ಸಿನೆಮಾ

Share This Article To your Friends

ರಾಜ್ ಕುಮಾರ‍್ ಮತ್ತು ವಿಷ್ಣುವರ್ಧನ್ ಹಾವು ಮುಂಗುಸಿಗಳಂತೆ ಆಗಿದ್ದು ಹೇಗೆ..?

ಮೈಸೂರಿನಿಂದ ‘ನಾಗರಹಾವು’ ಚಿತ್ರೀಕರಣ ಚಿತ್ರದುರ್ಗಕ್ಕೆ ಶಿಫ್ಟ್ ಆಯಿತು. ನಾನು, ವಿಷ್ಣು, ಅಂಬರೀಷ್‌ ಅಲ್ಲಿ ಬಹಳ ಹತ್ತಿರವಾದೆವು. ವಿಷ್ಣು ಹಾಗೂ ಪುಟ್ಟಣ್ಣನವರ ನಡುವೆಯೂ ಸೌಹಾರ್ದಯುತ ಸಂಬಂಧ ಏರ್ಪಟ್ಟಿತು. ಇಬ್ಬರೂ ಒಂದೇ ರೂಮ್‌ನಲ್ಲಿ ಮಲಗುವ ಸಂದರ್ಭ ಹಲವು ಬಾರಿ ಒದಗಿಬಂದಿತ್ತು. ಬಹುಶಃ ಅದರಿಂದಲೇ ಆ ನಿರ್ದೇಶಕ, ನಟರ ನಡುವೆ ಸಿನಿಮಾಗೆ ಸಂಬಂಧಿಸಿದಂತೆ ಆರೋಗ್ಯಕರ ಸಂವಾದ ಸಾಧ್ಯವಾದದ್ದು.

ಚಿತ್ರದುರ್ಗದಲ್ಲಿ ಸುಡುಬಿಸಿಲು. ಹಾಗಾಗಿ ಬೆಳಿಗ್ಗೆ 5.30ಕ್ಕೆ ಎದ್ದು ಚಿತ್ರೀಕರಣಕ್ಕೆ ಹೋಗಬೇಕಿತ್ತು. ನಾವೆಲ್ಲರೂ ಪುಟ್ಟಣ್ಣ ಹಾಗೂ ವೀರಾಸ್ವಾಮಿಯವರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದೆವು. ಚಾಚೂತಪ್ಪದೆ ಹೊತ್ತಿಗೆ ಸರಿಯಾಗಿ ಶೂಟಿಂಗ್‌ ಲೊಕೇಷನ್‌ ತಲುಪುತ್ತಿದ್ದೆವು.
 

ಚಿತ್ರದುರ್ಗದಲ್ಲಿ ಚಿತ್ರೀಕರಣ ಮುಗಿದ ನಂತರ ಬೆಂಗಳೂರಿನಲ್ಲಿ ಒಂದಿಷ್ಟು ಭಾಗದ ಶೂಟಿಂಗ್‌ ನಡೆಯಿತು. ಆಮೇಲೆ ಆ ಚಿತ್ರದ ಕೆಲಸ ಮುಗಿಯುತ್ತಿದ್ದಂತೆ ನಾನು ನನ್ನ ತಂದೆಯವರ ಚಿತ್ರದ ಕೆಲಸದಲ್ಲಿ ತೊಡಗಿಕೊಂಡೆ.ಈ ನಡುವೆ ಬೆಂಗಳೂರಿಗೆ ಹೋದಾಗಲೆಲ್ಲಾ ವಿಷ್ಣು ಮನೆಗೆ ಭೇಟಿ ನೀಡುತ್ತಿದ್ದೆ. ಅಲ್ಲಿ ಅವರ ತಾಯಿ, ಅಣ್ಣ ಅಕ್ಕ, ತಂಗಿ ಎಲ್ಲರನ್ನೂ ಮಾತನಾಡಿಸುತ್ತಿದ್ದೆ. ‘ನಾಗರಹಾವು’ ಚಿತ್ರದ ರಶ್‌ ಪ್ರಿಂಟ್‌ ಸಿದ್ಧವಾಯಿತು.
 

ಮದ್ರಾಸಿನ ಖಾಸಗಿ ಚಿತ್ರಮಂದಿರದಲ್ಲಿ ವಿಷ್ಣು ನಾಯಕನಾಗಿದ್ದ ಆ ಚಿತ್ರದ ಮೊದಲ ಪ್ರದರ್ಶನ ಏರ್ಪಾಟಾಯಿತು. ಆವತ್ತು ವೀರಾಸ್ವಾಮಿಯವರು ನನ್ನ ತಂದೆ ಹಾಗೂ ನನ್ನನ್ನು ಕೂಡ ಆಮಂತ್ರಿಸಿದ್ದರು. ಚಿತ್ರದ ರೀರೆಕಾರ್ಡಿಂಗ್‌ ಇನ್ನೂ ಆಗಿರಲಿಲ್ಲ. ಆದರೂ ಮದ್ರಾಸಿನ ನಿರ್ಮಾಪಕರು, ನಿರ್ದೇಶಕರು ಅದಾಗಲೇ ಆ ಚಿತ್ರವನ್ನು ನೋಡಲು ಕುತೂಹಲದಿಂದ ಬಂದಿದ್ದರು. ಎಲ್ಲರೂ ಸಿನಿಮಾ ನೋಡಿ ‘ಅದ್ಭುತ’ ಎಂದವರೇ. ನನ್ನ ತಂದೆಗೆ ಪುಟ್ಟಣ್ಣನವರ ನಿರ್ದೇಶನ, ಕುಮಾರ್‌ ಅಭಿನಯ ಎರಡೂ ಹಿಡಿಸಿತ್ತು.
 

ಅಲ್ಲಿ ಎಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದ್ದ ನಾನು ಆಮೇಲೆ ಬೆಂಗಳೂರಿಗೆ ಹೋದಾಗ, ವಿಷ್ಣುಗೆ ಎಲ್ಲವನ್ನೂ ಬಣ್ಣಿಸಿದೆ. ಅವನಿಗೆ ತುಂಬಾ ಭಯವಿತ್ತು. ಚಿತ್ರ ಬಿಡುಗಡೆಯಾದಾಗಲಂತೂ ಮುಂದೆ ಏನಾಗುವುದೋ ಎಂಬ ಆತಂಕ ಅವನನ್ನು ಕಾಡುತ್ತಿತ್ತು. ರೀರೆಕಾರ್ಡಿಂಗ್‌ ಮುಗಿದು, ಸಿನಿಮಾ ಬಿಡುಗಡೆಯಾಯಿತು.
 

ನಾನು, ಗಂಗಪ್ಪ, ವಿಷ್ಣು ಎಲ್ಲರೂ ರಾಜ್ಯದ ವಿವಿಧ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟೆವು. ವೀರಾಸ್ವಾಮಿಯವರು ನಮಗೆ ಆ ಕೆಲಸವನ್ನು ವಹಿಸಿದ್ದರು. ಎಲ್ಲಿ ಹೋದರೂ ಜನರಿಂದ ಅದ್ಭುತವಾದ ಪ್ರತಿಕ್ರಿಯೆ. ‘ಹಾವಿನ ದ್ವೇಷ’ ಹಾಡಿನ ಸಾಲಿನಲ್ಲಿ ‘ಈ ರಾಮಾಚಾರೀನ್ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ’ ಎನ್ನುವ ಸಾಲು ಬಂದಾಕ್ಷಣ ಕೆಲವು ಚಿತ್ರಮಂದಿರಗಳಲ್ಲಿ ಗಲಾಟೆ ಆಗುತ್ತಿತ್ತು. ಆ ಸಾಲನ್ನು ಕೆಲವು ಪ್ರೇಕ್ಷಕರು ತಪ್ಪಾಗಿ ಅರ್ಥೈಸಿಕೊಂಡು, ಗಲಾಟೆ ಮಾಡಿದ್ದುಂಟು. ಆದರೆ ಒಟ್ಟಾರೆ ಸಿನಿಮಾ ನೋಡಿದ ಮೇಲೆ ಅವರೆಲ್ಲಾ ಖುಷಿಯಿಂದ ಮನೆಗೆ ಹೋಗುತ್ತಿದ್ದರು. ಕನ್ನಡ ಜನತೆಗೆ ಸಿನಿಮಾ ಹಿಡಿಸಿತು. ಚಿತ್ರರಂಗದಲ್ಲಿ ‘ವಿಷ್ಣುವರ್ಧನ್‌ ಯುಗ’ ಶುರುವಾದದ್ದು ಹಾಗೆ. 

ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅಂಬರೀಷ್‌ ಕೂಡ ಜನಮಾನಸದಲ್ಲಿ ಉಳಿದ. ‘ನಾಗರಹಾವು’ ಚಿತ್ರದ ಅವನ ಜಲೀಲ್‌ ಪಾತ್ರ ಹಾಗೂ ‘ಬುಲ್‌ಬುಲ್‌’ ಸಂಭಾಷಣೆಯನ್ನು ಜನ ಈಗಲೂ ಮರೆತಿಲ್ಲ. 
ಕನ್ನಡ ಚಿತ್ರರಂಗದ ಅಭಿನಯ ಕ್ಷೇತ್ರಕ್ಕೆ ರಾಜ್‌ಕುಮಾರ್‌, ಕಲ್ಯಾಣ್‌ಕುಮಾರ್‌, ಉದಯ್‌ಕುಮಾರ್‌ ಭದ್ರವಾದ ಅಡಿಪಾಯ ಹಾಕಿದವರು. ಇವರ ಮಧ್ಯೆ ಅನೇಕ ನಟರು ಬಂದರು. ಶ್ರೀನಾಥ್‌ ಕೂಡ ಒಳ್ಳೆಯ ಸಾಧನೆ ಮಾಡಿದರು. ಆದರೆ ವಿಷ್ಣು ಅವರೆಲ್ಲರನ್ನೂ ಮೀರಿದ ಭರವಸೆಯನ್ನು ಬಹುಬೇಗ ಮೂಡಿಸಿದ. ‘ರಾಮಾಚಾರೀನ್ ಕೆಣಕೋ ಗಂಡು’ ಎಂಬ ಸಾಲಿನಿಂದ ಕೂಡ ವಿಷ್ಣು ಚಿತ್ರರಂಗದಲ್ಲಿ ಮುಂದೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅವನ ಮೇಲೆ ಆಪಾದನೆಗಳ ಸುರಿಮಳೆಯಾಯಿತು. ಅವನು ಜನರೊಂದಿಗೆ ಬೆರೆಯುವುದಿಲ್ಲ, ಅವನಿಗೆ ಬಹಳ ಜಂಭ ಇತ್ಯಾದಿ ಕಪ್ಪು ಚುಕ್ಕೆಗಳನ್ನು ಮೂಡಿಸುವ ಪ್ರಯತ್ನಗಳು ನಡೆದವು.
 

ಇಂಥ ಪರಿಸ್ಥಿತಿಯಲ್ಲಿ ‘ಗಂಧದ ಗುಡಿ’ ಚಿತ್ರದಲ್ಲಿ ರಾಜ್‌ಕುಮಾರ್‌ ಜೊತೆ ಅವನು ನೆಗೆಟಿವ್‌ ಪಾತ್ರದಲ್ಲಿ ಅಭಿನಯಿಸಿದ. ಅದರಿಂದ ಅವನು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಕ್ಲೈಮ್ಯಾಕ್ಸ್‌ ಚಿತ್ರೀಕರಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಜವಾದ ಗುಂಡುಗಳನ್ನು ತುಂಬಿದ ಡಬಲ್‌ ಬ್ಯಾರಲ್‌ ಗನ್‌ ವಿಷ್ಣುವರ್ಧನ್‌ ಕೈಲಿತ್ತು. ಅದೃಷ್ಟವಶಾತ್‌ ಅದನ್ನು ಅವನು ಫೈರ್‌ ಮಾಡಲಿಲ್ಲ. 


ಇನ್ನು ಸಿನೆಮಾ ಕ್ಲೈಮ್ಯಾಕ್ಸ್ ನಲ್ಲಿ ವಿಷ್ಣುವಿನ ಕೈಗೆ ತಾಕಿದ ಗುಂಡು ನಿಜವಾದದ್ದು ಎಂಬ ಮಾತಿದೆ. ರಾಜ್ ಕುಮಾರ‍್ ವಿಷ್ಣುಗೆ ನಿಜವಾದ ಗನ್ ನಿಂದ ಫೈರ‍್ ಮಾಡಿದರು ಅಂತ ಸುದ್ದಿ ಇದೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಯಾಕೆಂದರೆ, ವಿಷ್ಣು ಮತ್ತು ರಾಜ್ ಕುಮಾರ‍್ ಬಗ್ಗೆ ಜನರು ಇಲ್ಲಸಲ್ಲದ ಗುಲ್ಲೆಬ್ಬಿಸಿದರು.
 

ಕೆಲವರು ಕಥೆಗಳನ್ನು ಕಟ್ಟಿ, ವಿಷ್ಣುವನ್ನು ನಿಜವಾದ ವಿಲನ್‌ ಎಂಬಂತೆ ದೂಷಿಸಿದರು. ರಾಜ್‌ಕುಮಾರ್‌, ವಿಷ್ಣು ಸಂಬಂಧ ಒಂದು ರೀತಿಯಲ್ಲಿ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಎಂಬಂತೆ ಆಯಿತು. ನಮ್ಮ ಚಿತ್ರರಂಗದವರು ಮೊದಲಿನಿಂದಲೂ ತಮಾಷೆ ನೋಡುವುದರಲ್ಲಿ ನಿಸ್ಸೀಮರು. ‘ಮಗುವನ್ನು ಚಿವುಟುವುದು, ಆಮೇಲೆ ತೊಟ್ಟಿಲನ್ನು ತೂಗುವುದು’ ಅನೇಕರಿಗೆ ಅಭ್ಯಾಸ. ಆ ಗುಲ್ಲೆದ್ದ ಸಂದರ್ಭದಲ್ಲಿ ಯಾರಾದರೂ ಒಬ್ಬರು ಜವಾಬ್ದಾರಿಯಿಂದ ಒಂದೇ ಒಂದು ಪತ್ರಿಕಾ ಹೇಳಿಕೆ ನೀಡಿದ್ದರೂ ಅದು ಸುಳ್ಳು, ಕಟ್ಟುಕತೆ ಎನ್ನುವುದು ಸ್ಪಷ್ಟವಾಗುತ್ತಿತ್ತು.
 

ಆದರೆ ಯಾರೂ ಆ ಧೈರ್ಯ ಮಾಡಲಿಲ್ಲ. ವಿಷ್ಣು ಆಗಿನ್ನೂ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಅಂಥ ಸಂದರ್ಭದಲ್ಲಿ ನೆಗೆಟಿವ್‌ ಪಾತ್ರ ನಿರ್ವಹಿಸುವ ಅವನ ನಿರ್ಣಯವೇ ತಪ್ಪಾಗಿತ್ತು. ವೀರಾಸ್ವಾಮಿ ಹಾಗೂ ಚಿ.ಉದಯಶಂಕರ್‌ ಸೃಷ್ಟಿಸಿದ ಆ ಪಾತ್ರವನ್ನು ವಿಷ್ಣು ಒಪ್ಪಿಕೊಂಡಿದ್ದೂ ಋಣಸಂದಾಯದ ದೃಷ್ಟಿಯಿಂದಲೇ. ವೀರಾಸ್ವಾಮಿಯವರ ಮಾತಿಗೆ ಕಟ್ಟುಬಿದ್ದು ಅವನು ಆ ಪಾತ್ರವನ್ನು ಒಪ್ಪಿಕೊಂಡಿದ್ದು. ಆ ಪಾತ್ರ ಮಾಡಿದ ಮೇಲೆ ಜೀವನಪರ್ಯಂತ ಒಂದು ವರ್ಗದ ಜನರ ದ್ವೇಷ ಕಟ್ಟಿಕೊಳ್ಳುವಂತೆ ಆಗಿದ್ದು ಮಾತ್ರ ದುರಂತ. ‘ಈ ರಾಮಾಚಾರೀನ್‌ ಕೆಣಕೋ ಗಂಡು’ ಎಂಬ ಸಾಲು ಜೀವನವಿಡೀ ಅವನನ್ನು ಕಾಡುತ್ತಲೇ ಇತ್ತು.
***
ಕಾಲಕ್ರಮೇಣ ನಾನು ಚಿತ್ರರಂಗದ ಪಟ್ಟುಗಳನ್ನು ಕಲಿಯುವುದರಲ್ಲೇ ನಿರತನಾದೆ. ಕಾಲೇಜಿಗೆ ತಿಲಾಂಜಲಿ ಇಟ್ಟೆ. ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಎ. ಮಾಡೋಣ ಎಂದುಕೊಂಡರೆ ಅದೂ ಆಗಲಿಲ್ಲ. ವಿಷ್ಣು, ಅಂಬಿ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದರು. ಅವರ ಶೂಟಿಂಗ್‌ ನೋಡುವುದೇ ನನ್ನ ಕಾಯಕ. ಅಂಬಿ, ನಾನು ನನ್ನ ಮೋಟಾರ್‌ ಬೈಕ್‌ನಲ್ಲೇ ಹೆಚ್ಚಾಗಿ ಸುತ್ತುತ್ತಿದ್ದೆವು.
 

ನನ್ನ ತಂದೆ ‘ಶೃಂಗೇರಿ ಮಹಾತ್ಮೆ’ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಾ ಇದ್ದರು. ಆ ಚಿತ್ರದ ಶಂಕರಾಚಾರ್ಯರ ಪಾತ್ರವನ್ನು ಮಾಡಬೇಕೆನ್ನುವುದು ವಿಷ್ಣು ಬಯಕೆ. ಹೇಗಾದರೂ ಮಾಡಿ ನನ್ನ ತಂದೆಯನ್ನು ಒಪ್ಪಿಸುವಂತೆ ದುಂಬಾಲುಬಿದ್ದ. ನನ್ನ ತಂದೆಯನ್ನು ಚಿತ್ರರಂಗದಲ್ಲಿ ಎಲ್ಲರೂ ‘ದಾದಾ’ ಎಂದು ಕರೆಯುತ್ತಿದ್ದರು. ಅವನೂ ಹಾಗೆಯೇ ಕರೆಯುತ್ತಿದ್ದ. ಶಂಕರಾಚಾರ್ಯರ ಪಾತ್ರವನ್ನು ಯಾವುದೇ ಸಂಭಾವನೆ ಇಲ್ಲದೆ ನಿರ್ವಹಿಸಲು ಅವನು ಸಿದ್ಧನಿದ್ದ. ನನ್ನ ತಂದೆ ಸ್ಟಾರ್‌ ವ್ಯವಸ್ಥೆಯ ವಿರೋಧಿ. ಸಮಯ ಸಂದರ್ಭ ನೋಡಿ ನಾನು ವಿನಂತಿಸಿಕೊಂಡರೂ ಅದು ಫಲ ನೀಡಲಿಲ್ಲ. ಅವರು ಹೊಸಬರನ್ನು ಹಾಕಿಕೊಂಡು ‘ಶೃಂಗೇರಿ ಮಹಾತ್ಮೆ’ ಸಿನಿಮಾ ಮುಗಿಸಿದರು.

 ಲೇಖಕರು
ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಉಲ್ಲೇಖ: ಮುಖಪುಟದ ಮಾಹಿತಿ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು