Recent Movies

ಸಿನೆಮಾ

Share This Article To your Friends

ಆತ್ಮಹತ್ಯೆಗೆ ನಿರ್ಧರಿಸಿದ ಭಾರತದ 2750 ಪತ್ರಕರ್ತರು..!

ಆತ್ಮಹತ್ಯೆಗೆ ನಿರ್ಧರಿಸಿದ ಭಾರತದ 2750 ಪತ್ರಕರ್ತರು..!ಇಷ್ಟು ದಿನ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳಿದ್ರಿ. ಆದ್ರೆ ಇನ್ಮುಂದೆ ಪತ್ರಕರ್ತರ ಆತ್ಮಹತ್ಯೆಗಳನ್ನೂ ನೀವು ಕೇಳಬಹುದು. ಯಾಕಂದ್ರೆ ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಿರೋ ಪತ್ರಕರ್ತರೇ ಇದೀಗ ಸಂಕಷ್ಟಕ್ಕೆ ಸಿಲುಕ್ತಾ ಇದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂಥಾ ಪರಿಸ್ತಿತಿಗೆ ಬಂದು ತಲುಪಿದ್ದಾರೆ. ವೇತನ ಸರಿಯಾಗಿ ಆಗ್ತಾ ಇಲ್ಲ. ಆದ್ರೂ ಬಗ್ಗೆ ಯಾರೊಬ್ಬರೂ ಕ್ಯಾರೇ ಅಂತಿಲ್ಲ.

ಸಾಲಬಾಧೆಯಿಂದ ರೈತರು ತತ್ತರಿಸ್ತಿದ್ರೆ, ಅವ್ರ ಸಾಲ ಮನ್ನಾ ಮಾಡಿ ಅಂತ ಒತ್ತಾಯ ಮಾಡ್ತಾರೆ. ಬಿಬಿಎಂಪಿ ಸಿಬ್ಬಂದಿಗೆ 6 ತಿಂಗಳಿಂದ ವೇತನ ಆಗ್ತಾ ಇಲ್ಲ ಅಂದ್ರೂ, ಅವ್ರ ದನಿಯಾಗಿ ಹೋರಾಡಿ ಸಂಬಳ ಬರೋ ಹಾಗೆ ಮಾಡ್ತಾರೆ. ಬೇರೆಯವರಿಗೆ ಸಂಬಳ ಕೊಡಿಸೋ ಪತ್ರಕರ್ತರಿಗೇ ಸರಿಯಾಗಿ ಸಂಬಳ ಸಿಗ್ತಾ ಇಲ್ಲ. ಅದೆಷ್ಟೋ ತಿಂಗಳುಗಳಿಂದ ಕೆಲವು ಚಾನೆಲ್ ಗಳು ತಮ್ಮ ಸಿಬ್ಬಂದಿಗೆ ಸಂಬಳವನ್ನೇ ಹಾಕ್ತಿಲ್ಲ. ಮತ್ತೂ ಕೆಲವು ವಾಹಿನಿಗಳು ವರ್ಷಗಳು ಉರುಳಿದ್ರೂ ಸಂಬಳದ ಬಗ್ಗೆ ಚಕಾರ ಎತ್ತುತಾ ಇಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಒಂದಷ್ಟು ಚಾನೆಲ್ ಗಳು  ಬಾಗಿಲು ಮುಚ್ಚಿವೆ. ಮತ್ತೊಂದಷ್ಟು ಚಾನೆಲ್ ಗಳು ಬಾಗಿಲು ಮುಚ್ಚುತ್ತಿವೆ.

ಫೋಕಸ್ ಟಿವಿಯ ಘನಘೋರ ದುರಂತ


ಚುನಾವಣೆಗೂ ಮುನ್ನ ಶುರುವಾಗಿದ್ದ ಫೋಕಸ್ ಟಿವಿ ಕನ್ನಡ ಆರೇ ತಿಂಗಳಲ್ಲಿ ಅಂತ್ಯ ಕಾಣುತ್ತಿದೆ. ಆರಂಭದಿಂದಲೂ ತೆವಳುತ್ತಲೇ ಸಾಗಿದ ಫೋಕಸ್ ಟಿವಿ ಸಂಬಳ ಕೊಡೋದ್ರಲ್ಲೇ ತತ್ತರಿಸಿ ಹೋಗಿತ್ತು. ಮೊದಲ ಮಹಿಳಾ ಸಂಪಾದಕಿಯರ ಸುದ್ದಿ ವಾಹಿನಿ ಅಂತ ಬಿಂಬಿಸಿಕೊಳ್ತಾನೇ ಸಂಚಲನ ಮೂಡಿಸಿದ ಫೋಕಸ್ ಟಿವಿಯಲ್ಲಿ ಈಗ ಸಂಬಳಾನೇ ಆಗ್ತಿಲ್ಲ.
ಫೋಕಸ್ ಟಿವಿಯಲ್ಲಿ ಸಂಕಷ್ಟದ ದಿನಗಳು ಶುರುವಾಗುತ್ತೆ ಅಂತ ಗೊತ್ತಾಗ್ತಿದ್ದ ಹಾಗೆ, ಸಂಪಾದಕರಾಗಿದ್ದ ಜ್ಯೋತಿ ಇರ್ವತ್ತೂರ್ ಚಾನೆಲ್ ಗೆ ರಾಜೀನಾಮೆ ಕೊಟ್ಟಿದ್ರು. ಆದರೂ ನರೇಂದ್ರ ಮಡಿಕೇರಿ, ಪ್ರಕಾಶ್ ಮೊದಲಾದವರಿಂದ ಇಷ್ಟು ದಿನ ಮುಂದೆ ಸಾಗಿತ್ತು. ಈಗದು ಅಂತ್ಯಕ್ಕೆ ಬಂದು ನಿಂತಿತ್ತು ಸಂಬಳವಿಲ್ಲದೇ ಪತ್ರಕರ್ತರು ಚಾನೆಲ್ ಮಾಲೀಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸಂಬಳ ಕೊಡೋದಕ್ಕೂ ದುಡ್ಡಿಲ್ಲದೇ ಹೇಮಂತ್ ಕುಮಾರ್ ತತ್ತರಿಸಿ ಹೋಗಿದ್ದಾರೆ.

ತೆವಲು ಪತ್ರಿಕೋದ್ಯಮದಿಂದ ಚಾನೆಲ್ ಆರಂಭಿಸಿದ ಕಿಡಿಗೇಡಿಗಳಿಂದಾಗಿ ಫೋಕಸ್ ಟಿವಿ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದು, ಸಂಬಳ ಸಿಗದೇ ನರಕ ಯಾತನೆ ಅನುಭವಿಸಿದ್ದಾರೆ. ಸಂಬಳಾನೂ ಇಲ್ದೇ, ಕೆಲಸಾನೂ ಇಲ್ದೇ, ಮನೆ ಬಾಡಿಗೆ ಕಟ್ಟೋದಕ್ಕಾಗದೇ, ಮಕ್ಕಳ ಫೀಸ್ ಕಟ್ಟೋದಕ್ಕಾಗದೇ ಪತ್ರಕರ್ತರು ಬೇಸತ್ತಿದ್ದು, ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.

ಟಿವಿ1ನಲ್ಲೂ ಸೇಮ್ ಪ್ರಾಬ್ಲಂ

ಇನ್ನು ಕೆಲವೇ ದಿನಗಳ ಹಿಂದೆ ಆರಂಭವಾಗಿದ್ದ ಕೆಪಿನಂಜುಂಡಿ ಸಾರಥ್ಯದ ಟಿವಿ1ನಲ್ಲೂ ಸಮಸ್ಯೆಗಳು ತಾಂಡವವಾಡ್ತಿವೆ. ಕೆಲ ದಿನಗಳ ಹಿಂದಷ್ಟೇ ಟಿವಿ1ನಲ್ಲಿ ದೊಡ್ಡ ರಾದ್ಧಾಂತ ನಡೆದಿದ್ದು, ತಂಡೋಪ ತಂಡವಾಗಿ ಪತ್ರಕರ್ತರನ್ನ ಕಿತ್ತು ಹಾಕಲಾಗಿದೆ. ನಂಜುಂಡಿಯ ನಂಜಿನ ವಿಷ್ಯ ಇಲ್ಲಿಗೆ ಮುಗಿಯೋದಿಲ್ಲ. ಹಿಂದೆ ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಜೊತೆ ಸೇರಿ ವಿಶ್ವವಾಣಿ ದಿನಪತ್ರಿಕೆಯನ್ನು ಆರಂಭಿಸಿದ್ರು.

 ಟಿವಿ ಚಾನೆಲ್ ಆರಂಭಿಸುವ ಲೆಕ್ಕಾಚಾರವೂ ಇತ್ತು. ಆದ್ರೆ ಟಿವಿ ಚಾನೆಲ್ ಆರಂಭಿಸೋದಕ್ಕೂ ಮುನ್ನವೇ ಭಟ್ಟರ ಜೊತೆಗಿನ ನಂಟನ್ನು ಕಡಿದುಕೊಂಡರು. ವಿಶ್ವವಾಣಿ ಅನಾಥವಾಯ್ತು. ಇನ್ನೇನು ವಿಶ್ವವಾಣಿ ಮುಳುಗೇ ಹೋಯ್ತು ಅನ್ನೋಷ್ಟ್ರಲ್ಲಿ ವಿಶ್ವೇಶ್ವರ್ ಭಟ್ ಪತ್ರಕೆಯನ್ನು ಉಳಿಸಿಕೊಂಡರು. ಪತ್ರಕರ್ತರು ಸೇಫ್ ಆದರು. ಆದ್ರೆ ಮತ್ತೆ ತೆವಲಿನ ಪತ್ರಿಕೋದ್ಯಮಕ್ಕೆಮುಂದಾದ ಕೆಪಿ ನಂಜುಂಡಿ ಟಿವಿ9 ಹಳೆಯ ನಿರೂಪಕರಾಗಿದ್ದ ಶಿವಪ್ರಸಾದ್ ನೇತೃತ್ವದಲ್ಲಿ ಟಿವಿ1 ಆರಂಭಿಸಿದ್ರು.  
 
ಸಂಸ್ಥೆಯನ್ನು ಕಟ್ಟೋವರೆಗೂ ಎಲ್ಲವೂ ಸರಿಯಾಗೇ ಇತ್ತು. ಕಟ್ಟಿದ ನಂತರ ಶಿವಪ್ರಸಾದ್ ಮತ್ತು ಅವ್ರ ತಂಡವನ್ನೇ ಹೊರಗಟ್ಟಲಾಯ್ತು. ಗೆದ್ದಲು ಹುಳ ಕಟ್ಟಿದ ಹುತ್ತದಲ್ಲಿ ಹಾವು ಬಂದು ಸೇರಿಕೊಂಡಂತಾಯ್ತು ಟಿವಿ1 ಪರಿಸ್ತಿತಿ. ಟಿವಿ1ನಿಂದ ಹೊರ ನಡೆದ ಶಿವಪ್ರಸಾದ್  ಮತ್ತು ತಂಡ ಕೆಲಸ ಇಲ್ಲದೇ ಮನೆಯಲ್ಲಿ ಕೂರುವಂತಾಯ್ತು. ಸಂಬಳ ಇಲ್ದೇ ಬದುಕು ದೂಡೋದೇ ದುಸ್ತರವಾಗಿಬಿಟ್ಟಿತ್ತು. ಅದೆಷ್ಟೋ ಬಾರಿ ಊಟಕ್ಕೂ ದುಡ್ಡಿಲ್ಲದೇ ಉಪವಾಸ ಇದ್ದರು ಹಲವು ಪತ್ರಕರ್ತರು.
ಇದರ ನಡುವಲ್ಲೇ ತನ್ನ ತಂಡಕ್ಕಾಗಿ ಮತ್ತು ಕೆಲಸ ಕಳೆದುಕೊಂಡ ಕೆಲವು ಪತ್ರಕರ್ತರನ್ನು ಉಳಿಸೋದಕ್ಕಾಗಿ ಶಿವಪ್ರಸಾದ್ ಮತ್ತೆ ಸಮಯದ ಮೊರೆ ಹೋದ್ರು. ಸಮಯ ಸುದ್ದಿ ವಾಹಿನಿಯನ್ನ ಮತ್ತೆ ಶುರು ಮಾಡಬೇಕು ಅಂತ ಲೆಕ್ಕಾಚಾರ ಓಡಾಟ ಶುರು ಮಾಡಿದ್ರು. ದುಡ್ಡು ಹಾಕ್ತೀನಿ ಅಂತ ವಿಜಯ್ ಟಾಟಾನೂ ಮುಂದೆ ಬಂದಿದ್ರು. ಆದ್ರೆ ಅದೇನಾಯ್ತೋ ಏನೋ, ವಿಜಯ್ ಟಾಟಾ ದುಡ್ಡು ಬಿಚ್ಚದೇ ಟಾಟಾ ಅಂತ ಕೈ ಬೀಸ್ತಿದ್ದಾರೆ.

 ಸಮಯ ಟಿವಿ ಎರಡು ಬಾರಿ ಬಂದ್ ಆಗಿತ್ತು


  ಇನ್ನು 2010ರಲ್ಲಿ ಶುರುವಾದ ಸಮಯ ಟಿವಿ 2 ಸಲ ಬಾಗಿಲು ಮುಚ್ಚಿದೆ. ಹಿಂದೆ ಟಿವಿ9 ಶಿವಪ್ರಸಾದ್ ಸಮಯಕ್ಕೆ ಬಂದು ಹೋಗಿದ್ರು. ಆದ್ರೆ ವರ್ಕೌಟ್ ಆಗಲಿಲ್ಲ. ರಂಗನಾಥ್ ಭಾರಧ್ವಜ್, ಜಯಪ್ರಕಾಶ್ ಶೆಟ್ಟಿ ಎಲ್ಲರೂ ಸಮಯಕ್ಕೆ ಬಂದು ಧೂಳೆಬ್ಬಿಸುವ ಲೆಕ್ಕಾಚಾರ ಹಾಕೊಂಡಿದ್ರು. ಆದ್ರೆ ಯಾವ್ದೂ ವರ್ಕೌಟ್ ಆಗಲೇ ಇಲ್ಲ. ಎಷ್ಟು ಟ್ರೈ ಮಾಡಿದ್ರೂ, ಸಮಯ ಟಿಆರ್ಪಿ ಮೇಲೆ ಏಳಲೇ ಇಲ್ಲ. ಸತಿಶ್ ಜಾರಕಿಹೋಳಿ ಕೈ ಕೊಟ್ಟರು. ವಿಜಯ್ ಟಾಟಾ ಬಾಯ್ ಬಾಯ್ ಅಂದಿದ್ರು. ಸಂಬಳ ಇಲ್ಲದೇ ಸಮಯ ಟಿವಿಯ ಸಿಬ್ಬಂದಿ ಸಾಯೋದೊಂದೇ ಬಾಕಿ ಇತ್ತು. ಜಯಪ್ರಕಾಶ್ ಶೆಟ್ಟಿ ಕೆಲವು ದಿನಗಳ ಕಾಲ ಸಮಯ ಚಾನೆಲ್ ಮುಂದುವರಿಸಿದ್ರು. ಆದ್ರೆ ಸುವರ್ಣನ್ಯೂಸ್ ನಲ್ಲಿ ಕೆಲಸ ಸಿಗ್ತಾ ಇದ್ದಂತೆ ಶೆಟ್ಟಿ ಜಂಪ್ ಆದ್ರು.. ದೊಡ್ಡೋರೇನೋ ಜಂಪ್ ಆದ್ರು. ಆದ್ರೆ ಉಳಿದೋರ್ ಗತಿ ಏನು? ಸಮಯ ಲಾಕೌಟ್ ಆಯ್ತು. ಬೀಗ ಬಿತ್ತು. ಹೀಗೆ ಎರಡು ಸಲ ಮುಚ್ಚಿದ ಸಮಯ ವಾಹಿನಿಯನ್ನು ಈಗ ಮತ್ತೆ ಆರಂಭಿಸಬೇಕು ಅಂತ ಹೊರಟಿದ್ದಾರೆ ಶಿವಪ್ರಸಾದ್. ಆದ್ರೂ ಅದು ಸಾಧ್ಯವಾಗ್ತಿಲ್ಲ. ಸಾಕಷ್ಟು ಅಡೆತಡೆಗಳು ಎದುರಾಗ್ತಿವೆ.

ಜನಶ್ರೀ ಟಿವಿ ಬಾಗಿಲು ಮುಚ್ಚಿದ್ರಿಂದ ಪತ್ರಕರ್ತರು ಬೀದಿಗೆ

ಇನ್ನು ಜನಶ್ರೀ ನ್ಯೂಸ್ ಬಗ್ಗೆ ನಿಮ್ಗೆ ಗೊತ್ತೇ ಇದೆ. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರ ಕನಸಿನ ಕೂಸೇ ಜನಶ್ರೀ. ಇದರ ಸಾರಥ್ಯವನ್ನು ವಹಿಸಿಕೊಂಡಿದ್ದು ಅನಂತ್ ಚಿನಿವಾರ್

ಅನಂತ್ ಚಿನಿವಾರ್ ಇರೀವರೆಗೂ ಜನಶ್ರೀ ಚೆನ್ನಾಗೇ ಇತ್ತು. ಆದ್ರೆ ಜನಾರ್ಧನ ರಡ್ಡಿ ಜೈಲಿಗೆ ಹೋಗ್ತಿದ್ದಂತೆ ಜನಶ್ರೀಯ ಅಧಃಪತನವೂ ಶುರುವಾಯ್ತು. ಆಡಳಿತ ಮಂಡಳಿಯ ನಿರ್ಲಕ್ಷತನಕ್ಕೆ ನಂಬರ್ 2ನೇ ಸ್ಥಾನಕ್ಕೇರಿದ್ದ ಚಾನೆಲ್ ಪಾತಾಳಕ್ಕೆ ಕುಸಿದಿ್ತು. ಅನಂತ್ ಚಿನಿವಾರ್ ಜನಶ್ರೀಯಿಂದ ಹೊರ ಬಂದ್ರು. ಅದೇ ಸಮಯಕ್ಕೆ ಸುವರ್ಣನ್ಯೂಸ್ಗೆ ಎಂಟ್ರಿ ಕೊಟ್ಟಿದ್ದರಿಂದ ಒಂದಷ್ಟು ಮಂದಿ ಸುವರ್ಣನ್ಯೂಸ್ ಗೆ ಬಂದ್ರು. ಉಳಿದವರು ಸಂಬಳ ಇಲ್ದೇ ಜನಶ್ರೀಯಲ್ಲೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾದ್ರು. ನಂತರ ಶಿವಪ್ರಸಾದ್ ಬಂದು ಸ್ವಲ್ಪ ದಿನ ಚಾನೆಲ್ ಓಡಿಸಿದ್ರು. ರವಿಬೆಳಗರೆ ಸಾರಥಿಯಾದ್ರು. ಸುನಿಲ್ ಹೆಗ್ಗರವಳ್ಳಿ ನೋಡ್ಕೊಂಡ್ರು. ಕೊನೆಗೆ ಲಕ್ಷ್ಮಿ ಪ್ರಸಾದ್, ಮುತ್ತುರಾಜ್, ವಿಜಯ್ ಹುನಗುಂದ್, ಎಲ್ರೂ ಸೇರಿ ಸಚಿನ್ ನಾಯಕ್ ಸಹಾಯದಿಂದ ಒಂದಷ್ಟು ದಿನ ಚಾನೆಲ್ ರನ್ ಮಾಡಿದ್ರು. ಆದ್ರೆ ಬ್ಲಾಕ್ ಮೇಲ್ ಪತ್ರಿಕೋದ್ಯಮದ ಕರಿನೆರಳು ಜನಶ್ರೀಯನ್ನು ನುಂಗಿ ಹಾಕಿತ್ತು. ಚಾನೆಲ್ ಕ್ಲೋಸ್ ಆಯ್ತು. ಜನಶ್ರೀ ಎಲ್ಲಾ ಸಿಬ್ಬಂದಿ ಬೀದಿಗೆ ಬಿದ್ರು.

ಇದಾದ ಬಳಿಕ ಮತ್ತೆ ಅನಂತ್ ಚಿನಿವಾರೇ ತಮ್ಮ ತಂಡವನ್ನು ಕಟ್ಟಿಕೊಂಡು ಮತ್ತೆ ಜನಶ್ರೀಯ ಜೀರ್ಣೋದ್ಧಾರಕ್ಕೆ ಮುಂದಾದ್ರು. ಆದ್ರೆ ಅದು ಸಾಧ್ಯವಾಗದೇ ಕೆಲವೇ ತಿಂಗಳುಗಳಲ್ಲಿ ಚಾನೆಲ್ ಬಾಗಿಲು ಮತ್ತೆ ಮುಚ್ಚಿದ್ರು

ಮುಳುಗಿತು `ಉದಯವಾಗಿದ್ದ ನ್ಯೂಸ್ ಚಾನೆಲ್


ಇನ್ನು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಂಸ್ಥೆ ಸನ್ ನೆಟ್ವರ್ಕಿನ ಉದಯ ನ್ಯೂಸ್ ಚಾನೆಲ್ ಕೆಲ ತಿಂಗಳ ಹಿಂದಷ್ಟೇ ಲಾಕೌಟ್ ಆಗಿತ್ತು. 2017 ಅಕ್ಟೋಬರ್ ತಿಂಗಳಲ್ಲಿ ಉದಯ ನ್ಯೂಸ್ ಚಾನೆಲ್ ಬಾಗಿಲು ಹಾಕಲಾಗಿತ್ತು. ತುಂಬಾ ದಿನಗಳಿಂದ ನಷ್ಟದಲ್ಲೇ ಸಾಗುತ್ತಿದ್ದ ಉದಯ ನ್ಯೂಸ್ ಚಾನೆಲ್ ಮುಚ್ಚಬೇಕು ಅಂತ ಆಡಳಿತ ಮಂಡಳಿ ನಿರ್ಧರಿಸಿತ್ತು. ಆಡಳಿತ ಮಂಡಳಿಯ ನಿರ್ಧಾರದಿಂದ ಕರ್ನಾಟಕದ ಮೊಟ್ಟ ಮೊದಲ ನ್ಯೂಸ್ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಉದಯ ನ್ಯೂಸ್ ಯುಗಾಂತ್ಯವಾಯ್ತು. ಪರಿಣಾಮ ಪತ್ರಕರ್ತರು ಬೀದಿಗೆ ಬಂದ್ರು.

ವಿಐಪಿ ನ್ಯೂಸ್ ಕನ್ನಡ ಚಾನೆಲ್ ಕಥೆ ಮುಗೀತು


ಇನ್ನು ಚುನಾವಣೆಗೂ ಮುನ್ನ ನಾಯಿಕೊಡೆಗಳಂತೆ ಅನೇಕ ಚಾನೆಲ್ ಗಳು ಆರಂಭವಾಗಿದ್ದವು. ಫೋಕಸ್ ಟಿವಿ, ಟಿವಿ1, ವಿಐಪಿ ನ್ಯೂಸ್ ಹೀಗೆ ಸಾಲು ಸಾಲು ಚಾನೆಲ್ ಗಳು ಆರಂಭವಾದವು. ಆದ್ರೆ ಚುನಾವಣೆ ಮುಗೀತಿದ್ದ ಹಾಗೆ ಅಷ್ಟೇ ವೇಗವಾಗಿ ಅಧಃಪತನ ಕಾಣ್ತಿವೆ. ಅದರಲ್ಲಿ ವಿಐಪಿ ನ್ಯೂಸ್ ಕೂಡ ಒಂದಾಗಿದೆ

ಚುನಾವಣೆ ದೃಷ್ಟಿಯಿಂದಲೇ ಶುರುವಾಗಿದ್ದ ತೆವಲು ಪತ್ರಿಕೋದ್ಯಮದ ಮತ್ತೊಂದು ರೂಪ ಎನಿಸವಂತಿದ್ದ ವಿಐಪಿ ಚಾನೆಲ್, ಚುನಾವಣೆ ಮುಗಿದ ನಂತರ ಕೈ ತೊಳೆದಕೊಂಡಿದೆ. ಹೊಸ ಸಂಸ್ಥೆ ಕಟ್ಟಬೇಕು ಅಂತ ಹೋಗಿದ್ದ ಪತ್ರಕರ್ತರೆಲ್ಲರೂ ಈಗ ಬೀದಿಗೆ ಬಂದಿದ್ದಾರೆ.

ಸುಳ್ಳು ಹೇಳಲ್ಲ ಎಂದ `ಸುದ್ದಿ ಟಿವಿಗೆ ಕೊನೆ ಮೊಳೆ


ಇನ್ನು ನಾವ್ ಸುಳ್ ಹೇಳಲ್ಲ ಅಂತಾನೇ ಸದ್ದು ಮಾಡಿದ ಸುದ್ದಿಯ ಪರಿಸ್ತಿತಿ ಅಧೋಗತಿಯಾಗಿದೆ. ಶಶಿಧರ್ ಭಟ್ ನೇತೃತ್ವದಲ್ಲಿ ಆರಂಭವಾದ ಸುದ್ದಿವಾಹಿನಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರೋವರೆಗೂ ಚೆನ್ನಾಗೇ ನಡೀತಾ ಬಂದಿತ್ತು. ಆದ್ರೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಳುಗಿದ್ದೇ ತಡ, ಸುದ್ದಿ ಟಿವಿಯೂ ಮುಳುಗೋದಕ್ಕೆ ಶುರುವಾಯ್ತು. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ರಿಂದ, ಸುದ್ದಿಗೆ ಬಂಡವಾಳ ಹರಿದು ಬರಲಿಲ್ಲ. ದುಡ್ಡು ಹಾಕ್ತೀನಿ ಅಂದೋರು `ಕೈಕೊಟ್ಟರು. ಕೊನೆಗೆ ನಮ್ಮ `ಕೈನಿಂದ ದುಡ್ಡು ಹಾಕೋದಕ್ಕೆ ಆಗಲ್ಲ. ನೀವೇ ನಡೆಸಕೊಂಡು ಹೋಗಿ. ಇಲ್ಲ ಬಾಗಿಲು ಮುಚ್ಚಿ ಅಂದಿದ್ರು ಹೂಡಿಕೆದಾರರು. ಆದ್ರೂ ಪತ್ರಕರ್ತರು ಬೀದಿಗೆ ಬರಬಾರದು ಅಂತ ಶಶಿಧರ್ ಭಟ್ಟರು ಸಾಕಷ್ಟು ಟ್ರೈ ಮಾಡಿದ್ರು. ಆದ್ರೆ ಹೂಡಿಕೆದಾರರು ಸಿಗದ ಕಾರಣ, ಅನಿವಾರ್ಯವಾಗಿ ಬಾಗಿಲು ಮುಚ್ಚಲೇಬೇಕಾದ ಪರಿಸ್ತಿತಿಗೆ ಬಂದು ನಿಂತಿದೆ ಸುದ್ದಿ ಟಿವಿ. ಸುದ್ದಿ ಟಿವಿಗೆ ಯಾವಾಗ ಕೊನೆ ಮೊಳೆ ಹೊಡೆದು ಬಾಗಿಲು ಮುಚ್ತಾರೋ ಹೇಳೋದಕ್ಕಾಗ್ತಿಲ್ಲ. ಒಂದು ವೇಳೆ ಸುದ್ದಿ ಟಿವಿ ಬಾಗಿಲು ಮುಚ್ಚಿದ್ರೆ ಮತ್ತೊಂದಷ್ಟು ಪತ್ರಕರ್ತರು ಬೀದಿಗೆ ಬರ್ತಾರೆ.

ಐಸಿಯುನಲ್ಲಿವೆ ಕಸ್ತೂರಿ ನ್ಯೂಸ್ ಮತ್ತು ರಾಜ್ ನ್ಯೂಸ್


ಇನ್ನು ಕನ್ನಡ ಸುದ್ದಿವಾಹಿನಿಗಳಲ್ಲಿ ಆರಕ್ಕೇರದ ಮತ್ತು ಮೂರಕ್ಕಿಳಿಯದ ಚಾನೆಲ್ ಗಳು ಅಂದ್ರೆ ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್ ಮತ್ತು ತಮಿಳುನಾಡಿನ ರಾಜ್ ನ್ಯೂಸ್ ಚಾನೆಲ್ ಗಳು. ವರ್ಷಾನು ವರ್ಷಗಳಿಂದ ಕಸ್ತೂರಿ ನ್ಯೂಸ್ ನಲ್ಲಿ ಸಂಬಳದ ಸಮಸ್ಯೆ ಆಗ್ತಿದೆ. ಪಕ್ಕಾ ಟೈಮಿಗೆ ಬರಲ್ಲ ಅಂದ್ರೂ, ಮುಂದೊಂದಿನ ಯಾವತ್ತಾದ್ರೂ ಬಂದೇ ಬರುತ್ತಲ್ಲ ಅಂತ ಬಹಳಷ್ಟು ಜನ ಕೆಲಸ ಮಾಡ್ತಿದ್ರು.

ಇತ್ತ ರಾಜ್ ನ್ಯೂಸ್ ಪರಿಸ್ತಿತಿನೂ ಅದೇ ಆಗಿದೆ. ಕಸ್ತೂರಿ ಥರಾನೇ ತೆವಳಿಕೊಂಡು ಸಾಗ್ತಾ ಇತ್ತು. ಸಮಯಕ್ಕೆ ಸರಿಯಾಗಿ ಸಂಬಳ ಆಗದಿದ್ರೂ, ಲೇಟಾಗಾದ್ರೂ ಆಗ್ತಾ ಇತ್ತು. ಒಂದ್ ಲೆಕ್ಕದಲ್ಲಿ ರಾಜ್ ನ್ಯೂಸ್ ಮತ್ತು ಕಸ್ತೂರಿ ನ್ಯೂಸ್ ಚಾನೆಲ್ ಎರಡೂ ಐಸಿಯುನಲ್ಲಿದ್ದಂಥಾ ಪರಿಸ್ಥಿತಿಯಲ್ಲಿವೆ. ಯಾವಾಗ ಏನ್ ಬೇಕಾದ್ರೂ ಆಗಬಹುದು. ಇಲ್ಲಿರೋ ಪತ್ರಕರ್ತರ ಬದುಕೂ ನರಕದಂತಾಗಬಹುದು.

ಆರಂಭಕ್ಕೂ ಮೊದಲೇ `ಜಿ 6’ ಬಂದ್


 ಇನ್ನು ನಿಮಗೆ ಗೊತ್ತಾಗದ ಹಾಗೆ ಜಿ6 ಅನ್ನೋ ಹೊಸ ಸುದ್ದಿ ಸಂಸ್ಥೆಯೊಂದು ಆರಂಭಗೊಳ್ಳುವ ತವಕದಲ್ಲಿತ್ತು. ಜಿ ಅಂದ್ರೆ ಅದು ಜಿ ಪರಮೇಶ್ವರ್ ಚಾನೆಲ್ ಅಂತಾನೇ ಎಲ್ರೂ ಭಾವಿಸಿದ್ರು. ಕನ್ನಡದ ಅರ್ನಾಬ್ ಗೋಸ್ವಾಮಿ ಅಂತಾನೇ ಜನ ಕೀಟಲೆ ಮಾಡ್ತಿದ್ದಂಥಾ ಚಂದನ್ ಶರ್ಮ ಜಿ 6 ಸಾರಥಿಯಾಗಿದ್ರು. ಲೋಗೋ ಕೂಡ ಲಾಂಚ್ ಆಯ್ತು. ಅಷ್ಟೇ ನೋಡಿ. ಅದಾದ್ಮೇಲೆ ಚಾನಲ್ಲೇ ಬಂದ್ ಆಯ್ತು. ಆರಂಭಕ್ಕೂ ಮೊದಲೇ ಬಂದ್ ಆದ ಇತ್ತೀಚಿನ ಮೊಟ್ಟ ಮೊದಲ ಚಾನೆಲ್ ಜಿ6 ಆಗಿತ್ತು. ಜಿ6 ಕಟ್ಟಬೇಕು ಅಂತ ವಿವಿಧ ಚಾನೆಲ್ ಗಳಿಂದ ಹೋಗಿದ್ದ ಪತ್ರಕರ್ತರು ಚಾನೆಲ್ ಆರಂಭಕ್ಕೂ ಮೊದಲೇ ಬೀದಿಗೆ ಬಂದಿದ್ರು.

`ಸ್ವರಾಜ್ನ್ಯೂಸ್ದಿ ಎಂಡ್


ಇನ್ನು ಚುನಾವಣೆ ದೃಷ್ಟಿಯಿಂದ ಸ್ವರಾಜ್ ನ್ಯೂಸ್ ಅನ್ನೋ ಸುದ್ದಿ ವಾಹಿನಿ ದಿಢೀರನೆ ಅಸ್ತಿತ್ವಕ್ಕೆ ಬಂದಿತ್ತು. ಜನಶ್ರೀ ಸದ್ದಿ ವಾಹಿನಿ ಕಚೇರಿಯಿಂದಲೇ ಸ್ವರಾಜ್ ನ್ಯೂಸ್ ಟೆಲಿಕಾಸ್ಟೂ ಆಗ್ತಿತ್ತು. ನಾಜಿಯಾ ಕೌಸರ್ ಅನ್ನೋ ಕಿರಿಯ ಪತ್ರಕರ್ತೆ ದಿಢೀರನೆ ಸಂಪಾದಕಿಯಾಗಿಬಿಟ್ರು. ಅದಕ್ಕೆ ಕಾರಣಾನೂ ಇತ್ತು. ಸ್ವರಾಜ್ ಅನ್ನೋ ಚಾನೆಲ್ಗೆ ದುಡ್ ಹಾಕೋದಕ್ ಮುಂದೆ ಬಂದಿದ್ದು ನೌಹೆರಾ ಶೇಕ್ ಅನ್ನೋ ದುಬೈ ಉದ್ಯಮಿ ಕಂ ಭಾರತದ ಅನನುಭವಿ ರಾಜಕೀಯ ನಾಯಕಿ. ನೌಹೆರಾ ಶೆಕ್ ಮುಸ್ಲಿಂ. ಸಂಪಾದಕಿ ನಾಜಿಯಾನೂ ಮುಸ್ಲಿಂ. ಮುಸ್ಲಿಮರ ಚಾನೆಲ್ಲೇ ಉದಯವಾಯ್ತು ಅಂತ ಜನ ಮಾತಾಡಿಕೊಳ್ಳೋದಕ್ಕೆ ಶುರು ಮಾಡಿದ್ರು. `ಅಚ್ಚಾ ಹುವಾ   ಹಮಾರಾ ಚಾನೆಲ್ಅಂತ ಕೆಲ ಮುಸ್ಲಿಂ ಬಾಂಧವರೂ ಖುಷಿ ಪಟ್ಟಿದ್ರು. ಆದ್ರೆ ಚುನಾವಣೆ ಮುಗಿದ ಬಳಿಕ ದುಡ್ ಹಾಕ್ತೀನಿ ಅಂದಿದ್ದ ನೌಹೆರಾ ಶೇಕ್ ಕೈ ಎತ್ತಿದ್ಳು. `ಹಮಾರಾ ಕಮ್ಯೂನಿಟಿಕಾ ಮೇಡಂಅಂತ ನೌಹೆರಾ ಶೇಕ್ ನಂಬಿ ಬಂದಿದ್ದ ಸಂಪಾದಕಿ ನಾಜಿಯಾ ಕೌಸರ್ ಕೂಡ ಕಂಗಾಲಾಗಿದ್ರು. ಸ್ವರಾಜ್ಯದ ಕನಸು ಹೊತ್ತ ಪತ್ರಕರ್ತರು ಮತ್ತೆ ಬೀದಿಗೆ ಬಂದ್ರು.

ಕರ್ನಾಟಕದ 11 ನ್ಯೂಸ್ ಚಾನೆಲ್ ಗಳ  ಅಧಃಪತನ


ಇವೆಲ್ಲಾ ಕನ್ನಡ ಚಾನೆಲ್ ಗಳ ಸುದ್ದಿಯಷ್ಟೆ. ಕರ್ನಾಟಕದಲ್ಲೇ ಇಷ್ಟು ಅಂದ್ರೆ ಉಳಿದ 28 ರಾಜ್ಯಗಳಲ್ಲಿ ಇನ್ನೆಂತಾ ಪರಿಸ್ಥಿತಿ ಇರಬೇಕು ಅಂತ ನೀವೇ ಯೋಚನೆ ಮಾಡಿ. ವರದಿಗಳ ಪ್ರಕಾರ ದೇಶದಲ್ಲಿರೋ 850ಕ್ಕೂ ಚಾನೆಲ್ ಗಳ ಪೈಕಿ 405 ಚಾನೆಲ್ ಗಳು ನ್ಯೂಸ್ ಚಾನೆಲ್ ಗಳೆ ಆಗಿವೆ. ಇವುಗಳಲ್ಲಿ ಕರ್ನಾಟಕ ಒಂದ್ರಲ್ಲೇ 11ಕ್ಕೂ ಹೆಚ್ಚು ನ್ಯೂಸ್ ಚಾನೆಲ್ಗಳು ಅಧಃಪತನಗೊಂಡಿದ್ದು, ಒಂದು ಚಾನೆಲ್ ನಲ್ಲಿ 250 ಜನ ಅಂದ್ರೂ, 2750 ಸಿಬ್ಬಂದಿ ಕೆಲಸ ಕಳೆದುಕೊಂಡಂತಾಗಿದೆ. ಇದರಲ್ಲಿ ಕೆಲವರು ಮಾತ್ರವೇ ಬೇರೆ ಚಾನೆಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡು ಜೀವ ಉಳಿಸಿಕೊಂಡರೆ, ಉಳಿದ ಮುಕ್ಕಾಲು ಭಾಗದಷ್ಟು ಪತ್ರಕರ್ತರು ಕೆಲಸವೂ ಇಲ್ಲದೇ, ಸಂಬಳವೂ ಇಲ್ಲದೇ ಜರ್ಜರಿತರಾಗಿದ್ದಾರೆ. ಕೆಲಸದ ಅಭದ್ರತೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗ್ತಿದ್ದಾರೆ. ಕುಟುಂಬ ನಿರ್ವಹಣೆ ತುಂಬಾನೇ ಕ್ಲಿಷ್ಟಕರವಾಗಿದ್ದು, ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀ ಕಟ್ಟೋದಕ್ಕೂ ಒದ್ದಾಡ್ತಿದ್ದಾರೆ. ನರಳಾಟ, ಒದ್ದಾಟ ಹೀಗೇ ಮುಂದುವರಿದ್ದೇ ಆದ್ರೆ, ಅಧಃಪತನಗೊಂಡ 11 ಕನ್ನಡ ನ್ಯೂಸ್ ಚಾನೆಲ್ಗಳಲ್ಲಿನ 2750 ಸಿಬ್ಬಂದಿ ಬದುಕು ಭೀಕರವಾಗೋದು ಗ್ಯಾರಂಟಿ.


TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು

Social Media stick

Google Ads

Powered by Blogger.