ಸಿನೆಮಾ

Share This Article To your Friends

ಕೊರಿಯರ‍್ ಬಾಯ್ ಕಲಿಸಿದ ಪಾಠ

ಹರುಕಲು ಬಟ್ಟೆ... ಒಣಗಿದ  ರಟ್ಟೆ ( ಕೈ ತೋಳುಗಳು).. ಕೃಷನಾದ ಆ ವ್ಯಕ್ತಿಯ ಕಣ್ಣುಗಳಲ್ಲಿ ಅದೇನೋ ಒಂದು ಚೇತನವಿತ್ತು.. ಕಷ್ಟ ನೂರೆಂಟಿದ್ದರೂ... ಖುಷಿಯೊಂದು ಆ ಕೃಷನ ಮನದ ಚೈತನ್ಯ ಇಮ್ಮಡಿಗೊಳಿಸಿತ್ತು... ಅದೇ ಅವನ ಮಗನ ಓದಿನ ವಿಷಯ.. ಬಿಸಿಲಲ್ಲಿ ತಾ ದುಡಿದು ಎಸೀಲೀ ಮಗನನ್ನಿಡಲು ಹಾತೊರಿಯುತ್ತಲಿತ್ತು ಆ ತಂದೆಯ ಮಡಿಲು... ಆದ್ರೆ, ದಿನ ಪೂರ್ತಿ ಬೆವರು ಸುರಿಸಿದರೂ ಸಿಗೋದು ಎಂಭತ್ತು ರೂಪಾಯಿ ಮಾತ್ರ.. ಅದ್ರಲ್ಲಿ ಮಗನನ್ನು ಎಷ್ಟು ತಾನೆ ಓದಿಸೋಕೆ ಸಾಧ್ಯ..?? ಆದರೂ ಆ ಬಡ ಆಶಾವಾದಿಯ ಮನದಲ್ಲಿ,  ಮಗನ ಬಗ್ಗೆ ಅಪಾರ ಭರವಸೆ ಇತ್ತು.. ಆ ತಂದೆಯ ಕಣ್ಣುಗಳಲ್ಲಿ ಮಹತ್ವಾಕಾಂಕ್ಷೆ ಇತ್ತು..

ಅದು ಸಂಜೆ ಐದರ ಸಮಯ... ಕೆಲಸ ಮುಗಿಸಿ ಮನೆಗೆ ಹೋಗುವ ಹೊತ್ತು ಹತ್ತಿರಕ್ಕೆ ಬಂದಿತ್ತು.. ಅದು ಕೊನೆಯ ಪುಟ್ಟಿ... ಕಲೆಸಿದ ಸಿಮೆಂಟನ್ನು ಆರನೆಯ ಮಹಡಿಯ ಮೇಲೆ ಹೋಗಿ ಕೊಡಬೇಕಿತ್ತು.. ದಿನ ಪೂರ್ತಿ ದಣಿದವನಿಗೆ ಅದೇನೋ ಸಂಜೆಯಾಗುತ್ತಲೇ ಸುಸ್ತು ಛಂಗನೆ ಕಾಣಿಸಿಕೊಂಡಿತ್ತು.. ಇದ್ದಕ್ಕಿದ್ದಂತೆ ಕಣ್ಣುಗಳಿಗೆ ಕತ್ತಲು ಕವಿದುಬಿಟ್ಟಿತ್ತು.. ಸ್ವಾಧೀನ ಕಳೆದುಕೊಂಡು ಧಿಡೀರನೇ ಬಿದ್ದು ಬಿಟ್ಟ.. ಅದೇ ಸಮಯಕ್ಕೆ ಸರಿಯಾಗಿ ಆ ಕಟ್ಟಡದ ಮಾಲೀಕರು ಎದುರಿಗೆ ಬಂದರು..!! 

                   ಮುಂಜಾನೆಯಿಂದ ಸಂಜೆಯವರೆಗೆ ಖುಷಿಯಗಿದ್ದವನು ಇದ್ದಕ್ಕಿದ್ದಂತೆ ಬಿದ್ದಿದ್ದು ಯಾಕೆ..?? ಅನ್ನೋದು ಅಲ್ಲಿದ್ದವರಿಗೆ ಅಚ್ಚರಿಯಾಯಿತು.. ಸುಸ್ತಾಗಿ ಬಿದ್ದವನನ್ನ ಮೇಸ್ತ್ರಿಯೊಬ್ಬರು ಧಿಡೀರನೆ ಆಸ್ಪತ್ರೆಗೆ ಕರೆದೊಯ್ದರು.. ಅವನ ಆರೋಗ್ಯಕ್ಕೆ ಯಾವುದೇ ರೀತಿಯ ಆಪತ್ತು ಇರಲಿಲ್ಲ. ಭಗವಂತ ಅವನ ಬದುಕಿನ ಆಯುಶ್ಯದ ಗೆರೆಯನ್ನು ಇನ್ನು ಉದ್ದಕ್ಕೆ ಎಳೆದಿದ್ದ.. ವೈದ್ಯರು ಆ ಕೂಲಿಕಾರನಿಗೆ ಗ್ಲೂಕೋಸ್ ಹಾಕಿಸಿ ಹೊರ ಬಂದರು.. ಮಾಲೀಕ ಕೂಡ ಅಲ್ಲೇ ಕೂತಿದ್ದ..

ಗಾಬರಿಯಾಗೋದು ಏನೂ ಇಲ್ಲ.. ಸರಿಯಾಗಿ ಊಟ ಮಾಡಿಲ್ಲ.. ಅದಕ್ಕೆ ಹೀಗೆ ಆಗಿದೆ ಅಷ್ಟೇ.. ಟ್ರೀಟ್ಮೆಂಟ್ ಕೊಟ್ಟಿದ್ದೀವಿ.. ಸರಿ ಹೋಗುತ್ತೆ.. ಹಾಂ.. ಕೆಳಗಡೆ ಕೌಂಟರ್ ನಲ್ಲಿ ಫೀಸ್ ಕಟ್ಟಿಬಿಡಿ ಅಂತ ಕಾಗದವೊಂದನ್ನು ಕೈಯಲ್ಲಿಟ್ಟು ಮುಂದೆ ನಡೆದಳು ಬಿಳಿ ಕೋಟಿನ ನಾರಿ.. ಒಂದು ರೂಪಾಯಿಗೂ ಲೆಕ್ಕ ಇರಬೇಕು ಅನ್ನೋ ವ್ಯಕ್ತಿ ಈ ಮಾಲೀಕ.. ಜಿಪುಣ ಎನ್ನುವುದಕ್ಕಿಂತ ಬೇಕಾ ಬಿಟ್ಟಿ ಖರ್ಚಿಗೆ ಕಡಿವಾಣ ಹಾಕುವಂಥ ಕುಶಲಮತಿಯವ.. ಬಹುಶಃ ಇಂಥ ಕುಶಲಮತಿಯಿಂದಲೇ ಆತನೀಗ ಮೂರು ಕಂಪೆನಿಗಳ ಮಾಲೀಕನಾಗಿದ್ದ.. ಕೈಯಲ್ಲಿದ್ದ ಬಿಲ್ಲನ್ನು ನೋಡಿದ ಮಾಲೀಕನಿಗೆ ಪಿತ್ತ ನೆತ್ತಿಗೇರಿತ್ತು.. ಬ್ರಾಹ್ಮಣನನ್ನು ಮಠನ್ ಸ್ಟಾಲ್ ಗೆ ಕರೆದುಕೊಂಡು ಹೋದಾಗ ಎಷ್ಟು ಕೋಪ ಬರುತ್ತೋ ಅಷ್ಟು ಕೋಪ ಅವನ ಮೊಗದಲ್ಲಿ, ಮನದಲ್ಲಿ ಕಾಣಿಸಿಕೊಂಡಿತ್ತು..

ಒಂದು ಹೊತ್ತಿನ ಊಟಕ್ಕೆ 20 ರೂಪಾಯಿ ಆಗುತ್ತೆ.. ಇಪ್ಪತ್ತು ರೂಪಾಯಿಯ ಊಟ ಮಾಡದೇ ಇಲ್ಲಿ ಬಂದು ಸಾವಿರ ರೂಪಾಯಿ ಆಸ್ಪತ್ರೆ ಬಿಲ್ಲು ಕೊಡುವಂತೆ ಮಾಡಿದನಲ್ಲ ಈ ಕೂಲಿಕಾರ ಎಂದು ಸಿಟ್ಟು ಅಬ್ಬರಿಸಿ ಬಂತು. ಅನಾವಶ್ಯಕ ಖರ್ಚಿಗೆ ಬೇಕೆಂತಲೇ ದಾರಿ ಮಾಡಿ ಕೊಟ್ಟ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ಮೇಸ್ತ್ರಿಗೆ ಸೂಚನೆಯನ್ನು ನೀಡುತ್ತಾನೆ.. ಮರು ಮಾತಾಡದೇ ಸಮ್ಮತಿ ಸೂಚಿಸಿ ಎರಡು ಹೆಜ್ಜೆ ಹಿಂದಕ್ಕೆ ಸರಿಯುತ್ತಾನೆ ಮೇಸ್ತ್ರೀ ಮಹಾಶಯ.. ಯಾಕೆ ಅಂದ್ರೆ ಆ ಬಡವನ ಪರ ಧ್ವನಿ ಏರಿಸಿದರೆ, ತನ್ನ ಕೆಲಸಕ್ಕೂ ಎಲ್ಲಿ ಕತ್ತರಿ ಬೀಳುವುದೋ ಎಂಬ ಆತಂಕ, ಭಯ ಆ ಮೇಸ್ತ್ರಿಗೆ..

ಆಸ್ಪತ್ರೆಯ ಬೆಡ್ಡಿನ ಮೇಲೆ ನಿತ್ರಾಣವಿಲ್ಲದೇ ಮಲಗಿದ್ದ ಆ ವ್ಯಕ್ತಿಯ ಬಳಿ ಬಂದ ಮಾಲೀಕ ನಿನ್ನ ಒಂದು ತಿಂಗಳ ಸಂಬಳ ಎಷ್ಟು??” ಅಂತ ಕೇಳ್ತಾನೆ..
ಉಸಿರು ಬಿಡಲೂ ಅಶಕ್ತನಾದ ಅವನಿಗೆ, ಅನ್ನದಾತನ ಆ ಪ್ರೆಶ್ನೆಗೆ ಉತ್ತರಿಸಬೇಕಾದ ಅನಿವಾರ್ಯತೆ ಇತ್ತು.. ಮೆಲು ಧ್ವನಿಯಲ್ಲೇ ಎರಡು ಸಾವಿರಅಂತ ಹೇಳಿದ.

ಬಾಗಿಲ ಬಳಿಯಲ್ಲಿದ್ದ ತನ್ನ ಮ್ಯಾನೇಜರ್ ನನ್ನು ಕರೆದು, ಸೂಟ್ ಕೇಸ್ ನಲ್ಲಿದ್ದ ಹಣದ ಬಂಡಲ್ ಅನ್ನು ತೆರೆದ.. ಅದರಿಂದ ಆರು ಸಾವಿರ ರೂಪಾಯಿಗಳನ್ನು ಆ ವಯೋವೃದ್ಧನ ಕೈಗಿಟ್ಟು, ತಗೋ ಈ ಮೂರು ತಿಂಗಳ ಸಂಬಳ.. ನಿನ್ನಂಥ ಬೇಜವಾಬ್ದಾರಿಯುತ ವ್ಯಕ್ತಿಗೆ  ಇನ್ನು ನನ್ನ ಸಂಸ್ಥೆಯಲ್ಲಿ ಕೆಲಸವಿಲ್ಲ.. ಕೇವಲ ಇಪ್ಪತ್ತು ರೂಪಾಯಿಯ ಬದಲಿಗೆ ಸಾವಿರ ರೂಪಾಯಿಯ ಆಸ್ಪತ್ರೆ ಬಿಲ್ಲು ಕಟ್ಟುವಂತೆ ಮಾಡಿದ್ದೀಯ.. ಸಾವಿರ ರೂಪಾಯಿ ನನಗೆ ಹೆಚ್ಚಲ್ಲ.. ಆದರೆ ಇಪ್ಪತ್ತು ರೂಪಾಯಿ ಬದಲಿಗೆ ಸಾವಿರ ರೂಪಾಯಿಯನ್ನು ಖರ್ಚು ಮಾಡಿಸುವಂಥ ಬೇಜವಾಬ್ದಾರಿಯ ವ್ಯಕ್ತಿಗೆ ನನ್ನ ಸಂಸ್ಥೆಯಲ್ಲಿ ಕೆಲಸವಿಲ್ಲಎಂದು ಹೇಳಿ ಅಲ್ಲಿಂದ ಹೊರಟು ಹೋದ ಮಾಲೀಕ..

ಶ್ವಾಸದಲ್ಲಿ ಉಸಿರಿಲ್ಲ... ದೇಹದಲ್ಲಿ ಶಕ್ತಿಯಿಲ್ಲ.. ಆದರೂ ಈಗೇನಾದರೂ ಮೌನವಾಗಿದ್ದರೆ ತನ್ನ ಕೆಲಸ ಹೋಗುತ್ತೆ.. ಕೆಲಸ ಹೋದರೆ ತನ್ನ ಮಗನ ಶಾಲೆಗೆ ಕುತ್ತಾಗುತ್ತೆ.. ತನ್ನ ಇಷ್ಟು ವರ್ಷದ ಆಸೆ ನೀರಲ್ಲಿ ಕೊಚ್ಚಿ ಹೋಗುತ್ತೆ ಎಂದು ತಿಳಿದು, ಜೋರಾಗಿ ಕೂಗಿ ತನ್ನ ಮಾಲೀಕನನ್ನ ಕರೆದು, “ಸ್ವಾಮಿ.... ನನ್ನನ್ನು ಕ್ಷಮಿಸಿ.. ಇನ್ನು ಮುಂದೆ ಹೀಗೆ ಮಾಡೋದಿಲ್ಲ... ನನ್ನಿಂದ ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕೆಲಸ ಮಾಡ್ತೀನಿ.. ದಯವಿಟ್ಟು ನನಗೆ ಕೆಲಸ ಮಾಡೋಕೆ ಅವಕಾಶ ಕೊಡಿ.. ನಾನು ಊಟ ಮಾಡಿದರೆ, ನನ್ನ ಮಗನ ಓದಿಗೆ ಹಣ ಇರುತ್ತಿರಲಿಲ್ಲ.. ನಾನು ಉಪವಾಸವಿದ್ದರೂ ಪರವಾಗಿಲ್ಲ.. ನನ್ನ ಮಗನ ಓದಿಗೆ ಯಾವತ್ತೂ ಕಡಿಮೆ ಆಗಬಾರದು ಅಂತ ಭಾವಿಸಿ ಹೀಗೆ ಮಾಡಿಬಿಟ್ಟೆ.. ದಯವಿಟ್ಟು ಕ್ಷಮಿಸಿ,. ನನ್ನ ಮಗನ ಓದಿಗಾಗಿ ನಾನು ಉಪವಾಸ ಮಾಡಿದೆ.. ಕೆಲಸದಿಂದ ತೆಗೆದು ಹಾಕಬೇಡಿ.. ಎಂದು ಗೋಳಾಡಿದ”.

ಆದರೆ, ಬೇಜಾವಾಬ್ದಾರಿ ಜನರನ್ನು ತೋರುವ ಜನರ ಕಣ್ಣೀರಿನ ಮಾತನ್ನು ಕೇಳಲು ಮಾಲೀಕ ತಯಾರಿರಲಿಲ್ಲ.. ಆದರೆ ಅವನ ಮ್ಯಾನೇಜರ್ ಗೆ ಇವನ ಮಾತನ್ನು ಕೇಳಿಸಿಕೊಂಡ. ಆದ್ರೆ ಮ್ಯಾನೇಜರ್ ಏನುತಾನೆ ಮಾಡಿಯಾನು..?? ಮಾಲೀಕ ಹೇಳಿದ್ದನ್ನು ಕಣ್ಮುಚ್ಚಿ ಕೇಳಬೇಕಾದ ಒನ್ ವೇ ಕೆಲಸ ಅವನದ್ದಾಗಿತ್ತು.. ಸ್ವಾಮಿಯನ್ನು ಆಂಜನೇಯ ಹಿಂಬಾಲಿಸಿದಂತೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೊರಟ ಮ್ಯಾನೇಜರ್..

ತನ್ನ ಕೆಲಸ ಹೋಗೇ ಬಿಟ್ಟಿತಲ್ಲ ಎಂಬ ದುಗುಡ... ಮಗನ ಓದಿನ ಕನಸು ಇಲ್ಲಿಗೇ ನಿಂತು ಬಿಟ್ಟಿತಲ್ಲಾ ಎಂಬ ಚಿಂತೆಯಿಂದ ಮನವು ಕರಗಿ ನೀರಾಗಿ ಕಣ್ಣೀರಿನ ಮೂಲಕ ಹೊರಗೆ ಬರುತ್ತಲಿತ್ತು.. ಆದರೆ ಒರೆಸುವ ಕೈಗಳು ಮಾತ್ರ ಅಲ್ಲಿ ಇರಲೇ ಇಲ್ಲ.

ಮಾರನೆಯ ದಿನ ಮಾಲೀಕ ನೇರವಾಗಿ ತನ್ನ ಮತ್ತೊಂದು ಆಫೀಸಿಗೆ ಅಚಾನಕ್ ಆಗಿ ಭೇಟಿ ಕೊಡ್ತಾನೆ.. ತನ್ನ ಕೆಲಸಗಾರರು ಹೇಗೆ ಕೆಲಸ ಮಾಡ್ತಿದ್ದಾರೆ ಪರೀಕ್ಷಿಸಬೇಕು ಅನ್ನೋ ಆಲೋಚನೆಯಿಂದ ಇಂಥ ಒಂದು ನಿರ್ಧಾರಕ್ಕೆ ಬರ್ತಾನೆ.  ಹತ್ತು ಗಂಟೆಗೆ ಆಫೀಸು ಶುರುವಾಗುತ್ತೆ. ಸುಮಾರು ಹನ್ನೊಂದು ಗಂಟೆಸ ಸಮಯಕ್ಕೆ ಸರಿಯಾಗಿ ಮ್ಯಾನೇಜರ್ ಮತ್ತು ಮಾಲೀಕ ಇಬ್ಬರೂ ಆಫೀಸಿಗೆ ಬರ್ತಾರೆ.. ಅಲ್ಲಿದ್ದ ನೂರೂ ಜನ ನೌಕರರು ಕೆಲಸ ಮಾಡುತ್ತಿರುತ್ತಾರೆ.. ಒಬ್ಬ ಮಾತ್ರ ರಿಸಪ್ಷನ್ ನಲ್ಲಿ ಕೂತ್ಕೊಂಡು ಸುಮ್ಮನೇ ನೋಡುತ್ತಾ ನಿಂತಿರುತ್ತಾನೆ.. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವಾಗ, ಇವನೊಬ್ಬ ಮಾತ್ರ ಕೆಲಸದ ವೇಳೆಯಲ್ಲಿ ಹರಟೆ ಒಡೆಯುತ್ತಿರುವುದನ್ನು ಕಂಡು, ಮಾಲೀಕನಿಗೆ ಕೋಪ ಒತ್ತರಿಸಿ ಬರುತ್ತದೆ.. ಇಂಥಾ ಬೇಜವಾಬ್ದಾರಿಯುತ ವ್ಯಕ್ತಿ ನನ್ನ ಆಫೀಸಿನಲ್ಲಿ ಕೆಲಸ ಮಾಡೋದು ಸರಿಯಲ್ಲ ಎಂದು ನಿರ್ಧರಿಸುತ್ತಾನೆ. ಆ ವ್ಯಕ್ತಿಯ ಬಳಿಗೆ ಬಂದ ಮಾಲೀಕ ನಿನಗೆ ತಿಂಗಳಿಗೆ ಎಷ್ಟು ಸಂಬಳ..??” ಎಂದು ಕೇಳಿದ..


ಬಂದವರು ಯಾರು..?? ಯಾಕೆ ಹೀಗೆ ಕೇಳುತ್ತಿದ್ದರೆ ಎಂದು ತಿಳಿಯದೆ ಅಚ್ಚರಿಯಿಂದ ಮಾಲೀಕನ ಪ್ರೆಶ್ನೆಗೆ ಉತ್ತರಿಸಿದ ಐದು ಸಾವಿರ”. ಹೀಗೆಂದ ಕೂಡಲೇ ತನ್ನ ಮ್ಯಾನೇಜರ್ ನನ್ನು ಕರೆದು ಸೂಟ್ ಕೇಸ್ ನಲ್ಲಿದ್ದ ಹಣದ ಗೊಂಚಲಿನಲ್ಲಿ ಹದಿನೈದು ಸಾವಿರ ರೂಪಾಯಿಯನ್ನು ತೆಗೆದು ಆ ವ್ಯಕ್ತಿಯ ಕೈಗಿಟ್ಟ.. ನಿನ್ನ ಮೂರು ತಿಂಗಳ ಸಂಬಳವನ್ನು ನಿನಗೆ ನೀಡುತ್ತಿದ್ದೇನೆ.. ತಗೊಂಡು ಇಲ್ಲಿಂದ ಹೊರಟು ಹೋಗು.. ಎಲ್ಲರೂ ಕೆಲಸ ಮಾಡುತ್ತಿರುವಾಗ ನೀನೊಬ್ಬ ಮಾತ್ರ ಹೀಗೆ ಬೇಜಾವಾಬ್ದಾರಿಯಿಂದ ನಿಂತಿದ್ದೀಯ.. ನಿನ್ನಂಥ ಬೇಜಾವಾಬ್ದಾರಿಯ ಹರಟೆ ಮಲ್ಲರಿಗೆ ಈ ನನ್ನ ಆಫೀಸಿನಲ್ಲಿ ಕೆಲಸವಿಲ್ಲ.. ಎಂದು ಗಡಸು ಧ್ವನಿಯಲ್ಲಿ ಜರಿದು ಆತನನ್ನು ಹೊರಗಟ್ಟುತ್ತಾನೆ

ಆಫೀಸಿನ ಮಾಲೀಕನೇ ಹೀಗೆ ಹೇಳಿದ ಮೇಲೆ ಇಲ್ಲಿ ಇರಲು ಸಾಧ್ಯವೇ,..??? ಕೊಟ್ಟ ಹಣವನ್ನು ಜೇಬಿಗಿಳಿಸಿಕೊಂಡು ಅಲ್ಲಿಂದ ಹೊರಟು ಬಿಟ್ಟ ಆ ವ್ಯಕ್ತಿ.. ಅವನು ಹೋದ ನಂತರ ತನ್ನ ಮ್ಯಾನೇಜರ್ ಅನ್ನು ಕರೆದು ಕೇಳಿದ
ಆ ವ್ಯಕ್ತಿಯ ಹೆಸರೇನು..??
ಮಂಜುನಾಥಮೌನವಾಗಿ ಉತ್ತರಿಸಿದ ಮ್ಯಾನೇಜರ್
ಅವನು ನಮ್ಮ ಸಂಸ್ಥೆಯಲ್ಲಿ ಏನು ಕೆಲಸ ಮಾಡುತ್ತಿದ್ದ..?? ಮರು ಪ್ರೆಶ್ನೆ ಹಾಕಿದ ಮಾಲೀಕ
ಕ್ಷಮಿಸಿ ಸರ್.. ಅವನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವನಲ್ಲ.. ಅವನು ಕೊರಿಯರ್ ವ್ಯಕ್ತಿ.. ಅವನು ಕೊರಿಯರ್ ತೆಗೆದುಕೊಂಡು ಹೋಗೋಕೆ ಬಂದಿದ್ದ.. ಆದರೆ ನೀವು ಅನಿಗೆ ಹದಿನೈದು ಸಾವಿರ ಕೊಟ್ಟು ಕಳಿಸಿಬಿಟ್ಟಿದ್ದೀರಿಎಂದು ಹೇಳಿದ ಮ್ಯಾನೇಜರ್..

ಮಾಲೀಕ ದಂಗಾಗಿ ಹೋದ.. ತನ್ನ ಅತಿ ಬುದ್ದಿವಂತಿಕೆಯಿಂದ ಹದಿನೈದು ಸಾವಿರ ಕಳೆದುಕೊಂಡಿದ್ದಕ್ಕೆ ಬೇಸರವಾಗಿತ್ತು.. ನಾಚಿಕೆಯಾಯಿತು..

ನನ್ನ ಆಲೋಚನೆ ತಪ್ಪೇ ಮ್ಯಾನೇಜರ್?? ನನ್ನ ಅತಿಯಾದ ವಿವೇಕವೇ ಅವಿವೇಕವಾಯಿತೇ ಎಂದು ಪ್ರೆಶ್ನೆಸಿದ..

ಮ್ಯಾನೇಜರ್ ವಿನಮ್ರತೆಯಿಂದ ಉತ್ತರಿಸಿದ ಇಲ್ಲ ಸರ್.. ನಿಮ್ಮ ಆಲೋಚನೆ ತಪ್ಪಲ್ಲ.. ಸಂಸ್ಥೆ ಬೆಳೆಸಲು ನಿಮ್ಮ ಆಲೋಚನೆ ಬಹಳ ಮುಖ್ಯ. ಆದರೆ ನೀವು ಒಂದೇ ಒಂದು ತಪ್ಪು ಮಾಡಿದ್ದೀರಿ

ಏನು..?? ನಾನು ತಪ್ಪು ಮಾಡಿದೆನೇಅಚ್ಚರಿಯಿಂದ ಕೇಳಿದ ಮಾಲೀಕ

ಹೌದು ಸರ್.. ನೆನ್ನೆ ನೀವು ಆ ವಯೋ ವೃದ್ಧನ ಬಗ್ಗೆ ಸಂಪೂರ್ಣವಾಗಿ ವಿಚಾರಿಸದೇ ನೀವು ಅವನನ್ನು ಕೆಲಸದಿಂದ ತೆಗೆದಿದ್ದು ಎಲ್ಲೋ ತಪ್ಪಾಗಿದೆ ಅನ್ನೋದು ನನ್ನ ಅಭಿಪ್ರಾಯಎಂದ ಮ್ಯಾನೇಜರ್.

ಅವನು ಊಟ ಮಾಡಿದ್ದರೆ ಕೇವಲ ಇಪ್ಪತ್ತು ರೂಪಾಯಿ ಖರ್ಚಾಗುತ್ತಿತ್ತು.. ಆದರೆ ಅವನು ಊಟ ಮಾಡದೇ ಕೇವಲ ಇಪ್ಪತ್ತು ರೂಪಾಯಿಯನ್ನು ಉಳಿಸಲು ಹೋಗಿ ಸಾವಿರ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟುವಂತೆ ಮಾಡಿದ್ದು ತಪ್ಪಲ್ಲವೇ..?? ಅದು ಹಣದ ಅಪವ್ಯಯವಲ್ಲವೇ..??” ಎಂದು ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳತೊಡಗಿದ ಮಾಲೀಕ

ಸರ್... ಆ ವಿಚಾರದಲ್ಲಿ ಅವನು ಮಾಡಿದ್ದು ತಪ್ಪು.. ಆದರೆ ತಾವು ಆ ಬಡವನಿಗೆ ನೀಡುತ್ತಿರುವ ವೇತನದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..?? ಮಗದೊಂದು ಪ್ರೆಶ್ನೆಯ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ ಮ್ಯಾನೇಜರ್..

ಇಲ್ಲ.. ಅದು ನನಗೆ ಬೇಡದ ವಿಷಯವಲ್ಲವೇ..ಮಾಲೀಕ ಕೇಳಿದ

ಸರ್.. ನೀವು ಕೊಡುತ್ತಿರುವ ಹಣ ಅವರಿಗೆ ಸಾಲುತ್ತಿಲ್ಲ.. ಅವನು ಮಧ್ಯಾಹ್ನದ ಊಟ ಮಾಡಿದ್ದರೆ, ತನ್ನ ಮಗನ ಓದಿಗೆ ಹಣ ಸಾಲದೇ ಬರುತ್ತಿತ್ತು.. ಅದಿಕ್ಕೆ ಅವನು ಊಟ ಮಾಡಿಲ್ಲ.. ಮಗನ ಓದಿಗಾಗಿ ಊಟ ತ್ಯಾಗ ಮಾಡಿದ  ತಂದೆಯ ಮನಸಿಗೆ, ನೀವು ಕೆಲಸದಿಂದ ತೆಗೆಯುವುದರ ಮೂಲಕ ಘಾಸಿಗೊಳಿಸಿದ್ರಿ ಅನಿಸ್ತಾ ಇದೆ.. ನೀವು ನೀಡುವ ಸಂಬಳ ಅವನ ಮಗನ ಓದಿಗೆ ಸಾಕಾಗುತ್ತಿದ್ದರೆ ಅವನೇಕೆ ಉಪವಾಸ ಇರುತ್ತಿದ್ದ..?? ಅವನ ಈ ಪರಿಸ್ಥಿತಿಗೆ ಪರೋಕ್ಷವಾಗಿ ನೇವೇ ಕಾರಣವಲ್ಲವೇ..?? ಯೋಚಿಸಿ.. ನೀವು ಆ ಬಡವನಿಂದ ಕೆಲಸ ಕಿತ್ತುಕೊಂಡಿರಿ.. ಆ ಕೊರಿಯರ್ ಹುಡುಗ ನಿಮ್ಮ ಬಳಿಯಿಂದ ಹದಿನೈದು ಸಾವಿರ ಕಿತ್ತುಕೊಂಡು ಹೋದ.. ಬದುಕು ಹೀಗೆ.. ನಿಜವಾಗಲೂ ವ್ಯರ್ಥವಗಿರೋದು ಈ ಕೊರಿಯರ್ ಹುಡುಗ ತೆಗೆದುಕೊಂಡ ಹೋದ ಹಣ ಮಾತ್ರ.. ಆ ಬಡ ಕೂಲಿಕಾರನಿಗೆ ಕೊಟ್ಟ ಹಣವಲ್ಲ.. ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಿಮ್ಮ ನಿರ್ಧಾರಗಳು ಪೂರಕವಾಗಿವೆ.. ನೀವು ತೆಗೆದುಕೊಳ್ಳುವ ನಿಯಮಗಳು ತಪ್ಪಲ್ಲ.. ಆದರೆ ಸಂಸ್ಥೆಯಲ್ಲಿ ಕೆಲಸ ಮಾಡುವವರ ಬದುಕು ಕೂಡ ನಿಮ್ಮ ಸಂಸ್ಥೆಯ ಪ್ರತಿಷ್ಟೆಗೆ ಸಂಬಂಧಿಸಿರುತ್ತೆ.. ತನ್ನ ಕೆಲಸಗಾರರ ಬದುಕಿಗೆ ಆಧಾರವಾಗಬೇಕಾಗಿರುವುದು ಸಂಸ್ಥೆಯೇ ಅಲ್ಲವೇ..??”

ಎಂದು ಮ್ಯಾನೇಜರ್ ಹೇಳಿದ... ಅವನ ಮಾತು ನಿಜಕ್ಕೂ ಅರ್ಥಗರ್ಭಿತವಾಗಿತ್ತು... ಆ ಬಡ ವ್ಯಕ್ತಿಯ ಉಪವಾಸಕ್ಕೆ ತಾನೇ ಕಾರಣ ಎಂಬುದನ್ನು ಮಾಲೀಕ ಅರ್ಥ ಮಾಡಿಕೊಂಡಿದ್ದ.. ಕನಿಷ್ಟ ಕೂಲಿಯನ್ನು ನೀಡಬೇಕಾಗಿರುವುದು ತನ್ನ ಕರ್ತವ್ಯವೂ ಹೌದು ಎಂಬುದು ಮ್ಯಾನೇಜರ್ ನ ಮಾನವೀಯತೆಯ ಮಾತಿನಿಂದ ಅರಿವಾಯಿತು.. ಕೂಡಲೇ ಆ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮ್ಯಾನೇಜರ್ ಗೆ ಸೂಸಚಿಸಿದ.. ಅಷ್ಟೆ ಅಲ್ಲ.. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಬದುಕಿನ ಕನಿಷ್ಟ ಅವಶ್ಯಕತೆಗಳನ್ನುಪಡೆಯುವಲ್ಲಿ ಸಮರ್ಥರಾಗಿದ್ದಾರೆಯೇ..?? ಅಥವ ಇಲ್ಲವೇ ಎಂಬುದನ್ನು ಗಮನಿಸುವಂತೆ ಮ್ಯಾನೇಜರ್ ಗೆ ಸೂಚಿಸಿದ.

ಮಾಲೀಕನ ನಿರ್ಧಾರದಿಂದ ಮ್ಯಾನೇಜರ್ ಗೆ ಖುಷಿ ಆಯ್ತು.. ತಕ್ಷಣವೇ ಕಾರ್ಯೋನ್ಮುಖನಾದ ಮ್ಯಾನೇಜರ್.. ನಿಮ್ಮ ನಿರ್ಧಾರ ಎಲ್ಲಾ ಸಂಸ್ಥೆಯವರು ಕೈಗೊಂಡರೆ... ಕನಿಷ್ಟ ಕೂಲಿಯನ್ನು ನೀಡಿದರೆ ಎಲ್ಲರ ಬದುಕು ಹಸನಾಗುತ್ತದೆ ಸರ್.. ಯಾರೂ ಉಪವಾಸ ಇರಬೇಕಾದ ಅನಿವಾರ್ಯತೆ ಇರುವುದಿಲ್ಲ.. ನೀವೇನೂ ಚಿಂತಿಸಬೇಡಿ ಸರ್.. ನಿಮ್ಮಿಂದ ಹದಿನೈದು ಸಾವಿರ ತೆಗೆದುಕೊಂಡು ಹೋದ ಆ ಕೊರಿಯರ್ ಹುಡುಗನನ್ನು ಕರೆಯಲು ಕಳಿಸುತ್ತೇನೆ.. ಕಳೆದ ಆ ಹಣವೆಲ್ಲವೂ ಮರಳಿ ಬರುತ್ತೆಎಂದ ಮ್ಯಾನೇಜರ್
ತಪ್ಪಿನ ಅರಿವಾಗಿದ್ದ ಮಾಲೀಕ ಅಪರಾಧಿ ಮನೋಭಾವನೆಯೊಂದಿಗೆ ತಲೆ ಎತ್ತಿ ಹೇಳಿದ ಬೇಡ ಮ್ಯಾನೇಜರ್ ರವರೆ... ಆ ಹುಡುಗನೇ ನನ್ನ ಕಣ್ ತೆರೆಸಿದ.. ಪಾಠ ಕಲಿಯೋದಕ್ಕೆ ನಾವು ಲಕ್ಷ ಲಕ್ಷ ಹಣ ಕೊಟ್ಟು ಯೂನಿವರ್ಸಿಟಿ,, ಕಾಲೇಜುಗಳಿಗೆ ಹೋಗ್ತೀವಿ.. ಆದರೆ ಬದುಕಿನ ಪಾಠ... ಅನಿವಾರ್ಯತೆ ಮತ್ತು ಬದುಕಿನ ಅವಶ್ಯಕತೆಗಳು ಎಷ್ಟಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಆ ಕೊರಿಯರ್ ಹುಡುಗನಿಗೆ ನಾನು ಏನು ಕೊಡಲು ಸಾಧ್ಯ..?? ಆ ಹಣ ಅವನಿಗೆ ನಾನು ಕೊಡುವ ಗುರು ದಕ್ಷಿಣೆಯಾಗಲಿ ಅದು.. ಎಂದು ಹೇಳಿ ತನ್ನ ಛೇಂಬರ್ ಗೆ ಹೋಗಿ ಕುಳಿತು ಬಿಟ್ಟ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು