ಸಿನೆಮಾ

Share This Article To your Friends

ಅಟಾರ್ನಿ ಜನರಲ್ ಹೇಳಿದ ಕಾಗೆ ಗುಬ್ಬಚ್ಚಿ ಕಥೆ..!ನಾವು ಚಿಕ್ಕವರಾಗಿದ್ದಾಗ ತಾತನೋ, ಅಜ್ಜಿಯೋ, ಕಾಗೆ ಗುಬ್ಬಕ್ಕನ ಕಥೆ, ಪುಣ್ಯಕೋಟಿ ಹಸುವಿನ ಕಥೆ ಹೇಳಿದಾಗ ನಿಜಕ್ಕೂ ಖುಷಿ ಗ್ತಿತ್ತು.. ಪ್ರಪಂಚ ಪೂರ್ತಿ ನಿರ್ಮಲವಾಗಿದೆ ಭ್ರಷ್ಟರಿಲ್ಲದೇ ಪರಿಶುದ್ಧವಾಗಿದೆ ಅಂತ ಹೆಮ್ಮೆ ಪಡುತ್ತಿದ್ದೆವು.. ಆದರೆ ಈಗ ಕಾಲವೇ ಬದಲಾಗಿದೆ.. ಪ್ರಪಂಚ ಏನು ಅನ್ನೋದು ದಿನ ಕಳೆದಂತೆ ನಮ್ಮ ಅರಿವಿಗೆ ಬರುತ್ತಿದೆ.. ಅಂದು ಅಜ್ಜ ಅಜ್ಜಿ ಹೇಳಿದ ಕಥೆ ನಿಜವೆಂದು ನಂಬಿದ್ದ ನಾವುಗಳೇ ಅದು ಕೇವಲ ಕಾಲ್ಪನಿಕ ಕಥೆಗಳು, ನಿಜ ಜೀವನದಲ್ಲಿ, ಅದೂ ಈಗಿನ ಸಮಾಜದಲ್ಲಂತೂ ಘಟಿಸೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇವೆ..

          ಹೀಗಿರುವಾಗ, ಅಂದು ಕೇಳಿದ ಕಾಲ್ಪನಿಕ ಕಥೆಗಳಂತೆ ಸದ್ಯದ ಭಾರತದ ಅಟಾರ್ನಿ ಜನರಲ್ ಆಗಿರುವಂಥ ಗುಲಮ್  ಇ ವಹಾನವತಿಯವರು ಒಂದು ಅತ್ಯದ್ಭುತ ಕಥೆಯನ್ನು ಹೆಣೆದಿದ್ದಾರೆ. ವಿಪರ್ಯಾಸ ಅಂದ್ರೆ ಅದನ್ನು ನಂಬಬೇಕು ಅಂದ್ರೆ ನಾವು ಅತಿ ಕಿರಿಯ ವಯಸ್ಸಿನವರಾಗಬೇಕು.. ವಯಸ್ಕರಂತೆ, ಸಂಶೋಧಕರಂತೆ ನಾವೇನಾದರೂ ಅವರ ಕಥೆಗಳನ್ನು ಕೇಳೋದಕ್ಕೆ ಶುರು ಮಾಡಿದ್ರೆ ನಿಜಕ್ಕೂ ನಗು ಬರುತ್ತೆ.. ಅಷ್ಟೇ ಅಲ್ಲ, ಇಂಥಾ ಕಥೆಗಳು ದೇಶದ ಜನರ ದಿಕ್ಕನ್ನೇ ತಪ್ಪಿಸುತ್ತೆ ಅಂತ ಕೆಲವೊಮ್ಮೆ ಆತಂಕ ಕೂಡ ಆಗುತ್ತೆ..
 
          ನಕಲಿ ಛಾಪಾ ಕಾಗದ ಹಗರಣದಲ್ಲಿ ಸತ್ಯ ಹೊರಗೆಳೆಯುವಲ್ಲಿ ಶ್ರಮಿಸಿದ ಭಾರತದ ಖ್ಯಾತ ನ್ಯಾಯವಾದಿಗಳು ಇದೀಗ ಕಲ್ಲಿದ್ದಿಲು ಹಗರಣದಲ್ಲಿ ಮಾತ್ರ ಸ್ವಾಮಿನಿಷ್ಟೆ ಮೆರೆಯುತ್ತಿದ್ದಾರೆನೋ ಎಂಬ ಸಂಶಯಗಳು ಎಲ್ಲೆಡೆ ಸುಳಿದಾಡುತ್ತಿವೆ. ಇದಕ್ಕೆ ಕಾರಣ ಅವರು ಹೇಳಿದ ನಂಬಲಾರದ ಕಥೆಗಳು..

ಮೊನ್ನೆಯಷ್ಟೇ ಕಲ್ಲಿದ್ದಲು ಹಗರಣದ ವರದಿ ಸೋರಿಕೆಯಾಗಿದೆ ಮತ್ತು ವರದಿಯನ್ನು ತಿರುಚಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಛ ನ್ಯಾಯಾಲಯ ಸಿ.ಬಿ.ಐ ಗೆ ಛೀಮಾರಿ ಹಾಕಿತು. ಸಿಬಿಐ ನ ನಿರ್ದೇಶಕ ರಂಜಿತ್ ಸಿನ್ಹಾ ಕೂಡ ಸುಪ್ರೀಮ್ ಕೋರ್ಟನ ಕೆಂಗಣ್ಣಿಗೆ ತುತ್ತಾಗಿದ್ದಾರೆ.. ಅಷ್ಟೇ ಅಲ್ಲ, ಸುಪ್ರಿಮ್ ಕೋರ್ಟ್‌ನ ಛೀಮಾರಿಯಿಂದ ತೀವ್ರ ಮುಖಭಂಗಕ್ಕೆ ಒಳಗಾದ ಹೆಚ್ಚುವರಿ ಸಾಲಿಟರಿ ಜನರಲ್ ಹರಿನ್ ರವಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದರ ಮೂಲಕ ಮೊದಲ ತಲೆದಂಡ ತೆತ್ತಿದ್ದಾರೆ.. 

ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತದ ಅಟಾರ್ನಿ ಜನರಲ್ ಗುಲಮ್  ಇ ವಹಾನ್ವತಿ ಬೇರೆಯದ್ದೇ ಕಥೆ ಹೇಳ್ತಿದ್ದಾರೆ.. ತನಿಖಾ ವರದಿ ಸಿದ್ಧವಾದ ನಂತರ ಕಾನೂನು ಸಚಿವರಾದ ಅಶ್ವಿನಿ ಕುಮಾರ‍್ ಅವ್ರನ್ನು ಭೇಟಿ ಮಾಡಿದ್ದು ನಿಜ. ಆದರೆ ಕಾನೂನು ಸಚಿವರು ನಮ್ಮ ಮೇಲೆ ಯಾವುದೇ ಒತ್ತಡ ಹೇರಲಿಲ್ಲ.. ಅಷ್ಟೇ ಅಲ್ಲ, ಅವರಿಗೆ ಯಾವುದೇ ಕಡತಗಳನ್ನು ತೋರಿಸಿಲ್ಲ.. ಮತ್ತು ಸಚಿವರೂ ಕೂಡ ಆ ಕಡತಗಳನ್ನು ಪರಿಶೀಲಿಸಿಲ್ಲ ಅಂತ ಹೇಳಿದ್ದಾರೆ.

ಅಟಾರ್ನಿ ಜನರಲ್ ಹೇಳಿದ ಈ ಕಾಗೆ ಗುಬ್ಬಚ್ಚಿಯ ಕಥೆಯನ್ನು ನಂಬೋದು ಹೇಗೆ? ಹೇಳಿದ್ದೆಲ್ಲವನ್ನು ನಂಬಲು ಹೋದರೆ ಹಗ್ಗವನ್ನು ಹಾವೆಂದು ನಂಬಿಸುತ್ತಾರೆ.. ಯಾಕೆ ಅಂದ್ರೆ ಸ್ವತಃ ಸಿಬಿಐ ತನಿಖಾ ತಂಡವೇ ಕಾನೂನು ಸಚಿವರನ್ನು ಭೇಟಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದೆ.  ಹೀಗಿರುವಾಗ ಕಡತಗಳನ್ನು ತೋರಿಸಿಲ್ಲ.. ಕಟತಗಳನ್ನು ಕಾನೂನು ಸಚಿವರು ಪರಿಷ್ಕರಿಸಿಲ್ಲ ಅನ್ನೋ ಗುಲಮ್  ಈ ವಹಾನವತಿಯವರ ಬೆಣ್ಣೆಯ ಮಾತುಗಳನ್ನು ನಂಬಲು ಸಾಧ್ಯವೇ..? 

ಕೊರಳಿಗೆ ಮಾಲೆ ಹಾಕಿಕೊಂಡ ಬೆಕ್ಕು ಇಲಿಯನ್ನು ಬೇಟೆಯಾಡುವುದನ್ನು ಬಿಟ್ಟೀತೇ..? ಕಾಂಗ್ರೆಸ್ ಅಧಿಪತ್ಯವನ್ನೇ ಅಲುಗಾಡಿಸುತ್ತಿರುವ ಹಗರಣಗಳು ಹೊರಬಿದ್ದರೆ ಮುಂದೆ ಬರಲಿರೋ ಚುನಾವಣೆಗಳ ಪಾಡೇನು? ಹೀಗಾಗಿಯೇ ಈ ಕಲ್ಲಿದ್ದಲು ಹಗರಣದ ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ಕೆಲವು ಪ್ರಮುಖ ವರದಿಗಳನ್ನು ಮಾರ್ಪಾಟು ಮಾಡಲೆಂದೇ ಸ್ವತಃ ಕಾನೂನು ಸಚಿವರು ಸಿಬಿಐ ಅಧಿಕಾರಿಗಳನ್ನು ಕರೆಸಿಕೊಂಡಿರಬಹುದೆಂಬ ಸ್ಪಷ್ಟ ಸೂಚನೆಗಳು ಎದ್ದು ಕಾಣುತ್ತಿವೆ.. ಇದಕ್ಕೆ ಪುಷ್ಟಿ ನೀಡುವಂತೆ ಅಧಿಕೃತ ಮೂಲಕಗಳ ಪೈಕಿ ಕೆಲವೊಂದು ಮಾಹಿತಿಗಳು ಕೂಡ ಹೊರ ಬಿದ್ದಿವೆ.. 

ಕೆಲವೊಂದು ಮೂಲಗಳ ಪ್ರಕಾರ “ಕಾನೂನು ಸಚಿವರಾದ ಅಶ್ವಿನಿ ಕುಮಾರ‍್ ಅವರು “ಕೆಲವೊಂದು ವಿಷಯಗಳಲ್ಲಿ ಸಲಹೆ ನೀಡುವ ಉದ್ದೇಶದಿಂದ ಸಿ.ಬಿ.ಐ ತನಿಖಾ ತಂಡವನ್ನು ಕರೆಸಿಕೊಂಡಿದ್ದೆ” ಎಂದು ಒಪ್ಪಿಕೊಂಡಿದ್ದಾರೆ.. ಅದೂ ಅಲ್ಲದೇ ಕಾನೂನು ಸಚಿವರು, ಸಿಬಿಐ ತನಿಖಾ ತಂಡದೊಂದಿಗೆ ಸಭೆ ಸೇರಿದ್ದು ಮಾರ್ಚ 5 ರಂದು..   ನಂತರ ಕಾನೂನು ಸಚಿವರು ನೀಡಿದ ಸಲಹೆಗಳಿಗೆ ತಕ್ಕಂತೆ ವರದಿಯನ್ನು ತಿರುಚಿ ಮಾರ್ಚ 8 ರಂದು ಸಮಗ್ರ ಪರಿಷ್ಕೃತ ವರದಿಯನ್ನು ಸಿಬಿಐ ಸುಪ್ರಿಮ್ ಕೋರ್ಟಗೆ ಒಪ್ಪಿಸಿತು.. 

ಸಿಬಿಐ ಕೇಂದ್ರ ಸರ್ಕಾರಕ್ಕೆ ಸ್ವಾಮಿನಿಷ್ಟೆಯನ್ನು ತೋರಿಸಿ ನ್ಯಾಯಾಲಯಕ್ಕೆ ಅಗೌರವ ತೋರಿದೆ. ಅಷ್ಟೇ ಅಲ್ಲ, ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ, ತನಿಖಾ ವರದಿಯನ್ನು ಸೋರಿಕೆ ಮಾಡಿದೆ.. ಜೊತೆಗೆ ಸತ್ಯವನ್ನು ಬೇಕಾದಂತೆ ತಿರುಚಿದೆ ಎಂದು ಸುಪ್ರಿಮ್ ಕೋರ್ಟ ಸರ್ಕಾರಕ್ಕೆ ಮತ್ತು ಸಿಬಿಐ ತನಿಖಾ ತಂಡಕ್ಕೆ ಛೀಮಾರಿ ಹಾಕಿದೆ.. ಇದೇ ಕಾರಣಕ್ಕೆ ಮುಖಭಂಗ ಅನುಭವಿಸಿದ ಭಾರತದ ಹೆಚ್ಚುವರಿ ಸಾಲಿಟರ‍್ ಜನರಲ್ ಹರಿನ್ ರವಲ್ ನೆನ್ನೆಯಷ್ಟೇ ರಾಜಿನಾಮೆ ನೀಡೋದರ ಮೂಲಕ ತಲೆದಂಡ ತೆತ್ತಿದ್ದಾರೆ. ಇದು ಅಟಾರ್ನಿ ಜನರಲ್  ಅವರಿಗೆ ಇನ್ನಷ್ಟು ಮುಜುಗರವನ್ನುಂಟು ಮಾಡಿದೆ. ಸದ್ಯಕ್ಕೆ ಬಂದಿರೋ ಮಾಹಿತಿ ಪ್ರಕಾರ “ಕಾಗೆ ಗುಬ್ಬಚ್ಚಿ”ಯ ಕಥೆ ಹೇಳಿ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿರುವ ಗುಲಮ್  ಇ ವಹಾನವತಿ ಕೂಡ ಅತಿ ಶೀಘ್ರದಲ್ಲಿಯೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಅನ್ನೋ ಊಹಾಪೋಹಗಳು ಸುಳಿದಾಡುತ್ತಿವೆ..

ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, ಅಟಾರ್ನಿ ಜನರಲ್ , ಸಾಲಿಟರಿ ಜನರಲ್ ಮೊದಲಾದವರು ನೀಡುತ್ತಿರುವ ದ್ವಂದ್ವ ಹೇಳಿಕೆಗಳನ್ನು ಸ್ಪಷ್ಟವಾಗಿ ಗಮನಿಸಿದರೇ ಸಾಕು,  ಸತ್ಯವನ್ನು ಧೂಳು ಹಿಡಿದ ಕಡತಗಳಲ್ಲಿಯೇ ಬಲವಂತವಾಗಿ ಹುದುಗಿಸಲಾಗುತ್ತಿದೆ ಅನ್ನೋ ಶಂಕೆಗಳು ಮೇಲ್ನೋಟಕ್ಕೆ ಬಹಿರಂಗವಾಗುತ್ತಿವೆ..  ಹೀಗಾಗಿ ತನಿಖಾ ವರದಿಯಲ್ಲಿ ಮಾಡಲಾದ ಬದಲಾವಣೆಗಳೇನು.? ಮೂಲ ವರದಿಯಲ್ಲಿ ಏನಿತ್ತು? ಮತ್ತು ನಂತರದಲ್ಲಿ ತಿರುಚಲಾದ ವರದಿ ಯಾವುದು? ಎಂದು ಸ್ಪಷ್ಟನೆ ನೀಡಬೇಕೆಂದು ಸುಪ್ರಿಮ್ ಕೋರ್ಟ ಸಿಬಿಐ ಗೆ ಆದೇಶಿಸಿದೆ.. ಇದಕ್ಕೆ ಸಂಬಂದಿಸಿದಂತೆ ಸೋಮವಾರದ ವರೆಗೆ ಗಡುವು ನೀಡಿದೆ.. 

ಇದೇ ಸಂದರ್ಭದಲ್ಲಿ ಮಾತನಾಡಿದ  ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, ಕಲ್ಲಿದ್ದಲು ಹಗರಣದ ತನಿಖಾ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು ನಿಜ.   ತನಿಖಾ ವರದಿಯ ಮೂಲ ಪ್ರತಿ ಹಾಗು ತಿದ್ದುಪಡಿ ಮಾಡಿರುವ ವರದಿಯ ಬಗ್ಗೆ ಎಲ್ಲ ವಿವರವನ್ನು ಕೋರ್ಟ್ ಗೆ ಈಗಾಗಲೇ ನೀಡಿದ್ದೇವೆ ಅಂತ ಅವ್ರು ಹೇಳಿದ್ದಾರೆ..  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಳುವ ಎಲ್ಲ ವಿವರಗಳನ್ನು ತಾವು ಮೇ 6ರಂದು ಅಫಿಡವಿಟ್‌ನಲ್ಲಿ ಸಲ್ಲಿಸುವುದಾಗಿ ಸಿನ್ಹಾ ತಿಳಿಸಿದ್ದಾರೆ.. 

ಒಂದೆಡೆ ಸಿನ್ಹಾ, ಬದಲಾವಣೆ ಮಾಡಲಾಗಿದೆ ಅಂತ ಹೇಳ್ತಿದ್ದಾರೆ.. ಇನ್ನೊಂದೆಡೆ ಅಟಾರ್ನಿ ಜನರಲ್ ಹುದ್ದೆಯಲ್ಲಿರುವಂಥ ಗುಲಮ್ ಇ ವಹಾನ್ವತಿ, ತನಿಖಾ ವರದಿಯನ್ನು ಯಾರೂ ನೋಡಿಲ್ಲ.. ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದೇವೆ ಅಂತ ತೇಪೆ ಹಾಕೋ ಕೆಲಸ ಮಾಡ್ತಿದ್ದಾರೆ.. 

ಇಷ್ಟೆಲ್ಲಾ ಆದ ನಂತರ ಇದಕ್ಕೆ ನೇರ ಹೊಣೆ ಸಿಬಿಐ ಅಂತ ಕೋರ್ಟು ಹೇಳಿದ್ದೇ ತಡ, ಮತ್ತೊಂದು ಹೊಸ ರಾಗವನ್ನು ಸಿಬಿಐ ತಂಡ ಶುರು ಮಾಡಿದೆ.. “ಕಲ್ಲಿದ್ದಲು ಹಗರಣ ಕೇಸಿನಲ್ಲಿ ಕಲ್ಲಿದ್ದಲು ಖಾತೆ ಇದುವರೆಗೆ ಸುಮಾರು 730 ಕಡತಗಳನ್ನು ಮಾತ್ರ ಸಿಬಿಐಗೆ ಹಸ್ತಾಂತರಿಸಿದೆ. ಇನ್ನು ಹೆಚ್ಚಿನ ಕಡತಗಳ ಅಗತ್ಯವಿದ್ದು, ಅವುಗಳನ್ನು ತನ್ನ ವಶಕ್ಕೆ ನೀಡಿಲ್ಲ” ಅಂತ ಸಿಬಿಐ ಹೇಳಿದೆ.. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಸಿಬಿಐ ಎಲ್ಲಾ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸದೇ ಅಂತಿಮ ವರದಿಯನ್ನು ಹೇಗೆ ತಯಾರಿಸಿತು? ಸಿಬಿಐ ತನಿಖೆ ಎಷ್ಟರಮಟ್ಟಿಗೆ ಸತ್ಯತೆಯಿಂದ ಕೂಡಿದೆ..?? ಕಾಟಾಚಾರಕ್ಕೆ ತನಿಖೆ ನಡೆಸುವ ಮನೋಧರ್ಮವನ್ನು ಸಿಬಿಐ ಮೈಗೂಡಿಸಿಕೊಂಡಿದೆಯೇ..?? ಅನ್ನೋ ಅಸ್ಪಷ್ಟ ಅನುಮಾನಗಳು ಎಲ್ಲರಲ್ಲೂ ಮನೆ ಮಾಡುತ್ತದೆಯಲ್ಲವೇ..? ಆದರೆ ಇದಕ್ಕೆ ಉತ್ತರವನ್ನು ನೀಡಬೇಕಾದವರೇ ದ್ವಂದ್ವದಲ್ಲಿ ಸಿಲುಕಿ, ಉತ್ತರವನ್ನು ಹುಡುಕುತ್ತಿದ್ದಾರೆ..

ಇನ್ನೊಂದೆಡೆ ಗಮನಿಸಬೇಕಾದ ಅಂಶವೆಂದರೆ, ಕಲ್ಲಿದ್ದಲು ಖಾತೆ ಇನ್ನುಳಿದ ಕಡತಗಳನ್ನು ಹಸ್ತಾಂತರಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ.. ಪ್ರಮುಖ ಕಡತಗಳು ನ್ಯಾಯಾಲಯದ ತನಿಖೆಗೆ ಸಿಗದಂತೆ ಕೆಲವು ಕಾಣದ ಕೈಗಳು ಸಂಚು ರೂಪಿಸುತ್ತಿವೆ. ಈ ಸಂಚಿನಲ್ಲಿ ಸ್ವತಃ ಸಿಬಿಐ ತಂಡವೇ ಸಿಲುಕಿಕೊಂಡಿದೆ.. ನ್ಯಾಯವಾದಿಗಳೇ ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ.. ರಾಜಕೀಯದ ದೊಂಬರಾಟಕ್ಕೆ ಪ್ರಜ್ಞಾವಂತ ಕಾನೂನು ಪರಿಣಿತರೇ ತಲೆದಂಡ ಕೊಡಬೇಕಾದ ಸಂದರ್ಭಗಳು ಇದೀಗ ಸೃಷ್ಟಿಯಾಗಿದೆ..

ಸಿಬಿಐ ನ ಹೇಳಿಕೆಯನ್ನು ಆಲಿಸಿದ ಸುಪ್ರೀಂಕೋರ್ಟಿ ಕಲ್ಲಿದ್ದಲು ಹಗರಣದಲ್ಲಿ ಸಿಬಿಐಗೆ ಸಹಕಾರ ನೀಡದಿರುವುದಕ್ಕಾಗಿ ಕಲ್ಲಿದ್ದಲು ಖಾತೆಯ ವಿರುದ್ಧ ಇನ್ನಷ್ಟು ರೊಚ್ಚಿದ್ದಿದೆ. ಸಿಬಿಐ ಗೆ ಬೇಕಾದ ಸಂಪೂರ್ಣ ಸಹಕಾರವನ್ನು ಸರ್ಕಾರ ಮತ್ತು ಇತರೆ ಇಲಾಖೆಗಳು ನೀಡಬೇಕು ಅಂತ ಘರ್ಜಿಸಿದೆ.  ಕಲ್ಲಿದ್ದಲಿನ ಮಸಿ ನ್ಯಾಯವಾದಿಗಳು, ಕಾನೂನು ತಜ್ಞರು, ಕಾನೂನು ಸಚಿವರಿಗೂ ಅಂಟಿಕೊಂಡಿದೆ. ಈಗಾಗಲೇ ಒಂದು ತಲೆ ಉರುಳಿದೆ.. ಇನ್ನೇನ್ನೊಂದು ತಲೆ ಉರುಳುವ ಸಾಧ್ಯತೆ ಕೂಡ ಎದ್ದು ಕಾಣುತ್ತಿದೆ.. ಸೋಮವಾರದ ’ಹಿಯರಿಂಗ್’ ನಲ್ಲಿ ಏನಾಗುತ್ತೆ ಅನ್ನೋದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.. ಸೋಮವಾರದ ’ಹಿಯರಿಂಗ್’ ಮುಗಿದ ನಂತರ ಇನ್ನೇನು “ಹೈ ಡ್ರಾಮಾ” ಶುರುವಾಗುತ್ತೋ..?? ಮತ್ಯಾರು ಇನ್ನಷ್ಟು ಕಾಗೆ ಗುಬ್ಬಚ್ಚಿ ಕಥೆಗಳನ್ನು ಹೆಣೀತಾರೋ ಅನ್ನೋದು ಕಾದು ನೋಡಬೇಕಾಗಿದೆ.. ಅಂತಿಮವಾಗಿ ಗೆದ್ದು ಬರುವ ಸತ್ಯಕ್ಕಾಗಿ ಪ್ರಜೆಗಳು ಕೂಡ ಎದುರು ನೋಡುತ್ತಿದ್ದಾರೆ.. ಆದರೆ ಕೊನೆಗೆ ಬರೋದು ಸತ್ಯವೇ ಅನ್ನೋ ಅನುಮಾನಗಳೊಂದಿಗೆ..!!!

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು