ಸಿನೆಮಾ

Share This Article To your Friends

ಸಂಗೊಳ್ಳಿ ರಾಯಣ್ಣ-ಬ್ರಿಟೀಷ್ ಜೊತೆಗೆ ಆಡಿದ ಮಾತುಗಳು
ಅಕ್ಕ ನಿಮ್ಮ ಉಪ್ಪುಂಡ ಈ ರಾಯ
ಗೆದ್ದ ಕಿತ್ತೂರು ತಂದು ಉದ್ದ ಬೀಳುವೆ ತಾಯಿ
ಕದ್ದ ಮಾತಲ್ಲ ನಿಮ್ಮಾಣೆ ! ಇಲದಿರಕ
ಬಿದ್ದು ಹೋಗುಗೆ ರಣದಾಗೆ ||

(ಎಂದು ಹೇಳಿದ ರಾಯಣ್ಣ ಚನ್ನಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ಹೋಗುತ್ತಾನೆ. ಅದೊಂದು ದಿನ ಬ್ರಿಟೀಷ್ ಅಧಿಕಾರಿಗಳ ಕುತಂತ್ರದಿಂದಾಗಿ ರಾಯಣ್ಣ ಬಂಧನಕ್ಕೊಳಗಾಗುತ್ತಾನೆ. ಆಗ ಬ್ರಿಟೀಷ್ ಅಧಿಕಾರಿ ಮತ್ತು ರಾಯಣ್ಣನ ನಡುವೆ ನಡೆಯುವ ಸಂಭಾಷಣೆ ಇದು)

ಬ್ರಿಟೀಷ್ ಅಧಿಕಾರಿ- ಏನೋ ರಾಯಣ್ಣ.. ಎಲ್ಲಾರು ಬಾಲ ಮುದುರಿಕೊಂಡು ಕುಂತಾರ.. ನೀನೊಬ್ಬ ಕ್ರಾಂತಿ ಮಾಡೋಕೆ ಬಂದ್ಯೇನಲೇ..!!  ಕನ್ನಡದ ಅವ್ವ ಕ್ರಾಂತಿ ವೀರ ಅಂತ ನಿನ್ನೊಬ್ಬನನ್ನೇ ಹಡೆದಾಳೇನೋ..??

ಸಂಗೊಳ್ಳಿ ರಾಯಣ್ಣ- ಸಾಯೇಬ್ರೇ..!! ಕನ್ನಡದ ಅವ್ವನ ಮಡಿಲಲ್ಲಿ ಹುಟ್ಟಿದವರೆಲ್ಲಾ ಕ್ರಾಂತಿಯ ಕಲಿಗಳೇ.. ಕೆಂಪು ಜಿರಲೆಯನು ಹೊಡೆದು, ಬೇಟೆಯಾಡಿದ ಖುಷಿಯಲ್ಲಿ ಜಿರಲೆಯ ತಿಂದು ಬದುಕುವ ಕೆಂಪು ಕೋತಿಗಳಲ್ಲ ನಾವು.. ಕಾಡಿನಲ್ಲಿ ಒಂಟಿಯಾಗಿ ಹುಲಿಯೊಂದಿಗೆ ಬೇಟೆಯಾಡಬಲ್ಲ ಧೀರ ಸಾಹಸಿಗರು ಈ ಕನ್ನಡಿಗರು..

ಬ್ರಿಟೀಷ್ ಅಧಿಕಾರಿ- ನಮ್ಮನ್ನೇ ಕೆಂಪು ಕೋತಿಗಳು ಅಂತೀಯೇನ ಲೇ ರಾಯ.. ಜೀವದ ಮ್ಯಾಲ ಆಸಿ ಇಲ್ಲ ಅಂತ ಕಾಣ್ತದ ನಿನಗ??

ರಾಯಣ್ಣ- ಆಸಿ ಭಾಳ ಅದ್ರಿ ಸಾಹೇಬ್ರ.. ನಿಮ್ಮ ಹುಟ್ಟಡಗಿಸಿ, ತಲಿ ಕಡಿದು ಕಿತ್ತೂರು ಸಂಸ್ಥಾನದಿಂದ ಕಿತ್ತೊಗೆಯಬೇಕು ಅನ್ನೋ ಆಸಿ ಮನದೊಳಗಾದ.. ರಣದೊಳಗ ಜೀವ  ಹೋದರೂ ಪರ್ವಾಗಿಲ್ಲ.. ಆದ್ರೆ ಜೀವದಾನ ಪಡೆದು ಯಾವತ್ತೂ ಸೋತು ಹಿಂದಕ್ಕೆ ಹೆಜ್ಜೆ ಇಡೋದಿಲ್ಲ.. ಜೀವದ ಮ್ಯಾಲ ಆಸಿ ಇಲ್ಲ.. ಆದ್ರ ಜೀವ ಇರೋದ್ರೊಳಗ ಕಿತ್ತೋರನ್ನು ನಿಮ್ಮಂಥ ಕತ್ತೆ ಕಿರುಬಗಳಿಂದ ಬಂಧ ಮುಕ್ತ ಗೊಳಿಸಬೇಕು ಅನ್ನೋ ಅಸೆ ಭಾಳ ಆದ್ರಿ..

ಬ್ರಿಟೀಷ್ ಅಧಿಕಾರಿ- ಎಲಾ ರಾಯ.. ಇಷ್ಟಾದ್ರೂ ನಿನ್ನ ಸೊಕ್ಕು ಮುರೀಲಿಲ್ಲ ಅಲ್ಲ..?? ಈ ಸೊಕ್ಕು ಬಿಟ್ಟು ನಮಗೆ ಶರಣಾಗಿ ತಲೆಬಾಗು.. ನಮ್ಮ ರಾಣಿಯ ಪಾದಕ್ಕೆ ಬಿದ್ದು ಕ್ಷಮೆ ಕೇಳು.. ನಿನ್ನ ತಲೆ ಉಳಿಯುತ್ತೆ..

ರಾಯಣ್ಣ- ಹ ಹ ಹ.. (ಎಂದು ನಗುತ್ತಾನೆ).. ಎದುರಾಳಿಯ ತಲೆ ಕಡಿ ಎಂದರೆ ಧಪ ಧಪನೆ ಕಡಿದು ತಂದು ನನ್ನ ತಾಯಿ ಕನ್ನಡಾಂಬೆಗೆ ಅರ್ಪಿಸುತ್ತೇನೆ.. ಆದರೆ ಎಂದಿಗೂ ತಲೆ ಬಾಗುವವನಲ್ಲ ಈ ರಾಯಣ್ಣ.. ತಲೆ ಕಾಯ್ದು ಕಾಪಾಡಿದವರಿಗಾಗಿ ತಲೆ ಕೊಡಲೂ ಸಿದ್ಧ..

ಬ್ರಿಟೀಷ್ ಅಧಿಕಾರಿ- ಭಲಾ ರಾಯ.. ಭಲಾ...!! ಗಂಡಸ್ಥನದ ಮಾತಾಡ್ತಿದ್ದೀ..??

ರಾಯಣ್ಣ- ಗಂಡಸಾಗಿದ್ದಕ್ಕೆ ನಮ್ಮವ್ವ ನನಗ ರಾಯಣ್ಣ ಅಂತ  ಹೆಸರಿಟ್ಟಾಳ.. ಇಲ್ಲ ಅದ್ರ ರಾಯವ್ವ ಅಂತ  ಕರೀತಿದ್ರು.. ಸಾಹೇಬ್ರೆ..!!

ಬ್ರಿಟೀಷ್ ಅಧಿಕಾರಿ- ಕಿತ್ತೂರು ಸಂಸ್ಥಾನವನ್ನು ಕಿತ್ತೊಗೆದು ನಮ್ಮ ಇಂಗ್ಲೀಷ್ ಧ್ವಜವನ್ನು ನೆಟ್ಟು ನಿಮ್ಮೆಲ್ಲರಿಂದಲೇ ನಮಸ್ಕರಿಸುವಂತೆ ಮಾಡುತ್ತೇವೆ,..  ನೋಡುತಿರು ನಿನ್ನ ಕಿತ್ತೂರಿನ ಹಣೆಬರಹವನ್ನ..

ರಾಯಣ್ಣ- ಕಿತ್ತೂರಿನ ತಂಟೆಗೆ ಬಂದ್ರೆ ಕೈ ಕತ್ತರಿಸಿಬಿಟ್ಟೇವು... ಕಿತ್ತೂರಿನ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಬಾಯಿ ಹೊಲೆದು ಬಿಟ್ಟೇವು... ಕಿತ್ತೂರಿನ ಪ್ರಜೆಗಳನ್ನು ಕೆಣಕಿದರೆ... ಸೀಳಿಬಿಟ್ಟೇವು..!! ನೆನಪಿರಲಿ... ಸೀಳಿಬಿಟ್ಟೆವು..

ಬ್ರಿಟೀಷ್ ಅಧಿಕಾರಿ- ಇಲಿಯಂತೆ ಬಂಧಿಸಿಟ್ಟಿದ್ದೇವೆ.. ಅದರೂ ಹುಲಿಯಂತೆ ಘರ್ಜನೆ ಮಾಡುತ್ತಿದ್ದೀಯ..?? ನಿನ್ನ ಧೈರ್ಯಕ್ಕೆ ಮೆಚ್ಚಲೇ ಬೇಕು..


ರಾಯಣ್ಣ- ಹುಲಿಯಂತೆ ಎಗರಾಡುವ ಗುಣ ಹುಟ್ಟಿನಿಂದ ಬಂದೈತೆ.. ಬೇಡಿಯಲ್ಲಿ ಬಂಧನವಾದ ಮಾತ್ರಕ್ಕೆ ಹುಲಿ ಎಂದಿಗೂ ಇಲಿ ಆಗೋದಿಲ್ಲ.. ಎಲ್ಲೇ ಇದ್ದರೂ ಅದರ ಘರ್ಜನೆ ಮಾತ್ರ ನಿಲ್ಲೋದಿಲ್ಲ.. ಸ್ಮಶಾನದಲ್ಲಿ ಕುಂತು ಸಾವಿನ ಜಪ ಮಾಡುತ್ತಿದ್ದರೂ ನನ್ನ ಎದೆಯಲ್ಲಿ ಕಿಚ್ಚಿನ ಕಾಳಗ ನಡೀತಿರುತ್ತೆ..  ಕಿತ್ತೂರನ್ನು ಕಿತ್ತು ತಿನ್ನುವ ರಣ ಹದ್ದುಗಳನ್ನು ಬೇಟೆಯಾಡೋದು ಹೇಗೆ ಅನ್ನೋ ಆಲೋಚನೆಯೇ ಇರುತ್ತೆ..

ಬ್ರಿಟೀಷ್ ಅಧಿಕಾರಿ- ಮನಸು ಮಾಡಿದರೆ ಈ ಕೂಡಲೇ ಇಲಿಯಂತೆ ಹೊಸಕಿ ಹಾಕಿ ಸಾಯಿಸಬಲ್ಲೇ.. ಆದರೆ ನಿನ್ನ ಪ್ರಾಣವಾದ ಕಿತ್ತೂರಿನಲ್ಲಿ ನಮ್ಮ ಧ್ವಜ ಹಾರುವುದನ್ನು ನೀನು ನೋಡಬೇಕು.. ಅಲ್ಲಿಯವರೆಗೂ ನೀನು ಇಲ್ಲೇ ಬಿದ್ದಿರು.. ಹೊಟ್ಟೆ ಹಸಿದಾಗ ಗೊತ್ತಾಗುತ್ತೆ ಕ್ರಾಂತಿ ಬೇಕಾ ಅಥವ ಊಟ ಬೇಕಾ ಅಂತ..

ರಾಯಣ್ಣ—ಥೂ..!!!! ಸತ್ತರೂ ಸ್ವಾಭಿಮಾನದ ಕಹಳೆಯನ್ನು ಊದುವ ಧೀರರು ನಾವು.. ಹಸಿವಿನ ಹಂಗಿನಲ್ಲಿ ಎಂಜಲ ತಿನ್ನುವ ತಿರುಕರಲ್ಲ.. ಸ್ವಾಭಿಮಾನಿ ಕನ್ನಡಿಗರ ತಾಳ್ಮೆಯನ್ನು ಎಂದಿಗೂ ಪರೀಕ್ಷೆ ಮಾಡಬೇಡಿ.. ದೇಹಿ ಎಂದು ಬಂದವರ ತಲೆ ಕಾಯುವುದೂ ಗೊತ್ತು.. ದರ್ಪ ತೋರಿಸುವವರ ತಲೆ ಕಡಿಯುವುದೂ ಗೊತ್ತು.. ನಿಮಗೆ ಜೀವದ ಮೇಲೆ ಆಸೆ ಇದ್ದರೆ, ಕಿತ್ತೂರು ಬಿಟ್ಟು  ಓಡಿ ಹೋಗಿ.. ನಮ್ಮ ಜನರೆಲ್ಲರೂ ಒಂದಾಗಿ ಬಂದರೆ ನಿಮ್ಮ ಸಾಂಮ್ರಾಜ್ಯವನ್ನೇ ಸುಟ್ಟು ಬಿಟ್ಟಾರು.. ಹೋಗು.. ಕಪ್ಪದ ನೆಪದಲ್ಲಿ ಕೊಲೆಯಾಗಿ ಹೋಗಬೇಡಿ..


ಬ್ರಿಟೀಷ್ ಅಧಿಕಾರಿ- ನಿಮ್ಮ ಜನಗಳು ಸ್ವಾಭಿಮಾನಿಗಳೇ..?? ವೀರರೇ..?? ಹ ಹ ಹ .. ಇಲಿ ಬಂದರೆ ಸಾಕು ಹೆದರಿ ಹೋಡುವ ಕನಿಷ್ಟರು.. ಎದುರಿಸಲು ಧೈರ್ಯವಿಲ್ಲದೇ ಕಾಲ ಕೆಳಗೆ ಬಂದು ಕಾಲೊರೆಸುವ ನಪುಂಸಕರು ನೀವು.

ರಾಯಣ್ಣ—(ಈ ಮಾತುಗಳನ್ನು ಕೇಳಿದ ಕೂಡಲೇ ರೋಷ ಉಕ್ಕಿ ಬರುತ್ತದೆ.. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಕ್ಕೆ ಕೋಪ ಇಮ್ಮಡಿಯಾಗುತ್ತದೆ.. ಅದೇ ರೋಷಾವೇಷದಲ್ಲಿ ಜೋರಾಗಿ ಕೂಗಿ ಕೈಗಳ ಬೇಡಿಯನ್ನು ಕಿತ್ತೊಗೆಯುತ್ತಾನೆ.. ಏಕಾಏಕಿ ಪೋಲೀಸನ ಮೇಲೆ ಹಾರಿ ಅವನಲ್ಲಿದ್ದ ಅಸ್ತ್ರದಿಂದ ಪೋಲೀಸಿನವನನ್ನು ಕೊಂದು ಹಾಕುತ್ತಾನೆ)

ರಾಯಣ್ಣ- ಸುಮ್ಮನಿದ್ಧ ಮಾತ್ರಕ್ಕೆ ನಾವು ಹೇಡಿಗಳಲ್ಲ.,. ತಾಳ್ಮೆಯನ್ನು ಮೈ ಗೂಢಿಸಿಕೊಂಡ ಸಹನ ಶೀಲರು.. ಕೆಣಕಬೇಡಿ ಕೆಣಕಬೇಡಿ ಎಂದು ನಾನು ಮೊದಲೇ ಹೇಳಿದ್ದೆ.. ಆದರೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿ ನಿಮಗೆ ನೀವೇ ಸಾವು ತಂದುಕೊಂಡಿದ್ದೀರಿ..  ಕನ್ನಡಿಗರ ತಂಟೆಗೆ ಬಂದರೆ ಎಲ್ಲರಿಗೂ ಇದೇ ಗತಿ.. ಎಲ್ಲರಿಗೂ ಇದೆ ಗತಿ.. ಸ್ನೇಹಕ್ಕೆ ಬದ್ಧ.. ಸಮರಕ್ಕು ನಾವು ಸಿದ್ಧ.. ಧ್ಯಾನಕ್ಕೆ ಕುಳಿತರೆ ಬುದ್ಧ..!! ಕತ್ತಿ ಹಿಡಿದು ನಿಂತರೆ ಕ್ರಾಂತಿ ಯುದ್ಧ..!! ನೆನಪಿರಲಿ..


ಪರಿಕಲ್ಪನೆ-ರಚನೆ-ಸಂಭಾಷಣೆ
ಸವಿ ನೆನಪಿನ 
ಶೇಖ್(ಸ್ಪಿಯ)ರ‍್

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು