ನಿಮಗೆ ಶಿವನೇ ಶಂಭುಲಿಂಗಾ..! ಅನ್ನೋ ಡೈಲಾಗ್
ಗೊತ್ತಾ? ಅಂತ ಯಾರಾದ್ರೂ ಕನ್ನಡಿಗರಿಗೆ ಕೇಳಿ. ಅವರು
ಹೇಳುವುದು ಒಂದೇ.. ಯಾರಿಗ್ರೀ ಗೊತ್ತಿಲ್ಲ? ನಮ್ ಧೀರೇಂದ್ರ
ಗೋಪಾಲ್ ಅವರದ್ದು ಕಣ್ರೀ.. ಅಂತ..
ಹೌದು.. ಕನ್ನಡ ಚಿತ್ರರಂಗದಲ್ಲಿ ಹೊಸ
ಅಲೆಯನ್ನು ಸೃಷ್ಟಿಸಿದ ಶಿವನೇ ಶಂಭುಲಿಂಗ ಅನ್ನೋ ಡೈಲಾಗ್ ಒಂದೇ ಸಾಕು ಮಹೋನ್ನತ ಮಾತಿನ ಮಾಣಿಕ್ಯ,
ಹಾಸ್ಯ ಸಾರ್ವಭೌಮ ಧೀರೇಂದ್ರ ಗೋಪಾಲ್ ಅವರ ಪರಿಚಯ
ಹೇಳೋದಕ್ಕೆ. ಎಂತಹ ಖಳನಾಯಕನ ಪಾತ್ರವನ್ನು ಕೊಟ್ಟರೂ ಅದರೊಳಗೆ ಹಾಸ್ಯದ ಜೇನು ಬೆರೆಸಿ ಆ
ಪಾತ್ರಕ್ಕೆ ಮತ್ತಷ್ಟು ಮೆರುಗು ತಂದುಕೊಡಬಲ್ಲ ಶಕ್ತಿ ಹೊಂದಿದ ಹಾಸ್ಯ ದೊರೆ ಅವರು.
ಧೀರೇಂದ್ರ ಗೋಪಾಲ್ ಹೆಚ್ಚು
ಕಾಣಿಸಿಕೊಂಡಿದ್ದು ಖಳನಾಯಕನ ಪಾತ್ರಗಳು. ಆದರೆ ಅವರ ಪಾತ್ರಗಳಲ್ಲಿ ಅದ್ಭುತ ಸಂಭಾಷಣಾ ಚತುರತೆ
ಇತ್ತು. ಹೀಗಾಗಿಯೇ ಅಂದಿನ ಕಾಲದಲ್ಲಿ ಧೀರೇಂದ್ರ ಗೋಪಾಲ್ ಅವರ ಕಾಲ್ಶೀಟ್ಗಾಗಿ ಕಾದು
ಕುಳಿತಿರುತ್ತಿದ್ದರು ಸಿನೆಮಾ ನಿರ್ಮಾಪಕರು.

ಆರಂಭದಿಂದಲೂ ರಂಗಭೂಮಿಯತ್ತ ತಮ್ಮ
ಚಿತ್ತವನ್ನು ಕೇಂದ್ರೀಕರಿಸಿಕೊಂಡು ಬೆಳೆದ ಧೀರೇಂದ್ರ ಗೋಪಾಲ್ ಅವರ ಬದುಕಿಗೆ ತಿರುವು
ಸಿಕ್ಕಿದ್ದು ಶಾಲೆಯಲ್ಲಿ. ಒಮ್ಮೆ ಅವರ ಶಾಲೆಯಲ್ಲಿ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಅಲ್ಲಿಗೆ
ಗುಬ್ಬಿ ವೀರಣ್ಣನವರೂ ಆಗಮಿಸಿದ್ದರು. ಆಗ ಧೀರೇಂದ್ರ ಗೋಪಾಲ್ ಅವರ ಏಕಪಾತ್ರಾಭಿನಯವನ್ನು ಕಂಡು
ಮೆಚ್ಚಿಕೊಂಡರು. ಧೀರೇಂದ್ರ ಗೋಪಾಲರಲ್ಲಿ ಅದ್ಭುತ ಕಲಾವಿದನನ್ನು ಕಂಡರು ಗುಬ್ಬಿ ವೀರಣ್ಣನವರು.
ನಂತರ ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು
ಆಹ್ವಾನ ನೀಡಿದರು.
ಆರಂಭದಲ್ಲಿ 'ವಾಲಿ' ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ
ಧೀರೇಂದ್ರ ಗೋಪಾಲರು, ದೇವೇಂದ್ರ, ದುರ್ಯೋಧನನ ಪಾತ್ರದಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದರು. 'ಸರ್ವಮಂಗಳ ನಾಟಕ ಸಭಾ'ದ ಟಿಪ್ಪು ಸುಲ್ತಾನ್, 'ಮುದುಕನ ಮದುವೆ' ಧೀರೇಂದ್ರ ಗೋಪಾಲರ ಪ್ರಸಿದ್ಧ ನಾಟಕಗಳು.
ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರು
ಚಿಕ್ಕದೊಂದು ಪಾತ್ರವೊಂದನ್ನು ಮಾಡುವಂತೆ ಧೀರೇಂದ್ರ ಗೋಪಾಲರಿಗೆ ಆಹ್ವಾನಿಸಿದರು. ಪಾತ್ರ
ಚಿಕ್ಕದಾದರೂ ಅದಕ್ಕೆ ಜೀವ ತುಂಬುವ ಕುಶಲತೆ ಅವರಿಗಿತ್ತು. ಹೀಗಾಗಿಯೇ ಚಿಕ್ಕ ಪಾತ್ರದ ಅದ್ಭುತ
ನಟನೆಯಿಂದಾಗಿ ಮುಂದೆ ಪುಟ್ಟಣ್ಣ ಕಣಗಾಲರ ‘ನಾಗರಹಾವು’
ಚಿತ್ರದಲ್ಲಿ ಕಾಣಿಸಿಕೊಂಡರು.
‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರವನ್ನಂತೂ ಯಾರೂ ಮರೆಯಲು ಸಾಧ್ಯವೇ ಇಲ್ಲ.
ಈ ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದುಬಿಟ್ಟಿತು.
ಕಷ್ಟವನ್ನು ಕಣ್ಣೆದುರು ಕಂಡರೆ ಅದಕ್ಕೆ
ಸ್ಪಂದಿಸುತ್ತಿದ್ದ ಕರುಣಾಮಯಿಯಾಗಿದ್ದರು ಧೀರೇಂದ್ರ ಗೋಪಾಲ್. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ
ನೋಡಿ.

ಲಾಭಕ್ಕಾಗಿ ಧೀರೇಂದ್ರ ಗೋಪಾಲರ ಹಿಂದೆ ಬಿದ್ದ
ಸಿನೆಮಾ ಮಂದಿ ನಂತರದ ದಿನಗಳಲ್ಲಿ ಇವರತ್ತ ತಲೆ ಕೂಡ ಹಾಕಿ ನೋಡಲಿಲ್ಲ ಎಂಬುದು ಅವರ ಪತ್ನಿಯ
ದುಗುಡ. ಧೀರೇಂದ್ರ ಗೋಪಾಲ್ ಸಾವಿಗೀಡಾದಾಗ ನೋಡಲು ಬಂದವರು ಕೇವಲ ದೊಡ್ಡಣ್ಣ ಮತ್ತಿಬ್ಬರು ಮಂದಿ
ಮಾತ್ರ.
ಕೊನೆಯ ದಿನಗಳಲ್ಲಿ ಧೀರೇಂದ್ರ ಗೋಪಾಲರಿಗೆ
ಕಾಡಿದ್ದು ಸಾಲದ ಶೂಲಗಳು. ಬಂದಿದ್ದನ್ನೆಲ್ಲಾ ದಾನ ಮಾಡುತ್ತಿದ್ದ ಧೀರೇಂದ್ರ ಗೋಪಾಲರಿಗೆ ನಂತರದ
ದಿನಗಳಲ್ಲಿ ಯಾರೂ ಕೂಡ ಸೂಕ್ತವಾಗಿ ಸಹಾಯ ಮಾಡಲಿಲ್ಲ. ಇವರ ಅಭೂತ ಪೂರ್ವ ಅಭಿನಯಕ್ಕಾಗಿ, ಸಿನೆಮಾ ಸಾಧನೆಗಾಗಿ 1998 ರಲ್ಲಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು.
ಆದ್ರೆ ರಾಜ್ಯ ಪ್ರಶಸ್ತಿ ದೊರೆತವರಿಗೆ ಸರ್ಕಾರದ ವತಿಯಿಂದ ಸೈಟ್ ಸಿಗುತ್ತದೆ. ಧೀರೇಂದ್ರ ಗೋಪಾಲರ
ವಿಷಯದಲ್ಲಿ ಸರ್ಕಾರ ಕೂಡ ದಿವ್ಯ ನಿರ್ಲಕ್ಷ ತೋರಿತ್ತು. ಯಾಕಂದ್ರೆ ಸರ್ಕಾರದ ಸೈಟ್ ಧೀರೇಂದ್ರ
ಗೋಪಾಲ್ ಅವರಿಗೆ ಸಿಗಲಿಲ್ಲ. ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಕೂಡ
ಲಭಿಸಿತು. ಆದ್ರೆ ಅದರಿಂದ ಧೀರೆಂದ್ರ ಗೋಪಾಲ್ ಅವರ ಬದುಕಿಗೆ ಯಾವುದೇ ರೀತಿಯ ಆಧಾರ ಕೂಡ
ಸಿಗಲಿಲ್ಲ.

ಧೀರೇಂದ್ರ ಗೋಪಾಲ್ ಅವರ ಬದುಕಿನ ಕೊನೆಯ
ದಿನಗಳು ನರಕಕ್ಕೆ ಸಮನಾಗಿದ್ದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ. ಬದುಕಿನ ನೋವುಗಳನ್ನು
ಮರೆಯುವ ಸಲುವಾಗಿ ಧೀರೇಂದ್ರ ಗೋಪಾಲ್ ಅವರು ಕುಡಿತದ ಮೊರೆ ಹೋದರು.. ಸದಾ ಕಾಲ ಎಲ್ಲರನ್ನೂ
ನಗಿಸುತ್ತಿದ್ದ ಹಾಸ್ಯ ಸಾರ್ವಭೌಮ ಕೊನೆಯ ದಿನಗಳಲ್ಲಿ ಬದುಕಿನ ನೋವುಗಳನ್ನು ತಾಳಲಾರದೇ ಕಣ್ಣೀರು
ಹಾಕಿಬಿಟ್ಟರು.
ಓ ಬದುಕೇ... ನೀನೆಷ್ಟು ಕ್ರೂರಿ..?
ನಗಿಸಿ ಅಳಿಸುವೆ ಏಕೆ ಯಾಮಾರಿ??