Recent Movies

ಸಿನೆಮಾ

Share This Article To your Friends

Showing posts with label ನನ್ನ ಅನುಭವಕ್ಕೆ ಬಂದದ್ದು. Show all posts
Showing posts with label ನನ್ನ ಅನುಭವಕ್ಕೆ ಬಂದದ್ದು. Show all posts

ವಿಜಯ್​ ಮಲ್ಯ ಸಾಲ ಎಷ್ಟಿದೆ ಗೊತ್ತಾ?

 
ಸಾಲ ಅನ್ನೋದು ಶೂಲ ಅನ್ನೋ ಮಾತಿದೆ. ಆದ್ರೆ ಸಾಲದ ಶೂಲ ಭಾರತದ ಮದ್ಯದ ದೊರೆಯ ಪಾಲಿಗೆ, ಸುಖದ ಸುಪ್ಪತ್ತಿಗೆಯೇ ಆಗಿಬಿಟ್ಟಿದೆ. ವಿಜಯ್ ಮಲ್ಯಗೆ ಇಂದು ದೇಶದ ಅತಿದೊಡ್ಡ ಸಾಲಗಾರ ಅನ್ನೋ ಅಪಖ್ಯಾತಿ ಬೆನ್ನು ಬಿದ್ದಿದೆ. ವಿಜಯ್ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿದ್ದು ಹೇಗೆ..? ಮಲ್ಯಗೆ ಸಾಲಕೊಟ್ಟ ಬ್ಯಾಂಕ್​ಗಳ ಪರಿಸ್ಥಿತಿ ಇಂದು ಹೇಗಿದೆ ಇಲ್ಲಿದೆ ನೋಡಿ..

ವಿಜಯ್ ಮಲ್ಯ... ಭಾರತದ ಆಗರ್ಭ ಶ್ರೀಮಂತರೆಲ್ಲರನ್ನೂ ತಕ್ಕಡಿಯ ಒಂದು ಕಡೆ ತೂಗಿದ್ರೆ, ವಿಜಯ್ ಮಲ್ಯರನ್ನ ಮತ್ತೊಂದು ಕಡೆ ತೂಗಬೇಕು. ಮಲ್ಯ ಖದರ್​ ಅಂತದ್ದು. ಭಾರತದ ಕುಬೇರರ ಕುಳಗಳಲ್ಲಿ ಮಲ್ಯ ಹೆಸರು ಹೇಳ್ತಿದ್ದ ಹಾಗೆ ಹುಟ್ಟೋ ಥ್ರಿಲ್ಲೇ ಬೇರೆ. ಮಲ್ಯ ಸ್ಪೆಷಾಲಿಟಿಯೇ ಅಂತದ್ದು.

ಸಂಪತ್ತಿನ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ರಾಜನಾಗಿ ಮೆರೆದಾಡ್ತಿರೋದು ವಿಜಯ್​ ಮಲ್ಯ ಹೆಗ್ಗಳಿಕೆ. ಮಲ್ಯ ಕೈಯಿಟ್ಟ ಕಡೆಯಲ್ಲೆಲ್ಲಾ ಸಂಪತ್ತಿನ ಸುರಿಮಳೆಯೇ ಆಗಿದೆ.  ಚಿನ್ನದ ಚಮಚವನ್ನ ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ಮಲ್ಯ ಇಂದು ವಿಶ್ವದ ಮದ್ಯದ ದೊರೆಯಾಗಿ ಬೆಳೆದುನಿಂತಿದ್ದಾರೆ. ಮಲ್ಯ ಒಡೆತನದ ಯುನೈಟೆಡ್ ಬ್ರೇವರೀಸ್ ಇಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಮದ್ಯ ಸರಬರಾಜು ಕಂಪನಿಯಾಗಿ ಬೆಳೆದು ನಿಂತಿದೆ.

ಕೋಲ್ಕತ್ತಾದಲ್ಲಿ ಡಿಸೆಂಬರ್ 18, 1955ರಲ್ಲಿ ಖ್ಯಾತ ಉದ್ಯಮಿ ವಿಠ್ಠಲ್ ಮಲ್ಯ ಹಾಗು ಲಲಿತಾ ರಾಮಯ್ಯ ಮಗನಾಗಿ ಮಲ್ಯ ಜನಿಸಿದ್ರು. ಕೊಲ್ಕತ್ತಾದ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಮಲ್ಯ, 1975ರಲ್ಲಿ ಅಪ್ಪನ ಬ್ಯುಸಿನೆಸ್ ಸಾಮ್ರಾಜ್ಯದ ವಿಸ್ತರಣೆಗೆ ನಿಂತ್ರು. 1983ರಲ್ಲಿ ಯುನೈಟೆಡ್​ ಬ್ರೇವರೀಸ್ ಗ್ರೂಪ್ ಅನ್ನೋ ಸಾಮ್ರಾಜ್ಯ ಹುಟ್ಟುಹಾಕಿದ ಮಲ್ಯಗೆ ಕೇವಲ 28 ವರ್ಷ. ಅಂದಿನಿಂದ ಮಲ್ಯ ಮುಟ್ಟಿದ್ದೆಲ್ಲವೂ ಚಿನ್ನ. ಯಶಸ್ಸು, ಕೀರ್ತಿ, ಹಣ ಅನ್ನೋದು ಮಲ್ಯಗೆ ಸ್ವತಃ ಕುಬೇರನೇ ದಯಪಾಲಿಸಿದ ವರದಂತೆ ಆಗಿಬಿಡ್ತು.   

ಮಲ್ಯ ಅಂದ್ರೆ ಕೇವಲ ಅಷ್ಟೇ ಅಲ್ಲ. ಅವರೊಬ್ಬ ಪಕ್ಕಾ ಬ್ಯುಸಿನೆಸ್ ಮ್ಯಾನ್. ಯುಬಿ ಗ್ರೂಪ್​, ಕಿಂಗ್ ಫಿಷರ್​ ಏರ್​ಲೈನ್ಸ್​, ಕಿಂಗ್ ಫಿಶರ್ ಬಿಯರ್​, ಸೇರಿದಂತೆ ಅನೇಕ ವ್ಯವಹಾರಗಳನ್ನ ಕಟ್ಟಿ ಬೆಳೆಸಿದ ರೀತಿಯೇ ಹೇಳುತ್ತೆ. ಮಲ್ಯ ಅದೆಂತಾ ಚಾಣಾಕ್ಷ ಉದ್ಯಮಿ ಅಂತಾ.  60 ಮದ್ಯ ಮಾರಾಟ ಕಂಪನಿಗಳಿ ಇಂದು ಮಲ್ಯ ಒಡೆತನದ ಯುಬಿ ಗ್ರೂಪ್​ನ ಅಧೀನದಲ್ಲಿವೆ ಅಂದ್ರೆ ಅದು ಮಲ್ಯ ಅದೆಂತಾ ಮಾಸ್ಟರ್​ ಮೈಂಡ್ ಅನ್ನೋದು ಗೊತ್ತಾಗುತ್ತೆ.

ಇದೆಲ್ಲದರ ಜೊತೆಗೆ ಮಲ್ಯ ಪಕ್ಕಾ ಶೋಕಿಲಾಲಾ ಕೂಡ. ಪ್ರತಿವರ್ಷವೂ ಮಲ್ಯ ಕಿಂಗ್ ಫಿಷನ್ ಕ್ಯಾಲೆಂಡರ್ ಗರ್ಲ್​ ಹಂಟಿಗ್ ನಡೆಸೋದು, ಮಲ್ಯ ಹಾಬಿ. ಹೈಪ್ರೊಫೈಲ್ ಪಾರ್ಟಿಗಳಲ್ಲಿ, ಪೇಜ್​3 ಈವೆಂಟ್​ಗಳಲ್ಲಿ ಚಿಗರೆಯಂತಾ ಹುಡುಗಿಯರೊಂದಿಗೆ ಸೊಂಟ ಬಳಸಿ ನಿಲ್ಲೋದೇ ಮಲ್ಯ ತುಂಟತನಕ್ಕೆ ಸಾಕ್ಷಿ.

ಆಗರ್ಭ ಶ್ರೀಮಂತರಿಗೆ ಇರುವಂತಾ ಕೆಲ ಪ್ರತಿಷ್ಠಿತ ಶೋಕಿಗಳು ಕೂಡ ಮಲ್ಯಗಿವೆ. ಕಿಂಗ್​ ಫಿಶರ್​ ಡರ್ಬಿ ಟೀಮ್ , ಹಾಗು ಮೆಕ್​ ಡೊನಾಲ್ ಟರ್ಬಿ ಟೀಮ್ ಅಂದ್ರೆ ಕುದುರೆ ಸವಾರಿ ತಂಡಗಳಿಗೆ ಮಲ್ಯ ಮಾಲೀಕರು. ಅಲ್ಲದೇ ಸಿಗ್ನೇಚರ್ ಗಾಲ್ಫ್ ಟೂರ್ನಿಮೆಂಟಿಗೆ ಕೂಡ ಮಲ್ಯ ಪ್ರಮುಖ ಪ್ರಾಯೋಜಕರು. ಮೋಹನ್ ಬಾಗನ್ ಹಾಗು ಈಸ್ಟ್ ಬೆಂಗಾಲ್ ಫುಟ್ ಬಾಲ್ ಕ್ಲಬ್ ಗಳನ್ನ ಕೂಡ ಮಲ್ಯ ಘನತೆಗೆ ಸಾಕ್ಷಿ. 

ಇದರ ಹೊರತಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕೂಡ ಮಲ್ಯ ಒಡೆತನದಲ್ಲಿದೆ. ಇದರ ಜೊತೆಗೆ ಮಲ್ಯ ಸಾಮ್ರಾಜ್ಯದ ಹೊಳಪು ಹೆಚ್ಚಿಸಿರೋದು ಫಾರ್ಮುಲಾ ಒನ್ ರೇಸಿಂಗ್ ಟೀಮ್​. ಭಾರತಕ್ಕೆ ಫಾರ್ಮುಲಾ ಒನ್ ಟೀಮ್ ಪರಿಚಯಿಸಿದ ಕ್ರೆಡಿಟ್​ ಮಲ್ಯಗೆ ಸಲ್ಲಬೇಕು.

ಚಿನ್ನದ ಚಮಚವನ್ನ ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ಮಲ್ಯಾಗೆ ಶುಕ್ರದೆಸೆ ಜೀವನದ ಬಹುತೇಕ ಕಾಲದವರೆಗೂ ಇತ್ತು. ಮಲ್ಯ ಸಾಮ್ರಾಜ್ಯದಲ್ಲಿ ಸೂರ್ಯ ಎಂದೆಂದಿಗೂ ಮುಳುಗೋದೇ ಇಲ್ಲವೇನೋ ಅನ್ನುವಷ್ಟು ವೈಭೋವೋಪೇತನಾಗಿ ಬದುಕ್ತಿರೋ ಮಲ್ಯ ಸ್ಥಿತಿ ಬದಲಾಗಿದೆ. ಮಲ್ಯ ಕುಂಡಲಿಯಲ್ಲಿ ಗ್ರಹಗಳ ಪಥ ಬದಲಾಗಿದೆ. ಮಲ್ಯ ಪಾಲಿಗೆ ಶುಕ್ರದೆಸೆ ಎಂದೋ ಮುಗಿದು ಇದೀಗ ಅವರ ಬಾಳಲ್ಲಿ ರಾಹುಕಾಲ ನಡೀತಿದೆ. ಒಂದು ಕಾಲದ ಭಾರತದ ಅತಿ ಶ್ರೀಮಂತ ಉದ್ಯಮಿ ಇಂದು ಭಾರತದ ನಂಬರ್1 ಸಾಲಗಾರ ಎನಿಸಿಕೊಂಡಿದ್ದಾರೆ.
ವಿಜಯ್ ಮಲ್ಯ ಪಾಲಿನ ವಿಜಯ ದಿವಸಗಳು ಮುಗಿದು ಯಾವುದೋ ಕಾಲವಾಗಿದೆ. ಈಗ ಮಲ್ಯ ದೇಶದ ನಂಬರ್1 ಸಾಲಗಾರ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ. ಮಲ್ಯ ಪಾಲಿನ ದುರ್ಗತಿಗೆ ಕಾರಣವಾಗಿದ್ದು ಅವರದ್ದೇ ಮತ್ತೊಂದು ಉದ್ಯಮದಿಂದ. 
----------------------------
ಮಲ್ಯ ಒಡೆತನದ ಕಿಂಗ್ ಫಿಷರ್ ಏರ್​ಲೈನ್ಸ್​ ಹಾರಾಟ ಮಲ್ಯ ಸಾಮ್ರಾಜ್ಯಕ್ಕೆ ಕಲಶಪ್ರಾಯವಾಗಿತ್ತು. ಖಾಸಗಿ ವಿಮಾನಯಾನದಲ್ಲಿ ಕಿಂಗ್​ಫಿಷರ್​ ಸಾಕಷ್ಟು ಹೆಸರನ್ನೂ ಮಾಡಿತ್ತು. ಆದ್ರೆ ನಂತರದ ದಿನಗಳಲ್ಲಿ ಕಿಂಗ್​ಫಿಷರ್ ಏರ್​ಲೈನ್ಸ್​ ಹಾರಿದಷ್ಟು ಎತ್ತರಕ್ಕೆ ವಿರುದ್ಧವಾಗಿ ಪಾತಾಳಕ್ಕಿಳಿಯಿತು. ಅದರ ಜೊತೆಗೆ ಮಲ್ಯ ಸಾಮ್ರಾಜ್ಯದ ಅಧಃಪತನವೂ ಶುರುವಾಯ್ತು. ಎಲ್ಲದರ ಟೋಟಲ್ ಎಫೆಕ್ಟೇ ಇಂದು ಅವರನ್ನ ದೇಶದ ನಂಬರ್1 ಸಾಲಗಾರನನ್ನಾಗಿಸಿವೆ.ಖಾಸಗಿ ವಿಮಾನಯಾನಕ್ಕೂ ಅಡಿಯಿಟ್ಟ ಮದ್ಯದ ದೊರೆ
ಮಲ್ಯ ಘನತೆ ಹೆಚ್ಚಿಸಿತು ಕಿಂಗ್ ಫಿಶರ್ ಏರ್​ಲೈನ್ಸ್​

ಕಿಂಗ್ ಫಿಶರ್​ ಬ್ರ್ಯಾಂಡ್​ ಮದ್ಯ ಮಾರುಕಟ್ಟೆಯಲ್ಲಿ ಶಿಖರ ಸೂರ್ಯನಾಗಿ ಹೊಳೆಯುತ್ತಿದ್ದ. ಕಿಂಗ್ ಫಿಶರ್​ ಉತ್ಪನ್ನಗಳಿಗೆ ಜನರು ಕೂಡ ಫಿದಾ ಆಗಿಬಿಟ್ಟಿದ್ರು. ವಿಶ್ವ ಮಾರುಕಟ್ಟೆಯಲ್ಲಿ ಕಿಂಗ್ ಫಿಶರ್​ನ ಎರಡನೇ ಸ್ಥಾನವನ್ನ ಅಲ್ಲಾಡಿಸುವಂತಾ ಮತ್ತೊಂದು ಉತ್ಪನ್ನವೇ ಇರಲಿಲ್ಲ. ಹೀಗಿರುವಾಗ್ಲೇ ಮಲ್ಯ ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಮತ್ತೊಂದು ಬೃಹತ್ ಉದ್ಯಮಕ್ಕೆ ಬಂಡವಾಳ ಹೂಡಿಬಿಟ್ರು. ಹಾಗೆ ಅವರು ಬಂಡವಾಳ ಹೂಡಿದ್ದೇ ಕಿಂಗ್ ಫಿಶರ್ ಏರ್​ಲೈನ್ಸ್​ಗೆ.

2003ರಲ್ಲಿ ಕಿಂಗ್ ಫಿಶರ್ ಏರ್​ಲೈನ್ಸ್​ ಕಾರ್ಯಾರಂಭ ಮಾಡ್ತು. ವಿಮಾನಯಾನ ಶುರುಮಾಡೋದಕ್ಕೆ ಸರ್ಕಾರದ ಅನುಮತಿ ಸೇರಿದಂತೆ ಇತರೆ ಕಾರ್ಯಗಳೆಲ್ಲಾ ಮುಗಿದು ಮೇ 9, 2005ರಂದು ಕಿಂಗ್ ಫಿಶರ್ ತನ್ನ ದೇಶೀಯ ಹಾಗು ಅಂತರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸಿಯೇ ಬಿಡ್ತು.

ದೇಶೀಯ ವಿಮಾನಯಾನ ಸೇವೆಯಲ್ಲಿ ಸರ್ಕಾರ ಪ್ರಯಾಣಿಕರಿಗೆ ನೀಡ್ತಿದ್ದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನ ಮಲ್ಯ ಕಿಂಗ್​ಫಿಶರ್​ ಏರ್​ಲೈನ್ಸ್​ನಲ್ಲಿ ನೀಡಿದ್ರು. ಪ್ರಯಾಣದ ವೆಚ್ಚದಲ್ಲೂ ಕೂಡ ಅಂತರ ಕಾಯ್ದುಕೊಳ್ತು. ಮಲ್ಯ ಉಪಯೋಗಿಸಿದ ಮಾರ್ಕೆಟಿಂಗ್ ಸ್ಟ್ರಾಟಜಿಗಳು ಚೆನ್ನಾಗಿಯೇ ವರ್ಕೌಟ್ ಆಗಿತ್ತು. ದೇಶದ ಆಂತರಿಕ ವಿಮಾನಯಾನ ಸಾರಿಗೆ ವ್ಯವಸ್ಥೆಯಲ್ಲಿ ಕಿಂಗ್ ಫಿಶರ್ ಎರಡನೇ ಸ್ಥಾನಕ್ಕೆ ಜಿಗಿದುಬಿಡ್ತು.

ಕಿಂಗ್​ಫಿಶರ್​ ರೆಡ್, ಕಿಂಗ್ ಫಿಶರ್ ಕ್ಲಾಸ್ ಹಾಗು ಕ್ಲಬ್​ ವಿಮಾನಗಳು ಬ್ಯುಸಿನೆಸ್ ಟೈಕೂನ್​ಗಳನ್ನೂ ಸೂಜಿಗಲ್ಲಿನಂತೆ ಸೆಳೆದ್ವು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ನೆಲೆಯಾಗಿ ಹೊಂದಿದ್ದ  ಕಿಂಗ್ ಫಿಶರ್ ಏರ್​ಲೈನ್​ ಮುಂಬೈ, ಕೋಲ್ಕತ್ತ, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಸಂಚರಿಸ್ತಿತ್ತು. ಅದರ ಜೊತೆಜೊತೆಗೆ ಬೆಂಗಳೂರುನಿಂದ ಲಂಡನ್​ಗೂ ಕೂಡ ವಿಮಾನಯಾನ  ಸೇವೆ ಆರಂಭಿಸಲಾಗಿತ್ತು.

ಮೊದಲೇ ಮಲ್ಯ ಐಷಾರಾಮಿ ಉದ್ಯಮಿ. ವಿಶ್ವದ ನಂಬರ್2 ಮದ್ಯದ ದೊರೆ. ಮಲ್ಯ ವೈಭೋಗಕ್ಕೆ ಪ್ರತೀಕವಾಗಿ ಒಂದು ಎ3 ಅನ್ನೋ ಐಷಾರಾಮಿ ವಿಮಾನಯಾನವನ್ನ ಶುರುಮಾಡಿದ್ರು. ಕಿಂಗ್​ಫಿಶರ್ ಏರ್​ಲೈನ್ಸ್ ಹಾರಿದಷ್ಟೂ ಎತ್ತರಕ್ಕೆ ಮಲ್ಯ ಕೀರ್ತಿ ಪತಾಕೆಗಳು ಹಾರಿದ್ವು. ಸುಮಾರು ಆರು ವರ್ಷಗಳ ಕಾಲ ಕಿಂಗ್​ಫಿಶರ್ ಏರ್​ಲೈನ್ಸ್​ ಆಗಸದಲ್ಲೂ ಕಿಂಗ್ ಆಗಿಬಿಡ್ತು. ಆದ್ರೆ 2011ರ ಡಿಸೆಂಬರ್​ನಲ್ಲಿ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ಕಷ್ಟಕಾಲ ಶುರುವಾಯ್ತು.

ಆರ್ಥಿಕ ಸಂಕಷ್ಟಕ್ಕೆ ಒಳಗಾಯ್ತು ಕಿಂಗ್​ ಫಿಶರ್​ ಏರ್​ಲೈನ್ಸ್
ಮದ್ಯದ ದೊರೆಗೂ ಬಂತು ಇದರಿಂದ ದುರ್ಗತಿ

2011ರಲ್ಲಿ ಷೇರು ಮಾರುಕಟ್ಟೆಯಲ್ಲಿ ಬದಲಾದ ಸನ್ನಿವೇಶಗಳು ಕಿಂಗ್​ಫಿಶರ್​ ಸ್ಥಿತಿಗತಿ ಬದಲಾಗೋದಕ್ಕೂ ಕಾರಣವಾದ್ವು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಾದ ಹಿನ್ನೆಲಯಲ್ಲಿ ಕಿಂಗ್​ಫಿಶರ್ ಏರ್​ಲೈನ್ಸ್​ಗೆ ಆದಾಯಕ್ಕೆ  ಹೊಡೆತ ಬಿತ್ತು.  ಕಿಂಗ್​ಫಿಶರ್ ಏರ್​ಲೈನ್ಸ್ ಆರ್ಥಿಕ ದುಸ್ಥಿತಿಯ ನಡುವೆಯೇ ಹಾರಾಟ ನಡೆಸಿತ್ತು. ಆದ್ರೆ ಅದು ಕೇವಲ ಅಲ್ಪಾವಧಿಯಷ್ಟೇ ಆಗಿತ್ತು.

2012ರ ಅಕ್ಟೋಬರ್​ನಲ್ಲಿ ಕಿಂಗ್​ಫಿಶರ್​ ಏರ್​ಲೈನ್ಸ್​ ಆರ್ಥಿಕ ದಿವಾಳಿತನದ ಕುರುಹುಗಳು  ಒಂದೊಂದಾಗಿ ಜಗಜ್ಜಾಹೀರಾದ್ವು. ಮಲ್ಯ ತಮ್ಮ ಏರ್​ಲೈನ್ಸ್ ಸಿಬ್ಬಂದಿಗಳಿಗೆ ಸಂಬಳವನ್ನೇ ನೀಡದಂತಾ ಸ್ಥಿತಿಗೆ ತಲುಪಿದ್ರು. ಅಲ್ಲದೇ ಸೂಕ್ತ ಕಾರಣವನ್ನ ನೀಡದೆ ಏಕಾಏಕಿ ಅನೇಕ ನೌಕರರನ್ನ ಸೇವೆಯಿಂದ ವಜಾಗೊಳಿಸಿದ್ರು. ಇದರಿಂದ ಸಿಟ್ಟಿಗೆದ್ದ ಕಿಂಗ್​ಫಿಶರ್​ ಏರ್​ಲೈನ್ಸ್​ ಸಿಬ್ಬಂದಿಗಳು ಮಾಲೀಕರ ವಿರುದ್ಧವೇ ಪ್ರತಿಭಟನೆಗಿಳಿದ್ರು. ಸುಮಾರು ಆರು ತಿಂಗಳ ವೇತನ ಬಾಕಿ ಉಳಿಸಿಕೊಳ್ಳುವಂತಾಯ್ತು. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ಷೋ ಕಾಸ್ ನೊಟೀಸ್ ಜಾರಿ ಮಾಡಿದ್ರೂ, ಅದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ.

ಹಾರಾಟ ನಿಲ್ಲಿಸಿತು ಕಿಂಗ್​ಫಿಶರ್ ಏರ್​ಲೈನ್ಸ್​
ಮಲ್ಯ ಹೆಗಲಿಗೆ ಬಿತ್ತು ಕೋಟಿ ಕೋಟಿ ಸಾಲದ ಹೊರೆ

ಯಾವಾಗ ಈ ಸಮಸ್ಯೆ ಬಗೆಹರಿಯಲಾರದು ಅಂತಾ ಗೊತ್ತಾಯ್ತೋ ಕೂಡ್ಲೇ ಡಿಸಿಜಿಎ ಕಿಂಗ್​ಫಿಶರ್ ಏರ್​ಲೈನ್ಸ್​ ಪರವಾನಗಿಯನ್ನ ರದ್ದುಗೊಳಿಸ್ತು. ದೇಶೀಯ ಹಾಗು ವಿದೇಶಿ ವಿಮಾನಯಾನಾ ಹಾರಾಟವನ್ನ 2013ರ ಫೆಬ್ರವರಿಯಲ್ಲಿ ನಿಲ್ಲಿಸಲಾಯ್ತು. ಕಿಂಗ್​ಫಿಶರ್​ ಏರ್​ಲೈನ್ಸ್​ಗೆ 2014ರ ಫೆಬ್ರವರಿಯಲ್ಲಿ ಕಿಂಗ್​ಫಿಶರ್​ ಸಿಇಓ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ರು. ಅಲ್ಲಿಗೆ ಕಿಂಗ್​ಫಿಶರ್​ ಏರ್​ಲೈನ್ಸ್​ ರೆಕ್ಕೆಪುಕ್ಕಗಳು ಸಂಪೂರ್ಣವಾಗಿ ಕತ್ತರಿಸಲ್ಪಟ್ವು. 

ಕಿಂಗ್​ ಫಿಶರ್​ ಏರ್​​ಲೈನ್ಸ್  ಹಾರಾಟ ನಿಲ್ಲಿಸಿದ ಮೇಲೂ ಮಲ್ಯಗೆ ಕಷ್ಟಗಳು ತಪ್ಪಲಿಲ್ಲ. ಅಸಲಿಗೆ ಮಲ್ಯ ಸಾಮ್ರಾಜ್ಯಕ್ಕೆ ಕತ್ತಲು ಕವಿಯೋಕೆ ಆರಂಭವಾಗಿದ್ದೇ ಇಲ್ಲಿಂದ. ಕಿಂಗ್​ಫಿಶರ್​ ವಿಮಾನಯಾನ ನಿಲ್ಲಿಸಿದ ಬೆನ್ನಿಗೇ ಮಲ್ಯ ಮೇಲೆ ಸುಮಾರು 4000 ಕೋಟಿ ರೂಪಾಯಿ ಸಾಲದ ಹೊರೆ ಬಿತ್ತು.

ಲಕ್ಷಾಂತರ ಕೋಟಿ ರೂಪಾಯಿಗೆ ಒಡೆಯರಾಗಿದ್ದ ಮಲ್ಯ ಸಾವಿರಾರು ಕೋಟಿಗಳಿಗೆ ಸಾಲಗಾರನೂ ಆದ್ರು. ಮಲ್ಯರನ್ನ ನಂಬಿ ಸಾಲ ಕೊಟ್ಟ ಬ್ಯಾಂಕ್​ಗಳೇ ಇಂದು ದೇಹಿ ಅನ್ನೋ ಸ್ಥಿತಿಗೆ ಬಂದು ನಿಂತಿವೆ. ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಅನ್ನೋ ಗಾದೆ ಮಲ್ಯ ವಿಚಾರದಲ್ಲಿ ನಿಜವಾಗಿದೆ. 
--------------------
ಕಿಂಗ್​ ಫಿಶರ್​ ಏರ್​ಲೈನ್ಸ್ ಕೊಟ್ಟ ಹೊಡೆತದ ಬಿಸಿ, ಇತರೆ ಉದ್ಯಮಗಳಿಗೂ ತಾಕಿತ್ತು. ವಿಮಾನಯಾನಕ್ಕಾಗಿ ಮಾಡಿದ ಸಾಲ ತೀರಿಸೋದಕ್ಕಾಗಿ ಮಲ್ಯ ಖಾಸಗಿ ಆಸ್ತಿಗಳನ್ನೇ ಮಾರಬೇಕಾಯ್ತು. ದೇವರ ಮೊರೆ ಹೋದ್ರು ಮಲ್ಯ ಕಷ್ಟದ ದಿನಗಳು ದೂರಾಗಲಿಲ್ಲ. ಮಲ್ಯರನ್ನ ನಂಬಿ ಸಾಲ ಕೊಟ್ಟ ಬ್ಯಾಂಕ್​ಗಳ ಸ್ಥಿತಿಯೂ ಇಂದು ಅಧೋಗತಿ ತಲುಪಿದೆ.

ಸಾಲದಲ್ಲೂ ಕಿಂಗ್ ಆದ್ರು ವಿಜಯ್​ ಮಲ್ಯ
ಕಷ್ಟ ಪರಿಹಾರಕ್ಕೆ ದೇವರಲ್ಲಿ ಮೊರೆ ಇಟ್ಟ ಮದ್ಯದ ದೊರೆ

ವಿಜಯ್ ಮಲ್ಯ ಪಾಲಿನ ವಿಜಯ ಕಿಂಗ್​ಫಿಶರ್​ ಏರ್​ಲೈನ್ಸ್ ಜೊತೆಜೊತೆಗೆ ಮುಗಿದುಹೋಗಿತ್ತು. ಕಿಂಗ್​ಫಿಶರ್ ಏರ್​ಲೈನ್ಸ್ ಸುಮಾರು 12,000 ಕೋಟಿ ರೂಪಾಯಿ ಸಾಲದ ಹೊರೆಯನ್ನ ಮದ್ಯದ ದೊರೆಯ ಹೆಗಲಿಗೆ ಕಟ್ಟಿತ್ತು. ಮಲ್ಯ ಉದ್ದಿಮೆಗಳ ಸಾಮ್ರಾಜ್ಯಕ್ಕೆ ಇದರಿಂದ ದೊಡ್ಡ ಹೊಡೆತ ಬಿತ್ತು. ಮಲ್ಯ ಖಾಸಗಿ ಆಸ್ತಿಗಳನ್ನೇ ಆಪೋಶನ ತೆಗೆದುಕೊಳ್ಳೋ ಮಟ್ಟಕ್ಕೆ ಮಲ್ಯ ಪಾಲಿಗೆ ಸಾಲ ಶೂಲವಾಯ್ತು.

ಈ ಸಾಲದ ಸುಳಿ ಹಾಗು ಕಷ್ಟದ ದಿನಗಳಿಂದ ಹೇಗೆ ಹೊರಗೆ ಬರೋದು ಅನ್ನೋದೇ ಮಲ್ಯಗೆ ಯಕ್ಷಪ್ರಶ್ನೆಯಾಗಿಬಿಡ್ತು. ಆ ವೇಳೆಯಲ್ಲೇ ಮಲ್ಯ ಕಂಡಕಂಡ ದೇವರಿಗೆಲ್ಲಾ ಕೈ ಮುಗಿದ್ರು. ತಿರುಪತಿ, ಸೇರಿದಂತೆ ದೇಶದ ಅನೇಕ ದೇವಾಲಯಗಳಿಗೆ ತೆರಳಿದ್ರು. ತಮ್ಮ ಕಷ್ಟ ಪರಿಹರಿಸುವಂತೆ ದೇವರಿಗೆ ಮೊರೆ ಇಟ್ಟರು. ಇದರಿಂದ ಕಷ್ಟ ಪರಿಹಾರವಾಗುತ್ತೆ ಅಂತಾ ನಂಬಿದ್ದ ಮಲ್ಯ ಅದಕ್ಕೆ ಪ್ರತಿಯಾಗಿ ಭಾರೀ ಹರಕೆಗಳನ್ನೂ ಮಲ್ಯ ಮಾಡಿಕೊಂಡ್ರು.

ಆದ್ರೆ ಯಾವ ದೇವರು ಕೂಡ ಮಲ್ಯ ಆರ್ಥಿಕ ಸಂಕಷ್ಟವನ್ನ ಪರಿಹರಿಸಲಿಲ್ಲ. ಅದರ ಬದಲಾಗಿ ಮಲ್ಯ ಸಾಲದ ಹೊರೆ ಮತ್ತಷ್ಟು ಹೆಚ್ಚಾಯ್ತು. ಮದ್ಯ ದೊರೆಯ ಇಡೀ ಸಾಮ್ರಾಜ್ಯವನ್ನೇ ಮಾರಿದ್ರೂ ಆ ಸಾಲ ತೀರೋದಿಲ್ಲ ಅನ್ನೋ ಲೆಕ್ಕಾಚಾರ ಬ್ಯಾಂಕ್​ಗಳೇ ಹಾಕಿಕೊಂಡ್ವು.

ಮಲ್ಯಗೆ ಸಾಲ ಕೊಟ್ಟಿದ್ವು 17 ಸಾರ್ವಜನಿಕ ಬ್ಯಾಂಕ್​ಗಳು
ಆಸ್ತಿ ಹರಾಜಿಗಿಟ್ಟರೂ ತೀರಲಿಲ್ಲ ದೊರೆಯ ಸಾಲ  

ವಿಜಯ್ ಮಲ್ಯರ ಲೋಹದ ಹಕ್ಕಿಯ ಹಾರಾಟಕ್ಕೆ ಸುಮಾರು 17 ಸಾರ್ವಜನಿಕ ಬ್ಯಾಂಕ್​ಗಳು ಅವರು ಕೇಳಿದಷ್ಟು ಸಾಲ ಕೊಟ್ಟಿದ್ವು. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್​ ಸೇರಿದಂತೆ 17 ಬ್ಯಾಂಕ್​ಗಳು ಮಲ್ಯಗೆ ಸುಮಾರು 12,000 ಕೋಟಿ ಸಾಲವನ್ನ ನೀಡಿದ್ವು. ಮಲ್ಯ ಒಡೆತನದ ಕೆಲವು ಸ್ಥಿರಾಸ್ತಿಗಳು, ಮಲ್ಯ ಒಡೆತನದ ಕಂಪನಿಗಳ ಷೇರುಗಳು ಹಾಗು ಮಲ್ಯರ ವೈಯಕ್ತಿಕ ಗ್ಯಾರಂಟಿಯ ಮೇಲೆ ಸಾಲ ನೀಡಲಾಗಿತ್ತು. ಆ ಬಳಿಕ ಮಲ್ಯ ಕಂಪನಿಯ ಷೇರುಗಳನ್ನ ಮಾರಾಟ ಮಾಡಿ ತಮ್ಮ ಸಾಲದ ಮೊತ್ತ ಸರಿದೂಗಿಸಿಕೊಳ್ಳೋಕೆ ನೋಡಿದ್ವು.

ಮಲ್ಯ ಹೆಸರಿನಲ್ಲಿ ಗೋವಾದಲ್ಲಿದ್ದ ವಿಲ್ಲಾ ಹಾಗು ಮುಂಬೈನಲ್ಲಿದ್ದ ಖಾಸಗಿ ಆಸ್ತಿಗಳನ್ನೂ ಹರಾಜಿಗಿಟ್ರೂ ಸಾಲ ತೀರಲಿಲ್ಲ. ಈ ನಡುವೆ ಬಹಿರಂಗವಾದ ಮತ್ತೊಂದು ವಿಚಾರವೆಂದ್ರೆ ಮಲ್ಯ ಒಂದೇ ಆಸ್ತಿಯ ಮೇಲೆ ಮೂನ್ನಾಲ್ಕು ಬ್ಯಾಂಕ್​ಗಳು ಸಾಲ ನೀಡಿದ್ವು. ಹಾಗಾಗಿ ಯಾವ ಬ್ಯಾಂಕ್ ಆ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಬೇಕು ಅನ್ನೋ ಗೊಂದಲ ನಿರ್ಮಾಣವಾಯ್ತು.

ಸಾವಿರ ಕೋಟಿ ಸಾಲವಿದ್ರೂ ಮದ್ಯ ದೊರೆ ನಿರುಮ್ಮಳ
ಸಾಲ ಕೊಟ್ಟ ಬ್ಯಾಂಕ್​ಗಳಿಗೇ ಎದುರಾಯ್ತು ದುಸ್ಥಿತಿ


ಸ್ಥಿರ ಹಾಗು ಚರಾಸ್ಥಿಗಳನ್ನ ಹರಾಜಿಗಿಟ್ಟು ಸಾಲ ಮರುಪಾವತಿಸಿಕೊಂಡ್ರೂ, ಮಲ್ಯ ಇನ್ನೂ 4000 ಕೋಟಿ ರೂಪಾಯಿ ಸಾಲಕ್ಕೆ ಹೊಣೆಗಾರ. ಹೀಗಿದ್ರೂ ಕೂಡ ಮಲ್ಯ ವೈಭವಗಳು ಕಡಿಮೆಯಾಗಿಲ್ಲ. ಮದ್ಯದ ದೊರೆಯಾಗಿದ್ದಾಗ ಮಲ್ಯ ನಡೆಸ್ತಿದ್ದ ಶೋಕಿ ಜೀವನಕ್ಕೂ, ಈಗಿನ ಸಾಲಗಾರ ಮಲ್ಯ ಜೀವನಕ್ಕು ಏನೂ ವ್ಯತ್ಯಾಸವಿಲ್ಲ. ಮೊದಲಿನಷ್ಟೇ ನಿರುಮ್ಮಳರಾಗಿ ಮಲ್ಯ ದಿನಕಳೀತಾ ಇದಾರೆ. ಆದ್ರೆ ಮಲ್ಯ ವರ್ತನೆಯಿಂದ ನಿಜಕ್ಕೂ ಚಿಂತೆಗೆ ಬಿದ್ದಿರೋದೇ ಸಾಲ ಕೊಟ್ಟ ಬ್ಯಾಂಕ್​ಗಳು.

ಮಲ್ಯರಿಗೆ ಸಾಲ ನೀಡಿದ 17 ಬ್ಯಾಂಕ್​ಗಳ ಮ್ಯಾನೇಜರ್​ಗಳು ಈಗ ನಿವೃತ್ತರಾಗಿದ್ದಾರೆ. ಹೊಸದಾಗಿ ಬಂದಿರೋ ಬ್ಯಾಂಕ್ ಮ್ಯಾನೇಜರ್​ಗಳಿಗೆ ಬ್ಯಾಲೆನ್ಸ್​ ಶೀಟ್ ಕ್ಲಿಯರ್ ಮಾಡುವಂತೆ ಮಲ್ಯರ ಮನವೊಲಿಸೋದೇ ದೊಡ್ಡ ಸವಾಲು. ಸಾಲ ವಸೂಲಾತಿ ಹೇಗೆ ಅನ್ನೋ ಪೂರ್ವಾಪರ ಯೋಜನೆಗಳಿಲ್ಲದೆ ಸಾಲ ಕೊಟ್ಟ ಬ್ಯಾಂಕ್​ಗಳೇ ಇಂದು ಮಲ್ಯ ಎದುರು ಅಕ್ಷರಶಃ ದೇಹಿ ಅನ್ನೋ ಸ್ಥಿತಿಯನ್ನ ಎದುರಿಸ್ತಿವೆ.

ಸಾಲ ತೆಗೆದುಕೊಂಡು ಅದನ್ನ ತೀರಿಸದೇ ಇರೋದು ಮಾತ್ರ ಮಲ್ಯ ಮಾಡಿದ ತಪ್ಪು ಅನ್ನೋ ಹಾಗೆ ಕಾಣಿಸ್ತಿಲ್ಲ. ಯಾಕಂದ್ರೆ ಮಲ್ಯಗೆ ಸಾಲ ಕೊಟ್ಟ ಬ್ಯಾಂಕ್​ಗಳು ಕೂಡ ಕಾನೂನು ಉಲ್ಲಂಘನೆ ಮಾಡಿರೋ ಸ್ಪಷ್ಟ ನಿದರ್ಶನಗಳು ಮೇಲ್ನೋಟಕ್ಕೆ ಕಾಣಿಸ್ತಿವೆ. ಒಂದೇ ಆಸ್ತಿಯ ಮೇಲೆ ಮೂರು ನಾಲ್ಕು ಬ್ಯಾಂಕ್​ಗಳು ಸಾಲ ಕೊಟ್ಟಿರೋದೇ ಹೇಳುತ್ತೆ ಬ್ಯಾಂಕ್​ಗಳು ಕೂಡ ಇಲ್ಲಿ ಮೋಸದ ಆಟವಾಡಿವೆ ಅಂತಾ.

ಒಟ್ಟಿನಲ್ಲಿ ಮಲ್ಯಗೆ ಕೊಟ್ಟ ಸಾಲವನ್ನ ಇಂದು ಹೇಗೆ ಮರುಪಾವತಿಸಿಕೊಳ್ಳಬೇಕು ಅನ್ನೋದೇ ಇಂದು ಬ್ಯಾಂಕ್​ಗಳ ಮುಂದಿರೋ ಬಗೆಹರಿಯದ ಸಮಸ್ಯೆ. ಬ್ಯಾಂಕ್​ಗಳನ್ನ ದುಸ್ಥಿತಿಗೆ ದೂಡಿರೋ ಮಲ್ಯ ಮಾತ್ರ ತಮ್ಮ ಎಂದಿನ ಶೋಕಿಯಲ್ಲೇ ದಿನ ಕಳೀತಿದಾರೆ. ಇದಕ್ಕೆ ಅಲ್ವಾ ಹೇಳೋದು ಕೊಟ್ಟವನು ಕೋಡಂಗಿ. ಈಸ್ಕೊಂಡೋನು ಈರಭದ್ರ ಅಂತಾ.

ಒಂದು ಕಾಲದ ಮದ್ಯದ ದೊರೆ ಇಂದು ಸಾಲದಲ್ಲೂ ದೊರೆ. ಮಲ್ಯ ಸಾಲ ತೀರಿಸ್ತಾರೋ ಇಲ್ವೋ. ಆದ್ರೆ ಅವರ ಕಲರ್​ಫುಲ್ ಜೀವನಕ್ಕೆ ಮಾತ್ರ ಎಂದಿಗೂ ಚ್ಯುತಿ ಬಂದಿಲ್ಲ. ಸಾಲದಲ್ಲೂ ಸರ್ದಾರನಾಗಿಯೇ ಮಲ್ಯ ದಿನಕಳೀತಾ ಇದಾರೆ.

ಬೈಯ್ಯುತ್ತಲೇ ಬದುಕು ಕಟ್ಟಿಕೊಟ್ಟ ಭಾವುಕ ಜೀವಿ ಕೆ.ಆರ್​​

ಹೇ ಏನ್ ಗಲೀಜ್‌ ಜನಗಳಯ್ಯ ನೀವು..? ಯಾವನಯ್ಯ ನಿಮಗ್ ಡಿಗ್ರಿ ಕೊಟ್ಟೋನು..? ನೋಡ್ರಯ್ಯ ಕಾಲೇಜಿಗೆ ತಪ್ಪಿಸಿಕೊಂಡು ಮನೇಲ್ ಕೂತ್ಕೊಂಡು ಕಿತ್ ಗುಡ್ಡೆ ಹಾಕೋ ಕೆಲಸ ಅಂಥದ್ದೇನಿತ್ತಯ್ಯ..?  ಯಾರಾದ್ರೂ ಸಾಯ್ತಾ ಇದ್ರೆ ಮಾತ್ರ ಕಾಲೇಜಿಗೆ ರಜೆ ಹಾಕ್ಬೇಕು.. ಅದೂ ಬದುಕಿಸೋದಕ್ಕೆ ಸಾಧ್ಯ ಆಗೋ ಹಾಗಿದ್ರೆ.. ಸತ್ತೋಗ್ಬಿಟ್ರೆ ರಜಾ ಹಾಕಿ ಕೂಡ ಏನೂ ಪ್ರಯೋಜನ ಇಲ್ರಯ್ಯ..!

 ಹೀಗೆ ನಮ್ಮ ಕಾಲೇಜು ದಿನಗಳಲ್ಲಿ ಅತ್ಯಂತ ಕಠೋರವಾಗಿ ಮಾತನಾಡುತ್ತಿದ್ದವರು ಪ್ರೊ.ಕೋ.ಡಿ ರಂಗಪ್ಪನವರು. ಮೂಲತಃ ಮಧುಗಿರಿಯವರಾಗಿರುವ ಪ್ರೋ.ಕೋಡಿ ರಂಗಪ್ಪನವರು ಚಿಕ್ಕಬಳ್ಳಾಪುರ, ಕೋಲಾರ, ಬಾಗೆಪಲ್ಲಿ ಸೇರಿದಂತೆ ಬೆಂಗಳೂರು ಗ್ರಾಮಾಂತರದ ಬುದ್ದಿ ಜೀವಿಗಳಿಗೆ ಚಿರಪರಿಚಿತರು. ಸದ್ಯಕ್ಕೆ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರೋಫೇಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಾಠ ಮಾಡುವುದಕ್ಕಿಂತಲೂ ಹೆಚ್ಚಾಗಿ ಹೊರಗಿನ ವಿಷಯವನ್ನೇ ಹೆಚ್ಚಾಗಿ ತಲೆಯೊಳಗೆ ತುರುಕುತ್ತಿದ್ದರು. ಅವರು ಒಂದು ಗಂಟೆ ಪಾಠ ಮಾಡ್ತೀನಿ ಅಂತ ಹೇಳಿದರು ಎಂದರೆ, ವಿದ್ಯಾರ್ಥಿಗಳ ಮನಸಿನಲ್ಲಿ ಅದಾಗಲೇ ಲೆಕ್ಕಾಚಾರಗಳು ಶುರುವಾಗಿಬಿಡುತ್ತಿದ್ದವು. “ಮೇಷ್ಟ್ರು ಮೂರ್ ಅವರ್ ಬಿಡಲ್ಲ ಕಣ್ರಪ್ಪ.. ಓಡೋಗೋಣ ನಡೀರೋ” ಅಂತ ಅವರ ಕ್ಲಾಸುಗಳಿಗೆ ಹಾಜರಾಗದೇ ಕಾಲ್ಕಿತ್ತವರೇ ಹೆಚ್ಚು.

ಅವರು ಪಾಠ ಮಾಡಿದ್ದು ಎಷ್ಟು ನೆನಪಿದೆಯೋ.. ಅದಕ್ಕಿಂತಲೂ ಹೆಚ್ಚಾಗಿ ಅವರ ಬೈಗುಳಗಳು ನಮಗೆ ಇನ್ನೂ ನೆನಪಿದೆ.. “ಏನ್‌ ಗಲೀಜ್‌ ಜನಗಳಯ್ಯ ನೀವು? ಒಂದು ಕ್ಲಾಸ್ ನೆಟ್ಟಗೆ ಅಟೆಂಡ್ ಮಾಡೋಕ್ ಆಗಲ್ಲ ನಿಮಗೆ.. ನಿಮಗೆ ಯಾರಯ್ಯ ಡಿಗ್ರಿ ಕೊಟ್ಟೋನು?” ಎಂದೆಲ್ಲಾ ಪ್ರವಚನ ಶುರು ಮಾಡುತ್ತಿದ್ದರು.

ಆದ್ರೆ ಕೆಆರ್ ಮೆಷ್ಟ್ರು ಬೈಗಳುಗಳನ್ನು ಕೇಳಿದ ಎಲ್ಲಾ ವಿದ್ಯಾರ್ಥಿಗಳು, ಓದು ಮುಗಿಸಿ ಅಂತಿಮವಾಗಿ ಹೊರಗೆ ಬರುತ್ತಿರುವಾಗ ತುಂಬಾನೇ ಮಿಸ್ ಮಾಡ್ಕೊಳ್ಳೋದು ಅದೇ ಕೆ.ಆರ್.ಮೇಷ್ಟ್ರನ್ನ..

ಯಸ್‌.. ಅವರು ಹೊರಗೆ ಎಷ್ಟು ಕಠೋರ ವಾಗ್ಮಿಗಳೋ.. ವಿದ್ಯಾರ್ಥಿಗಳ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿದ್ದ ದ್ರೋಣರು.

ನನಗೆ ಇನ್ನು ನೆನಪಿದೆ.... ಕಾಲೇಜು ಬಿಟ್ಟಾಗ ಶಿಕ್ಷಕರು ಸೇರಿದಂತೆ, ಆಫೀಸ್ ಬಾಯ್ ಕೂಡ ಕಾಲೇಜು ಬೀಗ ಹಾಕಿ ಮನೆಗೆ ಹೋದಾಗ ಅವರು ಒಬ್ಬರೇ ಕಾಲೇಜು ಹೊರಗೆ ಗಂಟೆ ಗಟ್ಟಲೇ ನಿಲ್ಲುತ್ತಿದ್ದರು... ಇದು ನಮಗೆಲ್ಲರಿಗೂ ಒಂದು ರೀತಿಯ ಕುತೂಹಲವನ್ನೂ ಕೆರಳಿಸಿತ್ತು.. ನನಗೆ ಹೆಚ್ಚು ಆತ್ಮೀಯ ಗುರುಗಳಾಗಿದ್ದರಿಂದ ತಡ ಮಾಡದೇ ಅವರಲ್ಲಿ ನನ್ನ ಪ್ರೆಶ್ನೆ ಪತ್ರಿಕೆಯನ್ನು ಇಟ್ಟುಬಿಟ್ಟೆ.

ಅದಕ್ಕೆ ಅವರು ಕೊಟ್ಟ ಉತ್ತರ ಏನುಗೊತ್ತಾ? “ನೋಡ್ರಯ್ಯ.. ಎಲ್ಲಾರೂ ಎಲ್ಲೆಲ್ಲಿಂದಾನೋ ಬಂದಿರ್ತಾರೆ.. ಅದ್ರಲ್ಲೂ ಹೆಣ್ಮಕ್ಕಳು ದೂರದಿಂದ ಇಲ್ಲಿವರೆಗೂ ಬಂದಿರ್ತಾರೆ. ಅವರ ಅಪ್ಪ ಅಮ್ಮ ಎಲ್ರೂ ನಮ್ ಮೇಲೆ ನಂಬಿಕೆ ಇಟ್ಟು ಕಳಿಸಿರ್ತಾರೆ.. ಅವರು ಎಲ್ರೂ ಬಸ್ ಹತ್ತಿದ ಮೇಲೆ ನಾನು ಮನೆಗೆ ಹೋಗೋದು ನ್ಯಾಯ ಅಲ್ವಾ? ನಾನ್ ಮನೇಗ್ ಹೋಗಿ ದೇಶ ಉದ್ದಾರ ಮಾಡೋದು ಅಷ್ಟ್ರಲ್ಲೇ ಇದೆ. ಆದ್ರೆ ಹೆಣ್ಮಕ್ಕಳನ್ನು ಬಸ್ ಹತ್ತಿಸಿ ಹೋದರೆ ಮನಸಿಗೆ ಸಮಾಧಾನ.. ಎಂದು ಹೇಳಿದ್ರು..

ಇದಲ್ವಾ ಮೇಷ್ಟ್ರು ಮನಸು ಅಂದ್ರೆ? ಹೊರಗೆ ಬೈದ ಮಾತ್ರಕ್ಕೆ ಮನದೊಳಗೆ ಪ್ರೀತಿಯೇ ಇಲ್ಲ ಎಂದಲ್ಲ.. ಬದಲಿಗೆ ಹೆಚ್ಚಿನ ಪ್ರೀತಿ ಇದೆ ಎಂದರ್ಥ.. ನಿಮ್ಮ ಬದುಕಿನ ಬಗ್ಗೆ ನಿಮಗಿಂತಲೂ ಹೆಚ್ಚಿನ ಚಿಂತೆ ಅವರಿಗೆ ಇದೆ ಎಂದರ್ಥ.. ಇಲ್ಲಿ ಇನ್ನೊಂದು ಉದಾಹರಣೆಯನ್ನು ಉಲ್ಲೇಖಿಸದೇ ಇದ್ದರೆ ಅದು ನನ್ನ ಅಪರಾಧವಾಗುತ್ತದೆ.  ಬಿಎಡ್‌ ಓದಲು ದೂರದೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುವವರೇ ಹೆಚ್ಚು.. ಹೀಗೆ ಬಂದವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಅವರಿಗೊಂದು ಗೂಡು ನಿರ್ಮಿಸುವ ಕೈಂಕರ್ಯವನ್ನೂ ಅವರು ಮಾಡಿದ್ದಾರೆ.

ಬಹುಷ ಈ ಸಮಾಜಮುಖಿ ಕಾರ್ಯಗಳಿಂದಲೇ ಇರಬೇಕು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದು.. ನಾವು ಕಾಲೇಜು ಮುಗಿಸಿ ಹಲವು ವರುಷಗಳೇ ಉರುಳಿವೆ. ಆದರೂ ಕೂಡ ಅವರು ಅಂದು ಬದುಕಿಗೆ ಹಾಕಿಕೊಟ್ಟ “ಇನ್‌ ಸೈಟ್‌” ಇದ್ಯಲ್ಲ.. ಅದನ್ನು ಇಂದಿಗೂ ಮರೆತಿಲ್ಲ. ನಾನೊಬ್ಬನೇ ಅಂತ ಅಲ್ಲ, ಇದುವರೆಗೂ ಯಾರು ಅವರ ವಿದ್ಯಾರ್ಥಿಗಳಾಗಿ ಹೊರಗೆ ಬಂದಿದ್ದಾರೋ ಅವರೆಲ್ಲರೂ ಕೂಡ ಕೊನೆಯಲ್ಲಿ ಕೆ.ಆರ್ ಅವರ ಬದುಕಿನ “ಇನ್ ಸೈಟ್” ವಿಚಾರವನ್ನು ಮರೆಯುವುದೇ ಇಲ್ಲ. “ಪುಸ್ತಕದ ಪ್ರಿಂಟೆಡ್‌ ವಿದ್ಯೆಗಿಂತ, ಮಸ್ತಕದ ಅನುಭವದ ಪಾಠಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದಾರೆ.. ಈಗಲೂ ಬಿತ್ತುತ್ತಿದ್ದಾರೆ.

ಸುತ್ತಮುತ್ತಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆದರೂ, ಪ್ರೋ.ಕೋಡಿ ರಂಗಪ್ಪನವರನ್ನು ಎಲ್ಲರೂ ಆಹ್ವಾನಿಸುತ್ತಾರೆ. ಅವರ ಭಾಷಣ ಇಲ್ಲದೇ ಬಹುಷ ಬಹಳಷ್ಟು ಸಭೆ ಸಮಾರಂಭಗಳು ಪೂರ್ತಿಯಾಗೋದಿಲ್ಲ. ಭಾಷಣ ಮಾಡುವಾಗಲೂ ಅಧಿಕಾರ ಶಾಹಿಗಳ ಬಗ್ಗೆ ಕಿಡಿ ಕಾರಿ, ಬಡವರ ಬಗ್ಗೆ ಕಾಳಜಿ ವಹಿಸಿ ಮಾತನಾಡ್ತಾರೆ. ಬಡವರಿಗೆ ಬೇಕಾದ ಕನಿಷ್ಟ ಅವಶ್ಯಕತೆಗಳ ಬಗ್ಗೆ ನೆರೆದಿದ್ದವರಿಗೆ ಮನದಟ್ಟು ಮಾಡಿಕೊಡ್ತಾರೆ.  ಇದು ಸಮಾಜದ ಬಗ್ಗೆ ಅವರು ಹೊಂದಿರುವ ವಿಶೇಷ ಕಾಳಜಿಯನ್ನು ತೋರಿಸುತ್ತದೆ.

ಮೊನ್ನೆ ಒಂದು ಕಾರ್ಯಕ್ರಮದ ನಿಮಿತ್ತ ಗೆಳೆಯ ಕಿಶೋರ್ ನಾನು ಹಾಗೂ ಇನ್ನುಳಿದ ಆತ್ಮೀಯರು ಸೇರಿ ಎಲ್ಲಾ ಮೇಷ್ಟ್ರುಗಳನ್ನು ಭೇಟಿ ಮಾಡಿದ್ವಿ.. ಯಾವಾಗಲೂ ಬೈಯ್ಯುತ್ತಲೇ ಬದುಕು ಕಟ್ಟಿಕೊಟ್ಟ ಗುರುಗಳು ಅಂದು ಸ್ವಲ್ಪ ಭಾವುಕರಾದಂತೆ ಕಂಡಿತು. ಮನದೊಳಗಿದ್ದ ಏನನ್ನೋ ಹೊರ ಹಾಕಲು ಬಯಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆದ್ರೆ ಅದನ್ನು ಕೇಳೋದು ಹೇಗೆ? ಕೇಳಿದರೂ ದೊಡ್ಡವರು ಹೇಳಿಯಾರೇ?

ನಾವು ಸುಮ್ಮನೇ ಕುಳಿತುಬಿಟ್ಟೆವು.. ಸ್ವಲ್ಪ ಸಮಯದ ನಂತರ ಅವರೇ ಮಾತಿಗಿಳಿದರು.. ನಿಮ್ಮನ್ನೆಲ್ಲಾ ಮಿಸ್ ಮಾಡ್ಕೊಳ್ಳೊಕೆ ಮನಸು ಒಪ್ತಾ ಇಲ್ಲ ಕಣ್ರಯ್ಯ.. ನನಗೆ ಏನ್ ಅನಿಸುತ್ತೆ ಗೊತ್ತಾ? ನನಗೆ ಏನಾದ್ರೂ ಅಧಿಕಾರ ಇದ್ದಿದ್ರೆ, ನಮ್ ಕಾಲೇಜಿನಲ್ಲಿ ಓದಿದವರಿಗೆಲ್ಲಾ ನಾನೇ ಕೆಲಸ ಕೊಟ್ಟು, ಅವರೆಲ್ಲರನ್ನೂ ನನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ಅಂತ ಆಸೆ ಕಣ್ರಯ್ಯ.. ಆದ್ರೆ ಏನು ಮಾಡೋದು.. ಅದು ನನ್ನ ಕನಸು.. ಆದ್ರೆ ವಾಸ್ತವಿಕ ಜಗತ್ತಿನಲ್ಲಿ ಅದು ಸಾಧ್ಯವಾಗೋದಿಲ್ಲ ಅಂತ ಗೊತ್ತು. ಯಾಕಂದ್ರೆ ಪ್ರತಿ ವರ್ಷ ಪಾಸಾಗಿ ಹೋಗುವ ನೂರು ನೂರು ಜನರಿಗೆ ಕೆಲಸ ಕೊಡಬೇಕು ಅನ್ನೋದು ವಾಸ್ತವಿಕವಾಗಿ ಅಸಾಧ್ಯ ಅಂತ ಭಾವುಕರಾದ್ರು...

ಅರೆ.. ಕೆ.ಆರ್.ಮೇಷ್ಟ್ರು ಇಷ್ಟೋಂದು ಭಾವುಕ ಜೀವಿಗಳೇ? ನಿಜಕ್ಕೂ ಅಲ್ಲಿ ನೆರೆದಿದ್ದ ಹೊಸ ವಿದ್ಯಾರ್ಥಿಗಳಿಗೆ ಮೇಷ್ಟ್ರ ಮಾತು ಅಚ್ಚರಿಯಾಗಿತ್ತು. ಯಾಕೆಂದ್ರೆ ಅಂದು ನಾವು ವಿದ್ಯಾರ್ಥಿಗಳಾಗಿದ್ದಾಗಲೂ ಕೆ.ಆರ್ ಮೇಷ್ಟ್ರು ಯಾವಾಗಲೂ ಬೈತಾರೆ ಅಂತ ಹೀಗೇ ಅರ್ಥೈಸಿಕೊಂಡಿದ್ದೆವು. ಆದ್ರೆ ಅವರ ಕಠೋರವಾದ ಮಾತುಗಳ ಹಿಂದೆ ಬದುಕನ್ನು ಕಟ್ಟಿಕೊಡಬೇಕು ಎಂಬ ಮಹದಾಸೆ ಇದೆ ಎಂಬುದು ಯಾರಿಗೂ ಕಾಣಿಸಿರಲಿಲ್ಲ..  ಬಹುಷಃ ಈಗಲೂ ಕೆಲವರಿಗೆ ಗೊತ್ತಿಲ್ಲ.. ಕೆ.ಆರ್ ಮೇಷ್ಟ್ರನ್ನು ಬಹಳ ಹತ್ತಿರದಿಂದ ನೋಡಿದವರಿಗೆ ಮಾತ್ರ ಅವರ ಹೃದಯಕಮಲ ತಿಳಿಯುತ್ತದೆ.

ನೆನಪಿನ ಬುತ್ತಿಯಿಂದ ಹೊರತೆಗೆದಿದ್ದು
ಶೇಖರ್‌ ಪೂಜಾರಿ

ನನ್ನ ಪ್ರವಾಸ ಕಥೆ 2010 - ಶೇಖರ್​ ಪೂಜಾರಿ


“LET NOBEL THOUGHTS COME TO US FROM EVERY SIDE”
  
                       ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ
           ಚಿತ್ರಾವತಿ. ಚಿಕ್ಕಬಳ್ಳಾಪುರ-562101ವಿಷಯ
ನನ್ನ ಬಿ.ಎಡ್ ಪ್ರವಾಸ ಕಥೆ.
2009-2010

27-ಅಕ್ಟೋಬರ್‍-2010 ಬುಧವಾರ ಮಧ್ಯಾಹ್ನ 2.30
ಇಂದ 02- ನವೆಂಬರ್‍ 2010 ಮಂಗಳವಾರ 10.30


ಪ್ರಶಿಕ್ಷಣಾರ್ಥಿ
ಶೇಖರ್.ಎಂ
09EUD05043


ಕ್ರಿಯೇಟಿವ್ ಬರಹಗಾರ
ಕಾಮಿಡಿ ಕಿಂಗ್
ವಿಭಿನ್ನ ಚಿಂತಕ
ವಿರೋಧ ಪಕ್ಷದ ನಾಯಕ


ನಿಮ್ಮ
ಶೇಖರ್ ಪೂಜಾರಿ.
9980868898ಪ್ರವಾಸದ ಸ್ಥಳಗಳು

1.             ಹೊಸೂರು
2.            ಭವಾನಿ
3.            ಮಲಪುಜಾ ಡ್ಯಾಂ
4.            ಗುರುವಾಯುರು
5.            ಕಾಲಡಿ
6.            ಕೊಚ್ಚಿನ್
7.            ತ್ರಿವೇಂಡ್ರಂ
8.            ಕೊವಲಂ ಬೀಚ್
9.            ಕನ್ಯಾ ಕುಮಾರಿ
a.            ವಿವೇಕಾನಂದ ಬಂಡೆ
b.            ತಿರುವಳ್ಳುವರ‍್ ಪ್ರತಿಮೆ
10.        ಮಧುರೈ
11.        ಕೊಡೈಕೆನಾಲ್
12.        ಫಳನಿ


ಪ್ರವಾಸದ ಯೋಜನೆ
           ಬಿ.ಎಡ್.ನ ಒಂದು ವರ್ಷದ ಅವಧಿಯಲ್ಲಿ ಶೈಕ್ಷಣಿಕ ಪ್ರವಾಸ ಮತ್ತು ಶಿಬಿರ (ಸಹಬಾಳ್ವೆ ಶಿಬಿರ/ಕ್ಯಾಂಪ್) ಗಳು ಕಡ್ಡಾಯ  ಚಟುವಟಿಕೆಗಳು..  ಆದ್ದರಿಂದ ಬಿ.ಎಡ್.ನ ಮೊದಲ ಸೆಮಿಸ್ಟರ್ ನಲ್ಲಿ ಶಾಂತಿಯುತ ಸಹಬಾಳ್ವೆ ಶಿಬಿರ ನಡೆಸಲಾಯಿತು. 4 ದಿನಗಳ ಅವಧಿ ನೂರು ಜನ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಹಗಲು ರಾತ್ರಿ ಜೊತೆಗಿದ್ದೆವು. ಚಿಕ್ಕಬಳ್ಳಾಪುರದ ಮಂಚನಬೆಲೆಯಲ್ಲಿ ಅಂತೂ ಇಂತು ಹಾಸ್ಯದ ಹೊನಲಿನಲ್ಲಿ, ಖುಷಿಯ ಕಡಲಿನಲ್ಲಿ, ಶಿಬಿರ ಮುಗಿಯಿತು.
           2 ನೇ ಸೆಮಿಸ್ಟರ್  ನಲ್ಲಿ ಶೈಕ್ಷಣಿಕ ಪ್ರವಾಸ ಇರುತ್ತೆ ಎಂಬುದು ನಮಗೆ ಖಚಿತವಾಗಿತ್ತು. ದಿನಾಂಕ 04-10-2010 ರಿಂದ 10-10-2010 ರ ವರೆಗೆ ಈ ಪ್ರವಾಸ ಎಂದು ನಮ್ಮ ಗುರುಗಳಾದ ಜಿ.ಪಿ.ಬಾಹುಬಲಿಯವರು ನಮಗೆ ತಿಳಿಸಿದ್ದರು. ನಾವೆಲ್ಲರು ಸಕಲ ಸಿದ್ಧತೆಗೆ ಸನ್ನದ್ಧರಾದೆವು. ಆದರೆ ಶ್ರೀರಾಮಜನ್ಮಭೂಮಿ ವಿವಾದದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ  ಗಲಭೆಗಳಾಗಬಹುದು ಎಂಬ ಕಾರಣಕ್ಕಾಗಿ ಆ ಅವಧಿಯ ಸಂಧರ್ಭದಲ್ಲಿ ಆಯೋಜಿಸಲಾಗಿದ್ದ  ಪ್ರವಾಸ  ಮುಂದೂಡಲಾಯಿತು. ವಿಧ್ಯಾರ್ಥಿಗಳೆಲ್ಲರ ಉತ್ಸಾಹ ಒಂದೇ ಸಮನೆ ನೆಲಕ್ಕೆ ಬಿತ್ತು.
   
           ಅಂತೂ ಇಂತೂ ಪ್ರವಾಸದ ಆಸೆಯನ್ನೇ ಬಿಟ್ಟಿದ್ದ ನಮಗೆಲ್ಲರ ಮೊಗದಲ್ಲಿ ಮತ್ತೊಮ್ಮೆ ಸಂತೋಷ ತರಿಸಿದ್ದು ಅದೇ ನಮ್ಮ ಗುರುಗಳು. 27-10-2010 ರಿಂದ 02-11-2010 ರ ವರೆಗೆ ಇರುತ್ತದೆ ಈ ಬಾರಿ ಯಾವುದೇ ಬದಲಾವಣೆ ಇಲ್ಲ  ಎಂದು ಖಚಿತವಾಗಿ ತಿಳಿಸಿದರು.

           ಪ್ರೊ!! ಕೋಡಿರಂಗಪ್ಪ , ಪ್ರೊ!! ಕೆ.ಶಿವರಾಮ್ ರೆಡ್ಡಿ, ಪ್ರೊ!! ಸಿ.ಎಂ.ಲೀಲಾವತಿ, ಪ್ರೊ!! ಜಿ.ಪಿ, ಬಾಹುಬಲಿ, ಪ್ರೊ!! ಎನ್, ಲೋಕನಾಥ, ಪ್ರೊ!! ವಿ. ನಾರಾಯಣಸ್ವಾಮಿ ಎಲ್ಲಾ ಉಪನ್ಯಾಸಕರೂ ಸೇರಿದಂತೆ ಪ್ರಂಶುಪಾಲರಾದ  ಪ್ರೊ!! ಎ. ಅಜಿತ್ ಪ್ರಸಾದ್ ರವರೂ ಪ್ರವಾಸದ ಬಗ್ಗೆ ತುಣುಕು ಮಾಹಿತಿ ನೀಡಿದರು.
ಐರಾವತ ಬಸ್
           ವಿಧ್ಯಾರ್ಥಿಗಳನ್ನು ಐರಾವತ ಮತ್ತು ರಾಜಹಂಸ ಎಂದು ಎರಡು ಗುಂಪುಗಳಾಗಿ ಮಾಡಿ 100 ಜನ ವಿಧ್ಯಾರ್ಥಿಗಳನ್ನು 50 ಜನರನ್ನಾಗಿ ಎರಡು ಗುಂಪುಗಳಾಗಿ ವಿಭಾಗಿಸಲಾಯಿತು.
ನಾನು ಯಾವ ಗುಂಪಿನಲ್ಲೂ ಸೇರಲಿಲ್ಲ. ಏಕೆಂದರೆ ನಾನು ಯಾವ ಗುಂಪಿಗೆ ಹೆಚ್ಚು ಬೇಡಿಕೆ ಇದ್ದೆನೆ ಎಂಬುದನ್ನು ತಿಳಿಯಬೇಕಿತ್ತು. ವಿಚಿತ್ರ ಅಂದ್ರೆ ಯಾವ ಗುಂಪಿನವರೂ ನನ್ನನ್ನು ಕರೆಯಲಿಲ್ಲ..! ಆಗ ನಮ್ಮ ಗುರುಗಳಾದ ಬಾಹುಬಲಿಯವರು ಐರಾವತ ಗುಂಪಿನಲ್ಲಿ ನನ್ನನ್ನು ಸೇರಿಸಿದರು. ಆದರೆ ಮನರಂಜನೆಗೆ ಸಹಕರಿಸುವ ನನ್ನ ಎಲ್ಲಾ ಸ್ನೆಹಿತರು ರಾಜಹಂಸ ಬಸ್ಸ್ ನಲ್ಲಿ ಇದ್ದ ಕಾರಣ ಮರುದಿನ ಹಠ ಮಾಡಿ ರಾಜಹಂಸ ಬಸ್ಸಿಗೆ ವರ್ಗಾಯಿಸಿಕೊಂಡೆ.
ರಾಜ ಹಂಸ ಬಸ್ 
25-10-2010 ಸೊಮವಾರ ಮಧ್ಯಾಹ್ನದ ನಂತರ ಪ್ರೊ!! ಬಾಹುಬಲಿ ಮತ್ತು ಪ್ರಂಶುಪಾಲರಾದ ಅಜಿತ್ ಪ್ರಸಾದ್ ಅವರು ಮತ್ತೆ ಪ್ರವಾಸದ ಬಗ್ಗೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದರು.  ಏಕೆಂದರೆ ಪ್ರವಾಸದ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿತ್ತು. ಸೂಚನೆ ನೀಡುವ ಸಂದರ್ಭದಲ್ಲಿ ಉಳಿದ ಉಪನ್ಯಾಸಕರೂ ಉಪಸ್ಥಿತರಿದ್ದರು.

26-10-2010 ಮಂಗಳವಾರ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿತ್ತು. ಮತ್ತು ಪ್ರವಾಸಕ್ಕೆ ಬೇಕಾದ ಸಕಲ ಸಿದ್ಧತೆಗೆ ಮಂಗಳವಾರವೇ ಮುಹೂರ್ತ ನಿಗಧಿಪಡಿಸಿದಂತಾಯಿತು.
ನಾನು ಪ್ರವಾಸದಲ್ಲಿ ತಿನ್ನಲು ಏನನ್ನು ತಯಾರಿಸಲಿಲ್ಲ. ಬದಲಾಗಿ ನಾವು ಹೊರಡುವ ಪ್ರವಾಸೀ ತಾಣಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಮತ್ತು ಮಹತ್ವಗಳ ಪರಿಚಯ ಮಾಡಿಕೊಂಡೆ. ಪ್ರವಾಸ ಬೇಸರವಾಗದಿರಲಿ ಎಂಬ ಕಾರಣಕ್ಕಾಗಿ ಕೆಲವು ಇಂಪಾದ ಹಾಡುಗಳ ಸಿ.ಡಿ.ಯನ್ನು ತಯಾರಿಸಿದ್ದೆ.
     ಉಳಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡೆ. ಉಡುಪು, ಬ್ಯಾಗು, ತಟ್ಟೆ, ಪುಸ್ತಕ, ಹಲ್ಲು ಉಜ್ಜುವ ಬ್ರಶ್, ಹೀಗೆ ಎಲ್ಲವನ್ನೂ ಸಿಧ್ದವಾಗಿ ಇಟ್ಟುಕೊಂಡು ಈ ಪುಸ್ತಕದ ಶೀರ್ಷಿಕೆ ಮತ್ತು ಸಿದ್ಧತೆಯ ಬಗ್ಗೆ ಬರೆಯುತ್ತಿದ್ದೆ. ಆದರೆ ಅಷ್ಟರಲ್ಲಾಗಲೇ ನಿಧಾನವಾಗಿ ನಿದ್ರಾ ದೇವತೆ ನನ್ನನ್ನು ಕೈಬೀಸಿ ಕರೆಯುತ್ತಿದ್ದಿದ್ದು ನನ್ನ ಅರಿವಿಗೆ ಬಂತು. ಹೀಗಾಗಿ, ಬರವಣಿಗೆಯನ್ನು ನಿಲ್ಲಿಸಿ 27-10-2010 ದಿನ (ಮಾರನೆಯ ದಿನ)ದ ಕಾರ್ಯ ಮತ್ತು ಪ್ರಯಾಣದ ಬಗ್ಗೆ ನೆನೆಯುತ್ತಾ ನಿದ್ರಾ ದೇವತೆಯ ಮಡಿಲಲ್ಲಿ ನಾನೂ ಮಗುವಾಗಿ ಮಲಗಿದೆ. ಆದರೆ ನನ್ನ ಸ್ನೇಹಿತೆ ಲಕ್ಷ್ಮಿ ಮಾತ್ರ ಚಕ್ಕುಲಿ, ನಿಪ್ಪೊಟ್ಟು, ತಯಾರು ಮಾಡುವುದರಲ್ಲಿ ಮಗ್ನರಾಗಿದ್ದರು… ಎಲ್ಲಾ ನಮಗಾಗಿ..

ಅಂತೂ ಇಂತೂ “ಪ್ರವಾಸದ ದಿನ ಬಂತು”
ಬೆಳಗಾಯಿತು.. ಪ್ರವಾಸದ ದಿನ ಬಂದೇ ಬಿಟ್ಟಿತು. ನಾನು ಎಲ್ಲವನ್ನೂ ಸಜ್ಜುಗೊಳಿಸಿಕೊಂಡೇ ಕುಳಿತಿದ್ದೆ. ನನ್ನದು ಯಲಹಂಕ ಆದುದ್ದರಿಂದ ಪ್ರವಾಸದ ರೈಲು ಚಿಕ್ಕಬಳ್ಳಾಪುರದಿಂದ ಯಲಹಂಕ ಮಾರ್ಗವಾಗಿ ಬೆಂಗಳೂರು, ಹೊಸೂರು, ಧರ್ಮಾವರಂ ತಲುಪುತ್ತದೆ. ಹೀಗಾಗಿ ನಾನು ದಾರಿ ಮಧ್ಯೆ ಅವರೊಂದಿಗೆ ಸೇರುವ ಮುನ್ಸೂಚನೆ ನೀಡಿದ್ದೆ. ಸಂಜೆ ೪ ಗಂಟೆಗೆ ಚಿಕ್ಕಬಳ್ಳಾಪುರದಿಂದ ರೈಲು ಹೊರಟಿತು. ಶಿಕ್ಷಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಜೊತೆ-ಜೊತೆಯಾಗಿ ಬಂದರು. ಆದರೆ ಅವರ ಜೊತೆ ನಮ್ಮ ಕಾಲೇಜಿನ ಒಬ್ಬನೇ ಒಬ್ಬ ವಿದ್ಯಾರ್ಥಿ, ಆತ್ಮೀಯ ಸ್ನೇಹಿತ ತನ್ವೀಜ್ ಮಾತ್ರ ಪ್ರವಾಸಕ್ಕೆ ಬರಲಿಲ್ಲ..  ಇದಕ್ಕೆ ಕಾರಣಗಳು ಇನ್ನು ಕೂಡ ನಿಘೂಡ.!!

ರೈಲು ಪ್ರಯಾಣ ಶುರುವಾಯಿತು. ಚಿಕ್ಕಬಳ್ಳಾಪುರದಿಂದ ಯಲಹಂಕಗೆ ಸುಮಾರು ಒಂದು ಗಂಟೆಗಳ ಪ್ರಯಾಣ. ನಾನು ಯಲಹಂಕದಲ್ಲಿ ರೈಲಿಗಾಗಿ ಕಾಯುತ್ತಾ ಕುಳಿತಿದ್ದೆ. ಪ್ರಾಂಶುಪಾಲರಾದ ಪ್ರೊ! ಅಜಿತ್ ಪ್ರಸಾದ್ ರವರದು ಬೆಂಗಳೂರಿನ ವಿದ್ಯಾರಣ್ಯಪುರ. ಹೀಗಾಗಿ ಅವರು ನಮ್ಮೆಲ್ಲರನ್ನೂ ಆತ್ಮೀಯವಾಗಿ ಬೀಳ್ಕೊಡಲು ಯಲಹಂಕಾ ರೈಲು ನಿಲ್ದಾಣಕ್ಕೆ ಬಂದಿದ್ದರು. ಸಮಯ ಸಂಜೆ.5.15ಕ್ಕೆ ಸರಿಯಾಗಿ ರೈಲು  ಯಲಹಂಕಾಗೆ ಬಂತು.. ನನ್ನ ಸ್ನೇಹಿತರೆಲ್ಲಾ ಹರ್ಷೊಧ್ಘಾರ, ಉತ್ಸಾಹದೊಂದಿಗೆ ನನ್ನನ್ನು ಆಹ್ವಾನಿಸಿ ಬರಮಾಡಿಕೊಂಡರು. ಎಲ್ಲರೂ ನನ್ನ ಆಹ್ವಾನಕ್ಕಾಗಿಯೇ ಕಾಯುತ್ತಿದ್ದರೇನೋ..? ನಾನು ಬಂದ ಕೂಡಲೇ ಎಲ್ಲರಲ್ಲೂ ಸಂತೋಷ…  ಪ್ರವಾಸ ಇನ್ನೂ ಸಂತೋಷದಿಂದ ಕೂಡಿರಲೆಂದೇ ನಾನು ಸಿ.ಡಿ.ಯಲ್ಲಿ ಹಾಡುಗಳನ್ನು ಭರ್ತಿ ಮಾಡಿಕೊಂಡು ಬಂದಿದ್ದೆ. ಯಲಹಂಕದಿಂದ ಮತ್ತೆ ರೈಲು ಮುಂದಕ್ಕೆ ಚಲಿಸತೊಡಗಿತು… ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಮೂಲಕ ಹಾದು ಬೆಂಗಳೂರು ತಲುಪಿತು… ಬೆಂಗಳೂರು ನಿಲ್ದಾಣದಲ್ಲಿ ನಮ್ಮ ಬಿ.ಎಡ್ ವಿದ್ಯಾರ್ಥಿನಿ ವಿದ್ಯುಲ್ಲತ ನಮ್ಮ ತಂಡ ಸೇರಿದರು.. ಆಕೆಯನ್ನು ಬೀಳ್ಕೊಡಲು ಆಕೆಯ ಬಂಧುಗಳು ಅಲ್ಲಿಗೆ ಬಂದಿದ್ದರು..
ಆಲ್ಲಿಂದ ನಮ್ಮೆಲ್ಲರ ಪಯಣ ಹೊಸೂರಿನೆಡೆಗೆ ಸಾಗಿತ್ತು. ರೈಲಿನಲ್ಲಿ ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ಸಂತೋಷದಿಂದ ಕುಳಿತಿದ್ದೆವು.1.ಹೊಸೂರು ತಲುಪಿದೆವು..
ಉಲ್ಲಾಸ ಉತ್ಸಾಹದೊಂದಿಗೆ….
ಸುಮಾರು 4  ಗಂಟೆಗಳ ಪ್ರಯಾಣದ ನಂತರ  ರಾತ್ರಿ 8.10ಕ್ಕೆ ಹೊಸೂರು ರೈಲ್ವೇ ನಿಲ್ದಾಣ ಸೇರಿದೆವು. ಸ್ವಲ್ಪ ಹೊತ್ತು ಅಲ್ಲೇ ಓಡಾಡಿ ವಿಶ್ರಮಿಸಿದೆವು. ಆ ಸಮಯದಲ್ಲಿ ನಮ್ಮ ಗುರುಗಳು ಪ್ರೊ!.ಸಿ.ಎಂ.ಲೀಲಾವತಿ ಮೇಡಂ ಹೇಳಿದ ಮಾತು ನನಗೆ ಇನ್ನೂ ನೆನಪಿದೆ. ಮದುವೆಯ ವಿಷಯದಲ್ಲಿ ಈಗಿನವರು ತಪ್ಪು ತಿಳಿದುಕೊಂಡು ಆತುರ ಪಟ್ಟು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. “ಈ ವಯಸ್ಸಿನ ಪ್ರೀತಿ, ಒಂದು ಸುಂದರವಾದ ಕಟ್ಟಡದ ಬಣ್ಣಕ್ಕೆ ಮಾರು ಹೋಗಿ ಮನೆಯನ್ನು ಖರೀದಿಸಿದಂತೆ. ಹೀಗಾಗ ಬಾರದು.” ಎಂದಿದ್ದರು. ಎಂಥಾ ಅಮೂಲ್ಯವಾದ ನುಡಿ ಅಲ್ವಾ…? ನಾನು ನನ್ನ ಜೀವನ ಪರ್ಯಂತ ಮರೆಯಲು ಸಾಧ್ಯವೇ ಇಲ್ಲಾ ಈ ಮಾತು…
ನಾವು ಮೇಡಂ ರೊಂದಿಗೆ ಮಾತನಾಡುತ್ತಿದ್ದಂತೆಯೇ ನಮ್ಮೊಂದಿಗೆ ಬಂದಿದ್ದ ಅಡುಗೆ ವ್ಯವಸ್ಥಾಪಕರು ಅಲ್ಲೇ ರೈಲು ನಿಲ್ದಾಣದಲ್ಲಿ ಗ್ಯಾಸು, ಸಿಲಿಂಡರ‍್ ಇಟ್ಟು ನಮಗಾಗಿ ಊಟದ ವ್ಯವಸ್ಥೆ ಮಾಡಿಬಿಟ್ಟರು.. ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನೂ ವೆಂಕಟೇಶ್ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು.  ರಾತ್ರಿ ಸುಮಾರು 9 ಗಂಟೆಗೆ “ಬದನೇಕಾಯಿ ಬಾತ್(ವಾಂಗೀಬಾತ್)” ಊಟ ಮಾಡಿದೆವು. ಪ್ರೊ! ಕೋಡಿ ರಂಗಪ್ಪನವರು ಕೆಲವರಿಗೆ ಮಾಂಸದ ಅಡುಗೆಯನ್ನು ತರಲು ಹೇಳಿದ್ದರು. ಸ್ನೇಹಿತೆ ಅರ್ಚನ, ಚೈತ್ರ, ಗಾಯತ್ರಿ ಯವರು ಈ ಮಾಂಸದ ಅಡುಗೆಯ ನಿರ್ಮಾತೃಗಳು… ಆ ಮಾಂಸದ ಅಡುಗೆಯಲ್ಲಿ ನಾವೂ ಸಹ ಕೈ ಜೋಡಿಸಿದೆವು. 

ನಾನೆಂದರೆ ಪ್ರೊ! ಕೋಡಿ ರಂಗಪ್ಪನವರಿಗೆ ಅದೆಷ್ಟು ಪ್ರೀತಿಯೋ, ಅದೆಷ್ಟು ಅಭಿಮಾನವೋ.. ನಾನು ವಾಂಗಿ ಬಾತ್ ತಿನ್ನುತ್ತಿರುವಾಗ
"ಶೇಕ್ರಾ.. ಬಾ ಇಲ್ಲಿ.. ತಗೋ ಉಪ್ಪಿನಕಾಯಿ"
ಅಂತ ಎರಡು ಪೀಸ್ ಕೊಟ್ಟರು..
"ಊಟ ಮುಗಿದಿದೆ ಸರ‍್ ನಂದು" ಅಂತ ಹೇಳಿದ್ರೂ ಅವರು ಬಿಡಲಿಲ್ಲ.. "ಊಟ ಮುಗಿದ್ಮೇಲೂ ಉಪ್ಪಿನಕಾಯಿ ತಿನ್ಬೋದು ಏನೂ ಆಗಲ್ಲ ತಿನ್ನಯ್ಯ"
ಅಂತ ಬಲವಂತವಾಗಿ ನನ್ನ ತಟ್ಟೆಗೆ ಉಪ್ಪಿನಕಾಯಿ ಪೀಸ್ ಗಳನ್ನ ಹಾಕಿದರು..

ಚಂದ್ರನ ಬೆಳಕಿನಲ್ಲಿ ಊಟ ಮಾಡುತ್ತಿದ್ದ ನಮಗೆ "ಫುಟ್ಪಾತ್ ನಲ್ಲೇ ಮೂನ್ ಲೈಟ್ ಡಿನ್ನರ‍್"ವ್ಯವಸ್ಥೆ ಆದಂತಿತ್ತು.. ಮೇಷ್ಟ್ರು ಕೊಟ್ಟ ಉಪ್ಪಿನಕಾಯಿಯನ್ನು ಬಾಯಿಗೆ ಇಟ್ಟುಕೊಂಡೆ.. ಅರೆ.. ಅದು ಉಪ್ಪಿನಕಾಯಿಯಲ್ಲ.. ಚಿಕನ್ ಪೀಸುಗಳು...!!

ಚಿಕನ್ ಅಂದ್ರೆ ಉಳಿದವರು ಬೇಜಾರ‍್ ಮಾಡ್ಕೋತರೆ ಅಂತ ಉಪ್ಪಿನಕಾಯಿ ಹೆಸರಲ್ಲಿ ಚಿಕನ್ ತಿನ್ನಿಸಿಬಿಟ್ರು ಗುರುಗಳು.

 ಊಟ ಮುಗಿದ ನಂತರ ಸ್ವಲ್ಪ ಕಾಲ ವಿಶ್ರಮಿಸಿದ  ನಂತರ ಅಲ್ಲಿಗೆ 2 ಬಸ್ಸುಗಳು ಬಂದವು. ನಾವು ಸುಮಾರು 5 ದಿನಗಳ ಕಾಲ ಚಲಿಸಬೇಕಿದ್ದ ಬಸ್ಸುಗಳು ಅವು…10 ಗಂಟೆಗೆ ಹೊಸೂರಿನಿಂದ “ಭವಾನಿ” ಊರಿನ ಕಡೆಗೆ ನಮ್ಮ ಎರಡೂ ಬಸ್ಸುಗಳು ಚಲಿಸಿದವು. ಬಸ್ಸು ಹೊರಡುವ ಮುನ್ನ  ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು…!!! ನಿಂಬೆ ಹಣ್ಣು ಬಸ್ಸಿನ ಚಕ್ರದ ಕೆಳಗೆ ಇಟ್ಟು ಬಸ್ಸನ್ನು ಮುಂದಕ್ಕೆ ಚಲಿಸಲಾಯಿತು… ಅಲ್ಲಿಂದ ಶುರುವಾಯಿತು ನಮ್ಮ ಪ್ರವಾಸದ ಅಸಲಿ ಪಯಣ…

2.ಬೆಳಗಿನ “ಭವಾನಿ”
(28-10-2010)


ಹೊಸೂರು ರೈಲ್ವೇ ನಿಲ್ದಾಣದಿಂದ ಸುಮಾರು ೬ ಗಂಟೆಗಳ ಸುದೀರ್ಘ ಪಯಣ.. ರಾತ್ರಿ ೧೦ ಗಂಟೆಗೆ ಆರಂಅಭವಾದ ನಮ್ಮ ಪ್ರಯಾಣ ಬೆಳಿಗ್ಗೆ ೪ ಗಂಟೆಗೆ (28-10-2010) ಭವಾನಿ ತಲುಪಿದೆವು. ದಾರಿಯುದ್ದಕ್ಕೂ ಹಾಡು, ಡ್ಯಾನ್ಸುಗಳ ಭರ್ಜರೀ ಕುಣಿತ. ಉಲ್ಲಾಸ-ಉತ್ಸಾಹದಲ್ಲಿದ್ದ ಎಲ್ಲರೂ ಕುಣಿತಕ್ಕೆ ಹೆಜ್ಜೆ ಹಾಕಿದರು. ಏಕೆಂದರೆ ಹಾಡುಗಳೂ ರೋಮಾಂಚನಕಾರಿಯಾಗಿಯೇ ಇದ್ದವು. ಈ ಕಾರಣಕ್ಕಾಗಿಯೇ ಏನೋ ಹೊಸೂರಿನಿಂದ ಭವಾನಿಯ ವರೆಗಿನ 6 ಗಂಟೆಗಳ ಪ್ರಯಾಣ ನಿರಾಯಾಸವಾಗಿ ಮುಗಿಯಿತು. ಕುಣಿತಕ್ಕೆ ಹೆಪ್ಪೆ ಹಾಕಿದವರಲ್ಲಿ ನಾವೇ ಮೊದಲಿಗರು. “ರಾಜಹಂಸ” ತಂಡಕ್ಕೆ ಹಾಸ್ಯಮಯವಾಗಿ ಮತ್ತು ಮನರಂಜನೆ ನೀಡುವ ಉದ್ದೇಶದಿಂದಲೇ ನಾವೂ ತಯಾರಾಗಿಯೇ ಬಂದಿದ್ದೆವು. ಬಹುಶಃ ಇದೇ ಕಾರಣಕ್ಕಾಗಿಯೇ ಇರಬೇಕು ನಮ್ಮ ಆಹ್ವಾನಕ್ಕಾಗಿ ಸ್ನೇಹಿತರು ಕಾಯುತ್ತಿದ್ದಿದ್ದು…
ಬೆಳಿಗ್ಗೆ 4 ಗಂಟೆಗೆ ಭವಾನಿ ತಲುಪಿದೆವು.  ಸ್ನಾನಕ್ಕಾಗಿ ಒಂದು ವ್ಯವಸ್ಥೆ ಮಾಡಿದ್ದರು. ಆದರೆ ಆಲ್ಲಿ ಶುಚಿತ್ವವಿರದ ಕಾರಣ ಸ್ನಾನ ಪರಿಪೂರ್ಣವಾಗಲಿಲ್ಲ. ಸ್ನಾನದ ನಂತರ ಪಕ್ಕದಲ್ಲಿಯೇ ಇದ್ದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆ ಹೋದೆವು. ಆಗ ಬೆಳಿಗ್ಗೆ 5 ಗಂಟೆ. ಅದೊಂದು ದೊಡ್ಡ ದೇವಸ್ಥಾನ…. ಸುಂದರ ಪರಿಸರದ ನಡುವೆ ಅದ್ಭುತ ಶಿಲೆಗಳಿಂದ ನಿರ್ಮಿಸಲಾದ ದ್ರಾವಿಡ ಶೈಲಿಯ ಕಟ್ಟಡ… ದೇವಸ್ಥಾನದ ಒಳಗೆ, ಹೊರಗೆ ಓಡಡಿದೆವು. ಪೂಜೆ ಮಾಡಿ ದೇವರ ಆಶೀರ್ವಾದ ಪಡೆದೆವು. ಆ ದೇವಸ್ಥಾನದ ಪಕ್ಕದಲ್ಲಿಯೇ ನಮ್ಮ ಕನ್ನಡ ನಾಡಿನ ಕಾವೇರಿ ನದಿ ಹರಿಯುತ್ತಿದೆ. ಆ ಸೌಂದರ್ಯವನ್ನು ಮತ್ತು ದೇವಾಲಯದ ಆದ್ಭುತ ಕಲಾಕೃತಿಯನ್ನು ಕಣ್ಣಲ್ಲಿ ತುಂಬಿಕೊಳ್ಳುತಾ ಕೆಲ ಸ್ಥಿರ ಚಿತ್ರ(ಫೋಟೊ)ಗಳನ್ನು ಸೆರೆ ಹಿಡಿದುಕೊಂಡೆವು. ನಂತರ ಹೊರಗೆ ಬಂದು ಚಹ ಸೇವಿಸಿ ನಮ್ಮ ಪಯಣ ಮುಂದುವರಿಸಿದೆವು….
3. ಮಲಪುಜಾ ಡ್ಯಾಂ..
ಕಟ್ಟಿದ ಇಂಜಿನಿಯರ್ ಗೆ ಸಲಾಂ…!

ಕಡ್ಡಾಯವಾಗಿ ‘ಬ್ಯಾಚುಲರ್‌’ಗಳಿಗೆ ಮಾತ್ರ..!

ಬಹಳ ದಿನಗಳ ನಂತರ ಗೆಳೆಯನೊಬ್ಬ ಸಿಕ್ಕಿದ.. ಅವನ ವಯಸ್ಸು ನನಗಿಂತಲೂ ಸ್ವಲ್ಪ ಹೆಚ್ಚು.. ಆದರೆ ವಯಸ್ಸಿನಲ್ಲಿ ಅಂತರವಿದ್ರೂ, ಸ್ನೇಹದಲ್ಲಿ ಅಂತರವಿರಲಿಲ್ಲ.. ಬಹಳ ದಿನಗಳ ನಂತರ ಸಿಕ್ಕಿದ್ದಕ್ಕೆ, ‘ಏನೋ ಗೆಳೆಯ..? ಹೇಗಿದ್ದೀಯಾ..? ಎಲ್ಲಿ ನಾಪತ್ತೆಯಾಗಿದ್ಯೋ, ಮದುವೆ ಗಿದುವೆ ಆಯ್ತೇನೋ ಅಂತ ಮಾತು ಅರಂಭಿಸಿದೆ. ಆಗ ಅವನು ಹೇಳಿದ ಮಾತು ಕೇಳಿ, ನಾನು ನಿಜಕ್ಕೂ ಶಾಕ್ ಆದೆ.


ಮದುವೆಯಾಗಬೇಕು ಅಂತ, ಅವನು ಇದುವರೆಗೂ ಸುಮಾರು  ಹಾಫ್ ಸೆಂಚುರಿ (೫೦)ಯಷ್ಟು ಹುಡುಗಿಯರನ್ನು ನೋಡಿದ್ದಾನೆ.. ಆದ್ರೆ ಸುಮಾರು ೭ ವರ್ಷಗಳಿಂದ ಅವನಿಗೆ ಕಂಕಣ ಭಾಗ್ಯವೇ ಕೂಡಿ ಬರಲಿಲ್ಲ..! ಇದಕ್ಕೆ ಕಾರಣ ಹುಡುಕತ್ತಾ ಹೋದಾಗ ನಮಗೆ ಸಿಕ್ಕಿದ್ದು ಅಚ್ಚರಿಯ ರಹಸ್ಯ..!


ಗೆಳೆಯನ ಫ್ಯಾಮಿಲಿ ಸ್ಟ್ರಾಂಗ್ ಫ್ಯಾಮಿಲಿ.. ದುಡ್ಡು ಕಾಸಿಗೆ ಬರವಿಲ್ಲ.. ಹೀಗಾಗಿ ಬಡವರ ಮನೆಯ ಮಗಳನ್ನು ಮದುವೆಯಾಗಬೇಕು ಅಂತ ಆತ ಆಸೆ ಪಟ್ಟಿದ್ದ.. ಹೀಗಾಗಿ ಎಲ್ಲಿ ಹೋದ್ರೂ ಸರಿ, ಅಲ್ಲಿ ಬಡವರ ಮನೆಯ ಹುಡುಗಿಯನ್ನು ನೋಡ್ಕೊಂಡು ಬರ‍್ತಿದ್ದ.. ಹೆಣ್ಣಿನ ಮನೆಯವ್ರು ಹುಡುಗನನ್ನು ಓಕೆ ಅಂತಿದ್ರು.. ಹುಡುಗ ಕೂಡ ಹುಡುಗಿಯನ್ನು ಒಪ್ಪಿಕೊಳ್ತಿದ್ದ.. ಇದಾದ ನಂತರ ಹುಡುಗಿಯ ಮನೆಯವ್ರು ಹುಡುಗನ ಮನೆಗೆ ಬರ್ತಾ ಇದ್ರು.. ಮನೆ-ಗಿನೆ, ಜಮೀನು, ಸೈಟು, ಕಾರು ಬೈಕು ಎಲ್ಲಾನು ನೋಡಿ ಖುಷಿ ಪಡ್ತಿದ್ರು.. ಆದ್ರೆ ಇದೆಲ್ಲಾನೂ ನೋಡ್ಕೊಂಡು ಹೋದ ನಂತರಏನೇನೋ ಕಾರಣ ಹೇಳಿ, ಸಂಬಂಧಕ್ಕೆ ಎಳ್ಳು ನೀರು ಬಿಡ್ತಾ ಇದ್ರು..!

ಅರೆ.. ಹುಡುಗ-ಹುಡುಗಿ ಒಪ್ಪಿಕೊಂಡವ್ರೆ.. ಎರಡು ಮನೆಯವ್ರೂ ಒಪ್ಪಿಕೊಂಡವ್ರೆ.. ಆದ್ರೆ ಮದುವೆ ಯಾಕೆ ಮುರಿದು ಬೀಳ್ತಿತ್ತು ಅಂತ ಅಂದುಕೊಂಡ್ರಾ..? ಇದೇ ಪ್ರಶ್ನೆ ಕಳೆದ ೭ ವರ್ಷಗಳಿಂದ ನನ್ನ ತಲೆಯಲ್ಲಿ ಓಡ್ತ ಇತ್ತು.. ಆದ್ರೆ ಇವತ್ತು ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದನ್ನು ನೀವೇನಾದ್ರೂ ಕೇಳಿದ್ರೆ, ನಿಜಕ್ಕೂ ಬೆಚ್ಚಿ ಬೀಳ್ತೀರ..!

ಅಂದ್ಹಾಗೆ, ಹುಡುಗನ ಮನೆ ನೋಡ್ಕೊಂಡು ಹೋಗೋಕೆ ಅಂತ ಬಂದ ಹುಡುಗಿ ಮನೆಯವ್ರು ಹುಡುಗನ ಆಸ್ತಿ ಗೀಸ್ತಿ ನೋಡಿ ಖುಷಿ ಪಡ್ತಿದ್ರು.. ಇಂಥಾ ದೊಡ್ಡ ಮನೆಗೆ ಮಗಳನ್ನು ಕೊಡ್ತಾ ಇದ್ದೀವಲ್ಲ ಅಂತ ಮನಸಲ್ಲೇ ಮಂಡಿಗೆ ತಿಂತಾ ಇದ್ರು.. ಇದಾದ ನಂತರ ಅವ್ರು ತಮ್ಮ ಊರಿಗೆ ವಾಪಸ್ ಹೋಗ್ತಾ ಇದ್ರು.. ಊರಿಗೆ ಹೋದ ನಂತರ ‘ ಹುಡುಗ ಭಾರೀ ಶ್ರೀಮಂತ.. ಕಾರು, ಬಂಗಲೆ, ಹತ್ತಾರು ಸೈಟು ಎಲ್ಲಾ ಇದೆ. ಒಳ್ಳೆ ಕೆಲಸ ಕೂಡ ಇದೆ. ಹುಡುಗೀನ ಕೊಡಬಹುದು ಅಂತ ಹುಡುಗಿಯ ಮನೆಯಲ್ಲಿ  ಮಾತಾಡಿಕೊಳ್ತಿದ್ರು.. 
 
ಈ ಮಾತನ್ನು ಕೇಳಿಸಿಕೊಳ್ತಿದ್ದ ಅಕ್ಕಪಕ್ಕದವರು ಹುಡುಗಿಯ ಮನೆಗೆ ಬಂದು ಪಿನ್ ಇಡ್ತಾ ಇದ್ರು..!


 ಅರೆ ಪಂಕಚಜಮ್ಮನೋರೇ.. ಹುಡುಗ ತುಂಬಾ ಶ್ರೀಮಂತ ಅಂತೆ.. ಹಿಂಗಿದ್ಮೇಲೆ ಅವನ್ಯಾಕೆ ಬಡವರ ಮನೆ ಹುಡುಗೀನಾ ಮದುವೆ ಆಗೋಕೆ ರೆಡಿಯಾಗಿದ್ದಾನೆ..? ಇದ್ರಲ್ಲಿ ಏನೋ ವಿಷ್ಯ ಇದೆ.. ಹುಡುಗನಲ್ಲಿ ಏನೋ ದೋಷ ಇರಬೇಕು ಅನಿಸುತ್ತೆ..! ಇಲ್ಲದಿದ್ರೆ ಅಷ್ಟೋಂದು ಶ್ರೀಮಂತ ಹುಡುಗನಿಗೆ ಹುಡುಗೀರ್ಕೊಡೋರ್ಏನ್ ಕಮ್ಮಿನಾ..? ಯೋಚನೆ ಮಾಡಿ.. ಬಡವರ ಹೆಣ್ಣು ಕೇಳೋಕೆ ಬಂದಿದ್ದಾರೆ ಅಂದ್ರೆ, ಅವನಲ್ಲಿ ದೋಷ ಇರಬೇಕು ಅನಿಸುತ್ತೆ.. ಶ್ರೀಮಂತ ಮನೆತನ ಅಂತ ಮಗಳನ್ನ ಕೊಟ್ಟು ಮದುವೆ ಆದ್ಮೇಲೆ ಕೊರಗಬೇಡಿ.. ಅಂತ ಹೇಳೋರಂತೆ.. ಇದೇ ವಿಷಯಕ್ಕೆ ಹಲವು ಸಂಬಂಧಗಳು ಮುರಿದು ಬಿದ್ದಿದ್ವಂತೆ.. ಕಾರಣ ತಿಳಿದಾಗ, ಗೆಳೆಯ ಕೂಡ ಬೆಚ್ಚಿ ಬಿದ್ದಿದ್ದ..!


                                                                                    -ಶೇಖ್‌(ಸ್ಪಿ)ಯರ್‌

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು