎರಡು ಮಾತುಗಳಲ್ಲಿಯೇ ಆಕೆಯ ಔದಾರ್ಯ ನನ್ನ ಅರಿವಿಗೆ ಬಂತು.. ಆಕೆಯ ಕಾಳಜಿ ನನಗೆ ಇಷ್ಟವಾಯಿತು. ಓಟ್ ಹಾಕಿ ಹೊರಬಂದಾಗ ಆಕೆ ನಡೆಯಲಾಗಲಿಲ್ಲ.. ಅದೇನೋ ನಿಶಕ್ತಿ ಆಕೆಯನ್ನು ಕಾಡಿತ್ತು. ಪೋಲೀಸ್ ಆಕೆಯ ಕೈ ಹಿಡಿದ.. ಪಕ್ಕದಲ್ಲೇ ನಿಂತಿದ್ದ ನಾನು ಅದನ್ನು ನೋಡಿ ಸುಮ್ಮನಿರೋದಾದ್ರೂ ಹೇಗೆ..? ನಾನು ಅವಳ ಕೈ ಹಿಡಿದೆ.. ನಿಧಾನವಾಗಿ ಅವಳನ್ನು ಕರೆದುಕೊಂಡು ಹೋಗಿ ಹತ್ತಿರದಲ್ಲೇ ಇದ್ದ ಕುರ್ಚಿಯ ಮೇಲೆ ಕೂರಿಸಿದೆ.. ದಣಿದ ಆ ಚೇತನಕ್ಕೆ ಒಂದಿಷ್ಟು ನೀರು ಕೊಟ್ಟೆ... ಕುಡಿದಳು... ದಣಿವಾರಿಸಿಕೊಂಡಳು.. 

          ಅವಳನ್ನು ನೋಡಿ ಮಾತಾಡಿಸಬೇಕೆನಿಸಿತು.. ಪದ ಕಟ್ಟಿ ಮಾತಿಗಿಳಿದೆ.. ಈ ಬಿಸಿಲಲ್ಲಿ ಬಂದು ಓಟ್ ಹಾಕೋದು ಯಾಕ್ ಬೇಕಿತ್ತು..? ಬಿಸಿಲು ಕಡಿಮೆ ಆದಮೇಲೆ ಬರಬಹುದಿತ್ತಲ್ವಾ..? 

ಅದಕ್ಕೆ ಅವಳೆಂದಳು ನನ್ನ ಒಂದು ಓಟ್ ನಿಂದ ಏನಾದ್ರೂ ಬದಲಾವಣೆ ಆಗಬಹುದೇನೋ ಅನ್ನೋ ಆಶಾವಾದದಿಂದ ಬಂದಿದ್ದೇನೆ ಅಂದಳು.

ಬಿಸಿಲನ್ನೂ ಲೆಕ್ಕಿಸದೇ,, ದೇಹದಲ್ಲಿ ನಿಶಕ್ತಿ ಇದ್ದರೂ ಎದೆಗುಂದದೇ ಸಮಾಜದ ಬದಲಾವಣೆಗೆ ಬಂದಿರುವ ಆ ನವಚೇತನ ಉಲ್ಲಾಸ ಕಂಡು ನಿಜಕ್ಕೂ ಖುಷಿ ಆಯ್ತು.. ನಂತರ ನಾನು ಒಳಗೆ ಹೋಗಿ ಓಟ್ ಹಾಕಿ ಬಂದೆ.. ಅವಳು ಕಾಣಲಿಲ್ಲ.. ಸುತ್ತಲೂ ಕಣ್ಣಾಡಿಸಿದೆ.. ಅವಳ ಸುಳಿವೇ ಇರಲಿಲ್ಲ.. ಅವಳ ಬಗ್ಗೆ ಯಾರನ್ನು ಕೇಳೋದು..? ಅವಳ ಹೆಸರೇ ನನಗೆ ಗೊತ್ತಿಲ್ಲ.. ಇನ್ನು ಏನಂತ ವಿಚಾರಿಸಲಿ..? ಹೋಗ್ಲಿ ಬಿಡಿ ಏನು ಮಾಡೋದಕ್ಕೆ ಆಗುತ್ತೆ ಅಂತ.. ಸುಮ್ಮನಾದೆ.. ಅಲ್ಲಿಂದ ಮನೆಗೆ ಬಂದೆ.. ಹಾಗೋ ಹೀಗೋ ಹರಟುತ್ತಾ ಒಂದಿಷ್ಟು ಟಿವಿ ನೋಡುತ್ತಾ ಸುಖ ನಿದ್ರೆಗೆ ಜಾರಿದೆ.. ಅವಳನ್ನು ಮರೆತೇ ಬಿಟ್ಟೆ..

ಬೆಳಿಗ್ಗೆ ಎದ್ದೆ.. ಮಾಮೂಲಿ ದಿನಗಳಂತೆ ಕೆಲಸಕ್ಕೆ ತಯಾರಾಗಿ ಬಂದೆ.. ಅವಳು ನೆನಪೇ ಆಗಲಿಲ್ಲ.. ಕೆಲಸ ಮಾಡುತ್ತಾ, ಮಾಡುತ್ತಾ, ನೆನ್ನೆ ಓಟ್ ಹಾಕಿದ್ದರ ಬಗ್ಗೆ ಮಾತುಗಳು ನಡೀತಾ ಇತ್ತು.. ಒಬ್ಬ ಗೆಳೆಯ ಓಟನ್ನು ಹಾಕೇ ಇರಲಿಲ್ಲ.. ಅವನಿಗೆ ರಾಜಕೀಯದ ಅಸಹ್ಯತೆ ಬಗ್ಗೆ ವಾಕರಿಕೆ ಬರುವಷ್ಟು ಜಿಗುಪ್ಸೆ ಇತ್ತು.. ನನಗೂ ಆ ಜಿಗುಪ್ಸೆ ಇದೆ.. ಹಾಗಂತ ಓಟ್ ಹಾಕದೇ ಇದ್ರೆ ಎಲ್ಲಾ ಸರಿ ಹೋಗುತ್ತಾ..?? ಅವನ ಈ ಮನೋಭಾವ ಕಂಡು ನನಗೆ ಒಂದಿಷ್ಟು ಬೇಸರವೂ ಆಯ್ತು. ವಿದ್ಯಾವಂತನಾದವನೇ ಓಟ್ ಹಾಕಿಲ್ಲ ಅಂದ್ರೆ ಇನ್ನು ಅವಿದ್ಯಾವಂತರ ಪಾಡೇನು..? ಛೆ ಎಂದು ಬೇಸರಗೊಂಡೆ..

ಆಗ ನೆನ್ನೆ ನಡೆದ ಘಟನೆಗಳು ನನ್ನ ಅರಿವಿಗೆ ಬಂದವು..  ಅವಳು ಮತ್ತೆ ನೆನಪಾದಳು..  ಅವಳ ಆ ಮುಖ ನೆನಪಾಯಿತು.. ಅವಳ ಮಾತು ಕಿವಿಯೊಳಗೆ ಝೇಂಕರಿಸತೊಡಗಿದವು. ಆಕೆಯ ಕಾಳಜಿ ಬಗ್ಗೆ ನನ್ನ ಮನಸ್ಸು ಧನ್ಯತೆ ತೋರುತ್ತಿತ್ತು. ಮಟ ಮಟ ಮಧ್ಯಾಹ್ನವಾಗಿದ್ದರೂ ಆಕೆ ಆ ಬಿಸಿಲಲ್ಲೇ ನಡೆದು ಬಂದು ಓಟ್ ಹಾಕಿದ್ದಾಳೆ.. ಅದೂ ಬರಿಗಾಲಲ್ಲಿ ನಡೆದುಕೊಂಡು.. ಹಳದಿ ಬಣ್ಣದ ಸೀರೆಯಲ್ಲಿ ಬಂದ ಆ ನಾರಿಗೆ ಇರುವ ಆಸೆ ಏನು ಗೊತ್ತಾ ನನ್ನ ಒಂದು ಓಟ್ ನಿಂದಾದರೂ ಏನಾದರೂ ಬದಲಾಗಬಹುದೇನೋ ಅನ್ನೋ ಸಣ್ಣ ಆಸೆ.. ದೇಹದಲ್ಲಿ ನಿಶಕ್ತಿ ಇದ್ದರೂ, ಈ ಸಣ್ಣ ಆಸೆಗಾಗಿ ಮಟ ಮಟ ಮಧ್ಯಾಹ್ನದಲ್ಲಿ, ಬಿಸಿಲಿನಲ್ಲಿ, ಆಕೆ ಬಂದು ಓಟ್ ಮಾಡಿದ್ದಾಳೆ.. ಆಕೆಯ ವಯಸ್ಸು ಎಷ್ಟು ಗೊತ್ತಾ..?? 80 ರ ಆಸುಪಾಸು... 

ಯಸ್.. ಆಕೆ ಹಣ್ಣು ಹಣ್ಣು ಮುದುಕಿ.. ದೇಹದಲ್ಲಿ ಶಕ್ತಿ ಇಲ್ಲ.. ಆದರೂ ಬಿಸಿಲಲ್ಲಿ ಬಂದು ತನ್ನ ಹಕ್ಕು ಚಲಾಯಿಸಿದ್ದಾಳೆ.. ಒಳ್ಳೆಯ ಅಭ್ಯರ್ಥಿಗಾಗಿ ತನ್ನ ಮತ ಚಲಾಯಿಸಿದ್ದಾಳೆ.. ಅಷ್ಟೋಂದು ವಯಸ್ಸಾಗಿದ್ದರೂ ಆಕೆಯಲ್ಲಿ ಉತ್ಸಾಹ ಕಡಿಮೆಯಾಗಿಲ್ಲ.. ಎಂಥ ಭ್ರಷ್ಟರು ಬಂದರೂ ತನ್ನ ಛಲ ಬಿಟ್ಟಿಲ್ಲ.. ಇಂದಾದರೂ ಒಬ್ಬ ಒಳ್ಳೇ ಅಭ್ಯರ್ಥಿ ಬರಬಹುದೇನೋ.. ನನ್ನ ಒಂದು ಮತದಿಂದ ಏನಾದರೂ ಬದಲಾಗಬಹುದೇನಓ ಅನ್ನೋ ಆಶಾವಾದದಿಂದ ಬಂದಿದ್ದಾಳೆ.. ಮುಂದಿನ ಬದುಕಿನ ಕನಸು ಹೊತ್ತು ಬಂದು ಮತ ಚಲಾಯಿಸಿದ್ದಾಳೆ..


         
 ವಿದ್ಯಾವಂತ ಸ್ನೇಹಿತನ ಈ ನಿರುತ್ಸಾಹ ನೋಡಿದಾಕ್ಷಣ ನನಗೆ ಆಕೆ ನೆನಪಾಗಿದ್ದಳು.  ದೇಶದ ಬಗ್ಗೆ ಅವರಿಗಿರುವ ಕಾಳಜಿ ಯುವಕರಿಗೇಕಿಲ್ಲ..? ಭ್ರಷ್ಟರು, ಪಾಪಿಷ್ಟರು ಅಂತ ಬೈದಾಡಿಕೊಳ್ಳುವ ಜನರು ಮತದಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದಿತ್ತಲ್ಲವೇ..? ಈ ಹಣ್ಣು ಹಣ್ಣು ಮುದುಕಿಗೆ ಇರುವ ಉತ್ಸಾಹ ವಿದ್ಯಾವಂತರೆಂದು ಹೇಳಿಕೊಳ್ಳುವ ಜನರಿಗೆ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ...

ನೋವಾಗಿದ್ರೆ ಕ್ಷಮಿಸಿ... ಇನ್ಮುಂದೆಯಾದ್ರೂ ನಿಮ್ಮ ಹಕ್ಕು ಚಲಾಯಿಸಿ..

ಅಂದುಕೊಂಡಂತೆಲ್ಲಾ ಜೀವನ ಸಾಗದು ಗೆಳೆಯ..
 ಅಕ್ಷರ ಜ್ಞಾನಕ್ಕೀಗ ಮಹತ್ವ  ಬಂದಿದೆ.. ಇದರ ಸುಗಂಧ ಹಳ್ಳಿ ಹಳ್ಳಿಗಳ ಮನೆ ಮನಗಳಲ್ಲಿ ನೆಲೆಯೂರಿದೆ. ಅಪ್ಪ ಅಮ್ಮಂದಿರು ಅಕ್ಷರ ಜ್ಞಾನದಿಂದ ಬಹು ದೂರ ಸರಿದರೂ,  ಮಕ್ಕಳ ಓದಿಗಾಗಿ ಮಣ್ಣು ಹೊತ್ತು ಬದುಕು ಸಾಗಿಸುತ್ತಾರೆ.. ಈಗಲೂ ಕೂಡ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಮರೆತು ಬಂದ ಕಷ್ಟಗಳನ್ನೆಲ್ಲಾ ಬದಿಗಿಟ್ಟು ಮಕ್ಕಳ ಓದಿಗಾಗಿ ಮೈ ಮುರಿದು, ಸುಖವ ತೊರೆದು ಸಲಹುತ್ತಾರೆ. ಕೆಲವು ಮಕ್ಕಳು ಅವರ ಶ್ರಮಕ್ಕೆ ಸಾರ್ಥಕತೆ ತಂದರೆ, ಮತ್ತೆ ಕೆಲವರು ಹೊಳೇಲಿ ಹುಣಸೆಹಣ್ಣು ಹಿಂಡಿದಂತೆ ಮಾಡುತ್ತಾರೆ.. ಇದರರರ್ಥ ಅವರು ಓದಿನಲ್ಲಿ ಯಶಸ್ಸಿನ ಗುರಿ, ಮುಟ್ಟಿ ಮಹತ್ವಾಂಕ್ಷೆಯ ಗರಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾದ್ರು ಅಂತಲ್ಲ.. ಆ ಯಶಸ್ಸು ಅನ್ನೋದು ಅವರಿಗೆ ಒಲಿಯಲಿಲ್ಲ ಅಂತರ್ಥ..

ಆದ್ರೆ ಕಷ್ಟ ಪಟ್ಟೋರಿಗೆ ಯಶಸ್ಸು ಒಲಿದೇ ಒಲಿಯುತ್ತೆ ಅನ್ನೋದಕ್ಕೆ ನಾವೀಗಾಗಲೇ ಬಹಳಷ್ಟು ನಿರ್ದಶನವನ್ನು ನಾವು ನೋಡಿದ್ದೇವೆ.. ಕೇಳಿದ್ದೇವೆ.. ಓದಿದ್ದೇವೆ.. ಆದ್ರೆ ಇಂಥದ್ದೊಂದು ಘಟನೆ ಹತ್ತಿರದಲ್ಲಿ ನಡೆದಾಗ.. ನಾನದನು ಕಣ್ಣಾರೆ ಕಂಡಾಗ ನಿಜಕ್ಕೂ ಅರೆ ಕ್ಷಣ ಅಚ್ಚರಿಯಾಗಿದ್ದು, ಕಣ್ಣರಳಿಸಿದ್ದು ಮಾತ್ರ ಸುಳ್ಳಲ್ಲ..
ಅದು ಚಿಕ್ಕಬಳ್ಳಾಪುರ ಜಿಲ್ಲೆ..  ವಿದ್ಯಾ ಸರಸ್ವತಿ ತನ್ನ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಕೂಡ ಒಂದು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜ್ಞಾನದ ಹೆಬ್ಬಾಗಿಲಾಗಿ ಅರಳಿ ನಿಂತ ವಿಶ್ವೇಶ್ವರಯ್ಯನವರು ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ.. ಬಾಲಗಂಗಾಧರನಾಥ ಸ್ವಾಮಿ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಸಾಯಿಬಾಬಾ ಟ್ರೆಸ್ಟಿನ ವಿದ್ಯಾಸಂಸ್ಥೆಗಳು ಹಾಗೂ ಅನೇಕ ಸರ್ಕಾರೀ ವಿದ್ಯಾಸಂಸ್ಥೆಗಳು ಅಲ್ಲಿ ನೆಲೆ ನಿಂತು ಜ್ಞಾನದ ಅಲೆ ಬೀಸುತ್ತಿವೆ.

ಜ್ಞಾನದಾಹವನು ಹೊತ್ತು, ಅರಿತಿರುವಷ್ಟು ಅರಿವನ್ನು ಸಾಧ್ಯವಾದಷ್ಟು ಜನರಿಗೆ ಹಂಚಬೇಕು ಅನ್ನೋ ಹಂಬಲವನ್ನು ಹೊತ್ತ ಅದೆಷ್ಟೋ ಜನರು ಶಿಕ್ಷಕ ತರಬೇತಿಗಾಗಿ ಆಗಮಿಸೋದು ಇಲ್ಲಿ ಸರ್ವೇ ಸಾಮಾನ್ಯ.. ಅದೂ ಇಲ್ಲಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ.. ಸರ್ಕಾರೀ ಶಿಕ್ಷಣ ಸಂಸ್ಥೆಗಳು ಅಂದ್ರೇನೇ ಮುಖ ತಿರುಗಿಸಿಕೊಳ್ಳುವ ಸದ್ಯದ ಪರಿಸ್ಥಿತಿಗಳಲ್ಲಿ ಅತ್ಯುನ್ನತ ಗುಣಮಟ್ಟವನ್ನು ಸದ್ಯದವರೆಗೂ ಕಾಯ್ದುಕೊಂಡಿರೋದು ಈ ಕಾಲೇಜಿನ ವಿಶೇಷತೆಯಲ್ಲಿ ಒಂದು.

ಅದು ಡಿಸೆಂಬರ್ 31, 2009. ವರ್ಷದ ಕೊನೆಯಲ್ಲಿ ಅಪರಿಚಿತ ಊರಿನಲ್ಲಿ ಓದಿನ ಹಸಿವನ್ನು ನೀಗಿಸಿಕೊಳ್ಳುವ ಹಂಬಲದಲ್ಲಿ ಮೊದಲ ಹೆಜ್ಜೆ ಇಟ್ಟೆ. ಅಡ್ಮಿಷನ್ ಆಯ್ತು. ದೂರದೂರಿನಿಂದ ಬಂದವರೆಲ್ಲ ಬೃಹಸ್ಪತಿಯ ಸಾಕುಮಕ್ಕಳಂತೆ ಕಂಡರು.. ನನ್ನೊಬ್ಬನನ್ನು ಬಿಟ್ಟು.. ದಿನಕಳೆದಂತೆ ಅಪರಿಚಿತರು ಪರಿಚಿತರಾದರು.. ನಾನು ಬೆಂಗಳೂರಿನ ಹುಡುಗ ಅದರಲ್ಲೂ ಪತ್ರಿಕೋದ್ಯಮ ಹಿನ್ನೆಲೆಯಿಂದ ಬಂದವನೆಂದು ತುಸು ಹೆಚ್ಚಿನ ವಿಶೇಷತೆ ಸಿಕ್ಕಿತು. ಆದ್ರೆ ಸಿಲೇಬಸ್ ಏನು ಅನ್ನೋದೇ ಸರಿಯಾಗಿ ಗೊತ್ತಾಗಿಲ್ಲ. ಆಮೇಲೆ ಯಾರೋ ಹೇಳಿದ್ರು. ಜೆರಾಕ್ಸ್ ಅಂಗಡೀನಲ್ಲಿ ಎಲ್ಲಾ ಸಿಲೆಬಸ್ ಸಿಗುತ್ತೆ.. ಜೊತೆಗೆ ನೋಟ್ಸು ಸಿಗುತ್ತೆ ಅಂತ.

ಹೊಸ ಬೆಟಾಲಿಯನ್ ಜೊತೆ ಅದೊಂದು ದಿನ ಸಂಜೆ ಜೆರಾಕ್ಸ್ ಅಂಗಡಿಯ ಶೋಧನೆಗೆ ನಿಂತೆವು. ಎಲ್ಲರಿಗೂ ಆ ಜಾಗ ಹೊಸದು.. ಇನ್ನು ಜೆರಾಕ್ಸ್ ಅಂಗಡಿ ಎಲ್ಲಿದಿಯೋ ಯಾರಿಗ್ ಗೊತ್ತು? ಇರೋಬರೋ ಜೆರಾಕ್ಸ್ ಅಂಗಡಿಗಳಿಗೆ ವಿಸಿಟ್ ಹಾಕಿದ್ವಿ. ಊಹ್ಞೂ.. ಪ್ರಯೋಜನಾನೇ ಆಗ್ಲಿಲ್ಲ.. ಆಮೇಲೆ ಕೊನೆಯದಾಗಿ ಕಂಡದ್ದು ಚಿಕ್ಕಬಳ್ಳಾಪುರದ ಕಾರ್ಖಾನೆ ರಸ್ತೆಯಲ್ಲಿರುವ ಸಾಯಿ ಜೆರಾಕ್ಸ್. 

ಸಣ್ಣ ರಸ್ತೆಯಲ್ಲಿ, ಚಿಕ್ಕ ಸಂದಿಯಲ್ಲಿ ಕಂಡರೂ ಕಾಣದಂತಿರುವ ಆ ಜೆರಾಕ್ಸ್ ಅಂಗಡಿಯ ಹತ್ತಿರ ಬಂದೆವು. ಬರುತ್ತಿದ್ದಂತೆ ಅತ್ಯಂತ ವಿನಯದಿಂದ ವ್ಯಕ್ತಿಯೊಬ್ಬ ನಮ್ಮನ್ನು ಆತ್ಮೀಯರಿಗಿಂತಲೂ ಹೆಚ್ಚಾಗಿ ಸ್ವಾಗತಿಸಿದ.. ಆತನ ವಯಸ್ಸು ನಮಗಿಂತಲೂ ಹೆಚ್ಚು. ಆದರೆ ಆತನ ಮಾತಿನಲ್ಲಿ ಆ ವ್ಯಕ್ತಿಯ ಆತ್ಮಶ್ರೇಷ್ಟತೆ ಎದ್ದು ಕಾಣುತಿತ್ತು. ನಾವು ಹೋದ ತಕ್ಷಣ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ನಮ್ಮ ಕೆಲಸವನ್ನು ಕೈಗೆತ್ತಿಕೊಂಡನು.. ಸಿಲೆಬಸ್ ಜೊತೆಗೆ ನೋಟ್ ಬುಕ್ ಗಳನ್ನು ಜೆರಾಕ್ಸ್ ಮಾಡಿಸಿಕೊಂಡು ಬಂದೆವು. ಅಂದು ಆ ಜೆರಾಕ್ಸ್ ಮಾಡುತ್ತಿದ್ದ ವ್ಯಕ್ತಿಯ ಮುಗ್ದ ಮನಸ್ಸಿನ ಪ್ರೀತಿಗೆ ನಿಜಕ್ಕೂ ನಾವೆಲ್ಲರೂ ಸೋತು ಹೋಗಿದ್ದೆವು. 

          ನಂತರದ ದಿನಗಳಲ್ಲಿ ನಮ್ಮ ಗೆಳೆಯರದ್ದು ಏನೇ ಜೆರಾಕ್ಸ್ ಕೆಲಸವಿದ್ದರೂ ನಮ್ಮ ತಲೆಯಲ್ಲಿ ಬರುತ್ತಿದ್ದುದು ಒಂದೇ ಸಾಯಿ ಜೆರಾಕ್ಸ್. ನಾವು ಯಾವಾಗ ಹೋದರೂ ನಮ್ಮನ್ನು “ನಮಸ್ಕಾರ ಮೇಷ್ಟ್ರೇ” ಎಂದೇ ಸಂಬೋಧಿಸುತ್ತಿದ್ದರು. ಗೊತ್ತಿಲ್ಲದ ಊರಲ್ಲಿ, ಆ ಜೆರಾಕ್ಸ್ ಅಂಗಡಿಯಾತ ನಮ್ಮ ಆತ್ಮೀಯ ಗೆಳೆಯನಾಗಿ ಹೋಗಿದ್ದ. ಆತನನ್ನು ನೋಡಿದಾಗೆಲ್ಲಾ ಎನೋ ಒಂದು ಖುಷಿ.,. ಆತನಲ್ಲಿ ಅದೇನೋ ಶಕ್ತಿ ಇದೆ.. ಅದೇನೋ ಚೈತನ್ಯವಿದೆ.. ಅದೇನೋ ಆತ್ಮೀಯತೆ ಇದೆ..  ಮಗುವನ್ನು ಮುಗ್ಧತೆಯಿಂದ ಗೌರವಿಸಿ ಕರೆಯುವ ಗುಣ ಆತನದು. 

         ನಾವು ಅಲ್ಲಿಯೇ ಇದ್ದ “ಲಕ್ಕಮ್ಮ ದೊಡ್ಡ ಮುನಿಯಪ್ಪ” ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದೆವು.. ಕೆಲವು ಗೆಳೆಯರು ಒಂದು ರೂಮ್ ಮಾಡಿದ್ದರು. ನಿರುದ್ಯೋಗದ ಬೇಗೆಗೆ ಬೇಸತ್ತು ಬಹಳಷ್ಟು ಗೆಳೆಯರು ಬಿ,ಎಡ್. ಮುಗಿಯುವುದರೊಳಗೆ ಏನನ್ನಾದರೂ ಸಾಧಿಸಿ ನಮ್ಮ ಮನೆಯವರಿಗೆ ಮುಖ ತೋರಿಸಬೇಕು ಅನ್ನೋ ನಿರ್ದಾರಕ್ಕೆ ಬಂದಿದ್ದರು. ಅವರೆಲ್ಲರೂ ಹೇಳೋ ಮಾತನ್ನು ಕೇಳಿ ನಿಜಕ್ಕೂ ಕಣ್ಣಲ್ಲಿ ನೀರು ಬಂದಿದ್ದು ಮಾತ್ರ ಸುಳ್ಳಲ್ಲ.. ಓದದೇ ಇರುವವನಿಗಿಂತ, ಓದಿ ನಿರುದ್ಯೋಗಿಯಾಗಿರುವುದು ಸಾವಿನ ಶೂಲಕ್ಕೆ ಸಮನಾದ ಪರಿಸ್ಥಿತಿ ಅಂತ ಕಣ್ಣೀರಿಟ್ಟು ಹೇಳಿದ್ದು ಮಾತ್ರ ಇಂದಿಗೂ ನನ್ನ ನೆನಪಲ್ಲಿ ಅಚ್ಚಳಿಯದಂತೆ ಉಳಿದಿದೆ. 

          ಅಂದಿನಿಂದ ಇರುವಷ್ಟು ದಿನಗಳಲ್ಲಿ ಪ್ರತಿ ಕ್ಷಣವನ್ನೂ ವ್ಯರ್ಥ ಮಾಡದಂತೆ ಓದಿಗಾಗಿ ಬೆವರು ಹರಿಸಿದೆವು. ಹಾಸ್ಟೆಲ್ ನಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಊಟ ಇತ್ತು. ಮಧ್ಯಾಹ್ನದ ಊಟಕ್ಕೆ ನೀರೇ ಗತಿಯಾಗಿತ್ತು. ಹಸಿದ ನಮ್ಮ ಹೊಟ್ಟೆಗಳಿಗೆ ಕಾವೇರಿ ಮಾತೆಯೇ ಅದೆಷ್ಟೋ ಸಮಯ ಸಂಜೀವಿನಿಯಾಗಿದ್ದಳು ಎಂದರೆ ತಪ್ಪಿಲ್ಲ. 

          ಹೊಟ್ಟೆಗೆ ಹಿಟ್ಟಿಲ್ಲ ಅಂದ್ಮೇಲೆ ಜುಟ್ಟಿಗೆ ಮಲ್ಲಿಗೆ ಹೂವ ಎಲ್ಲಿಂದ ತರೋದು.. ಅಲ್ವಾ..?? ಯಸ್.. ಅದಿಕ್ಕೆ ಬುಕ್ ಗಳನ್ನು ಖರೀದಿ ಮಾಡಿದ್ರೆ ದುಡ್ ಜಾಸ್ತಿ ಆಗುತ್ತೆ ಅಂತ ತಿಳಿದು ಬುಕ್ ಗಳನ್ನೇ ಜೆರಾಕ್ಸ್ ಮಾಡಿಸಿದ್ವಿ..  ಜೆರಾಕ್ಸ್ ಅಣ್ಣ ಆತ್ಮೀಯವಾಗಿ ಸಹಕರಿಸಿದ. ಕಾಂಪಿಟೇಟಿವ್ ಎಗ್ಸಾಂ ಬುಕ್ ಗಳನ್ನೂ ಕೂಡ ಖರಿದಿಸೋದರ ಬದಲು ಜೆರಾಕ್ಸ್ ಮಾಡಿಸ್ತಾ ಇದ್ವಿ.. ಸಿಕ್ಕ ಸಿಕ್ಕ ಪುಸ್ತಕಗಳನ್ನು ತಂದು ಜೆರಾಕ್ಸ್ ಅಣ್ಣಿಗೆ ಕೊಡ್ತಿದ್ವಿ.. “ಮೇಷ್ಟ್ರೇ ಸಂಜೆ ಬನ್ನಿ, ನಿಮ್ ಬುಕ್ ರೆಡಿ ಆಗಿರುತ್ತೆ” ಅಂತ ನಗು ನಗುತ್ತಲೇ ಹೇಳುತ್ತಿದ್ದನು.  ಹೀಗೆ ಓದಿಗಾಗಿ ಅದೆಷ್ಟು ಬುಕ್ ಗಳನ್ನು ಜೆರಾಕ್ಸ್ ಮಾಡಿಸಿದ್ದೆವು ಅಂದ್ರೆ, ಫ್ರೆಂಡ್ ರೂಮಲ್ಲಿ  ಒಂದು ಮಿನಿ ಲೈಬ್ರರಿನೇ ಓಪನ್ ಆಗಿಬಿಟ್ಟಿತ್ತು.

http://3.bp.blogspot.com/-ty-pPNcEtwI/TZ9AK6RRJeI/AAAAAAAAAYg/zgTBIPmTTjg/s1600/sad+quotes+about+life.jpg          ಸಿಕ್ಕ ಸಿಕ್ಕ ಕಾಂಪಿಟೇಟಿವ್ ಎಗ್ಸಾಂಗಳಿಗೆಲ್ಲಾ ಅಪ್ಲೈ ಮಾಡಿದೆವು.. ಎಂಥ ವಿಪರ್ಯಾಸ ಅಂದ್ರೆ ಕೇವಲ ಒಂದೆರಡು ಅಂಕೆಗಳಲ್ಲಿ ಎಲ್ಲರ ಕೆಲಸದ ಕನಸು ಭಗ್ನವಾಗುತ್ತಿತ್ತು.. ಸಪ್ಪೆ ಮೋರೆಗಳನ್ನು ನೋಡಿದಾಗೆಲ್ಲಾ ಆ ಜೆರಾಕ್ಸ್ ಅಣ್ಣ ಹೇಳುತ್ತಿದ್ದ “ಜೀವ್ನ ಏನ್ ಇಷ್ಟುಕ್ಕೆ ಮುಗ್ದೋಯ್ತಾ..?? ಇನ್ನು ಬೇಕಾದಷ್ಟಿದೆ ಮೇಷ್ಟ್ರೇ, ತಲೆ ಕೆಡಿಸ್ಕೋಬೇಡಿ. ವರ್ಷಕ್ಕೆ ಎಷ್ಟೋ ಕೆಲಸಗಳು ಬರ್ತಿರ್ತಾವೆ.. ಟ್ರೈ ಮಾಡ್ತಾ ಇರಿ. ಒಂದಲ್ಲಾ ಒಂದು ಕೆಲಸ ಸಿಕ್ಕೆ ಸಿಗುತ್ತೆ” ಅಂತ ಹೇಳಿ ಅಲ್ಲಿದ್ದ ಹುಡುಗನಿಗೆ ಕರೆದು “ ಗಣೇಶ ಮೇಷ್ಟರಿಗೆ ಟೀ ತಗೊಂಡ್ಬಾರೋ. ಬೇಜಾರಲ್ಲವ್ರೆ” ಅಂತ ಹೇಳಿ ಜೆರಾಕ್ಸ್ ಮಿಷಿನ್ ಕಡೆ ಎದ್ದು ಹೋಗುತ್ತಿದ್ದ.

          ದಿನಗಳು ಕಳೆಯಿತು.. ಎಲ್ಲರೂ ಒಲ್ಲದ ಬದುಕಿಗೆ ಒಗ್ಗಿಕೊಳ್ಳೋಕೆ ಶುರುಮಾಡಿದ್ರು. ಅಂತು ಇಂತು ಬಿ.ಎಡ್ ಮುಗಿದೇ ಬಿಟ್ಟಿತು. ಆದರೆ ನಮ್ಮ ಓದಿನ ದಹ ಮಾತ್ರ ತೀರಿರಲಿಲ್ಲ.. ಅಂದು ಚಿಕ್ಕಬಳ್ಳಾಪುರದಿಂದ ಎಲ್ಲರೂ ತಮ್ಮ ತಮ್ಮ ಊರುಗಳಿಗೆ, ತವರು ಜಿಲ್ಲೆಗಳಿಗೆ ಮರಳುತ್ತಿದ್ದಾಗ ಕೊನೆಯಬಾರಿ ಅವರನ್ನು ಕಂಡು ಮಾತನಾಡಿಸಿ ಬಂದೆವು.. ಕಣ್ಣೀರಿನ ನೆನಪುಗಳೊಂದಿಗೆ ಎಲ್ಲರೂ ಬೇರೆಯಾದೆವು.. ಬಿ,ಎಡ್ ಮುಗಿಯುವಷ್ಟರಲ್ಲಿ ಏನ್ನೋ ಸಾಧಿಸುತ್ತೇವೆ ಅಂತ ಅಂದುಕೊಂಡಿದ್ದ ನಾವೆಲ್ಲರೂ ನಿರಾಸೆಯ ಬುತ್ತಿಯೊಂದಿಗೆ ಮರಳಬೇಕಾದ ಅನಿವಾರ್ಯತೆ ಎದುರಾಯಿತು.

          ಎಲ್ಲರೂ ದಿಕ್ಕಾಪಾಲಾಗಿ ಹೋದರು.. ನಿರುದ್ಯೋಗ ಎಂಬ ವಿಷಜಂತು ಅಕ್ಷರಸ್ತನೆಂಬ ಬೆಳೆಯನ್ನು ಇಡಿ ಇಡಿಯಾಗಿ ನುಂಗಲಾರಂಭಿಸಿತು. ಪ್ರಪಂಚದೊಂದಿಗಿನ ಸಂಬಂಧವೇ ಬೇಡ ಎಂದು ನಿರ್ಧಾರ ಮಾಡಿದ ಗೆಳೆಯರು ದೂರವಾಣಿ ಸಂಖ್ಯೆಗಳನ್ನು ಬದಲಾಯಿಸಿಬಿಟ್ಟರು. ಅಲ್ಲಿಗೆ ಸ್ನೇಹವೆಂಬ ಸೇತುವೆ ಸಂಪೂರ್ಣವಾಗಿ ಕುಸಿದುಬಿತ್ತು.

          ಸುಮಾರು ಎರಡು ವರ್ಷಗಳಕಾಲ ಯಾರಿಗೆ ಯಾರೂ ಇಲ್ಲ ಎಂಬಂತೆ ಸುಮ್ಮನಿದ್ದೆವು. ಅಪರೂಪಕ್ಕೆ ಯಾರಾದ್ರೂ ಫೋನ್ ಮಾಡಿ ಹೇಗಿದ್ದೀಯ.. ಅಂತ ವಿಚಾರಿಸ್ತಿದ್ರು ಅಷ್ಟೇ.. ಅಷ್ಟು ಬಿಟ್ಟರೆ ದೂಸ್ರಾ ಮಾತೇ ಇರಲಿಲ್ಲ.. ಕೆಲವರಿಗೆ ಫೋನ್ ಮಾಡೋದಕ್ಕೆ ಕರೆನ್ಸಿ ಕೂಡ ಇರಲಿಲ್ಲ ಅಂದ್ರೆ ಅದು ಅತಿಶಯೋಕ್ತಿಯಲ್ಲ. 

ಎರಡು ವರ್ಷಗಳು ಕಳೆದವು. ಪತ್ರಿಕೋದ್ಯಮದ ಮೇಲಿನ ಆಸೆಯಿಂದ ನಾನು ನನ್ನ ಬರಹವನ್ನು ಮುಂದುವರೆಸಿದೆ. ಅದೊಂದು ದಿನ ಆಫೀಸು ಕೆಲಸ ಮುಗಿಸಿ ರಾತ್ರಿ ಸುಮಾರು 9.30 ಕ್ಕೆ ಮನೆಗೆ ತೆರಳುತ್ತಿದ್ದೆ.. ಮೆಜೆಸ್ಟಿಕ್ ಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದೆ.. ಯಲಹಂಕಾಗೆ ಹೋಗೋ ಬಸ್ಸು ಯಾವುದೂ ಇರಲಿಲ್ಲ. ಕೊನೆಗೆ ದೇವನಹಳ್ಳಿಯ ಬಸ್ಸೊಂದು ಬಂತು.. ನೂಕು ನುಗ್ಗಲಿನಲ್ಲಿ ಬಸ್ಸು ಹತ್ತಿ ಕಿಟಕಿ ಬಳಿಯ ಸೀಟಿನಲ್ಲಿ ಕುಳಿತು, ಕಿವಿಗೆ ಹೆಡ್ ಫೋನ್ ಸಿಕ್ಕಿಸಿಕೊಂಡು ಕಿಟಕಿಗೆ ತಲೆ ಇಟ್ಟು ಕಣ್ಮುಚ್ಚಿಕೊಂಡೆ. ಬಸ್ಸು ಹೊರಡೋದಕ್ಕೆ ಶುರು ಮಾಡಿತು. ಕಂಡಕ್ಟರ್ ಟಿಕೆಟ್ ಕೇಳುತ್ತಾ ಹತ್ತಿರ ಬಂದ.. “ನಮಸ್ಕಾರ ಮೇಷ್ಟ್ರೇ.. ನೀವು ನಮ್ಮ ಮೇಷ್ಟ್ರಲ್ವಾ..? ಅಂತ ಕೇಳಿದ.. ನನ್ನ ಬಳಿ ಬಂದು ನನ್ನನ್ನು ಮೇಷ್ಟ್ರೇ ಎಂದು ಕರೆಯುವವರು ಯಾರು ಅಂತ ನನಗೆ ಅಚ್ಚರಿಯಾಯ್ತು. ಯಾಕೆಂದ್ರೆ ಎಲ್ಲಿಗೆ ಹೋದ್ರೂ ಕನ್ನಡ ಮೇಷ್ಟ್ರಿಗೆ ಕೆಲಸ ಖಾಲಿ ಇಲ್ಲ ಅನ್ನೋ ಮಾತು ಕೇಳಿ, ಎರಡು ವರ್ಷಗಳ ಹಿಂದೆಯೇ ನಾನು ಮೇಷ್ಟ್ರು ಅನ್ನೋದನ್ನೇ ಮರೆತು ಬಿಟ್ಟಿದ್ದೆ.. ನಾನೊಬ್ಬ ಬರಹಗಾರ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೇ ಬೆಂಗಳೂರಿನ ಕಣ್ಣಿಗೆ ಕಾಣುತ್ತಿದ್ದೆ. 

ಅಚ್ಚರಿಯಿಂದ ಕಣ್ತೆರದು ನೋಡಿದೆ.. “ಏನ್ ಮೇಷ್ಟ್ರೇ ನೀವಿಲ್ಲಿ..? ಚೆನ್ನಾಗಿದೀರಾ? ನಾನ್ ಯಾರು ಅಂತ ನೆನಪಿದೀನಾ? ಅಂತ ಪ್ರೆಶ್ನೆಗಳ ಸುರಿಮಳೆಯನ್ನೇ ಹರಿಸಿದ್ರು. ಅವರನ್ನು ಕಂಡು ನನ್ನ ಅಚ್ಚರಿ ಇಮ್ಮಡಿಯಾಯ್ತು.. ಅರೆ, ಅವರು ನಮ್ಮ ಸಾಯಿ ಜೆರಾಕ್ಸ್ ನ ಜೆರಾಕ್ಸ್ ಅಣ್ಣ.. ಜೆರಾಕ್ಸ್ ಅಂಗಡಿಯಲ್ಲಿದ್ದಾಗ ಮುಖ ಮತ್ತು ಕೈಗಳಿಗೆ ಕಪ್ಪು ಮಸಿಯನ್ನು ಹಚ್ಚಿಕೊಂಡಿದ್ದಾತ ಈಗ ಖಾಕಿ ಬಟ್ಟೆಯನ್ನು ಉಟ್ಟುಕೊಂಡು ಕಂಡಕ್ಟರ್ ಆಗಿದ್ದಾನೆ.. ಅವನು ಈಗ ಸರ್ಕಾರೀ ಅಧಿಕಾರಿ..!!!

ಸಿಕ್ಕ ಸಿಕ್ಕ ಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿಕೊಂಡು ಹಗಲು ರಾತ್ರಿ ಓದುತ್ತಿದ್ದ ಸ್ನೇಹಿತರುಗಳು ಸರ್ಕಾರಿ ಅಧಿಕಾರಿಗಳಾಗಲಿಲ್ಲ.. ಆದರೆ ಜೆರಾಕ್ಸ್ ಮಾಡಿಕೊಟ್ಟ ವ್ಯಕ್ತಿ ಎರಡು ವರ್ಷಗಳಲ್ಲಿ ಸರ್ಕಾರೀ ಅಧಿಕಾರಿಯಾಗಿಬಿಟ್ಟಿದ್ದ. ಅಷ್ಟೇ ಅಲ್ಲ.. ಅವರು ಆವತ್ತು ನಮ್ಮನ್ನು ಹೇಗೆ ಮಾತನಾಡಿಸುತ್ತಿದ್ದರೂ ಈಗಲೇ ಹಾಗೇ ಮಾತನಾಡಿಸುತ್ತಿದ್ದಾರೆ.. ಅಷ್ಟೇ ಗೌರವದಿಂದ.. ನಿಜ.. ಅವರು ಎಳ್ಳಷ್ಟು ಬದಲಾಗಿಲ್ಲ.. ಅವರು ನಮ್ಮನ್ನು ಮರೆತಿಲ್ಲ.. ಅದು ಅವರು ಆತ್ಮೀಯ ಗುಣ. “ಮೇಷ್ಟ್ರೇ, ನೀವು ಒಂದೆರಡು ಎಗ್ಸಾಂ ಬರೆದು ಸೆಲೆಕ್ಟ್ ಆಗಿಲ್ಲ ಅಂತ ಬೇಜಾರ್ ಮಾಡ್ಕೋಂಡ್ ಬಿಟ್ರಿ.. ಆದ್ರೆ ನಾನು SSLC ಪಾಸಾದಾಗಿಂದ ಒಂದಲ್ಲಾ ಒಂದು ಪರೀಕ್ಷೆ ಬರೀತಿದ್ದೆ.. ಅಲ್ಲಿಯವರೆಗೂ ಯಾವುದೂ ಕೆಲಸ ಸಿಗದೇ ನಿರುದ್ಯೋಗಿ ಅಂತ ಜನರ ಚುಚ್ಚು ಮಾತುಗಳನ್ನು ಕೇಳಲಾಗದೇ ಜೆರಾಕ್ಸ್ ಅಂಗಡಿ ಶುರು ಮಾಡಿದೆ.. ಮದುವೇನೂ ಆಯ್ತು.. ಮಕ್ಕಳೂ ಆದರು.. ಆದ್ರೆ ಈಗ ನನ್ನ ಓದಿನ ಶ್ರಮಕ್ಕೆ ಫಲ ಸಿಕ್ಕಿದೆ.. ಅದೆಷ್ಟೋ ವರ್ಷಗಳು ಕಳೆದ ನಂತರ ಸರ್ಕಾರಿ ಹುದ್ದೆಗೆ ನೇಮಕಗೊಂಡಿದ್ದೇನೆ.. ನಿಮ್ಮದಿನ್ನು ಚಿಕ್ಕ ವಯಸ್ಸು.. ಆದ್ರೆ ನನ್ನದು ಮುಗಿಯುತ್ತಿರುವ ವಯಸ್ಸು.. ಪ್ರಪಂಚ ದೊಡ್ಡದಿದೆ.. ಬದುಕೋದಕ್ಕೆ ಸರ್ಕಾರೀ ಕೆಲಸ ಬೇಕು ಅನ್ನೋದೇನು ಇಲ್ಲ.. ಛಲ ಇದ್ದವನು ಹೇಗೆ ಬೇಕಾದರೂ ಬದುಕ್ತಾನೆ.. ಆದ್ರೆ ಸರ್ಕಾರಿ ಕೆಲಸ ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೇನೇ ನಿರಾಶೆಯ ಉತ್ತುಂಗಕ್ಕೆ ನಿಮ್ಮಂಥ ಯುವಕರು ತಲುಪೋದು ಸರಿಯಲ್ಲ.. ನಿಮ್ಮ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೆ ಸಿಗುತ್ತೆ. ಆದ್ರೆ ಅಲ್ಲಿವರೆಗೂ ತಾಳ್ಮೆಯಿಂದ ಪ್ರಯತ್ನ ಮುಂದುವರೆಸಿಕೊಂಡು ಹೋಗಬೇಕು ಅಷ್ಟೆ. ಎಂದು ಹೇಳಿದ.. ಹೀಗೆ ಮಾತನಾಡುತ್ತಿದ್ದಂತೆ ಯಲಹಂಕ ಬಂದುಬಿಟ್ಟಿತು.

ನಾನು ಬಸ್ಸಿನಿಂದ ಇಳಿಯತೊಡಗಿದೆ. “ಮೇಷ್ಟ್ರೇ.. ಗುಡ್ ನೈಟ್.. ಇದೇ ಬಸ್ಸಲ್ಲಿ ಇರ್ತೀನಿ.. ಆವಾಗ್ ಆವಾಗ ಸಿಗ್ರಿ ಮೇಷ್ಟ್ರೇ” ಅಂತ ಹೇಳಿ ಮತ್ತೆ ನಗುವನ್ನು ಬೀರುತ್ತ ಸೀಟಿ ಹೊಡೆದ.. ಬಸ್ಸು ಮುಂದಕ್ಕೆ ಚಲಿಸತೊಡಗಿತು.. ನನ್ನಲ್ಲಿ ಪ್ರೆಶ್ನೆಗಳ ಬಾಣಗಳು ಎದೆಯನ್ನು ನಾಟಲು ಶುರು ಮಾಡಿದವು..

ಒಮ್ಮೆ ಸೋತ ಮಾತ್ರಕ್ಕೆ, ಗೆಲುವೆ ನನ್ನ ಪಾಲಿಗಿಲ್ಲ ಅಂತ ಮೂರ್ಖರಂತೆ, ವಿದ್ಯಾವಂತರು ಯಾಕೆ ನಿರ್ಧರಿಸ್ತಾರೆ..? “ನಹಿ, ಜ್ಞಾನೇನ ಸಧೃಶಂ” ಅಂದ್ರೆ ಜ್ಞಾನಕ್ಕೆ ಸರಿಸಮನಾದುದ್ದು ಏನು ಇಲ್ಲ ಅಂತಾರೆ.. ಆದರೂ ಜ್ಞಾನವಂತರೇ ಯಾಕೆ ನೆಗಿಟಿವ್ ಅಗಿ ಆಲೋಚನೆ ಮಾಡ್ತಾರೆ? ಸರ್ಕಾರಿ ಉದ್ಯೋಗ ಬಿಟ್ಟರೇ ಖಾಸಗೀ ಕ್ಷೇತ್ರಗಳಲ್ಲಿ ಉದ್ಯೋಗ ಇಲ್ಲವೇ? ಸರ್ಕಾರೀ ಕೆಲಸವಾದರೇನು, ಖಾಸಗೀ ಉದ್ಯೋಗವಾದರೇನು..? ಕೆಲಸ ಮಾಡಲೇಬೇಕಲ್ವಾ..? ಅಕ್ಷರ ಜ್ಞಾನ ಅರಿಯದ ತಂದೆ ತಾಯಿಗಳೇ ಉತ್ತಮ ಜೀವನ ಸಾಗಿಸುವುದರ ಜೊತೆಗೆ ಮಕ್ಕಳ ಬದುಕನ್ನು ಕಟ್ಟುತ್ತಿರಬೇಕಾದರೆ, ಅಕ್ಷರಸ್ತರಾದವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ..?

ಇದೆ.. ಖಂಡಿತ ಇದೆ.. ಛಲ ಇರಬೇಕು ಅಷ್ಟೇ.. ಜೆರಾಕ್ಸ್ ಮಾಡುತ್ತಿದ್ದವನು ಕಂಡಕ್ಟರ್ ಆದ.. ಕಂಡಕ್ಟರ್ ಒಬ್ಬನು ಸೂಪರ್ ಸ್ಟಾರ್ ಆದ.. ಸಾವಿರ ಸಲ ಸೋತ ಥಾಮಸ್ ಎಡಿಸನ್ ಜಗತ್ತಿಗೆ ಬೆಳಕು ಕೊಡುವ ಬಲ್ಬ್ ಕಂಡು ಹಿಡಿದ..  ಚೆನ್ನೈನಲ್ಲಿ ಬೀದಿ ಬೀದಿಯಲ್ಲಿ ಪೇಪರ್ ಹಾಕುತ್ತಿದ್ದ ವ್ಯಕ್ತಿ ರಾಷ್ಟ್ರಪತಿಯಂತ ಮಹೋನ್ನತ ಹುದ್ದೇಗೇರಿ ಕ್ಷಿಪಣಿ ಮನುಷ್ಯನಾದ.. ಪೆಟ್ರೋಲ್ ಹಾಕುತ್ತಿದ್ದ ವ್ಯಕ್ತಿ ರಿಲಾಯನ್ಸ್ ಇಂಡಸ್ಟ್ರಿಯನ್ನು ಸ್ಥಾಪಿಸಿ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.. ಮೂರನೇ ತರಗತಿ ಓದಿದ ಡಾ.ರಾಜ್ ಕುಮಾರ್ ರವರ ಪ್ರತಿಭೆಗೆ ಪದ್ಮಶ್ರೀ, ಪದ್ಮಭೂಷಣಗಳಂಥ ಶ್ರೇಷ್ಟ ಪ್ರಶಸ್ತಿಗಳು ಅರಸಿ ಬಂದವು.. ಉದಾಹರಣೆ ಕೊಟುತ್ತಾ ಹೋದರೆ ಅಂತ್ಯವೇ ಇಲ್ಲ.. ಹೀಗಿರುವಾಗ ಇಂದಿನ ಬಹುಪಾಲು ಯುವ ಜನರು ಒಂದೆರಡು ಸಲ ಸೋತಮಾತ್ರಕ್ಕೆ ಆತ್ಮಸ್ಥೈರ್ಯವನ್ನು ಕಳೆದುಕೊಂಡರೆ ಅದು ಮೂರ್ಖತನದ ಪರಮಾವಧಿಯಲ್ಲವೇ?

ಅಷ್ಟೇ ಅಲ್ಲ.. ಇನ್ನು ಒಂದು ಸತ್ಯ ಹೇಳ್ತೀನಿ ಕೇಳಿ.. ಮೊದಲೆರಡುಸಲ ಸೋತು, ಅಂದು ಜೆರಾಕ್ಸ್ ಅಂಗಡಿಯಲ್ಲಿ ಹ್ಯಾಪ್ ಮೋರೆ ಹಾಕಿಕೊಂಡಿದ್ದ ಗೆಳೆಯರು ಇಂದು ಬದುಕನ್ನು ಕಟ್ಟಿಕೊಂಡಿದ್ದಾರೆ.. ಇನ್ನು ಕೆಲವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.. 

ಒಬ್ಬ ಗೆಳೆಯ ಕಿಶೋರ್ ಕುಮಾರ್ ಈಗ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಬದುಕು ರೂಪಿಸಿಕೊಂಡಿದ್ದಾನೆ.. ಕುಮಾರ್ ಬಾಬು,  ಖಾನ್ ಇಬ್ಬರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ಚಿಕ್ಕಣ್ಣ, ಮಂಜುನಾಥ ಮತ್ತಿತರರು ಈಗ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಭಾಗ್ಯ ಎಂಬುವವರು ಐ,ಎ,ಏಸ್ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಚೇತನ್, ರಾಜೇಶ, ಸೇರಿದಂತೆ ಇನ್ನುಳಿದ ಸ್ನೇಹಿತರು ಸರ್ಕಾರೀ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ನಾನು ಓದಿದ್ದು ಬಿ,ಎಡ್.. ಟೀಚರ್ ಮಾತ್ರ ಆಗ್ತೀನಿ ಅಂತ ಹಟ ಹಿಡಿದುಕೊಂಡು ಒಂದೇ ದಾರಿಯತ್ತ ನೋಟ ಬೀರಿ ನಿರಾಸೆಯಿಂದ ಕುಳಿತವನು ಮಾತ್ರವೇ ನಿಜವಾದ ನಿರುದ್ಯೋಗಿ.. ಸಿಕ್ಕ ಅವಕಾಶಗಳನ್ನು ತನ್ನ ಅಬ್ಯುದಯಕ್ಕಾಗಿ ಬಳಸಿಕೊಂಡು ಶ್ರಮಿಸಿದರೆ ಖಂಡಿತ ಬದುಕು ಹಸನಾಗಲಿದೆ..

ನಿಮಗಾಗಿ ಒಂದು ಸುಂದರ ಬದುಕು ಕಾಯುತ್ತಿದೆ.. ದುಡುಕದಿರಿ.. ಅಲ್ಲಿವರೆಗೂ ತಾಳ್ಮೆಯಿಂದ ಪ್ರಯತ್ನಿಸಿ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು