ಸಿನೆಮಾ

Share This Article To your Friends

ರುದ್ರನ ತಾಂಡವಕ್ಕೆ ಹುಚ್ಚೆದ್ದು ಕುಣಿದ ಗಂಗೆ..!!ಮೊನ್ನೆ ಬೆಳ್ಳಂ ಬೆಳಿಗ್ಗೆ ದಿನಸಿ ಅಂಗಡಿಗೆ ಹೋಗಿದ್ದೆ.. ಅಲ್ಲಿಗೆ ಒಂದು ಹೆಣ್ಣು ಮಗಳು ಬಂದಳು.. ಪಕ್ಕದಲ್ಲಿ ನಾನು ನಿಂತಿದ್ದರೂ ಕಂಡೂ ಕಾಣದಂತೆ ನುಗ್ಗಿ ಮುಂದೆ ಒಂದು “ತುಪ್ಪ ಇದ್ರೆ ಕೊಡಿ ಒಂದ್ ಕೆಜಿ” ಅಂತ ಏರು ದನಿಯಲ್ಲಿ ಕೇಳಿದಳು. ಅಂಗಡಿಯಾತ “ಇಲ್ಲಮ್ಮ ತುಪ್ಪ ಸಿಗಲ್ಲ” ಅಂತ ಹೇಳಿಬಿಟ್ಟ. ಅರೆ ಅವನು ಸುಳ್ಳು ಹೇಳುತ್ತಿದ್ದಾನೆ.. ತುಪ್ಪದ ಸಾಲು ಸಾಲು ಡಬ್ಬಿಗಳು ಅವನ ಹಿಂದೆಯೇ ಇವೆ. ಅವಳಿಗೂ ಆ ತುಪ್ಪದ ಡಬ್ಬಿ ಕಣ್ಣಿಗೆ ಬಿತ್ತು. “ಏನ್ರಿ, ತುಪ್ಪದ ಡಬ್ಬಿಗಳು ಹಿಂದೆ ಇದಾವೆ.. ಖಾಲಿ ಅಂತಿದೀರಲ್ಲಾ?” ಅಂತ ದಬಾಯಿಸಿದಳು. “ಇಲ್ಲಮ್ಮ ಅದು ಕೆಟ್ಟೋಗಿದೆ.. ಬೇಕು ಅಂದ್ರೆ ಹೇಳು ಕೊಡ್ತೀನಿ.. ಸುಮ್ನೆ ತಲೆ ತಿನ್ಬೇಡ” ಅಂತ ತಿರಸ್ಕೃತ ದನಿಯಲ್ಲೇ ಉತ್ತರಿಸಿದ ಅಂಗಡಿಯಾತ.

ಅವಳು ಮರು ಮಾತಾಡದೇ ಅಲ್ಲಿಂದ ಹೊರಟು ಹೋದಳು. ನಾನು ಕುತೂಹಲದಿಂದ “ಏನ್ ಸ್ವಾಮಿ... ನಿಜ್ವಾಗ್ಲೂ ಆ ತುಪ್ಪದ ಡಬ್ಬಿಯಲ್ಲಿರೋ ತುಪ್ಪ ಕೆಟ್ಟೋಗಿದ್ಯಾ?” ಅಂತ ಕೇಳಿದೆ.. ಅದಕ್ಕೆ “ಇಲ್ಲ ಸ್ವಾಮಿ ಕೆಟ್ಟಿಲ್ಲ. ಚೆನ್ನಾಗೇ ಇದೆ” ಅಂತ ಶಾಂಕಿಂಗ್ ನ್ಯೂಸ್ ಕೊಟ್ಟು ಬಿಟ್ಟ. ಅರೆ ಮತ್ಯಾಕೆ ಆ ಹೆಣ್ಣುಮಗಳಿಗೆ ಕೊಡಲಿಲ್ಲ ಎಂದು ಅಚ್ಚರಿಗೊಂಡು ಕೇಳಿದೆ..!!
“ಸ್ವಾಮಿ ನನ್ನ ಅಂಗಡೀಲಿ ಇರೋದು ಇಷ್ಟೇ ತುಪ್ಪ. ಈ ಜನರಿಗೆ ಕೊಟ್ಟರೆ ಅಮ್ಮಮ್ಮಾ ಅಂದ್ರೆ 100 ರೂಪಾಯಿ ಸಿಗುತ್ತೆ. ಆದ್ರೆ, ಉತ್ತರಖಂಡ್ ಸರ್ಕಾರ ಜಲಪ್ರಳಯದಲ್ಲಿ ಸತ್ತವರ ಸಂಸ್ಕಾರಕ್ಕಾಗಿ ದೇಶಿ ತುಪ್ಪವನ್ನು ಕೇಳ್ತಿದಾರೆ. ಅಲ್ಲಿಗೆ ಕಳಿಸ್ತಿದೀನಿ. ಅವರಿಗೆ ಕಳಿಸಿದ್ರೆ ಒಂದು ಬಾಟಲಿಗೆ 120 ರೂಪಾಯಿ ಸಿಗುತ್ತೆ ಸ್ವಾಮಿ.. ಇಪ್ಪತ್ತು ರೂಪಾಯಿ ಲಾಭ ಸಿಗುತ್ತೆ” ಅಂತ ತನ್ನ ವ್ಯಾಪಾರಿ ಬುದ್ದಿವಂತಿಕೆಯನ್ನು ಬಿಚ್ಚಿಟ್ಟ. 

ಹೌದು.. ಗಂಗೆಯ ರೌದ್ರನರ್ತನಕ್ಕೆ ಇಡೀ ಉತ್ತರ ಖಂಡವೇ ಸ್ಮಶಾನದಂತಾಗಿದೆ. ಶಾಂತಚಿತ್ತ ಶಿವನನ್ನು ನೋಡಲು ಹೋದವರಿಗೆ ಕಂಡಿದ್ದು ಮಾತ್ರ ರೌದ್ರ ನರ್ತನದ ಕರಾಳ ದೃಶ್ಯಗಳು.. ಎದೆ ಝಲ್ ಎನಿಸುವಂಥ ರುದ್ರ ರಮಣೀಯ ಸಾವಿನ ಅಲೆಗಳು.. ಆ ಅಲೆಗಳ ಹೊಡೆತವನ್ನು ತಾಳಲಾಗದೇ ಅದೆಷ್ಟೋ ಹಿರಿಯ ಜೀವಗಳು ಒಂದೇ ಏಟಿಗೆ ನೆಲಕ್ಕಚ್ಚಿಬಿಟ್ಟಿದ್ದವು.. ನೋಡ ನೋಡುತ್ತಿದ್ದಂತೆಯೇ ಬೆಟ್ಟ ಗುಡ್ಡಗಳು ಮಂಜಿನಂತೆ ಕರಗಿ ನೀರಿನಲ್ಲಿ ಲೀನವಾಗುತ್ತಿದ್ದವು... ಕಲ್ಲು ಸಕ್ಕರೆ ಕರಗಿದಂತೆ... 
“ಶಿವ ಶಿವ.. ನಮ್ಮನ್ನು ಕಾಪಾಡೋ.” ಅಂತ ಹಿರಿಯ ಜೀವಗಳು ಅಂಗಲಾಚಿದರೂ ಶಿಲೆಯಾದ ಶಿವನಿಗೆ ಅವರ ನೋವಿನ ಕೂಗು ಕೇಳದಂತೆ ಗಂಗೆ ಶಿವನ ಕಿವಿ ಹೊಕ್ಕಿದ್ದಳು.. ಶಿವನು ವಾಸಿಸುವುದು ಸ್ಮಶಾನದಲ್ಲಿ ಎಂಬ ಮಾತಿದೆ.. ಕೆದಾರನಾಥವನ್ನು ನೋಡಿದರೆ ಅದು ಶಿವನು ವಾಸಿಸಲು ಯೋಗ್ಯವಾದ ಜಾಗ ಎಂಬಂತೆ ಬಿಂಬಿತವಾಗುತ್ತಿದೆ. ಕೇದಾರನಾಥ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ.. ತ್ರಿಶೂಲ ಹಿಡಿದ ಶಿವನು ಈಗ ಸ್ಮಶಾನದ ಹೆಣಗಳನ್ನು ಕಾಯುತ್ತಿದ್ದಾನೆ.. ಕರುಣೆಯೇ ಇಲ್ಲದೇ...!


ಬರೀ ಪಾಪವನ್ನು ಹೊತ್ತೊಯ್ಯಬೇಕಿದ್ದ ಗಂಗೆ ಪಾಪದ ಜೊತೆಗೆ ಮನುಷ್ಯರನ್ನೂ ಹೊತ್ತೊಯ್ದುಬಿಟ್ಟಿದ್ದಾಳೆ.. ಆವತ್ತು ದೇವಾಲಯಕ್ಕೆ  ಬಂದ ಸಾವಿರಾರು ಜನ ಭಕ್ತರು ಕಣ್ಮುಚ್ಚಿ ಧ್ಯಾನಿಸುತ್ತಿದ್ದರು.. ಆದರೆ ಮತ್ತೆ ಕಣ್ಣು ಬಿಡಲೇ ಇಲ್ಲ..! ಧ್ಯಾನದಲ್ಲೆ ಮುಕ್ತಿಧಾಮಕ್ಕೆ ತಲುಪಿಬಿಟ್ಟಿದ್ದರು.. ಅದರಲ್ಲಿ ಕೆಲವರು ಕಣ್ಣು ಬಿಡುವಷ್ಟರಲ್ಲಿ ಗಂಗೆ ಅವರನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದ್ದಳು.. ಹೀಗೆ ಗಂಗೆಯು ಕುತ್ತಿಗೆ ಮಟ್ಟದಲ್ಲಿ ಅಬ್ಬರದಿಂದ ಹರಿಯುತ್ತಿದ್ದರೂ ತೇಹ್ರಿಯ ವಿಜೇಂದರ್‌ ಸಿಂಗ್‌ ನೇಗಿಗೆ ಬದುಕುವ ಆಸೆ ಮನೆ ಮಾಡಿತ್ತು..  ಸಾವು ಹೆಣದ ರಾಶಿಯ ರೂಪದಲ್ಲಿ ಅಲೆಯಲ್ಲಿ ತೇಲಿ ಬರುತ್ತಿದ್ದುದನ್ನು ನೋಡಿದ ನೇಗಿಗೆ ದೇವಸ್ಥಾನದ ಗಂಟೆಯೊಂದೇ ಬದುಕಿನ ಆಸೆಯನ್ನು ಪೋಷಿಸುವಂತಿತ್ತು.. ಒಂದು ಕ್ಷಣ ಢಂ ಎಂದು ಗಂಟೆ ಹೊಡೆದು ಸುಮ್ಮನಾಗುತ್ತಿದ್ದ ನೇಗಿ ಆವತ್ತು ಬರೋಬ್ಬರಿ  9 ಆ ದೇವಸ್ಥಾನದ ಗಂಟೆಯನ್ನು ಬಿಗಿಯಾಗಿ ಹಿಡಿದು ನಿಂತಿದ್ದ... ಆ ಒಂಭತ್ತು ತಾಸಿನಲ್ಲಿ ಅವನು ಕಂಡ ದೃಶ್ಯ ಮಾತ್ರ ನಿಜಕ್ಕೂ ಕರುಳು ಹಿಂಡುವಂಥದ್ದು. ಮೇಘ ಸ್ಪೋಟದ ಬರ್ಬರತೆಗೆ ನಲುಗಿದ ರಾಶಿ ರಾಶಿ ಜನಗಳು ಹೆಣದ ರೂಪದಲ್ಲಿ ತೇಲಿ ಬರುತ್ತಿದ್ದವು.. ತಾನೂ ಹೀಗೇ ಕೊಚ್ಚಿ ಹೋಗಬಹುದೇನೋ ಎಂದು ಕಲ್ಪಿಸಿಕೊಂಡು ಅರೆ ಕ್ಷಣ ದಂಗಾಗಿ ಹೋದ, ಬದುಕುವ ಆಸೆ ಆತನಲ್ಲಿ ಕ್ಷೀಣಿಸತೊಡಗಿತ್ತು.. ಆದರೆ ಗಂಟೆಯನ್ನು ಹಿಡಿದ ಕೈಗಳನ್ನು ಮಾತ್ರ ಸಡಿಲಿಸಲಿಲ್ಲ.. ಬದಲಾಗಿ ಇನ್ನಷ್ಟು ಬಿಗಿ ಮಾಡಿಕೊಂಡ.. ಕೊನೆಗೆ ಸುತ್ತಲೂ ತೇಲಿ ಬರುತ್ತಿದ್ದ ಹೆಣಗಳನ್ನೇ ಆಧಾರ ಮಾಡಿಕೊಂಡು ಅವುಗಳ ಮೇಲೆಯೇ ನಿಂತು ಬಿಟ್ಟ. ಹೆಣಗಳ ಉಡಪು ಕಳಚಿ ತಾನು ಹಾಕಿಕೊಂಡ.. ಬದುಕುವ ಚಿಕ್ಕ ಆಸೆ ಅವನಲ್ಲಿ ಬಲವಾಗಿ ಮೂಡಿತ್ತು.. ಸಾವಿನ ಜೊತೆ ಸತತವಾಗಿ ಸೆಣೆಸಾಡುತ್ತಿರುವಾಗಲೇ ಸೇನೆಯ ಹೆಲಿಕಾಪ್ಟರ್ ಅವನನ್ನ ಸಾವಿನಿಂದ ಪಾರು ಮಾಡಿತು.
 
ಇತ್ತಕಡೆ, ಅಲೆಯ ಆರ್ಭಟದಲ್ಲಿ ಜೀವ ಉಳಿಸಿಕೊಂಡು ಬಂದ ವೃದ್ಧನೊಬ್ಬ ಸ್ಥಳೀಯರ ಆಶ್ರಯ ಬೇಡತೊಡಗಿದ.. ಆದರೆ, ಯಾರೂ ಆತನ ಬಗ್ಗೆ ಕಿಂಚಿತ್ತೂ ಕನಿಕರ ತೋರಲೇ ಇಲ್ಲ.. “ಅಮ್ಮಾ ಹೊಟ್ಟೆ ಹಸಿವು.. ತುತ್ತು ಅನ್ನ ಕೊಡಿ” ಅಂತ ಅಂಗಲಾಚಿದರೂ ಅನ್ನದಾನ ಮಾಡಲೂ ಹಣ ಬೇಡಿದರು.... ಕೊಡಲು ಅವನಲ್ಲಿ ಏನಿದೆ..? ಉಟ್ಟ ಬಟ್ಟೆಯೂ ಆತನದ್ದಲ್ಲ... ಇಂತಹ ಸ್ಥಿತಿಯಲ್ಲಿ ಆತ ಏನುತಾನೆ ಮಾಡಿಯಾನು? ಹಸಿವು ಆತನನ್ನು ಇನ್ನಷ್ಟು ಕ್ರೌರ್ಯಕ್ಕೆ ನೂಕಿಬಿಟ್ಟಿತು.. ಕೊನೆಗೆ ಹಸಿವು ತಾಳಲಾರದೇ ಕೊಳೆತ ಹೆಣಗಳನ್ನು ಬದಿಗೊತ್ತಿ, ಆ ಕೊಳಚೆ ನೀರನ್ನೇ ಕುಡಿಯತೊಡಗಿದ.. ಅದು ಬಿಸಿ ನೀರಿನ ಬುಗ್ಗೆಯಾಗಿತ್ತು.. ಆತನಿಗೆ ಅದಾವುದರ ಪರಿವೇ ಇಲ್ಲ.. ಏನು ಎತ್ತ ಅಂತ ಯೋಚಿಸಲೂ ಆತನ ಹಸಿವು ಅತನಿಗೆ ಸಮಯ ಕೊಡಲಿಲ್ಲ.. ನೀರು ಕುಡಿದು ನಿಟ್ಟುಸಿರು ಬಿಡುತ್ತಿದ್ದಂತೆ ಭಾರೀ ಸ್ಪೋಟವೊಂದು ಸಂಭವಿಸಿಬಿಟ್ಟಿತ್ತು.. ಅಷ್ಟೇ... ಅವನಿಗೆ ಮತ್ತೆ ಹಸಿವಾಗಲೇ ಇಲ್ಲ... ಆ ವೃದ್ದ ಮತ್ತೆ ಆ ಜಾಗದಲ್ಲಿ ಕಾಣಲೇ ಇಲ್ಲ...! ನೀರಿನಲ್ಲಿ ನೀರಾಗಿ ಹೋಗಿದ್ದ...

ಈ ದೃಶ್ಯಗಳು ಮನದಿಂದ ದೂರಗುವ ಹೊತ್ತಲ್ಲಿ, ಇನ್ನೊಂದಿಷ್ಟು ಕ್ರೌರ್ಯಗಳು ಉತ್ತರಖಂಡದಲ್ಲಿ ಅಖಂಡವಾಗಿ ಎದ್ದು ನಿಂತವು.. ಕೇದಾರನಾಥನ ದರ್ಶನಕ್ಕೆ ಬಂದಿದ್ದ ಮಹಿಳೆಯೋರ್ವಳು ಪ್ರವಾಹದ ಅಬ್ಬರಕ್ಕೆ ಸಿಲುಕಿ, ದಿಕ್ಕಾಪಾಲಾಗಿ ಬಿಟ್ಟಿದ್ದಳು. ಜೊತೆಗೆ ಒಂಬತ್ತು ತಿಂಗಳು ಹೊತ್ತು ಬೆಳೆಸಿದ್ದ ಮುದ್ದಿನ ಮಗಳೂ ಇದ್ದಳು. ಜಲಪ್ರಳಯ ಉಕ್ಕಿ ಬಂದಾಗ ಅವರಿಗೆ ಏನೂ ಆಗಿರಲಿಲ್ಲ.. ಕೇವಲ ಜಲದ ಹೊಡೆತ ಮಾತ್ರ ಪೆಟ್ಟುಕೊಟ್ಟಿತ್ತು.. ಆದರೆ ಅವರನ್ನು ಸಂತೈಸಲು ಬಂದವರಿಂದಲೇ ಅವರಿಗೆ ಆಗಬಾರದ್ದು ಆಗಿ ಹೋಗಿತ್ತು. ದುಷ್ಕರ್ಮಿಗಳು ಆಕೆಯ ಪುತ್ರಿಯನ್ನು ಹೊತ್ತೊಯ್ದು ಗೊಂದ್ಲು ಪಾನಿ ಎಂಬಲ್ಲಿ ತನ್ನ ಕಣ್ಣೆದುರೇ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆ ಮಾಡಿಬಿಟ್ಟರು. ಕರುಳ ಬಳ್ಳಿಯನ್ನು ಕಣ್ಣೆದುರು ಹೊಸಕಿ ಹಾಕಿಬಿಟ್ಟಿದ್ದರು ವಿಕೃತ ಕಾಮಿಗಳು. ಅಲ್ಲಿ ಆಕೆಯ ಕೂಗಿಗೆ ಸ್ಪಂದಿಸುವ ಕಿವಿಗಳಾಗಲಿ, ಸಹಾಯ ಹಸ್ತ ಚಾಚುವ ಕೈಗಳಾಗಲೀ ಇರಲಿಲ್ಲ... ಆಕೆಯ ಕೂಗು ಅಕ್ಷರಶಃ ಅರಣ್ಯರೋಧನವಗಿತ್ತು.. ಸ್ವತಃ ತಲೆ ಕಾಯುವ ಭಗವಂತನಿಗೂ ಆ ಕ್ರೌರ್ಯದ ಕರಾಳತೆಗೆ ಸ್ಪಂದಿಸುವ ಶಕ್ತಿ ಬತ್ತಿ ಹೋಗಿತ್ತು.. ಕಣ್ಣು ಮಿಟುಕಿಸುವಲ್ಲಿ ಮಗಳ ಜೊತೆಗೆ ತಾಯಿಯ ಪ್ರಾಣವನ್ನು ಹೊತ್ತೊಯ್ದುಬಿಟ್ಟಿದ್ದರು ಹಂತಕರು.

ಈ ಕ್ರೌರ್ಯತೆ ಇಷ್ಟಕ್ಕೆ ನಿಲ್ಲಲಿಲ್ಲ... ಸಹಾಯ ಹಸ್ತವನ್ನು ಬೇಡಿ ಕೈಗಳನ್ನು ಚಾಚಿದ್ದ ಬಹಳಷ್ಟು ಸಂತ್ರಸ್ತರಿಗೆ ಅಲ್ಲಿ ಸಿಕ್ಕಿದ್ದು “ಬೆಂಕಿಯ ಬರೆ”ಗಳು ಮಾತ್ರ. ಉತ್ತರದ ಅಬ್ಬರಕ್ಕೆ ತತ್ತರಗೊಂಡ ಸಂತ್ರಸ್ತರ ಮೂರಾಬಟ್ಟೆ ಬದುಕನ್ನು ಕೆಲವು ಕಾಣದ ಕೈಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಹೇಗಾದರೂ ಸರಿಯೇ ಬದುಕಿದರೆ ಸಾಕು ಅಂತ ಸಿಕ್ಕ ಸಿಕ್ಕ ಜನರ ಮೊರೆ ಹೋಗುತ್ತಿರುವ ಸಂತ್ರಸ್ತರು ಒಂದೆಡೆಯಾದರೆ... ಹೇಗಿದ್ದರೂ ಸಾಯುತ್ತಾರೆ ಜನಗಳು.. ಅವರಿಂದ ದುಡ್ಡು ಮಾಡಿಕೊಳ್ಳೋಣ ಅನ್ನೋ ಮನುಮೃಗಳು ಮತ್ತೊಂದೆಡೆ. ಕಣ್ಣೆದುರೇ ಬೆಟ್ಟಗಳು ಉರಳಿ ಬೀಳುತ್ತಿರುವಾಗ ಬದುಕಿಸುವವನು ಒಳ್ಳೆಯವನೇ.. ಕೆಟ್ಟವನೇ ಎಂದು ಯೋಚಿಸಲು ಸಾಧ್ಯವೇ..?? ಸಾವನ್ನೇ ಕಣ್ಣೆದುರು ಕಂಡವರಿಗೆ ಅದಕ್ಕಿಂತ ಭೀಕರತೆ ಮತ್ತೊಂದು ಕಾಣಲು ಸಾಧ್ಯವೇ..?? ಸಾವಿನ ಸಮಯದಲ್ಲಿ ಕೈ ಕೊಟ್ಟು ಬದುಕಿಸುವವನೇ ದೇವರು ಅಂತಾರೆ.. ಆದರೆ ಉತ್ತರಖಂಡದಲ್ಲಿ ಅದರ ಛಾಯೆಯೇ ಇಲ್ಲ... ಕೇವಲ ಕ್ರೌರ್ಯ, ಪರಾಕ್ರಮದ ಕಾಮದ ಛಾಯೆಗಳು ಮಾತ್ರ... 
ಹಿಮಾಲಯದ ತಪ್ಪಿಲಿನಲ್ಲಿ ಅದೆಷ್ಟೋ ಅಘೋರಿಗಗಳು ಕಾಣದಂತೆ ಬದುಕುತ್ತಿರಿವುದು ಗೊತ್ತಿರುವ ಸತ್ಯ.. ಇಂಥಾ ಅಘೋರಿಗಳಿಗೆ ಉತ್ತರಖಂಡವೆಂಬ ಪಾತ್ರೆಯಲ್ಲಿ ನೊಂದು ಬೆಂದು ತೇಲುತ್ತಿರುವ ರಾಶಿ ರಾಶಿ ಮಾಂಸದ ಮುದ್ದೆಗಳು ಆಹಾರವಾಗುತ್ತಿವೆ. ಇದರ ಜೊತೆಯಲ್ಲಿಯೇ ಸಾಧು ಸಂತರಂತೆ ಬಟ್ಟೆ ಧರಿಸಿದ ವಂಚಕ ಬಾಬಾಗಳು ಅಲ್ಲಿ ದರೋಡೆ ಕೋರರಂತೆ ಲೂಟಿಗಿಳಿದಿದ್ದಾರೆ.. ಯಾವುದನ್ನು ಅಪೇಕ್ಷಿಸದ ಸಾದು ಸಂತರು ಉತ್ತರ ಖಂಡದಲ್ಲಿ ಸತ್ತ ಶವಗಳು ಮತ್ತು ಸಂತ್ರಸ್ತರನ್ನು ಸುಲಿಗೆ ಮಾಡಿ  ಒಂದು ಕೋಟಿಗೂ ಅಧಿಕ ಹಣವನ್ನು ಹೊತ್ತೊಯ್ದಿದ್ದಾರೆ.. ಅಷ್ಟೋ ಇಷ್ಟೋ ಹಣ ಉಳಿಸಿಕೊಂಡು ಊರು ಸೇರಬಹುದು ಅಂತ ಆಸೆ ಇಟ್ಟುಕೊಂಡಿದ್ದ  ಜನರು ಅಸಹಾಯಕರಂತೆ ಬದುಕುತ್ತಿದ್ದಾರೆ.. ಜೊತೆಗೆ ಸ್ಥಳೀಯ ದರೋಡೆಕೋರರು ಕೂಡ ಹೆಣಗಳ ಮೇಲಿನ ಒಡವೆ, ಮತ್ತು ಹಣವನ್ನು ದೋಚತೊಡಗಿದ್ದಾರೆ.. ಸತ್ತವರ ಹೆಣಗಳ ಮೇಲೆ ತಮ್ಮ ಜೀವನ ಕಟ್ಟಿಕೊಳ್ಳುವ ನಿಕೃಷ್ಟತೆಯ ಬದುಕಿಗೆ ಅಲ್ಲಿನ ಕೆಲವರು ಒಗ್ಗಿಹೋಗಿದ್ದಾರೆ.. ಸತ್ತ ಹೆಣದ ಮೇಲಿನ ಉಡುಗೆಯನ್ನೂ ಬಿಡದಂತೆ ದೋಚುತ್ತಿರುವುದು ನಿಜಕ್ಕೂ ಅಸಹ್ಯದ ಪರಮಾವಧಿಯೇ ಸರಿ.. 

ಸ್ಮಶಾನದಂತಾದ ಕೇದರನಾಥದಲ್ಲಿ ಸಂತ್ರಸ್ತರ ಸೋಗಿನಲ್ಲಿ ಅಲೆದಾಡುತ್ತಿರುವ ದರೋಡೆಕೋರರು ಹೆಣದ ಶೋಧನೆಯಲ್ಲಿ ತೊಡಗಿದ್ದಾರೆ.. ಮೇಲ್ನೋಟಕ್ಕೆ ಏನೂ ಕಾಣದಿದ್ದೇ ಇದ್ದರೆ ಶವದ ಮೇಲಿನ ಬಟ್ಟೆಗಳನ್ನು ಸಂಪೂರ್ಣವಾಗಿ ಕಳಚಿ, ಕೊನೆ ಪಕ್ಷ ಚಿನ್ನ ಅಥವ ಬೆಳ್ಳಿಯ “ಉಡುದಾರ”ವಾದರೂ ಸಿಗಬಹುದೇನೋ ಎಂದು ಭೀಭಿತ್ಸ ಮೆರೆಯುತ್ತಿದ್ದಾರೆ.. ರಕ್ಕಸರಿಗಿಂತಲೂ ಹೆಚ್ಚಾಗಿ ವರ್ತಿಸುತ್ತಿದ್ದಾರೆ.. ಸತ್ತ ಶವಗಳ ಜೊತೆಗೆ ಕಾಮ ತೃಷೆ ತೀರಿಸಿಕೊಂಡ ಸುದ್ದಿಗಳೂ ಕೂಡ ಸ್ಥಳೀಯರ ಬಾಯಲ್ಲಿ ಗೌಪ್ಯವಾಗಿ ಉಳಿದಿಲ್ಲ.. ಲವಲೇಷವೂ ಅಂಜಿಕೆ ಇಲ್ಲದೇ, ಅನುಕಂಪ ಇಲ್ಲದೇ ಹೆಣ್ಣಾದರೇನು, ಗಂಡಾದರೇನು ಎಂದು ದೇಹವನ್ನು ತಡಕಾಡಿ ದರೋಡೆ ಮಾಡುತ್ತಿದ್ದಾರೆ.. ನೂರಾರು ಹೆಣದ ರಾಶಿಗಳಲ್ಲಿ ಅರೆಬರೆ ಜೀವ ಉಳಿಸಿಕೊಂಡು ಬಿದ್ದಿದ್ದ ಅದೆಷ್ಟೋ ಅಸಹಾಯಕ ಜನರು ಇವರ ಕಣ್ಣೆದುರು ಕಂಡರೂ, ಅವರನ್ನು ರಕ್ಷಿಸುವ ಅಥವ ಸಹಾಯ ಮಾಡುವ  ಔದಾರ್ಯವೂ ಅವರಿಗಿರಲಿಲ್ಲ...  ಅಷ್ಟಕ್ಕೂ ಅವರು ಸತ್ತಿದ್ದರೋ ಅಥವ ಬದುಕಿದ್ದಾರೋ ಅಂತ ನೋಡುವಷ್ಟು ವ್ಯವಧಾನವೂ ಅವರಿಗಿಲ್ಲ.. 

ಹೆಣದ ರಾಶಿಗಳಲ್ಲಿ ಹೆಣವಾಗದೇ ಉಳಿದ ಒಂದು ಹೆಣ್ಣಿನ ಕಿವಿಯ ಓಲೆಯನ್ನು ಕದಿಯಲು ವ್ಯಾಘ್ರಗಳು ಸಂಚು ನಡೆಸಿದ್ದವು.. ಆದರೆ ಆಕೆಗೆ ಜೀವ ಹೋಗಿರಲಿಲ್ಲ.. ಆದರೆ ಪ್ರಜ್ಞೆ ಮಾತ್ರ ಹೋಗಿತ್ತು.. ಸೀದ ಆಕೆಯ ಕಿವಿಗೆ ಕೈ ಹಾಕಿ ಗಟ್ಟಿಯಾಗಿ ಎಳೆದುಬಿಟ್ಟಿದ್ದಾರೆ.. ಓಲೆಯ ಜೊತೆಗೆ ಕಿವಿಯೂ ಆ ಖದೀಮರ ಕೈ ಸೇರಿಬಿಟ್ಟಿತ್ತು.. ಕಿರುಚಲೂ ಆಕೆಯಲ್ಲಿ ಶಕ್ತಿ ಇರಲಿಲ್ಲ... ಬರೀ ರಕ್ತಪಾತದ ನೋವನ್ನು ಮೌನವಾಗಿ ಅನುಭವಿಸಬೇಕಾದ ಹೀನಾಯ ಸ್ಥಿತಿ ಆಕೆಯದ್ದು..
ಸೇನೆಯ ಕೈಗೆ ಸಿಕ್ಕ ಅದೆಷ್ಟೋ ಹೆಣಗಳಿಗೆ ಕಿವಿ, ಮೂಗು ಸೇರಿದಂತೆ ದೇಹದ ವಿವಿಧ ಅಂಗಾಂಗಳೂ ಬರ್ಬರವಾಗಿ ಊನವಗಿವೆ.. ಅದಕ್ಕೆ ಕಾರಣ ಪ್ರಕೃತಿಯ ಆರ್ಭಟ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಒಳನೋಟದ ತೀಕ್ಷ್ಣತೆಯೇ ಬೇರೆ ಎಂಬುದು ಬದುಕಿ ಬಂದವರ ಅಂಬೋಣ.. ರಾಮನಗರದ ಬಾಲೂ ಪಬ್ಲಿಕ್ ಶಾಲೆಯ ಸುಬ್ಬಯ್ಯ ಚೆಟ್ಟಿ ಹೇಳಿದ ಮಾತುಗಳಲ್ಲಿಯೂ ಉತ್ತರಖಂಡದ ಭೀಭೀತ್ಸತೆ ಕಂಡುಬರುತ್ತದೆ.. 

ಮಹಿಳೆಯೊಬ್ಬಳು ತನ್ನವರನ್ನು ಕಳೆದುಕೊಂಡು ಹೆಣವಾಗಿ ಭೀಭಿತ್ಸವಾಗಿ ಬಿದ್ದಿದ್ದಾಗ, ಕೊಂಚವೂ ಕರುಣೆ ತೋರದೆ ಹೆಣದ ಕೈಗಳನ್ನು ಕತ್ತರಿಸಿ ಚಿನ್ನದ ಬಳೆಗಳನ್ನು ದೋಚಿಬಿಟ್ಟರಂತೆ ಮಾನವೀಯತೆ ಮರೆತ ಕ್ರೂರ ಮೃಗಗಳು.. ಅಷ್ಟೇ ಅಲ್ಲ, ಅಲ್ಲಿನ ಕೆಲವು ಸ್ಥಳೀಯರೂ ಕೂಡ ದನದಾಹಿಗಳಾಗಿದ್ದರು.. ಹಣ ಕೊಟ್ಟರೆ ಮಾತ್ರವೇ ಅವರು ಸಹಾಯದ ಹಸ್ತವನ್ನು ಚಾಚುತ್ತಿದ್ದರು.. ಇಲ್ಲವಾದಲ್ಲಿ ಅವರ ಕಣ್ಣೆದುರೇ ಸಾಯುತ್ತಿದ್ದರೂ ಅವರು ನೋಡಿಯೂ ನೋಡದಂತೆ ನಿರ್ಲಕ್ಷತೆ ವಹಿಸುತ್ತಿದ್ದರಂತೆ.. ಇದು ಜಲಪ್ರಳಯದಲ್ಲಿ ಬದುಕಿ ಬಂದ ಗಂಗಾವತಿಯ ಕುಟುಂಬ ಸದಸ್ಯರು ಬಿಚ್ಚಿಟ್ಟ ಕಣ್ಣೀರ ಕಥೆ.. ಈ ಧನ ಬೇಟೆ ಇಂದಿಗೂ ನಿರಂತರವಾಗಿ ನಡೆಯುತ್ತಲೇ ಇದೆ.. ಎಂತಲೂ ಅವರು ಹೇಳುತ್ತಾರೆ...  ನೋಡ ನೋಡುತ್ತಿದ್ದಂತೆಯೇ ಭಾರೀ ಜಲಪ್ರವಾಹದಿಂದ ಮಣ್ಣು ಕುಸಿಯಲಾರಂಭಿಸಿತು.. ಕಣ್ಣೆದುರೇ ಬೆಟ್ಟಗಗಳು ಧರೆಗುರುಳತೊಡಗಿದವು..  ಬೆಟ್ಟದ ಅಡಿಯಲ್ಲಿ ಅದೆಷ್ಟೋ ಜೀವಗಳು ಸಿಲುಕಿಕೊಂಡಿದ್ದರೂ, ಅವರನ್ನು ಹೊರ ತರುವ ಪ್ರಯತ್ನ ಅಲ್ಲಿನವರು ಮಾಡಲೇ ಇಲ್ಲ.. ಬದಲಾಗಿ ಯಾರು ಏಳು ರಿಂದ ಹನ್ನೆರಡು ಸಾವಿರ ರೂಪಾಯಿಗಳನ್ನು ನೀಡುತ್ತಾರೋ ಅವರನ್ನು ಮಾತ್ರ ರಕ್ಷಿಸಲು ಮುಂದಾಗುತ್ತಿದ್ದರು ಸ್ಥಳೀಯರು.. ಹಣ ನೀಡಲಾಗದ ಪರಿಸ್ಥಿತಿಯಲ್ಲಿದ್ದವರು ಆ ಬೆಟ್ಟಗಳ ಕಂದರದಲ್ಲೇ ಕರಗಿಬಿಟ್ಟರು.. ಎಂದು ಕಣ್ಣೆದುರು ಕಂಡ ದೃಶ್ಯವನ್ನು ಬಿಚ್ಚಿಡುತ್ತಾರೆ. 

ಇದೆಲ್ಲದರ ನಡುವೆ ಇನ್ನೊಂದು ಲಾಭಿಯನ್ನು ಕಡೆಗಣಿಸುವಂತಿಲ್ಲ.. ಅದೇ ಅಂಗಾಂಗಗಳ ಮಾರಾಟ.. ಜಲಪ್ರಳಯದ ಕ್ರೌರ್ಯ ನರ್ತನಕ್ಕೆ ನಲುಗಿ ಜೀವ ಬಿಟ್ಟ ನೂರಾರು ಜನರ ಮೃತ ದೇಹಗಳು ಉತ್ತರಖಂಡದ ಸುತ್ತಮುತ್ತ ಅನಾಥವಾಗಿ ಬಿದ್ದಿವೆ. ದೇಹವನ್ನು ಗುರುತಿಸಲೂ ಸಾಧ್ಯವಾಗದಷ್ಟು ಕೊಳೆತು ಹೋಗಿವೆ.. ಇಲ್ಲಿ ಮತ್ತೊಂದು ತಂಡ ದೇಹದ ಅಂಗಾಂಗಳನ್ನು ಕದಿಯುವ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನಗಳೂ ಮೂಡುತ್ತಿವೆ..! ಅನಾಥ ಶವಗಳ ಬಗ್ಗೆ ಕೇಳುವವರಾರು? ಅದಕ್ಕೆ ವಾರಸುದಾರರೇ ಇಲ್ಲವೆಂದಾಗ ದೇಹದ ಅಂಗಾಂಗಗಳನ್ನು ಕದಿಯಲು ಕಳ್ಳರು ಮುಂದಗಿರುವುದಿಲ್ಲವೇ? ಸಾವಿರಾರು ರೂಪಾಯಿಗಳಿಗಾಗಿ ಹೆಣದ ಮೇಲಿನ ಒಡವೆಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಯ್ಯುತ್ತಿದ್ದಾರೆ ಎಂದಾದರೆ, ಲಕ್ಷ ಲಕ್ಷ ಬೆಲೆ ಬಾಳುವ ಮಾನವನ ಅಂಗಾಂಗಗಳನ್ನು ಬಿಡುವರುಂಟೇ ಕಳ್ಳ ಖದೀಮರು..?? ಅಘೋರಿಗಳು ನರಮಾಂಸವನ್ನು ತಿನ್ನುತ್ತಾರೆ.. ಹೀಗಾಗಿ ಸತ್ತ ದೇಹಗಳನ್ನು ಅರಸುವುದು ಅಘೋರಿಗಳ ನಿತ್ಯದ ಕಾರ್ಯ.. ಆದರೆ ಜಲಪ್ರಳಯದ ನೆಪದಲ್ಲಿ ಅಘೋರಿಗಳ ವೇಷದಲ್ಲಿ ಖದೀಮರು ಬಂದಿರುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.. ಜೀವ ಉಳಿಸಿಕೊಂಡು ಬಂದ ಅನೇಕರು ಹೇಳಿದ್ದನ್ನು ಗಮನಿಸಿದರೆ ಈ ಅನುಮಾನ ಇನ್ನಷ್ಟು ಬಲಗೊಳ್ಳುತ್ತಿದೆ.. ಆದರೆ ತನಿಖೆಯ ನಂತರವೇ ಇದೆಲ್ಲದಕ್ಕೂ ತಕ್ಕ ಉತ್ತರ ಸಿಗಲಿದೆ.. 

ಇಷ್ಟೋಂದು ವಿಕೃತತೆ ನಡೆಯುತ್ತಿದ್ದರೂ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಇನ್ನೊಂದು ರೀತಿಯ ನೋವಿನ ಸಂಗತಿಯಾಗಿದೆ.. ಇತ್ತೀಚೆಗಷ್ಟೇ 15,000 ಗುಜರಾತ್ ಸಂತ್ರಸ್ತರನ್ನು ಮೋದಿ ತಂಡ ಕಾಪಾಡಿದೆ ಅಂತ ಅಧಿಕೃತ ಮೂಲಗಳು ಅನಧಿಕೃತ ಹೇಳಿಕೆಯನ್ನು ನೀಡಿದೆ.. ಅದೂ ಇನೋವಾ ಕಾರಿನಲ್ಲಿ...!! ವಿಪರ್ಯಾಸವೆಂದರೆ ರಸ್ತೆ, ಸೇತುವೆಗಳೇ ಕೊಚ್ಚಿ ಹೋಗಿ, ದೊಡ್ಡ ದೊಡ್ಡ ಕಟ್ಟಡಗಳೇ ನೆಲಕ್ಕುರುಳಿ, ಬೆಟ್ಟಗಳು ಧರೆಗುರುಳಿರುವಾಗ ಅಲ್ಲಿ ಇನೋವಾ ಕಾರು ಹೇಗೆ ಹೋಗಲು ಸಾಧ್ಯ ಸ್ವಾಮಿ..? ಹೇಳಿಕೆ ನೀಡಿದರೆ ಅದಕ್ಕೊಂದು ಅರ್ಥ ಇರಬೇಕು. 2014 ರ ಚುನಾವಣೆ ದೃಷ್ಟಿಯಿಂದ ಮಾತನಾಡುವುದು ಸೂಕ್ತವಲ್ಲ.. ಇನ್ನೊಂದು ವಿಷಯವೆಂದರೆ 15,000 ಗುಜರಾತಿಗಳನ್ನು ಕಾಪಾಡಿದ್ದೇವೆ ಎಂದು ಹೇಳಿಕೊಳ್ಳುವ ಜನರು ಇತರೇ ರಾಜ್ಯದವರನ್ನು ಏಕೆ ಕಾಪಾಡಲಿಲ್ಲ..?? ಉತ್ತರಕಂಡದಲ್ಲಿ ಅಲೆಯುತ್ತಿದ್ದ ಸಾವಿರಾರು ಸಂತ್ರಸ್ತರಲ್ಲಿ ಮೋದಿ ಮತ್ತು ತಂಡದವರು “ಗುಜರಾತ್ ಜನರನ್ನೇ ಹೇಗೆ ಕಂಡು ಹಿಡಿದು ರಕ್ಷಿಸಿಬಿಟ್ಟರು..? ತೀರ್ಥಯಾತ್ರೆಗೆ ತೆರಳಿದವರೆಲ್ಲಾ ಕೇವಲ ಗುಜರಾತಿನವರೇನಾ..?? ಮೋದಿ ತಂಡದ್ದು ಉದ್ಧಟತನವಾಗಿದೆ.. ಸಾವು ನೋವುಗಳ ಆಕ್ರಂದನದ ಕೂಗನ್ನು ಚುನಾವಣೆಯ ಘೋಷಣೆಗಳನ್ನಾಗಿ ಮಾರ್ಪಡಿಸುವ ವ್ಯತಿರಿಕ್ತ ಪ್ರಯತ್ನ ಮೋದಿ ತಂಡದಿಂದ ನಡೆಯುತ್ತಿದೆ.. ಜೊತೆಗೆ ಇತರ ಪಕ್ಷಗಳೂ ಇಂಥ ಲಾಬಿಯಲ್ಲಿ ತೊಡಗಿವೆ ಎಂಬುದು ಮತ್ತೊಂದು ನೋವಿನ ಸಂಗತಿ.. ಕೇವಲ ಚುನಾವಣೆಯೇ ಮುಖ್ಯ ಎನ್ನುವ ಇಂಥಾ ಮತಾಂಧರಿಗೆ ಜನರ ಜೀವದ ಬೆಲೆ ತಿಳಿದಿದೆಯೇ?
ಇದೆಲ್ಲದಕ್ಕಿಂತ ಇನ್ನೊಂದು ದುರಂತವೆಂದರೆ, ಟಿ.ವಿ ಮಾಧ್ಯಮಗಳ ಶೋಷಣೆ.. ಬ್ರೇಕಿಂಗ್ ನ್ಯೂಸ್ ಗಳು ಮಿಸ್ ಆಗಬಾರದು ಅಂತ ಅನೇಕ ಮಾಧ್ಯಮ ಪ್ರತಿನಿಧಿಗಳು ಉತ್ತರಖಂಡದಾದ್ಯಂತ ಅಲೆದಾಡುತ್ತಿದ್ದಾರೆ.. ಇವರಿಗೆ ಜನರನ್ನು ರಕ್ಷಿಸುವ ಕೆಲಸಕ್ಕಿಂತ ಲೈವ್ ನ್ಯೂಸ್ ಕವರೇಜ್ ಕೆಲಸವೇ ಶ್ರೇಷ್ಟವಾಗಿದೆ.. ಇಂಡಿಯನ್ ಟಿವಿಯ “ನಾರಾಯಣ್ ಪಾರ್ಗೇನ್” ಎಂಬ ವರದಿಗಾರನ ಉದ್ಧಟತನ ಇತರೇ ಮಾಧ್ಯಮಗಳಿಗಿಂತಲೂ ಹೆಚ್ಚಾಗಿ ಕಂಡುಬಂದಿತ್ತು..  ಜಲಪ್ರಳಯದ ಹೊಡೆತಕ್ಕೆ ತುತ್ತಾದ ವ್ಯಕ್ತಿಯೋರ್ವನ ಹೆಗಲೆ ಮೇಲೆ ಕುಳಿತುಕೊಂಡು ಲೈವ್ ನ್ಯೂಸ್ ಕೊಡುತ್ತಿದ್ದನ್ನು ನೋಡಿದರೆ ಇದಕ್ಕಿಂತ ಹೇಯ ಕೃತ್ಯ ಮತ್ತೊಂದಿಲ್ಲ.. ಸಂತ್ರಸ್ತರನ್ನು ಬದುಕಿಸಿ ಅವರನ್ನು ದಡ ಸೇರಿಸುವ ಬದಲು ತನ್ನ ಸುದ್ದಿ ಸಂಗ್ರಹಕ್ಕಾಗಿ ಅವರ ಅಸಹಾಯಕತೆಯನ್ನು ಬಳಸಿಕೊಂಡಿರುವುದು ಮಾಧ್ಯಮ ಲೋಕಕ್ಕೆ ಕಪ್ಪು ಚುಕ್ಕೆಯಾಗಿದೆ.. 
ಇದೆಲ್ಲವನ್ನು ಕೇಳಿ, ಮಾಧ್ಯಮಗಳಲ್ಲಿ ನೋಡಿದ “ಛೆ ಜೀವನ ಇಷ್ಟೇನಾ? ಅಂತ ಅನಿಸೋದಕ್ಕೆ ಶುರುವಾಯ್ತು... ಸತ್ತವರ ಬಗ್ಗೆ ಮರುಕ ಪಡುವ ಬದಲು, ಅವರ ಅಸಹಾಯಕತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಮತ್ತು ಅದರಿಂದ ಹಣ ಮಾಡುವ ತಂತ್ರ ಮಾಡುತ್ತಿದ್ದಾರಲ್ಲಾ ಈ ಕ್ರೂರ ಜನಗಳು ಅಂತ ನಿಜಕ್ಕೂ ಬೇಸರವಾಯ್ತು. ಮಾನವ ಇಷ್ಟೋಂದು ಕ್ರೂರ –ವಿಕೃತ ಮನೋಭಾವದನೇ..? ನಿರ್ದಾಕ್ಷಿಣಿಯೇ..? ಹಣವೇ ಮುಖ್ಯವಾಯಿತೇ ಮಾನವೀತೆಗಿಂತಲೂ....? ಎಂಬ ನೂರರು ಪ್ರೆಶ್ನೆಗಳು ನನ್ನನ್ನು ಇನ್ನೂ ಕಾಡತೊಡಗಿವೆ... ಆದರೆ ಈ ಉತ್ತರಖಂಡದ ಭೀಕರತೆಯೇ ಉತ್ತರವಾಗಿ ಉಳಿದುಬಿಟ್ಟಿತು..

 


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು